CONNECT WITH US  

ಕಷ್ಟಬಂದ್ರೂ, ಸುಖಬಂದ್ರೂ ಕೇಳಿ: ಏಕೆ ಬಂತು?

ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಅನೇಕ ಪ್ರಶ್ನೆಗಳು ಅವನನ್ನು ಕಾಡುತ್ತಲೇ ಇರುತ್ತವೆ. ನಮ್ಮ ತಲೆಯಲ್ಲಿ ಹುಟ್ಟುವ ಪ್ರಶ್ನೆಗಳು ನಮ್ಮ ಜೀವನಕ್ಕೆ ಸಂಬಂಧಿಸಿರಬೇಕು ಎಂದೇನೂ ಇಲ್ಲ. ಚಿಕ್ಕ ವಯಸ್ಸಿನಲ್ಲಿ ಕುತೂಹಲಗಳು ಹೆಚ್ಚಾದರೆ, ವಯಸ್ಸಾಗುತ್ತಿದ್ದಂತೆ ಪ್ರಶ್ನೆಗಳು ಹೆಚ್ಚಾಗುತ್ತವೆ.

ನಮಗೆ ಶಾಲೆಯಲ್ಲಿ ಹೇಳಿಕೊಡುವುದೇ ಪ್ರಶ್ನೆಗಳಿಗೆ ಉತ್ತರಿಸು ವುದನ್ನು. ನಾವು ಏನೇ ಕಲಿತರೂ ಕೊನೆಗೆ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿಯೇ ಪಾಸಾಗಬೇಕು. ನಾವು ಎಷ್ಟೇ ಓದಿಕೊಂಡಿದ್ದರೂ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡುವುದು ಬಹಳ ಕಷ್ಟ. ಹಾಗೇ ಪ್ರತಿನಿತ್ಯ ಜೀವನದಲ್ಲಿ ಎಷ್ಟೇ ಪಾಠ ಕಲಿತಿದ್ದರೂ ನಮಗೆ ಗೊತ್ತಿರುವ ಪ್ರಶ್ನೆಗಳೇ ನಮ್ಮ ಮುಂದೆ ಬಂದರೂ ಕೆಲವು ಸಲ ಉತ್ತರಗಳು ಸರಾಗವಾಗಿ ಸಿಕ್ಕುವುದಿಲ್ಲ. ಪ್ರಶ್ನೆಗಳು- ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಉತ್ತರ ಸಿಕ್ಕಿದರೂ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿರುತ್ತೇವೆ. 

