ಆರ್ಥಿಕತೆಗೆ ಹೊಡೆತ: ಉಗ್ರತ್ವ ಹೆಚ್ಚಳ! ಯುವಕರ ಸೇರ್ಪಡೆಗೆ ಜೈಶ್, ಲಷ್ಕರ್ ಕುಮ್ಮಕ್ಕು
ಪಿಒಕೆಯಲ್ಲಿ ಉಗ್ರ ತರಬೇತಿ
Team Udayavani, Sep 19, 2022, 7:10 AM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಆರ್ಥಿಕತೆ ಅಧೋಗತಿಯತ್ತ ಸಾಗಿದೆ. ಅದನ್ನೂ ಲೆಕ್ಕಿಸದ ಜೈಶ್-ಎ-ಮೊಹಮ್ಮದ್(ಜೆಇಎಂ), ಲಷ್ಕರ್-ಎ-ತಯ್ಯಬಾದಂತಹ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಕುಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಅಂಶ ಬಯಲಾಗಿದೆ.
ಕರಾಚಿ, ಗುಜ್ರಾನ್‌ವಾಲಾ, ಸಿಯಾಲ್‌ಕೋಟ್, ಪೇಶಾವರ, ಮುಝಾಫರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೆಇಎಂನ ಜಿಮ್‌ಗಳಿದ್ದು,ಅದಕ್ಕೆ ಸೇರುವಂತೆ ಯುವಕರಿಗೆ ಉಗ್ರರು ಪುಸಲಾಯಿಸಲಾರಂಭಿಸಿದ್ದಾರೆ.
ಜಿಮ್‌ನ ಯುವಕರನ್ನು ನಿಯಮಿತವಾಗಿ ಗಡಿ ನಿಯಂತ್ರಣ ರೇಖೆಯತ್ತ (ಎಲ್‌ಒಸಿ) ಕರೆತಂದು, ಅಲ್ಲಿನ ಪರಿಸ್ಥಿತಿಯನ್ನೂ ವಿವರಿಸಲಾ ಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಘ ಜಿಲ್ಲೆಯ ಗಂಗಾ ಛೋಟಿ ಪ್ರದೇಶದಲ್ಲಿ ಆ.5ರಿಂದ 11ರ ನಡುವೆ ವಿಶೇಷ ತರಬೇತಿಯನ್ನೂ ಈ ಉಗ್ರ ಸಂಘಟನೆ ಕೊಟ್ಟಿದೆ.
ವಿವಿಧ ಧಾರ್ಮಿಕ ಕೇಂದ್ರಗಳಿಗೆ ಜೆಇಎಂನ ಉಗ್ರರು ಭೇಟಿ ನೀಡುತ್ತಿದ್ದು, ಅಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರವಾಗುವ ನೆಪದಲ್ಲಿ ದ್ವೇಷದ ಆದರ್ಶ ತುಂಬಿಸುವ ಪ್ರಯತ್ನವನ್ನು ಉಗ್ರರು ನಡೆಸುತ್ತಿದ್ದಾರೆ ಎಂಬುದೂ ಬೆಳಕಿಗೆ ಬಂದಿದೆ.