ಜೈಶಂಕರ್-ಯಿ ಸಭೆ: ಶಾಂತಿಗೆ “ಪಂಚ’ ತತ್ವ
Team Udayavani, Sep 12, 2020, 6:15 AM IST
External Affairs Minister S Jaishankar shakes hands with Chinese State Councilor and Foreign Minister Wang Yi.
ಮಾಸ್ಕೋ/ಹೊಸದಿಲ್ಲಿ: ಭಾರತ ಮತ್ತು ಚೀನ ನಡುವಣ ಗಡಿ ಸಂಘರ್ಷ ನಿವಾರಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನದ ವಿದೇಶಾಂಗ ಸಚಿವ ವಾಂಗ್ ಯಿ ಪಂಚ ತತ್ವಗಳ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಶಾಂಘೈ ಕೋ ಆಪರೇಶನ್ ಆರ್ಗನೈಸೇಶನ್ ಸಭೆ ಸಂಬಂಧ ರಷ್ಯಾದ ಮಾಸ್ಕೋಗೆ ತೆರಳಿದ್ದ ಉಭಯ ನಾಯಕರು ಗುರುವಾರ ರಾತ್ರಿ ಸುದೀರ್ಘ ಚರ್ಚೆ ನಡೆಸಿದ್ದು, ಈ ಬಗ್ಗೆ ಶುಕ್ರವಾರ ಬೆಳಗ್ಗೆ ಹೇಳಿಕೆ ಹೊರಬಿದ್ದಿದೆ. ಈ ಸಂದರ್ಭ ಗಡಿಯಿಂದ ಸೇನೆ ವಾಪಸ್ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆಯಾಗಿದೆ.
ಭಾರತ ಮತ್ತು ಚೀನ ಸಂಬಂಧ ವೃದ್ಧಿಯಾಗುವ ನಿಟ್ಟಿನಲ್ಲಿ ಉನ್ನತ ಮಟ್ಟದ ನಾಯಕರ ಮಾರ್ಗದರ್ಶನದೊಂದಿಗೆ ಮಾತುಕತೆ ನಡೆಸಿ ವಿವಾದ ಬಗೆಹರಿಸಿಕೊಳ್ಳಬೇಕು, ಈ ವಿವಾದ ಹೆಚ್ಚು ದಿನ ಬೆಳೆದಷ್ಟು ಉಭಯ ದೇಶಗಳಿಗೂ ನಷ್ಟ ಹೆಚ್ಚು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಐದು ಅಂಶಗಳು
1 ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳು ವಿವಾದಗಳಾಗಿ ಬೆಳೆಯಲು ಬಿಡಬಾರದು.
2 ತ್ವರಿತಗತಿಯಲ್ಲಿ ಮಾತು ಕತೆ ನಡೆಸಿ, ಸೇನೆವಾಪಸ್ ಕರೆಸಿಕೊಳ್ಳಬೇಕು.
3 ಸದ್ಯ ಇರುವ ಒಪ್ಪಂದಗಳು, ಪ್ರೊಟೋಕಾಲ್‌ಗಳಿಗೆ ಎರಡೂ ದೇಶಗಳು ಬದ್ಧವಾಗಿರಬೇಕು.
4 ಗಡಿ ವ್ಯವಹಾರ ಸಂಬಂಧ ಹಾಲಿ ಇರುವ ವ್ಯವಸ್ಥೆ ಮೂಲಕವೇ ಮಾತುಕತೆ ಮುಂದುವರಿಸಬೇಕು.
5 ಪರಿಸ್ಥಿತಿ ಶಾಂತವಾದ ಮೇಲೆ, ಉಭಯ ಕಡೆಯವರು ಕುಳಿತು ಪರಸ್ಪರ ವಿಶ್ವಾಸ ವೃದ್ಧಿಯತ್ತ ಗಮನಹರಿಸಬೇಕು.
ಭಾರತೀಯ ಸೇನಾಪಡೆಗಳು ಎಂಥದ್ದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧವಾಗಿವೆ. ಚೀನದ ಗಡಿ ಉದ್ಧಟತನಕ್ಕೆ ಪ್ರತ್ಯುತ್ತರ ನೀಡಲು ಪಡೆಗಳು ಸನ್ನದ್ಧವಾಗಿವೆ.
ಜ| ಬಿಪಿನ್ ರಾವತ್, ಭದ್ರತಾಪಡೆಗಳ ಮುಖ್ಯಸ್ಥ