ಪ್ರಶ್ನೆಗಳು ಹುಟ್ಟುವುದರಿಂದಲೇ ಬುದ್ಧಿ ಚುರುಕಾಗುವುದು. ಆದ್ದರಿಂದಲೇ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಹಿರಿಯರು ಹೇಳುವುದು. ಹೀಗೆ ಹೇಳುವ ಹಿರಿಯರೇ, ನಾವು ಅತಿಯಾಗಿ ಪ್ರಶ್ನೆ ಕೇಳಿದರೆ ಗದರುವುದೂ ಉಂಟು! ಆ ಪ್ರಶ್ನೆ ಬೇರೆ! ನಮ್ಮೆಲ್ಲ ಪ್ರಶ್ನೆಗಳು ಮಾತ್ರ ತಲೆಯಲ್ಲಿ ಓಡಾಡುತ್ತಲೇ ಇರಬೇಕು. ಪಾಶ್ಚಿಮಾತ್ಯ ತತ್ವಜ್ಞಾನಿ ಸಾಕ್ರೆಟಿಸ್‌ ತನ್ನ ತತ್ವಶಾಸ್ತ್ರವನ್ನು ಪರಿಚಯಿ ಸಿದ್ದೇ ಪ್ರಶ್ನೆಗಳನ್ನು ಕೇಳುವುದರ ಮೂಲಕ. ಅವನ ಪ್ರಕಾರ ತತ್ವಶಾಸ್ತ್ರದ ಮೊದಲ ಹೆಜ್ಜೆಯೇ ಪ್ರಶ್ನೆ ಕೇಳುವುದು. ನಾವು ಯಾವುದೇ ವಿಚಾರದ ಬಗ್ಗೆ ಮಾತನಾಡಿದರೂ ಎದುರಿರುವ ವ್ಯಕ್ತಿಯ ತಲೆಯಲ್ಲಿ ಪ್ರಶ್ನೆ ಹುಟ್ಟಬೇಕು, ಆಗ ನಾವು ಮಾತನಾಡಿದ್ದು ಸಾರ್ಥಕವಾಗುತ್ತದೆ. ಒಂದು ಪ್ರಶ್ನೆಗೆ ಉತ್ತರ ಸಿಗುತ್ತಿದ್ದಂತೆ ಆ ಉತ್ತರಕ್ಕೆ ಸಂಬಂಧಿಸಿದಂತೆ ಮತ್ತೂಂದು ಪ್ರಶ್ನೆ ಹುಟ್ಟಬೇಕು. ಹೀಗೆ ಪ್ರಶ್ನೆಗೆ ಪ್ರಶ್ನೆಗಳು ಹೊರಬಂದರೆ ನಮ್ಮ ಬುದ್ಧಿ ಕೆಲಸ ಮಾಡುತ್ತಿದೆಯೆಂದರ್ಥ.  ನಮ್ಮ ಉಪನಿಷತ್ತುಗಳು ಕೂಡ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತವೆ. ಹಾಗೆಯೇ ಅವುಗಳಿಗೆ ಉತ್ತರವನ್ನೂ ನೀಡುತ್ತವೆ. ಆ ಉತ್ತರಗಳಲ್ಲೇ ಮತ್ತಷ್ಟು ಪ್ರಶ್ನೆ ಹುಟ್ಟುತ್ತದೆ. ಇದು ನಮ್ಮನ್ನು ಧರ್ಮಗ್ರಂಥಗಳು ಬೆಳೆಸುವ ವಿಧಾನ.   

ಸಾಕ್ರೆಟಿಸ್‌ ಬೀದಿಯಲ್ಲಿ ನಿಂತು, ಜನರನ್ನು ಗುಂಪು ಕಟ್ಟಿಕೊಂಡು ಬೋಧಿಸುತ್ತಿದ್ದ. ಅವನು ಯಾವ ವಿಚಾರವನ್ನೂ ತನ್ನ ನಿರ್ಧಾರದ ಮೇಲೆ ಕೊನೆಗೊಳಿಸುತ್ತಿರಲಿಲ್ಲ. ಉತ್ತರಗಳೇ ಸಿಗದಂತಹ ಅನೇಕ ವಿಚಾರಗಳನ್ನು ಜನರ ಕಿವಿಗೆ ಹಾಕಿ, ಇವುಗಳಿಗೆ ಉತ್ತರ ನೀವೇ ಹುಡುಕಿ ಎಂದು ಸಭೆ ಮುಗಿಸುತ್ತಿದ್ದ. ನಾವೆಲ್ಲ ಯಾರು? ಯಾಕೆ ಭೂಮಿ ಮೇಲಿದ್ದೇವೆ? ನಾವ್ಯಾಕೆ ಪ್ರಾಣಿಗಳಾಗಿಲ್ಲ? ಅಥವಾ ನಾವು ಒಂದು ಜನ್ಮದಲ್ಲಿ ಪ್ರಾಣಿಗಳಾಗಿದ್ದೆವಾ? ಹಾಗಾದರೆ ಹಿಂದಿನ ಜನ್ಮ ಮುಂದಿನ ಜನ್ಮ ಅನ್ನೋದು ಇದೆಯಾ? ಬುದ್ಧಿವಂತರು ಯಾರು? ಸಾಕ್ರೆಟಿಸ್‌ ಯಾವತ್ತೂ ತನ್ನನ್ನು ತಾನು ಬುದ್ಧಿವಂತನೆಂದು ಭಾವಿಸಿರಲಿಲ್ಲ, ನೀವೆಲ್ಲ ನನ್ನನ್ನು ಬುದ್ಧಿವಂತನೆಂದು ಗುರುತಿ ಸುತ್ತೀರಿ, ಆದರೆ ನಾನು ಕಲಿಯುವುದು ಸಾಕಷ್ಟಿದೆ. ನನ್ನ ಅನೇಕ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದಾಗ ನಾನು ಹೇಗೆ ಬುದ್ಧಿವಂತನಾಗುತ್ತೇನೆ? ಸಾಕ್ರೆಟಿಸ್‌ನ ಶಿಷ್ಯಂದಿರಾದ ಪ್ಲೆಟೊ ಮತ್ತು ಅರಿಸ್ಟಾಟಲ್‌ ಸಹ ತಮ್ಮ ಗುರುವಿನಂತೆ ಜನರ ತಲೆಯಲ್ಲಿ ಪ್ರಶ್ನೆ ಹುಟ್ಟಿಸುವ ಮೂಲಕ ತಮ್ಮ ಚಿಂತನೆಗಳನ್ನು ಹರಿಯಬಿಟ್ಟರು. ಪ್ರಶ್ನೆಗಳು ಹುಟ್ಟುವುದರ ಮೂಲಕ ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ತಲೆಯಲ್ಲಿ ಪ್ರಶ್ನೆಗಳೇ ಹುಟ್ಟದಿದ್ದರೆ ಆತ ಬುದ್ಧಿವಂತನಾಗಲು ಅರ್ಹನಲ್ಲ ಎಂಬುದು ಅನೇಕ ಅಧ್ಯಯನಗಳ ಫ‌ಲಿತಾಂಶ.

