ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ
Team Udayavani, Sep 29, 2018, 6:00 AM IST
ಜಕಾರ್ತಾ: ಬರೋಬ್ಬರಿ ಹದಿನಾಲ್ಕು ವರ್ಷಗಳ ಹಿಂದೆ ಇಂಡೋನೇಷ್ಯಾದ ಸುಮಾತ್ರಾದ ಸಮುದ್ರದಾಳದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಎದ್ದಿದ್ದ ಸುನಾಮಿಯು ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡ ಘಟನೆಯನ್ನು ನೆನಪಿಸುವಂತೆ ಶುಕ್ರವಾರ ಕೇಂದ್ರ ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಉಂಟಾಗಿ ಸುನಾಮಿ ಅಲೆಗಳು ಎರಡು ನಗರಗಳಿಗೆ ನುಗ್ಗಿವೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.5ರಷ್ಟು ದಾಖಲಾಗಿದೆ. ದ್ವೀಪದ ರಾಜಧಾನಿ ನಗರ ಪಾಲು ಮತ್ತು ದೊಂಗಾಲ ಎಂಬಲ್ಲಿಗೆ ದೈತ್ಯ ಸಮುದ್ರ ಅಲೆಗಳು ಏರಿ ಬಂದಿವೆ. ಈ ಎರಡೂ ನಗರಗಳಲ್ಲಿನ ಹಲವಾರು ಮನೆಗಳು ಕೊಚ್ಚಿ ಹೋಗಿದ್ದು, ಕುಟುಂಬಗಳೂ ನಾಪತ್ತೆಯಾಗಿವೆ. ಎರಡೂ ನಗರಗಳೂ ಸಂಪರ್ಕ ಕಳೆದುಕೊಂಡಿವೆ. ಈ ದೃಶ್ಯಗಳನ್ನು ಹಲವರು ಚಿತ್ರೀಕರಿಸಿದ್ದು, ವಿಶ್ವಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೂಕಂಪದ ಬಳಿಕ ಸುನಾಮಿ
ಶುಕ್ರವಾರ ಆರಂಭದಲ್ಲಿ ಕೇಂದ್ರ ಇಂಡೋ ನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಕೂಡಲೇ ಅಲ್ಲಿನ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರ ಸುನಾಮಿ ಎಚ್ಚರಿಕೆ ನೀಡಿ, ಹಿಂಪಡೆದುಕೊಂಡಿತ್ತು. ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 7.20ಕ್ಕೆ ದ್ವೀಪದ ರಾಜಧಾನಿ ಪಾಲುಗೆ ಸಮುದ್ರದ ಅಲೆಗಳು ಅಪ್ಪಳಿಸಿವೆ. 3,50,000 ಜನಸಂಖ್ಯೆ ಇರುವ ಈ ನಗರ ಭೂಕಂಪ ಸಂಭವಿಸಿದ ಸ್ಥಳದಿಂದ 80 ಕಿ.ಮೀ. ದೂರದಲ್ಲಿದೆ. ಸ್ಥಳೀಯರು ತಮಗೆ ಉಂಟಾದ ಕಂಪನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭೂಕಂಪನದಿಂದಾಗಿ ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ಪಾಲುವಿನಲ್ಲಿ ಒಂದು ಶಾಪಿಂಗ್ ಮಾಲ್ ಕುಸಿದು ಬಿದ್ದಿದೆ. ಅದರಲ್ಲಿದ್ದವರ ಸ್ಥಿತಿಗತಿ ತಿಳಿದಿಲ್ಲ. ಎಎಫ್ಪಿ ಮಾಧ್ಯಮ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಇದುವರೆಗೆ ಒಬ್ಬ ವ್ಯಕ್ತಿ ಅಸುನೀಗಿದ್ದಾನೆ. ಉಳಿದಂತೆ ಸಮುದ್ರದ ಅಲೆಗಳು ನುಗ್ಗಿದ್ದರಿಂದ ಉಂಟಾಗಿರುವ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಪರ್ಕ ಕಡಿತ
