ರಸ್ತೆ ಮೇಲೆಲ್ಲ ಚೆಲ್ಲಿದ ನೋಟು!
Team Udayavani, Nov 20, 2021, 11:00 PM IST
ಕ್ಯಾಲಿಫೋರ್ನಿಯಾ: ರಸ್ತೆ ಮೇಲೆ ಸಂಚರಿಸುವ ವಾಹನಗಳಿಗೆ ಕೆಲವೊಮ್ಮೆ ಗೊತ್ತಿಲ್ಲದೆ ತರಕಾರಿ, ತೈಲ ಸೋರಿ ಹೋಗುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಡಾಲರ್ ನೋಟುಗಳೇ ರಸ್ತೆ ತುಂಬ ಚೆಲ್ಲಿದ್ದವು!
ಶುಕ್ರವಾರ ಬೆಳಗ್ಗೆ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫೀಸಿಗೆ ತೆರಳುತ್ತಿದ್ದ ಹಣ ಸಾಗಿಸುವ ವಾಹನದ ಬಾಗಿಲು ಇದ್ದಕ್ಕಿದ್ದಂತೆ ರಸ್ತೆ ಮಧ್ಯೆಯೇ ತೆರೆದುಕೊಂಡಿದೆ. ಅದರಿಂದಾಗಿ ವಾಹನದ ಒಳಗಿದ್ದ ಕೆಲ ಬ್ಯಾಗ್‌ಗಳು ಹೊರಬಿದ್ದಿದ್ದು, ಅದರಲ್ಲಿದ್ದ 20 ಡಾಲರ್‌ನ ನೋಟುಗಳೆಲ್ಲವೂ ಗಾಳಿಯಲ್ಲಿ ಹಾರಾಡಲಾರಂಭಿಸಿವೆ. ಲಕ್ಷಾಂತರ ನೋಟು ಈ ರೀತಿ ರಸ್ತೆ ತುಂಬೆಲ್ಲ ಬಿದ್ದಿವೆ. ಆ ವಾಹನದ ಹಿಂದಿದ್ದ ವಾಹನಗಳಲ್ಲಿದ್ದ ಜನರೆಲ್ಲರೂ ರಸ್ತೆಗಿಳಿದು ನೋಟುಗಳನ್ನು ಆರಿಸಿಕೊಳ್ಳಲಾರಂಭಿಸಿದ್ದಾರೆ. ಇದರಿಂದಾಗಿ ಕಿ.ಮೀಗಳಷ್ಟು ಉದ್ದ ಟ್ರಾಫಿಕ್ ಜಾಮ್ ಉಂಟಾಗಿದೆ. “ನೀವು ಆರಿಸಿಕೊಂಡಿರುವುದು ನಿಮ್ಮ ಸಂಪಾದನೆಯಲ್ಲ. ಎಲ್ಲರೂ ಆ ಹಣವನ್ನು ಕೂಡಲೇ ವಾಪಸ್ ಮಾಡಿ, ಇಲ್ಲವಾದರೆ ನಾವೇ ಬಂದು ನಿಮ್ಮನ್ನು ಬಂಧಿಸುತ್ತೇವೆ’ ಎಂದು ಅಲ್ಲಿನ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.