CONNECT WITH US  

ಸಿನಿಮಾ ಟಾಕೀಸ್‌ನಲ್ಲಿ ಮಜಾ ಹುಡುಗ: ಪವನ್‌ ಎಂಬ ಮುಂಬೆಳಗು!

ರೂಪತಾರಾ

ಕಲಾರಂಗಕ್ಕೆ ಕಾಲಿಟ್ಟು ಬರೋಬ್ಬರಿ 25 ವರ್ಷ, ಕಿರುತೆರೆ, ಬೆಳ್ಳಿತೆರೆಯಲ್ಲಿ ನಿಲ್ಲದ ಪಯಣ. ನೂರಾರು ಧಾರಾವಹಿಗಳಲ್ಲಿ ನಟನೆ, 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ನಿರ್ವಹಣೆ, ಧಾರಾವಾಹಿಗಳಿಗೆ ಮೂರುವರೆ ಸಾವಿರ ಎಪಿಸೋಡ್‌ಗಳ ನಿರ್ದೇಶನ...! ಬಪ್ಪರೇ, ಇದಷ್ಟೇ ಅಲ್ಲ, ಕನ್ನಡದ ಬಹುತೇಕ ಸ್ಟಾರ್‌ ನಟರೊಂದಿಗೆ ಪರದೆ ಹಂಚಿಕೊಂಡ ನಟ.

ಯಾರವರು? ಈ ಪ್ರಶ್ನೆಗೆ ಉತ್ತರ, ಪವನ್‌. ಬಹಳಷ್ಟು ಮಂದಿಗೆ ಒಮ್ಮೆಲೆ ಪವನ್‌ ಅಂದರೆ ಗೊಂದಲದ ಪ್ರಶ್ನೆ ಎದುರಾಗಬಹುದೇನೋ, ಅದೇ "ಮಜಾ ಟಾಕೀಸ್‌' ಖ್ಯಾತಿಯ ಪವನ್‌ ಅಂದಾಕ್ಷಣ, ಪ್ರತಿಭಾವಂತ ನಟನ ನೆನಪಾಗುತ್ತೆ. ಪವನ್‌ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ, ಅವರ ಹಿನ್ನೆಲೆ ಬಗ್ಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಪವನ್‌ ಎಲ್ಲಿಯವರು, ಕಲಾರಂಗಕ್ಕೆ ಬಂದದ್ದು ಹೇಗೆ ಇತ್ಯಾದಿ ಕುತೂಹಲವಿದ್ದರೆ ಮುಂದೆ ಓದಿ ...

ಪವನ್‌ ಅಲಿಯಾಸ್‌ "ಮಜಾ ಟಾಕೀಸ್‌' ಹುಟ್ಟೂರು ಗುಬ್ಬಿ. ಓದಿದ್ದು, ಬೆಳೆದದ್ದು ಮಾತ್ರ ಬೆಂಗಳೂರಲ್ಲಿ. ವಿಜಯನಗರದ ಜೆಎಸ್‌ಎಸ್‌ ಹೈಸ್ಕೂಲ್‌ನಲ್ಲಿ ಓದಿದ ನಂತರ ಸಂಜೆ ಕಾಲೇಜು ಮುಗಿಸಿದರು. ಆ ಬಳಿಕ ಡಿಪ್ಲೊಮೊ ಇನ್‌ ಮೆಕಾನಿಕಲ್‌ ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡು, ಅರ್ಧಕ್ಕೆ ಬಿಟ್ಟುಬಿಟ್ಟರು. ಕಾರಣ, ಅವರಲ್ಲೊಂದು ಕಲೆಯ ಮೇಲಿನ ಸೆಳೆತವಿತ್ತು. 1986 ರಲ್ಲಿ ಅವರ ಅಜ್ಜನ ಮನೆ ಬಳಿ ಕಿರುತೆರೆ ನಟ ವೆಂಕಿ ಮತ್ತು ಪ್ರಕಾಶ್‌ ರಾಜ್‌ ಅವರ ಮನೆಯೂ ಇತ್ತು.

