ಅಯ್ಯೋ.. ಮಲಗೋಕೆ ಟೈಮಿಲ್ಲ: ಮಹಿಳೆಯರ ಗೋಳು!

ಕೆಲಸ.. ಕೆಲಸ.. ಕೆಲಸ.. ಅದರ ಮೇಲೆ ಒತ್ತಡದ ಜೀವನ ಈಗಿನ ಕಾಲದಲ್ಲಿ ಎಲ್ಲರದ್ದೂ ಇದೇ ಸ್ಥಿತಿ. ಅದರಲ್ಲೂ ನಮಗೆ ಮಲಗೋಕೆ ಟೈಮೇ ಸಿಗ್ತಿಲ್ಲ ಅಂತ ಮಹಿಳೆಯರು ತೀವ್ರ ಬೇಸರದಲ್ಲಿದ್ದಾರಂತೆ! ದಿನದಲ್ಲಿ ನಾವು 5 ಗಂಟೆ ಮಲಗಿದ್ರೆ ಅದೇ ಹೆಚ್ಚು ಅಂತ ಹೇಳಿದ್ದಾರೆ. 30ರಿಂದ 50 ರ ವಯಸ್ಸಿನ ಮಹಿಳೆಯರು ಹೀಗೆ ಹೇಳಿದ್ದಾರೆ ಅಂತ ಹೊಸ ಸಮೀಕ್ಷೆಯೊಂದು ಹೇಳಿದೆ.
ಮಹಿಳೆಯರು ದಿನದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುತ್ತಿರುತ್ತಾರೆ. ಮನೆ ಕೆಲಸ, ಕಚೇರಿ ಕೆಲಸ ಮಕ್ಕಳ ಕೆಲಸದಿಂದಾಗಿ ಅವರಿಗೆ ನಿದ್ದೆ ಸಮಯ ಸಾಲುತ್ತಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಈಗಿನ ಸಂದರ್ಭದಲ್ಲಿ ಒತ್ತಡ ಬದುಕಿನಿಂದಾಗಿಯೂ ಕೆಲವರಿಗೆ ನಿದ್ದೆಗೆ ಸಮಯ ಸಿಕ್ಕಿದರೂ 5 ಗಂಟೆ ಮೇಲೆ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲವಂತೆ. ಮತ್ತೆ ಕೆಲವರಿಗೆ ಕಚೇರಿಯ ರಾತ್ರಿ ಪಾಳಿ ನಿದ್ದೆಗೆ ಸಮಸ್ಯೆಯಾಗಿದೆಯಂತೆ.
ಸಮೀಕ್ಷೆಗಾಗಿ ಬ್ರಿಟನ್ನಲ್ಲಿ 2 ಸಾವಿರ ಮಂದಿ ಮಹಿಳೆಯರನ್ನು ಸಂಪರ್ಕಿಸಲಾಗಿದ್ದು, ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ನಿದ್ದೆ ಸಮಸ್ಯೆ ಗಾಢವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ನಿದ್ದೆ ಕಡಿಮೆಯಾದವರಲ್ಲಿ ಕೋಪ, ಉದ್ವೇಗ, ಖನ್ನತೆ ಇತ್ಯಾದಿಗಳೂ ಇರುವುದನು ಸಮೀಕ್ಷೆ ಪತ್ತೆ ಮಾಡಿದೆ.
ಫಲಿತಗಳು...
ದಿನದಲ್ಲಿ 5 ಗಂಟೆಯೂ ನಿದ್ದೆಯಿಲ್ಲ!
ಮನೆ ಕೆಲಸ, ಕಚೇರಿ ಕೆಲಸ ಮಕ್ಕಳ ಕೆಲಸದಿಂದಾಗಿ ನಿದ್ದೆ ಮಾಡೋಕೆ ಆಗ್ತಿಲ್ಲ!
ನಿದ್ದೆ ಕಡಿಮೆಯಾದ ಮಹಿಳೆಯರಲ್ಲಿ ಕೋಪ, ಖನ್ನತೆ, ಉದ್ವೇಗದ ಸಮಸ್ಯೆ ಪತ್ತೆ
30 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ನಿದ್ದೆಯ ಕೊರತೆ ಹೆಚ್ಚು