ವೇದ- ಪ್ರಶ್ನೋತ್ತರಗಳ ಮೂಟೆ
ನಮ್ಮ ವೇದಗಳಲ್ಲಿ, ಉಪನಿಷತ್ತುಗಳಲ್ಲೂ ಮೊದಲು ಹುಟ್ಟು ವುದು ಪ್ರಶ್ನೆಗಳೇ. ಕಿಂ ಕಾರಣವತ್‌ ಬ್ರಹ್ಮ? ಕುತಃ? ಬ್ರಹ್ಮನು ಯಾರು? ನಾನು ಯಾರು? ಯಾವ ಕಾರಣಕ್ಕಾಗಿ ಹುಟ್ಟಿದ್ದೇವೆ? ದೇವರು ಯಾವ ಕಾರಣಕ್ಕಾಗಿ ಜಗತ್ತನ್ನು ನಿರ್ಮಿ ಸಿದ್ದಾನೆ? ಅವನು ಸಕಲ ಜೀವರಾಶಿಗಳನ್ನು ಏಕೆ ಸೃಷ್ಟಿಸಿದ್ದಾನೆ? ನಾವ್ಯಾಕೆ ಹುಟ್ಟಬೇಕು, ಸಾಯಬೇಕು? ನಮ್ಮ ದೇಹ ಹೀಗೇ ಇರಬೇಕೆಂದು ಯಾರು ನಿರ್ಧರಿಸಿದ್ದು? ಪ್ರಕೃತಿಯಲ್ಲಿ ನಿಯಮ ಗಳನ್ನು ಅಳವಡಿಸಿದ್ದು ಯಾರು? ಮತ್ತು ಏಕೆ? ನಾವು ಸಾಯು ವುದೇ ಕೊನೆಯಾದರೆ ಹುಟ್ಟಿ ಬಂದಿದ್ದು ಏಕೆ? ಮತ್ತೆ ಮತ್ತೆ ಹುಟ್ಟಿ ಬರುವುದೂ ಏಕೆ? ದೇವರು ಎಂಬುವನು ಒಬ್ಬ ವ್ಯಕ್ತಿಯೋ ಅಥವಾ ಅಗಾಧವಾದ ಶಕ್ತಿಯೋ? ಅವನನ್ನು ಹೇಗೆ ಕಾಣುವುದು? ನಾನು ಕಷ್ಟ ಏಕೆ ಅನುಭವಿಸಬೇಕು? ನಾನು ಸುಖಕ್ಕೆ ಅರ್ಹ ಅಲ್ಲವಾ? ನನ್ನ ಕರ್ಮಕ್ಕೆ ನಾನೇ ಹೊಣೆಗಾರನಾ? ನನ್ನೊಳಗೇ ಪರಮಾತ್ಮನಿದ್ದಾನಾ? ಆದರೂ ನಾನೇಕೆ ದುಃಖದಲ್ಲಿದ್ದೇನೆ? ನಾನು ಮಾಡುತ್ತಿರುವುದು ಸರಿಯೊ ತಪ್ಪೊ? ನಾನು ಹೇಗೆ ಬದುಕಬೇಕು? ಪರಮಾತ್ಮನಲ್ಲಿ ಐಕ್ಯವಾಗುವು ದೆಂದರೇನು? ಪರಮಾತ್ಮ ಇಲ್ಲದೆ ನಾನು ಜೀವಿಸಲು ಸಾಧ್ಯ ವಿಲ್ಲವೇ? ಹೀಗೆ ಸಾವಿರಾರು ಪ್ರಶ್ನೆಗಳು-ಪ್ರಶ್ನೆಗಳಿಗೆ ಉತ್ತರಗಳು- ಉತ್ತರಗಳಿಂದ ಪ್ರಶ್ನೆಗಳು- ನಮ್ಮ ಅಪೌರುಷೇಯ ಗ್ರಂಥಗಳಲ್ಲಿ ಹರಿದಾಡಿವೆ. ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ ಜೀವನ ಕಲಿಸಿಕೊಡುವ ಪಾಠ. ಕಠೊಪನಿಷತ್ತಿನಲ್ಲಿ ನಚಿಕೇತನಿಗೆ ಮೊದಲು ಹುಟ್ಟಿದ್ದು ಆತ್ಮನನ್ನು ಅರಿಯುವ ಪ್ರಶ್ನೆಗಳು. ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಯಾರೂ ಸರಿಯಾಗಿ ಕೊಡಲಿಲ್ಲವೆಂದು ಕೊನೆಗೆ ಯಮನ ಮನೆ ಬಾಗಿಲಿಗೆ ಹೋಗಿ, ಯಮನಿಗಾಗಿ ಮೂರು ದಿನ ಕಾದು, ಹಟಕ್ಕೆ ಬಿದ್ದು ತನ್ನ ಪ್ರಶ್ನೆಗಳಿಗೆ ಯಮಧರ್ಮ ರಾಯನ ಬಾಯಿಯಿಂದ ಸತ್ಯ ಹೊರ ಬರುವಂತೆ ಮಾಡಿ, ಚಿಕ್ಕವಯಸ್ಸಿನಲ್ಲೇ ಬ್ರಹ್ಮನನ್ನು ಅರಿತು ಕೊಂಡವನು ನಚಿಕೇತ. ಹಾಗೇ ಆದಿಶಂಕರರೂ ಸಹ ತಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡೇ ಅನೇಕ ಗುರುಗಳೊಡನೆ ತರ್ಕ ಮಾಡಿ ಬ್ರಹ್ಮಸತ್ಯ ಜಗತ್‌ ಮಿಥ್ಯಾ ಎಂಬ ಸತ್ಯವನ್ನು ಪಸರಿಸಿದರು.