ಅವರ ಪರಿಚಯ ಮಾಡಿಕೊಂಡಿದ್ದ ಪವನ್‌, ತನಗಿರುವ ಬಣ್ಣದ ಲೋಕದ ಮೇಲಿನ ಆಸೆ ವ್ಯಕ್ತಪಡಿಸಿದ್ದರು. ಆಗ ಟಿ.ಎನ್‌.ನರಸಿಂಹನ್‌ ಕಿರುತೆರೆಯಲ್ಲಿ "ಸಂಕಲನ' ಧಾರಾವಾಹಿ ನಿರ್ದೇಶನ ಮಾಡುತ್ತಿದ್ದರು. ಆ ಧಾರಾವಾಹಿಯಲ್ಲಿ ವೆಂಕಿ, ಪವನ್‌ಗೊಂದು ಅವಕಾಶ ಕೊಡಿಸಿದರು. "ಸಂಕಲನ' ಮೂಲಕ ಮೊದಲ ಸಲ ಬಣ್ಣ ಹಚ್ಚಿಕೊಂಡರು. ಅಲ್ಲಿ ಸೀತಾರಾಮ್‌, ಪದ್ಮಾವಾಸಂತಿ ಮಗನಾಗಿ ಕಾಣಿಸಿಕೊಂಡ ಪವನ್‌ ಲೈಫ‌ಲ್ಲಿ ಬಣ್ಣ ಹಚ್ಚಿದ ಖುಷಿಯಲ್ಲಿದ್ದರು.

ಅದಾದ ಬಳಿಕ ಮುಂದೇನು ಮಾಡಬೇಕೆಂಬ ಗೊಂದಲದಲ್ಲಿದ್ದ ಪವನ್‌, ಓದಿನ ಜೊತೆ ಜೊತೆಗೆ ಕಲೆಯನ್ನು ಮೈಗೂಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರು. 1991-92ರಲ್ಲಿ "ಬೆನಕ' ಮಕ್ಕಳ ನಾಟಕ ಬೇಸಿಗೆ ಶಿಬಿರ ಶುರುವಾದ ಸಂದರ್ಭ. ಬಿ.ವಿ.ಕಾರಂತ್‌ ಅವರ "ಬೆನಕ' ತಂಡದಲ್ಲಿ ಮಕ್ಕಳಿಂದ ನಾಟಕ ಮಾಡಿಸುವ ಕೆಲಸ ನಡೆಯುತ್ತಿತ್ತು. ಆಗ, ಪವನ್‌, ಆ "ಬೆನಕ' ಸೇರಿಕೊಂಡು, ಪ್ರೇಮ ಕಾರಂತ್‌ ನಿರ್ದೇಶನದ "ಅಜ್ಜಿಕಥೆ'," ಇಸ್ಪೀಟ್‌ ರಾಜ', "ಅಪಕಾರಿ ಕಥೆ' ಎಂಬ ಮೂರು ನಾಟಕಗಳಲ್ಲಿ  ಮೂರು ವರ್ಷ ನಟನೆ ಮಾಡಿದರು.

ನಾಟಕ ಮಾಡುತ್ತಲೇ ನಟನೆಯಲ್ಲೂ ಪಕ್ವಗೊಂಡರು. ಆ ಸಮಯದಲ್ಲಿ "ಬೆನಕ'ದ ಸೀನಿಯರ್ ಆಗಿದ್ದ ನಾಗಾಭರಣ, ಸುಂದರ್‌ರಾಜ್‌ ಅವರನ್ನೂ ಪರಿಚಯ ಮಾಡಿಕೊಂಡರು. ನಾಗಾಭರಣರ ಕಣ್ಣಿಗೆ ಬಿದ್ದ ಪವನ್‌ಗೆ "ಚಿನ್ನಾರಿ ಮುತ್ತ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಪವನ್‌ ಕೆರಿಯರ್‌ನ ಮೊದಲ ಚಿತ್ರವದು. ಪವನ್‌ ತನ್ನ ವೃತ್ತಿ ಜೀವನದಲ್ಲಿ ವೆಂಕಿ, ಬಿ.ವಿ.ಕಾರಂತ್‌ ಹಾಗೂ ನಾಗಾಭರಣ ಅವರನ್ನು ಗಾಡ್‌ಫಾದರ್‌ ಎಂದೇ ಭಾವಿಸಿದರು.