ಪಾಲು ಮತ್ತು ಮೀನುಗಾರಿಕೆಗೆ ಪ್ರಾಮುಖ್ಯತೆ ಪಡೆದ ದೊಂಗಾಲ ನಗರದ ನಡುವೆ ಸಂಪರ್ಕ ಕಡಿದು ಹೋಗಿದೆ. ದ್ವೀಪದ ರಾಜಧಾನಿ ಪಾಲುವಿನಿಂದ 80 ಕಿ.ಮೀ. ಉತ್ತರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಅದರ ಕಂಪನದ ಅನುಭವ ಉಂಟಾದದ್ದು ದಕ್ಷಿಣ ಭಾಗದ ಮಕಸ್ಸಾರ್ನಲ್ಲಿ ಮತ್ತು ಕಾಲಿಮಂತನ್ ಎಂಬ ಮತ್ತೂಂದು ದ್ವೀಪದಲ್ಲಿ. ಹೀಗಾಗಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮಸೀದಿಗಳಿಗೆ ಆಗಮಿಸಿದ್ದವರೆಲ್ಲ ಭೀತಿಗೆ ಒಳಗಾದರು. ಮನೆ ಮತ್ತು ಇತರ ಕಟ್ಟಡಗಳಲ್ಲಿ ಇದ್ದವರೆಲ್ಲ ಹೊರಕ್ಕೆ ಓಡಿ ಬಂದಿದ್ದಾರೆ. ಹಲವು ಮನೆಗಳು, ಕಟ್ಟಡಗಳು ನೆಲಸಮ ವಾಗಿವೆ. ರಾತ್ರಿಯಾಗಿರುವುದರಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ. ಪ್ರಸಕ್ತ ವರ್ಷವೇ ಇಂಡೋನೇಷ್ಯಾದ ವಿವಿಧ ಭಾಗಗಳಲ್ಲಿ ಎಂಟು ಬಾರಿ ಭೂಕಂಪವಾಗಿದೆ. 2004ರಲ್ಲಿ ಸಂಭವಿಸಿದ ಮಹಾಭೂಕಂಪ ಮತ್ತು ಸುನಾಮಿಗೆ ಸಿಲುಕಿ 1,68,000 ಮಂದಿ ಅಸುನೀಗಿದ್ದರು. ಭಾರತದಲ್ಲೂ ಸುಮಾರು 10 ಸಾವಿರ ಮಂದಿ ಸಾವಿಗೀಡಾಗಿದ್ದರು.
ವಿಮಾನ ನಿಲ್ದಾಣ ಬಂದ್
ಭೂಕಂಪ ಬಳಿಕ ಪಾಲು ವಿಮಾನ ನಿಲ್ದಾಣವನ್ನು ಸ್ಥಳೀಯ ಕಾಲಮಾನ ಸಂಜೆ 7.30ರಿಂದ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆಯೇ ಎಂಬುದು ಖಚಿತವಾಗಿಲ್ಲ.
ರಸ್ತೆಗಳೆಲ್ಲ ಬ್ಲಾಕ್
ಸುನಾಮಿ ಎಚ್ಚರಿಕೆಯ ಬಳಿಕ ಭೀತಿಗೊಳಗಾದ ಜನರು ಎತ್ತರ ಪ್ರದೇಶಗಳಿಗೆ ಧಾವಿಸಿದ್ದರಿಂದ ಹೆಚ್ಚಿನ ರಸ್ತೆಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ಬ್ಲಾಕ್ ಆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು
ಪತ್ನಿಯ ಮನೆಗೆಲಸಕ್ಕೆ ಪರಿಹಾರ ನೀಡಿ: ಕೋರ್ಟ್ ತೀರ್ಪು
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!
ಪ್ರಪಾತಕ್ಕುರುಳಿದ ಟೈಗರ್ ವುಡ್ಸ್ ಕಾರು: ಗಂಭೀರ ಗಾಯಗೊಂಡ ಪ್ರಸಿದ್ಧ ಗಾಲ್ಫರ್