ಪ್ರಶ್ನೆಗಳನ್ನು ಕಡೆಗಣಿಸಬೇಡಿ
ಕೆಲವರು ಪ್ರಶ್ನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾರು ಏನೇ ಹೇಳಿದರೂ ಅದು ಸರಿ ಎಂಬಂತೆ ತಲೆಯಾಡಿಸಿ, ಹೌದು ಹೌದು ಎನ್ನುತ್ತಾರೆ. ಬೇರೆಯವರು ತಪ್ಪು ಹೇಳಿದರೂ, ಅದು ತಪ್ಪೆಂದು ತಮಗೆ ತಿಳಿದಿದ್ದರೂ ತಿರುಗಿ ಪ್ರಶ್ನಿಸುವುದಿಲ್ಲ. ಅಯ್ಯೋ ನಮಗ್ಯಾಕೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಎಲ್ಲಕ್ಕೂ ಹೂಂ ಗುಟ್ಟುತ್ತಾರೆ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಮೊದಲು ನಮ್ಮನ್ನು ನಾವು ಪ್ರಶ್ನಿಸುಕೊಳ್ಳಬೇಕು- ಈ ಪರಿಸ್ಥಿತಿ ಏಕೆ ಬಂದಿದೆ? ಯಾರು ಕಾರಣ? ಈಗೇನು ಮಾಡಬೇಕು? ಇಂತಹ ಪ್ರಶ್ನೆಗಳನ್ನು ಕೇವಲ ಕಷ್ಟ ಬಂದಾಗ ಮಾತ್ರವಲ್ಲ, ಸುಖ ಬಂದಾಗಲೂ ಕೇಳಿಕೊಳ್ಳಬೇಕು. ಕೆಲವು ಸಲ ನಮ್ಮದೇನೂ ತಪ್ಪಿಲ್ಲದೆಯೇ ಕಷ್ಟಗಳು ಒಂದರ ಮೇಲೊಂದರಂತೆ ಬರುತ್ತವೆ. ಏಕೆ ಕಷ್ಟಗಳು ನನ್ನನ್ನೇ ಹುಡುಕಿಕೊಂಡು ಬಂದಿವೆ? ಇದು ನಾನು ಈಗ ಮಾಡಿದ ತಪ್ಪಿನ ಫ‌ಲವೋ ಅಥವಾ ಕಳೆದ ಜನ್ಮಧ್ದೋ? ಇದಕ್ಕೆ ಪರಿಹಾರ ಏನು? ಬೇರೆಯವರು ಕೇಳುವ ಪ್ರಶ್ನೆಗೆ ಸರಾಗವಾಗಿ ಉತ್ತರ ಹೇಳಬಹುದು. ಆದರೆ ನಮ್ಮೊಳಗೆ ನಮ್ಮ ಬಗ್ಗೆ ನಮಗೇ ಹುಟ್ಟುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಸುಖದ ಸಂಗತಿಗಳು ನಮ್ಮನ್ನು ಹುಡುಕಿಕೊಂಡು ಬಂದರೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಏಕೆಂದರೆ ಅವುಗಳ ಹಿಂದೆಯೇ ಅಪಾಯಗಳೂ ಇರುವ ಸಾಧ್ಯತೆಯಿರುತ್ತದೆ. 