ವಿಜಯ ರಾಘವೇಂದ್ರ ಜೊತೆಗೆ "ಚಿನ್ನಾರಿ ಮುತ್ತ'ದಲ್ಲಿ ಕಾಣಿಸಿಕೊಂಡ ಪವನ್‌, ನಂತರ "ಕೊಟ್ರೇಶಿ ಕನಸು' ಚಿತ್ರದಲ್ಲೂ ನಟಿಸಿದರು. ಆಮೇಲೆ ಒಂದು ಗ್ಯಾಪ್‌ ಆಯ್ತು. ಆ ಬಳಿಕ "ಕಲ್ಲರಳಿ ಹೂವಾಗಿ' ಚಿತ್ರದಲ್ಲೂ ಪವನ್‌ಗೊಂದು ಪಾತ್ರ ಸಿಕ್ಕಿತು. "ಚಿನ್ನಾರಿ ಮುತ್ತ', "ಕೊಟ್ರೇಶಿ ಕನಸು' ಬಳಿಕ ಪವನ್‌ಗೆ ತಾನೊಬ್ಬ ಟೆಕ್ನೀಷಿಯನ್‌ ಆಗಬೇಕೆಂಬ ಆಸೆ ಚಿಗುರಿದ್ದೇ ತಡ,  ಅಲ್ಲಿಂದ ಭರಣರ ಗರಡಿಗೆ ಹೋಗಿ, "ಸರ್‌, ನಾನು ಟೆಕ್ನೀಷಿಯನ್‌ ಆಗಬೇಕು ' ಅಂತ ನಾಗಾಭರಣರ ಮುಂದೆ ತನ್ನ ಆಸೆ ಹೊರಹಾಕಿದರು.

ಆಗಷ್ಟೇ ವಾಹಿನಿಯೊಂದರಲ್ಲಿ ನಾಗಾಭರಣರು "ಸಂಕ್ರಾಂತಿ' ಧಾರಾವಾಹಿ ನಿರ್ದೇಶಿಸುತ್ತಿದ್ದರು. ಅಲ್ಲಿ, ತನ್ನ ಅಸಿಸ್ಟಂಟ್‌ ಆಗಿ ಕೆಲಸ ಕೊಟ್ಟರು. ವಾರದಲ್ಲಿ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಿದ ಪವನ್‌, "ಸಂಕ್ರಾಂತಿ'ಯಲ್ಲಿ ಅನುಭವದ ಪಾಠ ಕಲಿತರು. ನಿರ್ದೇಶನ ವಿಭಾಗದ ಹಲವು ಬಗೆಯ ಕೆಲಸವನ್ನೆಲ್ಲ ಪಕ್ವ ಮಾಡಿಕೊಂಡರು. "ಸಂಕ್ರಾಂತಿ'ಯಲ್ಲಿ ನಿರ್ದೇಶನ ವಿಭಾಗದ ಜೊತೆಗೆ ನಟನೆಯನ್ನೂ ಮಾಡಿದ್ದ ಪವನ್‌, ಆ ನಂತರ ಬೇರೆ ಬೇರೆ ರಂಗತಂಡಗಳೊಂದಿಗೂ ಗುರುತಿಸಿಕೊಂಡರು.

"ಸ್ನೇಹ ಸಮೂಹ' ತಂಡದಲ್ಲಿ ಒಂದಷ್ಟು ಗೆಳೆಯರು ಪರಿಚಯವಾಗಿ, ಆ ಮೂಲಕ "ಗುಲಾಮನ ಸ್ವಾತಂತ್ರ್ಯ', "ಜುಮ್ನಾಳ ಧೂಳಾನ ಪ್ರಸಂಗ' ಸೇರಿದಂತೆ ಏಳೆಂಟು ನಾಟಕಗಳನ್ನು ಮಾಡಿ ಸೈ ಎನಿಸಿಕೊಂಡರು. ಅತ್ತ "ಬೆನಕ' ತಂಡದಲ್ಲೂ "ಸತ್ತವರ ನೆರಳು', "ಹಯವದನ', "ಜೋಕುಮಾರ ಸ್ವಾಮಿ' ಹೀಗೆ ಕೆಲ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಲೇ ರಂಗಚಟುವಟಿಕೆಯಲ್ಲಿ ನಿರಂತರವಾಗಿದ್ದರು. 

