ಅಮೆರಿಕಕ್ಕೆ ಕಾದಿದೆ ಸೆಪ್ಟಂಬರ್ ಅಪಾಯ: 2 ಲಕ್ಷಕ್ಕೆ ಏರಿಕೆಯಾಗಲಿದೆ ಸೋಂಕಿತರ ಸಾವಿನ ಸಂಖ್ಯೆ
ದೊಡ್ಡಣ್ಣನಿಗೆ ಮುಂದಿನ 3 ತಿಂಗಳು ಯಮಯಾತನೆ
Team Udayavani, Jun 12, 2020, 9:32 AM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಕೋವಿಡ್ ದಿಂದಾಗಿ ಈಗಾಗಲೇ ತತ್ತರಿಸಿರುವ ಅಮೆರಿಕ ಸೆಪ್ಟಂಬರ್ ವೇಳೆಗೆ 2 ಲಕ್ಷ ಸಾವಿನ ಪ್ರಕರಣಗಳ ಗಡಿ ದಾಟಲಿದೆ ಎಂದು ಖ್ಯಾತ ಇಂಡೋ- ಅಮೆರಿಕನ್ ಪ್ರಾಧ್ಯಾಪಕ ಆಶಿಶ್ ಝಾ ಎಚ್ಚರಿಸಿದ್ದಾರೆ. ಹಾರ್ವರ್ಡ್‌ನ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥರಾದ ಝಾ, “2 ಲಕ್ಷ ಸಾವು ಕೇವಲ ಕಲ್ಪನೆಯಲ್ಲ. ಪ್ರಸ್ತುತ ಅಮೆರಿಕದಲ್ಲಿ ನಿತ್ಯ 800- 1000 ಮಂದಿ ಸಾವನ್ನಪ್ಪುತ್ತಿದ್ದಾರೆ. ತಿಂಗಳಿಗೆ 25 ಸಾವಿರ ಸೋಂಕಿತರು ಜೀವ ಬಿಡುತ್ತಿದ್ದಾರೆ. ಈ ಸಂಖ್ಯೆ ಆಧರಿಸಿಯೇ ಹೇಳುವು ದಾದರೆ ಮುಂದಿನ ಮೂರು ತಿಂಗಳಲ್ಲಿ ಅಮೆರಿಕದಲ್ಲಿ 85 ಸಾವಿರಕ್ಕೂ ಅಧಿಕ ಸಾವಿನ ಪ್ರಕರಣಗಳು ದಾಖಲಾಗುತ್ತವೆ’ ಎಂದು ವಿವರಿಸಿದ್ದಾರೆ.
“ಬೇಸಿಗೆಯಲ್ಲಿ ಅಮೆರಿಕ ಕಡಿಮೆ ಸಾವುಗಳನ್ನು ಕಾಣುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿವೆ. ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಕ್ಟಿಕಟ್, ಮೆಸ್ಸಾಚುಸೆಟ್ಸ್‌ಗಳಲ್ಲೇನೋ ಸೋಂಕಿನ ಪ್ರಕರಣಗಳು ಕೊಂಚ ಕ್ಷೀಣಿಸುತ್ತಿದೆ. ಆದರೆ ಅರಿಜೋನಾ, ಫ್ಲೋರಿಡಾ, ಟೆಕ್ಸಾಸ್, ಉತ್ತರ ಮತ್ತು ದಕ್ಷಿಣ ಕೆರೊಲಿನಾಗಳಲ್ಲಿ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ’ ಎಂದು ಆತಂಕ ಸೂಚಿಸಿದ್ದಾರೆ.
ಲಾಕ್‌ಡೌನ್ ತೆರವು, ಪ್ರತಿಭಟನೆ ಮುಳುವು
ಆರ್ಥಿಕ ಚಟುವಟಿಕೆಗಳ ಪುನರಾ ರಂಭ, ಜಾರ್ಜ್ ಫ್ಲಾಯ್ಡ ಹತ್ಯೆಯ ವಿರುದ್ಧದ ಸಾಮೂಹಿಕ ಪ್ರತಿಭಟನೆಗಳು ಕೊರೊನಾಪೀಡಿತ ಅಮೆರಿಕವನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಟೆಕ್ಸಾಸ್‌ನಲ್ಲಿ ಬುಧವಾರ ದಾಖಲೆಯ 2,500ಕ್ಕಿಂತಲೂ ಹೊಸ ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳಿಂದ ಲಾಕ್ ಡೌನ್‌ಮುಕ್ತವಾಗಿರುವ ಫ್ಲೋರಿಡಾದಲ್ಲಿ ಈ ವಾರ ದಾಖಲೆಯ 8,553 ಹೊಸ ಪ್ರಕರಣಗಳು ದೃಢಪಟ್ಟಿವೆ. ಜಾರ್ಜ್ ಫ್ಲಾಯ್ಡ ಹತ್ಯೆ ವಿರೋಧಿಸಿ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಸಾಮಾಜಿಕ ಅಂತರ ಪಾಲನೆಯೇ ಆಗುತ್ತಿಲ್ಲ.