ನಾವು ಯಾರನ್ನಾದರೂ ಪ್ರೀತಿಸುವಾಗಲೂ ನಮಗೆ ಗೊತ್ತಿಲ್ಲ ದಂತೆ ಅನೇಕ ಪ್ರಶ್ನೆಗಳು ತಲೆಯಲ್ಲಿ ಏಳುತ್ತವೆ. ಅವನು/ಅವಳು ನನಗೆ ಸರಿಯಾದ ವ್ಯಕ್ತಿಯೇ? ನನ್ನನ್ನು ಅವನು ನಿಜವಾಗಲೂ ಪ್ರೀತಿಸುತ್ತಾನಾ? ನಾನು ಅವಳನ್ನು ಮದುವೆ ಆಗುವುದು ಸರಿಯೊ ತಪ್ಪೊ? ಅವಳನ್ನು ಮದುವೆಯಾದರೆ ಜೀವನದಲ್ಲಿ ಸುಖ ವಾಗಿರುತ್ತೇನಾ? ಪ್ರತಿನಿತ್ಯ ಪ್ರಶ್ನೆಗಳ ಗೊಂದಲದಲ್ಲಿ ಸಿಕ್ಕಿಹಾಕಿ ಕೊಂಡಿದ್ದೇವೆ. ಜೀವನವೇ ಒಂದು ಪ್ರಶ್ನೆಯಾಗಿರುವುದರಿಂದ, ಪ್ರಶ್ನೆಗಳಿಲ್ಲದೆ ಜೀವನವಿಲ್ಲ. 


Trending videos

Back to Top