ಒಂದು ಕಡೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದರೂ, ಪವನ್‌ ಮಾತ್ರ, ರಂಗಭೂಮಿಯ ನಂಟು ಬಿಡಲಿಲ್ಲ. "ಬೆನಕ'ದಲ್ಲಿ ಈಗಲೂ ಸಹ ಒಳ್ಳೆಯ ನಾಟಕ ಪ್ರಯೋಗವಿದ್ದರೆ, ನಟಿಸುತ್ತಾರೆ. ಒಂದೊಮ್ಮೆ "ಜೋಕುಮಾರ ಸ್ವಾಮಿ' ನಾಟಕದಲ್ಲಿ ಮೇಜರ್‌ ಪಾತ್ರವೊಂದನ್ನು ಮಾಡುವಂತೆ ನಾಗಾಭರಣರು ಅವಕಾಶ ಕೊಟ್ಟರು. ಭರಣರು ಮಾಡುತ್ತಿದ್ದ ಮೇಜರ್‌ ಪಾತ್ರವದು. ತುಂಬಾ ಭಯ ಇತ್ತು. ಆದರೆ, ಆ ಪ್ರದರ್ಶನ ಬಳಿಕ ಎಲ್ಲರೂ ಬೆನ್ನುತಟ್ಟಿದಾಗಲೇ, ಅವರಿಗೆ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದೇನೆಂಬ ನಂಬಿಕೆ ಬಂದದ್ದು.

ಅಲ್ಲಿಂದ ಅವರಿಗೆ ಆತ್ಮವಿಶ್ವಾಸ ಹೆಚ್ಚುತ್ತಾ ಹೋಯಿತು. ಟೆಕ್ನಿಕಲಿಯಾಗಿಯೂ ಗುರುತಿಸಿಕೊಳ್ಳಬೇಕೆಂಬ ಆಸೆ ಹಾಗೆಯೇ ಇತ್ತು. "ಗೋಧೂಳಿ' ಧಾರಾವಾಹಿಯಲ್ಲಿ ಎಪಿಸೋಡ್‌ ನಿರ್ದೇಶಕರಾಗಿ ಪವನ್‌ ಕೆಲಸ ಮಾಡಿದರು. ಅವರೊಂದಿಗೆ ಪ್ರಶಾಂತ್‌ ಹಾಲೊªಡ್ಡೇರಿ ಕೂಡ ಎಪಿಸೋಡ್‌ ನಿರ್ದೇಶಕರಾಗಿದ್ದರು. ಆಗ ಸಾಕಷ್ಟು ಕಲಾವಿದರ ಪರಿಚಯ ಮಾಡಿಕೊಂಡ ಪವನ್‌, ಎರಡು ಯೂನಿಟ್‌ನಲ್ಲಿ ಒಂದು ಯೂನಿಟ್‌ ಅನ್ನು ನಿರ್ವಹಿಸುತ್ತಿದ್ದರು.

ಯಾವಾಗ "ಗೋಧೂಳಿ ಧಾರಾವಾಹಿಗೆ ಎಪಿಸೋಡ್‌ ನಿರ್ದೇಶಕರಾಗಿ ಕೆಲಸ ಮಾಡಿದರೋ, ಆಗ, ನಿರ್ದೇಶನ ಮಾಡಬಹುದು ಎಂಬ ಧೈರ್ಯ ಮೂಡಿದ್ದು ಸುಳ್ಳಲ್ಲ. "ಗೋಧೂಳಿ' ಬಳಿಕ "ಮಹಾಮಾಯೆ' ಧಾರಾವಾಹಿಗೂ ಅವರು ಎಪಿಸೋಡ್‌ ನಿರ್ದೇಶಕರಾಗಿ ಕೆಲಸ ಮಾಡಿದರು. ಆ ನಂತರ ಅವರಿಗೊಂದು ಅವಕಾಶ ಬಂತು. ವಾಹಿನಿಯೊಂದರಲ್ಲಿ ಸ್ವತಂತ್ರ ನಿರ್ದೇಶನ ಮಾಡುವ ಅವಕಾಶವದು. "ಮುಂಬೆಳಗು' ಎಂಬ ಧಾರಾವಾಹಿಗೆ ನಿರ್ದೇಶಕರೆನಿಸಿಕೊಂಡರು. ಅದು ಸುಮಾರು 300 ಸಂಚಿಕೆಯಲ್ಲಿ ಮೂಡಿಬಂದು ಯಶಸ್ವಿಯಾಯಿತು.

