CONNECT WITH US  

ನುಗ್ಗೆ ಸೊಪ್ಪಿನಲ್ಲಿ ಹಲವು ಬಗೆ

ನುಗ್ಗೆ ಸೊಪ್ಪಿನ ತಂಬುಳಿ 
ಬೇಕಾಗುವ ಸಾಮಗ್ರಿಗಳು:
  ನುಗ್ಗೆಯ ಚಿಗುರು ಕುಡಿ 8-10, ಜೀರಿಗೆ 1/4 ಚಮಚ, ಎಳ್ಳು 1 ಚಮಚ, ಕೊತ್ತಂಬರಿ 1/4  ಚಮಚ,  ಕಾಯಿತುರಿ 1/4 ಅಥವಾ  1/2 ಲೋಟ, ಕಡೆದ ಮಜ್ಜಿಗೆ, ಹುರಿಯಲು ಎಣ್ಣೆ ಅಥವಾ ತುಪ್ಪ1/4 ಚಮಚ. ರುಚಿಗೆ ಉಪ್ಪು  ಮತ್ತು ಬೆಲ್ಲ.
ತಯಾರಿಸುವ ವಿಧಾನ:  ಪಾತ್ರೆಗೆ ಎಣ್ಣೆ ಅಥವಾ ತುಪ್ಪಹಾಕಿ ಕಾದ ಮೇಲೆ ಜೀರಿಗೆ, ಎಳ್ಳು , ಕೊತ್ತಂಬರಿ, ನುಗ್ಗೆ ಕುಡಿ ಹಾಕಿ ಚೆನ್ನಾಗಿ ಹುರಿದು ತೆಂಗಿನ ತುರಿಯ ಜೊತೆ ನುಣ್ಣಗೆ ರುಬ್ಬಿ ಇದಕ್ಕೆ ಸ್ವಲ್ಪ ಕಡೆದ ಮಜ್ಜಿಗೆ, ಉಪ್ಪು , ಬೇಕಾದರೆ ಚಿಟಿಕೆ ಬೆಲ್ಲ , ನೀರು ಹಾಕಿ ಹದಮಾಡಿ ಅನ್ನದ ಜೊತೆಯೂ ಉಪಯೋಗಿಸಬಹುದು ಕುಡಿಯಲೂ ಚೆನ್ನಾಗಿರುತ್ತದೆ.

ಕಟೆ°
ಬೇಕಾಗುವ ಸಾಮಗ್ರಿಗಳು:
 ನುಗ್ಗೆಯ ಎಳೆಯ ಕುಡಿಗಳು 15-20, ಜೀರಿಗೆ 1 ಚಮಚ, ಎಳ್ಳು ಒಂದೂವರೆ ಚಮಚ, ಕೊತ್ತಂಬರಿ 1/2 ಚಮಚ, ಕಾಳುಮೆಣಸು 5-6, ಕೆಂಪು ಮೆಣಸು 1, ಕಾಯಿತುರಿ 1/2 ಅಥವಾ 3/4 ಲೋಟ, ಲಿಂಬು 1, ಬೆಳ್ಳುಳ್ಳಿ ಅಥವಾ ಇಂಗು, ಎಣ್ಣೆ ಅಥವಾ ತುಪ್ಪ1 ಅಥವಾ 2 ಚಮಚ, ರುಚಿಗೆ ಉಪ್ಪು.
ತಯಾರಿಸುವ ವಿಧಾನ:  ಪಾತ್ರೆಗೆ ಎಣ್ಣೆ ಹಾಕಿ ಜೀರಿಗೆ, ಎಳ್ಳು, ಕೊತ್ತಂಬರಿ ಬೀಜ, ಕಾಳುಮೆಣಸು, ಕೆಂಪು ಮೆಣಸು,  ನುಗ್ಗೆಕುಡಿಗಳನ್ನು ಹಾಕಿ ಚೆನ್ನಾಗಿ ಹುರಿದು ತೆಂಗಿನ ತುರಿಯ ಜೊತೆ ನುಣ್ಣಗೆ ರುಬ್ಬಿ ನೀರು ಉಪ್ಪು ಹಾಕಿ ತಂಬುಳಿಯಂತೆ ಹದಮಾಡಿ ಲಿಂಬು ರಸವನ್ನು ಸೇರಿಸಿ ಒಲೆಯ ಮೇಲೆ ಕುದಿಸಿ. ಇದಕ್ಕೆ  ಜೀರಿಗೆ, ಸಾಸಿವೆ, ಒಣ ಮೆಣಸಿನ ಚೂರು ಬೆಳ್ಳುಳ್ಳಿ ಅಥವಾ ಇಂಗು ಹಾಕಿದ ತುಪ್ಪಅಥವಾ ಎಣ್ಣೆಯ ಒಗ್ಗರಣೆ ಮಾಡಿ. ಬಿಸಿ ಬಿಸಿಯಾದ ಕಟೆ° ಮಳೆಗಾಲ ಚಳಿಗಾಲಕ್ಕಂತೂ ಊಟಕ್ಕೆ ತುಂಬಾ ಚೆನ್ನಾಗಿರುತ್ತದೆ.

