
ಬ್ಯಾಂಕ್ ದರೋಡೆ ಮಾಡಲು ಉಬರ್ ಕ್ಯಾಬ್ ಬುಕ್: ಕಳ್ಳನಿಗಾಗಿ ಕಾದ ಅಮಾಯಕ ಚಾಲಕ…!
Team Udayavani, Nov 21, 2022, 5:29 PM IST

ವಾಷಿಂಗ್ಟನ್: ಎಲ್ಲಿಗಾದರೂ ಹೋಗಬೇಕಾದರೆ ಓಲಾ- ಉಬರ್ ಕ್ಯಾಬ್ ಬುಕ್ ಮಾಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ಉಬರ್ ಕ್ಯಾಬನ್ನು ಅಪರಾಧ ಕೃತ್ಯಕ್ಕೆ ಬಳಸಿ ಜೈಲು ಸೇರಿದ್ದಾನೆ.
ಅಮೆರಿಕದ ಸೌತ್‌ಫೀಲ್ಡ್, ಮಿಚಿಗನ್ ಮೂಲದ 42 ವರ್ಷದ ಜೇಸನ್ ಕ್ರಿಸ್ಮಸ್ ಎಂಬ ವ್ಯಕ್ತಿ ಬುಧವಾರ ( ನ.16 ರಂದು) ಉಬರ್ ಬುಕ್ ಮಾಡಿದ್ದಾನೆ. ಉಬರ್ ಕ್ಯಾಬ್ ಬಂದ ಬಳಿಕ ಜೇಸನ್ ಕ್ರಿಸ್ಮಸ್ ಬ್ಯಾಂಕ್ ನತ್ತ ಹೋಗುವಂತೆ ನಿರ್ದೇಶನ ನೀಡಿದ್ದಾನೆ. ನಾನು ಬರುವವರೆಗೂ ಇಲ್ಲೇ ಇರು ಎಂದು ಚಾಲಕನಿಗೆ ಹೇಳಿದ್ದಾನೆ.
ಡೈಲಿ ಸ್ಟಾರ್ ವರದಿಯ ಪ್ರಕಾರ, ಕಾರಿನಿಂದ ಇಳಿದ ಬಳಿಕ ಜೇಸನ್ ಕ್ರಿಸ್ಮಸ್ ಮುಖಕ್ಕೆ ಮುಸುಕನ್ನು (ಮಾಸ್ಕ್) ಧರಿಸಿಕೊಂಡು ಬ್ಯಾಂಕ್ ನೊಳಗೆ ಹೋಗಿದ್ದಾನೆ. ಅಲ್ಲಿ ಗನ್ ತೋರಿಸಿ, ಬ್ಯಾಂಕ್ ಸಿಬ್ಬಂದಿಗಳಿಗೆ ಭಯ ಹುಟ್ಟಿಸಿ ದರೋಡೆ ಮಾಡಿದ್ದಾನೆ. ದರೋಡೆಗೈದು ಕಾರಿನ ಚಾಲಕನ ಬಳಿ ಮನೆಗೆ ಬಿಡುವಂತೆ ಸೂಚನೆ ನೀಡಿದ್ದಾನೆ ಎಂದು ವರದಿ ತಿಳಿಸಿದೆ.
ಕೃತ್ಯ ನಡೆದ ಬಳಿಕ ಬ್ಯಾಂಕ್ ನ ಸೈರನ್ ಅಪಾಯದ ಘಂಟೆಯಾಗಿ ಹೊಡೆದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು, ಸಿಸಿಟಿವಿಯನ್ನು ಪರಿಶೀಲಿಸಿ ಕಾರಿನ ನಂಬರ್ ಪ್ಲೇಟ್ ಪತ್ತೆ ಹಚ್ಚಿ ಚಾಲಕನನ್ನು ವಿಚಾರಿಸಿದ್ದಾರೆ. ಚಾಲಕನಿಗೆ ದರೋಡೆಯ ವಿಚಾರವೇ ತಿಳಿದಿಲ್ಲ. ಚಾಲಕ ಜೇಸನ್ ಕ್ರಿಸ್ಮಸ್ ವಿಳಾಸವನ್ನು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೌತ್‌ಫೀಲ್ಡ್ ಪೊಲೀಸರು ಜೇಸನ್ ಕ್ರಿಸ್ಮಸ್ ಅಪಾರ್ಟ್ ಮೆಂಟ್ ಗೆ ಬಂದು ಆತನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಕ್ಯಾಮೆರಾದಲ್ಲಿ ಆರೋಪಿ ದೃಶ್ಯ ಸೆರೆಯಾಗಿದೆ.
ಆರೋಪಿಯ ಕಿಸೆ ಹಾಗೂ ಬಟ್ಟೆಯಲ್ಲಿ ಕೆಂಪು ಬಣ್ಣದ ಕಲೆ ಇತ್ತು. ಇದನ್ನು ನೋಡಿದ ಪೊಲೀಸರು ಗಾಬರಿಗೊಂಡು ಆರೋಪಿಗೆ ಯಾರೋ ಶೂಟ್ ಮಾಡಿದ್ದಾರೆ ಅಥವಾ ಗಾಯವಾಗಿರಬಹುದು ಎಂದು ಶಂಕಿಸುತ್ತಾರೆ ಆದರೆ ಅದು ಬ್ಯಾಂಕ್ ನಲ್ಲಿದ್ದ ಕೆಂಪು ಬಣ್ಣದ ಪ್ಯಾಕೆಟ್ ಆಗಿತ್ತು. ಬ್ಯಾಂಕ್ ನಿಂದ ದರೋಡೆಗೈದ ಹಣವೂ ಕೆಂಪು ಬಣ್ಣದಲ್ಲಿ ನೆನೆದು ಹೋಗಿದೆ.
ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್ ಮುಖ್ಯಸ್ಥ ಎಲ್ವಿನ್ ಬ್ಯಾರೆನ್ ಜೇಸನ್ ಕ್ರಿಸ್ಮಸ್ ಯಾಕೆ ಈ ಕೃತ್ಯ ಮಾಡಿದ್ದಾರೆ ಎನ್ನುವುದು ವಿಚಾರಣೆ ಬಳಿಕ ತಿಳಿಯಲಿದೆ. ರಜಾದಿನಗಳು ಬರುತ್ತಿದ್ದಂತೆ, ಕೆಲವೊಮ್ಮೆ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