ಇದಾದ ಮೇಲೂ ಪವನ್‌,  "ನೂರೆಂಟು ಸುಳ್ಳು' ಧಾರಾವಾಹಿಗೆ ಎಪಿಸೋಡ್‌ ನಿರ್ದೇಶಕರಾಗಿ ಕೆಲಸ ಮಾಡಿದರು. ಆಮೇಲೆ, ಸಿಹಿಕಹಿ ಚಂದ್ರು ಅವರ ಬ್ಯಾನರ್‌ನಲ್ಲಿ "ಭಲೇ ಬಸವ' ಧಾರಾವಾಹಿಗೆ 68 ಎಪಿಸೋಡ್‌ಗೆ ನಿರ್ದೇಶನ ಮಾಡಿದರು. ನಂತರ "ಸಿಂಗಾರಿ ಬಂಗಾರಿ', " ವಾರ್‌ವಾರ್‌ಗಿತ್ತಿಯರು', "ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ' ಧಾರಾವಾಹಿಗಳಿಗೆ ಕೆಲಸ ಮಾಡಿದರು. ಆ ಬಳಿಕ ಅವರಿಗೊಂದು ಅಪಘಾತವಾಯ್ತು.

ಅಲ್ಲಿಂದ ಸ್ವಲ್ಪ ದೂರ ಉಳಿದರು. ಆ ಗ್ಯಾಪ್‌ ನಂತರ "ಸತ್ಯ ಶಿವಂ ಸುಂದರಂ' ಧಾರಾವಾಹಿ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅದೀಗ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. "ಈ ಕಿರುತೆರೆ, ರಂಗಭೂಮಿಯ ಜರ್ನಿ ಬಗ್ಗೆ ನನಗೆ ಎಲ್ಲಿಲ್ಲದ ಹೆಮ್ಮೆ ಇದೆ' ಎನ್ನುವುದನ್ನು ಮರೆಯುವುದಿಲ್ಲ ಪವನ್‌. ಪವನ್‌ಗೆ ಸಿನಿಮಾದಲ್ಲೊಂದು ಬ್ರೇಕ್‌ ಬೇಕಿತ್ತು. ಆ ಬಗ್ಗೆ ಹೇಳುವ ಪವನ್‌, "ಸಿನಿಮಾ ಅವಕಾಶಗಳು ಬರುತ್ತಿದ್ದವು.

ಆದರೆ, ಒಳ್ಳೆಯ ಬ್ರೇಕ್‌ ಇರಲಿಲ್ಲ. ಆಗ "ಕಂಠಿ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನಗೊಂದು ಬ್ರೇಕ್‌ ಸಿಕು¤. ಆ ಬಳಿಕ ಶ್ರೀಮುರಳಿ ಅವರೊಂದಿಗೆ "ಯಶವಂತ್‌', "ಶಂಭು', ಪ್ರಜ್ವಲ್‌ ಜೊತೆ "ಸಿಕ್ಸರ್‌', "ಗೋಕುಲ', "ದಿಲ್‌ವಾಲ', "ಸಖ-ಸಖೀ', "ಸಿದ್ದು' ಚಿತ್ರಗಳಲ್ಲಿ ನಟಿಸುವ ಮೂಲಕ ತಾನೂ ಸಿನಿಮಾ ರಂಗದಲ್ಲೊಂದು ಸಣ್ಣ ಜಾಗ ಮಾಡಿಕೊಂಡೆ. ಈವರೆಗೆ ಸುಮಾರು 67 ಚಿತ್ರಗಳಲ್ಲಿ ನಟಿಸಿದ್ದೇನೆ.

ಬಹುತೇಕ ಚಿತ್ರಗಳಲ್ಲಿ ನನಗೆ ಗೆಳೆಯನ ಪಾತ್ರ, ಹಾಸ್ಯ ಪಾತ್ರವೇ ಸಿಕ್ಕಿದೆ. "ರಾಜ ಲವ್ಸ್‌ ರಾಧೆ' ಚಿತ್ರದಲ್ಲೂ ಹಾಸ್ಯ ಪಾತ್ರ ಮಾಡಿದ್ದೇನೆ. ಸಿನಿಮಾ ಮಾಡುತ್ತಿದ್ದರೂ, ನಾನು ಈಗಲೂ ರಂಗಭೂಮಿ ನಂಟು ಬಿಟ್ಟಿಲ್ಲ. ಹಲವು ನಾಟಕಗಳಲ್ಲೂ ನಟಿಸುತ್ತೇನೆ. ಕಿರುತೆರೆಯಲ್ಲೂ ಸಕ್ರಿಯವಾಗಿದ್ದೇನೆ. ಆದರೆ, ಒಂದು ಹಂತದಲ್ಲಿ ನನಗೆ ಅವಕಾಶಗಳೇ ಇಲ್ಲವಾಗಿತ್ತು. ಯಾಕೆಂದರೆ, ದಿನ ಕಳೆದಂತೆ ಹೊಸ ಪ್ರತಿಭಾವಂತರ ಆಗಮನವಾಗುತ್ತಿತ್ತು.

