CONNECT WITH US  

ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಸೂಚನೆ

ಕೊಳ್ಳೇಗಾಲ: ಕಾವೇರಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿ ಮನೆಗಳು ಮತ್ತು ರೈತರ ಜಮೀನು ಜಲಾವೃತಗೊಂಡಿರುವ ತಾಲೂಕಿನ ದಾಸನಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಹ ಪೀಡಿತ ಗ್ರಾಮಗಳಾದ ತಾಲೂಕಿನ ದಾಸನಪುರ, ಹಳೇಹಂಪಾಪುರ, ಮೂಳ್ಳೂರು, ಹರಳೆ, ಹಳೇಅಣಗಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಗ್ರಾಮಸ್ಥರ ಕುಂದುಕೊರತೆ ಬಗ್ಗೆ ವಿಚಾರಿಸಿದರು. 

ಇದೇ ಸಂದರ್ಭದಲ್ಲಿ ಸಂತ್ರಸ್ತರು ಸಚಿವರೊಂದಿಗೆ ಮಾತನಾಡಿ, ನದಿ ತೀರದಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಪ್ರವಾಹ ಭೀತಿ ಎದುರಾಗುತ್ತದೆ. ಇದಕ್ಕೆ ಸಂಪೂರ್ಣ ಶಾಶ್ವತ ಪರಿಹಾರವಾಗಿ ಗ್ರಾಮಸ್ಥರಿಗೆ ಬೇರೆಡೆ ನಿವೇಶನ ನೀಡಿ ಮನೆ ಮಾಡಿಕೊಡಬೇಕು.

ಭತ್ತದ ಒಟ್ಲು ಮತ್ತು ಕಬ್ಬಿನ ನಾಟಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಪ್ರವಾಹ ಪೀಡಿತರು ಕೆಲವರು, ನೆಂಟರಿಷ್ಟರ ಮನೆಗಳಲ್ಲಿ ನೆಲೆಸಿದ್ದು,  ಗ್ರಾಮಸ್ಥರಿಗೆ ಸೂಕ್ತ ನೆಲೆ ಮತ್ತು ಉದ್ಯೋಗ ಕಲ್ಪಿಸಿ ಕೊಡಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಈಗಾಗಲೇ ಪ್ರವಾಹ ಪೀಡಿತ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದು ಕೂಡಲೆ ಗ್ರಾಮಸ್ಥರನ್ನು ನಗರದ ಬಿಸಿಎಂ ವಸತಿಗೃಹಗಳಿಗೆ ಸ್ಥಳಾಂತರ ಮಾಡಿ ಅಲ್ಲಿ ಎಲ್ಲಾ ನಿರಾಶ್ರಿತರಿಗೆ ಊಟ ಉಪಚಾರ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೂಡಲೆ ಅಧಿಕಾರಿಗಳು ಗ್ರಾಮಸ್ಥರನ್ನು ಸ್ಥಳಾಂತರ ಮಾಡಿ ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಷಯದಿಂದ ಮತ್ತಷ್ಟು ನೀರನ್ನು ಹೊರಬಿಡುತ್ತಿದ್ದು ಕಾವೇರಿ ನದಿ ನೀರು ಹೆಚ್ಚು ಹರಿಯುವುದರಿಂದ ಕೂಡಲೆ ಗ್ರಾಮಸ್ಥರಿಗೆ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರವಾಹದ ಬೀತಿಗೆ ಸಿಲುಕಿರುವ ಗ್ರಾಮಸ್ಥರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕೆಂದರು.

ಪ್ರವಾಹ ಕಡಿಮೆ ಬಳಿಕ ನೀರಿನಲ್ಲಿ ಮುಳುಗಡೆಯಾಗಿರುವ ಮನೆ ಮತ್ತು ಜಮೀನಿನಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿದ ಬಳಿಕ ಸೂಕ್ತ ಪರಿಹಾರ ನೀಡಲಾಗುವುದು. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸದಾ ಗ್ರಾಮಸ್ಥರ ಬೆಳವಣಿಗೆ ಬಯಸುತ್ತಿದ್ದು ಯಾರಿಗೂ ಯಾವುದೇ ಹಾನಿ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು.

ಗ್ರಾಮಸ್ಥರು ನದಿ ತೀರಗಳಿಗೆ ಹೋಗದಂತೆ ಎಚ್ಚರಿಕೆಯಿಂದ ಇರಬೇಕು. ನದಿ ವೀಕ್ಷಣೆಗೆಂದು ಬರುವ ಸಾರ್ವಜನಿಕರನ್ನು ತಡೆದು ಎಚ್ಚರಿಕೆಯಿಂದ ಕಾವಲು ಕಾಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯವಾಗಿರಬೇಕು.  ಸರ್ಕಾರ ಕೂಡಲೇ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡಲಿದೆ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಕಾವೇರಿ, ಜಿಪಂ ಸಿಇಒ ಡಾ.ಹರೀಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೆàಂದ್ರಕುಮಾರ್‌ ಮೀನಾ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ತಹಶೀಲ್ದಾರ್‌ ಚಂದ್ರಮೌಳಿ, ನಗರಸಭೆ ಪೌರಾಯುಕ್ತ ಸುರೇಶ್‌, ಡಿಎಸ್‌ಪಿ ಪುಟ್ಟಮಾದಯ್ಯ, ಸಿಪಿಐ ರಾಜಣ್ಣ, ಸಿಡಿಪಿಒ ನಾಗೇಶ್‌, ಇಒ ಉಮೇಶ್‌, ಆರ್‌ ನಿರಂಜನ್‌ಕುಮಾರ್‌, ವಿ.ಎ.ರಾಕೇಶ್‌, ನಗರ ಠಾಣೆ  ಎಸ್‌ಐ ವೀಣಾನಾಯಕ್‌  ಮತ್ತಿತರರಿದ್ದರು. 


Trending videos

Back to Top