ಪಲ್ಯ
ಬೇಕಾಗುವ ಸಾಮಗ್ರಿಗಳು:
 ನುಗ್ಗೆಯ ಸೊಪ್ಪು, ಬೇಯಿಸಿದ ತೊಗರಿಬೇಳೆ,  ಈರುಳ್ಳಿ, ಕಾಯಿತುರಿ,  ಹಸಿಮೆಣಸು, ಅಥವಾ ಸೂಜಿ ಮೆಣಸಿನ ಪುಡಿ,  ಬೆಳ್ಳುಳ್ಳಿ ಅಥವಾ ಇಂಗು. ಒಗ್ಗರಣೆಗೆ ಕೆಂಪುಮೆಣಸು, ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕರಿಬೇವಿನ ಎಲೆ, ಅರಸಿನ, ಎಣ್ಣೆ, ರುಚಿಗೆ ಉಪ್ಪು, ಬೇಕಾದರೆ ಬೆಲ್ಲ ಅಥವಾ ಸಕ್ಕರೆ.
ತಯಾರಿಸುವ ವಿಧಾನ:  ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ  ಉದ್ದಿನಬೇಳೆ, ಒಣಮೆಣಸಿನ ಚೂರುಗಳು, ಜೀರಿಗೆ,  ಕರಿಬೇವು, ಅರಸಿನ, ಸಾಸಿವೆ ಹಾಕಿ ಚಟಪಟ ಎಂದ ಮೇಲೆ ಈರುಳ್ಳಿ , ಬೆಳ್ಳುಳ್ಳಿ ಅಥವಾ ಇಂಗು ಹಸಿಮೆಣಸು ಅಥವಾ ಸೂಜಿ ಮೆಣಸಿನ ಪುಡಿ ಹಾಕಿ ಬಾಡಿದ ಮೇಲೆ ಹೆಚ್ಚಿದ ನುಗ್ಗೆಯ ಸೊಪ್ಪುಹಾಕಿ. ಸ್ವಲ್ಪಬೆಂದ ಮೇಲೆ ಬೇಯಿಸಿದ ತೊಗರಿ ಬೇಳೆ, ಉಪ್ಪು , ಕಾಯಿತುರಿ, ರುಚಿಗೆ ಬೇಕಾದರೆ ಬೆಲ್ಲ ಅಥವಾ ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ 5 ನಿಮಿಷ ಮುಚ್ಚಿ ಇಳಿಸಿ ಬಿಡಿ. ಊಟದ ಮತ್ತು ರೊಟ್ಟಿಯ ಜೊತೆಯೂ ಚೆನ್ನಾಗಿರುತ್ತದೆ. ಇದಕ್ಕೆ ಮಸಾಲೆ ಹುರಿದು ಕಾಯಿತುರಿಯ ಜೊತೆ ರುಬ್ಬಿ ಸೇರಿಸಿಯೂ ಮಾಡಬಹುದು. 

ನುಗ್ಗೆ ಸೊಪ್ಪಿನ ಹುಳಿ  
ಬೇಕಾಗುವ ಸಾಮಗ್ರಿಗಳು:
 ನುಗ್ಗೆಯ ಸೊಪ್ಪು, ಒಂದು ಆಲೂಗಡ್ಡೆ , ಈರುಳ್ಳಿ 1, ಟೊಮೆಟೋ 1, ಕಾಯಿತುರಿ- ತೊಗರಿಬೇಳೆ 1/2 ಲೋಟ,  ಮಸಾಲೆಗೆ ಕೆಂಪು ಮೆಣಸು 4, ಕೊತ್ತಂಬರಿ ಬೀಜ 2 ಚಮಚ, ಜೀರಿಗೆ 1 ಚಮಚ, ಸಾಸಿವೆ 1 ಚಮಚ, ಮೆಂತ್ಯ 4-5, ಓಮ 4 ಚಮಚ, ಬೆಳ್ಳುಳ್ಳಿ 4 ಎಸಳು, 1/4 ಚಮಚ ಎಣ್ಣೆ, ಕರಿಬೇವಿನ ಎಸಳು, ರುಚಿಗೆ ಉಪ್ಪು , ಬೆಲ್ಲ ಹುಣಸೆ ಹಣ್ಣು,
ತಯಾರಿಸುವ ವಿಧಾನ:  ತೊಗರಿಬೇಳೆ, ಹೆಚ್ಚಿದ ಆಲೂಗಡೆ, ನುಗ್ಗೆಯ ಸೊಪ್ಪುಇವುಗಳನ್ನು ಬೇಯಿಸಿಕೊಂಡು ಇದಕ್ಕೆ  ಹುರಿದು ತೆಂಗಿನ ತುರಿಯ ಜೊತೆ ರುಬ್ಬಿದ ಮಸಾಲೆ, ಉಪ್ಪು, ಹುಣಸೆ ಹಣ್ಣು (ಬೇಕಾದರೆ), ಚಿಟಕಿ ಬೆಲ್ಲ ಹಾಕಿ ಹದ ಮಾಡಿ ಕುದಿಯಲು ಇಡಿ, ನಂತರ ಹೆಚ್ಚಿದ ಟೊಮೆಟೋ, ಈರುಳ್ಳಿ, ಕರಿಬೇವಿನ ಎಸಳು ಹಾಕಿ ಚೆನ್ನಾಗಿ ಕುದಿ ಬಂದ ಮೇಲೆ ಇಳಿಸಿಬಿಡಿ.