ಆಗಿನ ಸ್ಥಿತಿಗತಿ ಚೆನ್ನಾಗಿರಲಿಲ್ಲ. ಆ ವೇಳೆ ಅಪ್‌ಸೆಟ್‌ ಆಗಿದ್ದು ನಿಜ. ಎಲ್ಲೋ ಹೋಗಿ, ನಾಟಕ ನೋಡೋದು, ಕಲಾಕ್ಷೇತ್ರದಲ್ಲಿ ಕಟ್ಟೆ ಮೇಲೆ ಕೂತು, ಕಾಫಿ ಕುಡಿಯೋದು, ಟೈಮ್‌ ಪಾಸ್‌ ಮಾಡೋದು ಹೀಗೆ ಹಲವು ದಿನಗಳನ್ನು ಕಳೆಯುತ್ತಲೇ ಇದ್ದೆ. ಒಂದು ದಿನ ನನ್ನ ಗೆಳೆಯನೊಬ್ಬನ ಮದ್ವೆಗೆ ಹೋಗಬೇಕಿತ್ತು. ಆದರೆ, ಯಾಕೋ ಹೋಗಲು ಮನಸ್ಸಾಗಲಿಲ್ಲ. ಅಲ್ಲೆಲ್ಲಾ ಹೋದರೆ, ಸಿಕ್ಕ ಗೆಳೆಯರೆಲ್ಲಾ ಏನು ಮಾಡ್ತಾ ಇದೀಯಾ ಅಂತ ಕೇಳಿದರೆ ಏನೇಳ್ಳೋದು ಎಂಬ ಕಾರಣದಿಂದ ಹೋಗೋದು ಬೇಡ ಅಂತ ನಿರ್ಧರಿಸಿದ್ದೆ.

ಆದರೆ, ಮನೆಯಲ್ಲಿ "ಮದ್ವೆಗೆ ಹೋಗು, ನಿನಗೂ ಒಂದು ಚೇಂಜಸ್‌ ಸಿಗುತ್ತೆ' ಅಂದಾಗ, ಮದ್ವೆಗೆ ಹೋದೆ. ಅಲ್ಲಿ, ಸೃಜನ್‌ ಲೋಕೇಶ್‌ ಸಿಕ್ಕರು. ಆಗಷ್ಟೇ "ಬಿಗ್‌ಬಾಸ್‌'ನಿಂದ ಬಂದಿದ್ದ ಸೃಜನ್‌, "ಏನ್‌ ಮಾಡ್ತಾ ಇದಿಯೋ' ಅಂದ್ರು. "ಏನೂ ಇಲ್ಲ, ಫ್ರೀ ಇದೀನಿ' ಅಂದೆ. "ಸರಿ, "ಮಜಾ ಟಾಕೀಸ್‌' ಪ್ರೋಗ್ರಾಮ್‌ ಮಾಡ್ತಾ ಇದೀನಿ, ಮಾಡ್ತೀಯಾ' ಅಂದ್ರು. "ಖಂಡಿತ ಮಾಡ್ತೀನಿ' ಅಂದೆ. ರಿಹರ್ಸಲ್‌ ಮಾಡಿದ್ವಿ. ಫ‌ಸ್ಟ್‌ ಡೇ ಶೂಟ್‌ ಆಯ್ತು. ದೊಡ್ಡ ಕಲಾವಿದರ ಜೊತೆ ನಟಿಸಿದೆ. ನನ್ನ ಒಂದು ಪಾಲಿಸಿ ಅಂದರೆ, ಬೇರೆಯವರನ್ನು ನೋಡಿ ಕಲಿತದ್ದೇ ಹೆಚ್ಚು.

"ಮಜಾ ಟಾಕೀಸ್‌' ಶುರುವಾಗಿ ಮೂರು ವಾರ ಆಗಿತ್ತು. ಆಗಲೇ ಭರ್ಜರಿ ರೆಸ್ಪಾನ್ಸ್‌ ಬಂತು. ನಾನು ಹಿಂದೆ ಮಾಡಿದ ಕೆಲಸವೆಲ್ಲಾ ನೀರಲ್ಲಿ ಹೋಮ ಮಾಡಿದಂತಾಯ್ತು. "ಮಜಾ ಟಾಕೀಸ್‌' ಜನಪ್ರಿಯತೆ ತಂದುಕೊಟ್ಟಿತು. ಮೊದಲೆಲ್ಲಾ ಹೊರಗೆ ಎಲ್ಲಾದರೂ ಹೋದಾಗ, ಜನರು, ನೀವು ಧಾರಾವಾಹಿ ಮಾಡ್ತೀರಲ್ವಾ ಅನ್ನೋರು. ಆದರೆ, ಈಗ "ಮಜಾ ಟಾಕೀಸ್‌' ಪವನ್‌ ಅಲ್ವಾ ಅಂತಾರೆ. ಅಂಥದ್ದೊಂದು ಜನಪ್ರಿಯತೆ ಕೊಟ್ಟಿದ್ದು "ಮಜಾ ಟಾಕೀಸ್‌'. ಸೃಜನ್‌ ಲೋಕೇಶ್‌ಗೊಂದು ಥ್ಯಾಂಕ್ಸ್‌' ಎನ್ನುವುದನ್ನು ಮರೆಯಲಿಲ್ಲ ಪವನ್‌.

"ಎಲ್ಲೋ ಒಂದು ಕಡೆ ಒಳ್ಳೆಯ ಹೆಸರು ಮಾಡುತ್ತಿದ್ದೇನೆಂಬ ನಂಬಿಕೆ ಇದೆ. ಆದರೆ, ನನ್ನನ್ನೇಕೆ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿಲ್ಲ ಎಂಬ ಬೇಸರವೂ ಇದೆ. ನಾನೇನೂ ಕಲಿತಿಲ್ವಾ ಎಂಬ ಕೊರಗು ಇದೆ. ಹಾಗಂತ ನಾನು ಸಂಭಾವನೆ ವಿಷಯದಲ್ಲಿ ಭಾರೀ ದುಬಾರಿಯಂತೂ ಅಲ್ಲ. ನಾನೊಂದು ಎಥಿಕ್ಸ್‌ ಇಟ್ಟುಕೊಂಡಿದ್ದೇನೆ. ಸಡನ್‌ ಆಗಿ ಸಾಹುಕಾರನಾಗುವ ಆಸೆ ಇಲ್ಲ. 26 ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿದ್ದೇನೆ. ಒಂದೊಂದು ವರ್ಷಕ್ಕೆ ಒಂದು ಸಾವಿರ ರುಪಾಯಿ ಹೆಚ್ಚು ಸಂಭಾವನೆ ಕೊಟ್ಟಿದ್ದರೂ ಸಾಕಿತ್ತು.

ನಾನೇನು 50 ಸಾವಿರ, ಒಂದು ಲಕ್ಷ, ಒಂದುಕಾಲು ಲಕ್ಷ ಕೇಳಲ್ಲ. ಆ ಮಟ್ಟಕ್ಕೆ ಬೆಳೆದಿದ್ದೇನೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನೂ ಒಬ್ಬ ನಿರ್ದೇಶಕ, ಕಲಾವಿದರನ್ನು ಆಯ್ಕೆ ಮಾಡುವಾಗ, ಅವರ ಬೆಲೆ ಕಟ್ಟಕ್ಕಾಗಲ್ಲ. ಆದರೆ, ನಾನು ಸುಮಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಸಂಭಾವನೆ ಬಗ್ಗೆ ಯಾರಿಗೂ ಗೊತ್ತಿಲ್ಲ. ತೃಪ್ತಿ ಕೊಡುವಂತಹ ಸಂಭಾವನೆ ಕೊಡದಿದ್ದರೂ ಪರವಾಗಿಲ್ಲ.

ಐದು ಸಾವಿರ, ಹತ್ತು ಸಾವಿರ ಕೊಡ್ಲಾ ಅಂತಾರೆ ಅದೇ ಬೇಸರ. ಎಷ್ಟೋ ಮಂದಿ ಹೊಸಬರು ಫೋನ್‌ ಮಾಡಿ, ಸಣ್ಣ ಬಜೆಟ್‌ ಇದೆ ಸಾರ್‌, ದಿನಕ್ಕೆ ಒಂದುವರೆ ಸಾವಿರ ಕೊಡ್ತೀವಿ ಮಾಡಿ ಸರ್‌ ಅಂತಾರೆ. ಅದಕ್ಕೆ ನಾನು ನಗಬೇಕೋ, ಕೋಪಿಸಿಕೊಳ್ಳಬೇಕೋ? ಅವರೊಂದಿಗೆ ಕೂಲ್‌ ಆಗಿ ಮಾತಾಡಿ ಪ್ರಾಜೆಕ್ಟ್ ಬಿಡುತ್ತೇನೆ' ಎಂದು ತಮ್ಮ ಸಂಭಾವನೆ ಕುರಿತು ಹೇಳುತ್ತಾರೆ ಪವನ್‌.