ನುಗ್ಗೆಯ ಮೊಸರುಬಜ್ಜಿ   
ಬೇಕಾಗುವ ಸಾಮಗ್ರಿಗಳು:
 ನುಗ್ಗೆಯ ಕುಡಿ, ಕಾಯಿತುರಿ, ಸಿಹಿಮೊಸರು, ಈರುಳ್ಳಿ,  ಒಗ್ಗರಣೆಗೆ ಕೆಂಪು ಮೆಣಸು, ಹಸಿಮೆಣಸು, ಉದ್ದಿನಬೇಳೆ, ಸಾಸಿವೆ, ಎಣ್ಣೆ. ರುಚಿಗೆ ಉಪ್ಪು, ಬೆಲ್ಲ ಬೇಕಾದರೆ.
ತಯಾರಿಸುವ ವಿಧಾನ:  ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ, ಕೆಂಪು ಮೆಣಸಿನ ಚೂರು, ಹಸಿಮೆಣಸಿನ ಚೂರು, ಸಾಸಿವೆ ಹಾಕಿ ಚಟಪಟ ಎಂದ ಮೇಲೆ ಹೆಚ್ಚಿದ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದು ಆರಿದ ಮೇಲೆ ರುಬ್ಬಿದ ಕಾಯಿತುರಿ, ಸಿಹಿಮೊಸರು. ಉಪ್ಪು , ಹೆಚ್ಚಿದ ಈರುಳ್ಳಿ ಹಾಕಿ ಹದ ಮಾಡಿ.

ನುಗ್ಗೆಯ ಪಕೋಡಾ
ಬೇಕಾಗುವ ಸಾಮಗ್ರಿಗಳು
:  ನುಗ್ಗೆಯ ಸೊಪ್ಪು, ಸ್ವಲ್ಪ ಕಾಯಿತುರಿ, ಈರುಳ್ಳಿ , ಕಡ್ಲೆಹಿಟ್ಟು 1/2 ಲೋಟ, ಅಕ್ಕಿಹಿಟ್ಟು 1/4 ಲೋಟ, ರವೆ 1/4 ಲೋಟ, (ಉದ್ದಿನ ಹಿಟ್ಟನ್ನೂ ಬಳಸಬಹುದು) ಕರಿಬೇವಿನ ಸೊಪ್ಪು , ಖಾರದ ಪುಡಿ, ಇಂಗು, ಓಮ, ಉಪ್ಪು , ಚಿಟಕಿ ಸೋಡಾ, ಕರಿಯಲು ಎಣ್ಣೆ .
ತಯಾರಿಸುವ ವಿಧಾನ:  ಒಂದು ಪಾತ್ರೆಗೆ ಕಡ್ಲೆಹಿಟ್ಟು , ಅಕ್ಕಿಹಿಟ್ಟು , ರವೆಯನ್ನು ಹಾಕಿ ಇದಕ್ಕೆ ಹೆಚ್ಚಿದ ನುಗ್ಗೆಯ ಸೊಪ್ಪು , ಈರುಳ್ಳಿ ,  ಕಾಯಿತುರಿ, ಕರಿಬೇವು, ಇಂಗು, ಓಮ, ಖಾರದಪುಡಿ, ಉಪ್ಪು , ಚಿಟಕಿ ಸೋಡಾ ಹಾಕಿ ಚೆನ್ನಾಗಿ ಕಲಸಿ ಕಾದ ಎಣ್ಣೆಗೆ ಬಿಟ್ಟು ಗರಿಗರಿಯಾಗಿ ಕರಿದರೆ ಸಂಜೆಯ ಚಹಾದ ಜೊತೆ ಚೆನ್ನಾಗಿರುತ್ತದೆ.

- ಕಲ್ಪನಾ ಪಿ. ಹೆಗಡೆ


Trending videos

Back to Top