"ನನಗೂ ಈಗ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ. ಅದಕ್ಕಾಗಿ ಮೂರ್‍ನಾಲ್ಕು ಕಥೆ ಮಾಡಿಕೊಂಡಿದ್ದೇನೆ. ಇಲ್ಲಿ ಏನಾಗುತ್ತಿದೆ ಅಂದರೆ, ಏಳೆಂಟು ನಿರ್ಮಾಪಕರನ್ನು ನಾನು ಭೇಟಿ ಮಾಡಿದ್ದಾಗಿದೆ. ಆದರೆ, ಕಥೆ ಚೆನ್ನಾಗಿದೆ ಅಂತಾರೆ ಹೊರತು, ಯಾರೂ ಮುಂದಕ್ಕೆ ಬರುತ್ತಿಲ್ಲ. ಹೈ ಬಜೆಟ್‌ ಬೇಡ ಅಂತಾರೆ. ಕಲಾತ್ಮಕ ಚಿತ್ರ ಮಾಡೋಣ ಅಂದರೆ, ಅದು ಕಲಾತ್ಮಕ ಚಿತ್ರ ಬೇಡ ಅಂತಾರೆ.

ಇದಕ್ಕೆ ಏನ್ಮಾಡಲಿ? ಒಂದಷ್ಟು ಗೆದ್ದ ಸಣ್ಣ ಬಜೆಟ್‌ ಸಿನಿಮಾಗಳ ರೆಫ‌ರೆನ್ಸ್‌ ಕೊಡ್ತಾರೆ. ಸಣ್ಣ ಬಜೆಟ್‌ ಕಥೆಗೆ ಹಣ ಹಾಕುವ ಮನಸ್ಸು ಯಾರೂ ಮಾಡುತ್ತಿಲ್ಲ. ಇಷ್ಟರಲ್ಲೇ ಒಂದು ಗುಡ್‌ನ‌ೂಸ್‌ ಕೊಡ್ತೀನಿ' ಎನ್ನುತ್ತಾರೆ ಅವರು. "ನನಗೆ ರಾಯಲ್‌ ಆಗಿರಬೇಕೆಂಬ ಆಸೆಯಂತೂ ಇಲ್ಲ. ನಾನೊಬ್ಬ ನಟನಾಗಿ ಗುರುತಿಸಿಕೊಳ್ಳುವ ಆಸೆ ಇದೆ. ಹಾಗೆಯೇ ತುಂಬ ಕಷ್ಟಪಟ್ಟು ಹೆಸರು ಮಾಡಬೇಕು.

ಅದಕ್ಕೆ ನಿರ್ದೇಶನ ಮಾಡಬೇಕೆಂದಿದ್ದೇನೆ. ನಟನೆ, ನಿರ್ದೇಶನ ಈ ಎರಡೂ ಮುಖ್ಯ. ಆದರೆ, ಬಿ.ವಿ.ಕಾರಂತರು ಒಂದು ಮಾತು ಹೇಳುತ್ತಿದ್ದರು. ಒಬ್ಬ ನಿರ್ದೇಶಕನಲ್ಲಿ ಒಳ್ಳೆಯ ನಟ ಇರ್ತಾನೆ ಅಂತ. ಸೋ, ನಾನಿನ್ನೂ ಕಲಿಯುತ್ತಲೇ ಇದ್ದೇನೆ.  ಇದುವರೆಗೆ ನನ್ನ ಸಿನಿಮಾ ಜರ್ನಿ ಚೆನ್ನಾಗಿಯೇ ನಡೆದಿದೆ. ಮುಂದೆಯೂ ಹೀಗೇ ಕೆಲಸ ಮಾಡಿಕೊಂಡಿರಬೇಕೆಂಬ ಆಸೆ ನನ್ನದು' ಎಂದು ಮಾತು ಮುಗಿಸುತ್ತಾರೆ ಪವನ್‌.


Trending videos

Back to Top