CONNECT WITH US  

ಪಾಕ್‌ ಜತೆ ಸ್ನೇಹ: ಎಚ್ಚರಿಕೆಯ ನಡೆ ಅಗತ್ಯ

ಇಮ್ರಾನ್‌ ಖಾನ್‌ ಜುಟ್ಟು ಸೇನೆಯ ಕೈಯಲ್ಲಿದೆ ಎನ್ನುವುದು ಜಾಹೀರಾಗಿದೆ. ಅಂತೆಯೇ ಉಗ್ರರತ್ತ ಇಮ್ರಾನ್‌ ಮೃದುಧೋರಣೆ ಹೊಂದಿದ್ದಾರೆ. 

ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಹೊಸ ಸರಕಾರದಡಿ ಭಾರತ- ಪಾಕಿಸ್ಥಾನ ಸಂಬಂಧ ಸುಧಾರಣೆಯಾದೀತು ಎಂಬ ನಿರೀಕ್ಷೆಯಿದೆ. ಆರಂಭಿಕ ಹಂತದಲ್ಲಿ ಉಭಯ ದೇಶಗಳ ನಡುವಿನ ಶುಭಾಶಯಗಳ ವಿನಿಮಯ ಈ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಂತೆ ಕಾಣಿಸುತ್ತಿದೆ. ಇಮ್ರಾನ್‌ ಖಾನ್‌ ನೇತ್ವತ್ವದ ತೆಹ್ರಿಕ್‌-ಇ-ಇನ್ಸಾಫ್ ಪಕ್ಷ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಬೆನ್ನಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಇಮ್ರಾನ್‌ ಖಾನ್‌ಗೆ ಶುಭಾಶಯ ಹೇಳಿದ್ದರು. ಇದೀಗ ಇಮ್ರಾನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗಬೇಕೆಂಬ ಆಶಯ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಪಾಕಿಸ್ಥಾನದಿಂದಲೂ ಸಕರಾತ್ಮಕವಾದ ಪ್ರತಿಸ್ಪಂದನ ವ್ಯಕ್ತವಾಣಗಿದೆ. ನೂತನ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ನಿರಂತರವಾದ ತಡೆರಹಿತ ಸಂವಾದವೇ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗಿರುವ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ನೆರೆಹೊರೆ ದೇಶಗಳ ನಡುವೆ ಈ ರೀತಿ ರಾಜತಾಂತ್ರಿಕ ವಿನಿಮಯ ಸಹಜವಾಗಿದ್ದರೂ ಭಾರತ ಮತ್ತು ಪಾಕಿಸ್ಥಾನದ ಸಂದರ್ಭದಲ್ಲಿ ಅದಕ್ಕೆ ಬೇರೆಯದ್ದೇ ಆದ ಮಹತ್ವವಿದೆ. 

ಚುನಾವಣಾ ಪ್ರಚಾರ ಸಂದರ್ಭದಲ್ಲೂ ಭಾರತ ಜತೆಗೆ ಸಂಬಂಧ ಸುಧಾರಣೆಗೆ ಪಾಕಿಸ್ಥಾನ ತಯಾರಿದೆ. ಕಗ್ಗಂಟಾಗಿರುವ ಕಾಶ್ಮೀರ ಸಮಸ್ಯೆಯೂ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಎರಡೂ ದೇಶಗಳ ನಾಯಕರು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಇಮ್ರಾನ್‌ ಖಾನ್‌ ಹೇಳಿದ್ದರು. ಈ ಎಲ್ಲ ಬೆಳವಣಿಗೆ ಗಳ ಹಿನ್ನೆಲೆಯಲ್ಲಿ ಮತ್ತೂಮ್ಮೆ ಉಭಯ ದೇಶಗಳ ಮಧ್ಯೆ ಮಾತುಕತೆ ಪ್ರಾರಂಭ ವಾಗಲೂಬಹುದು. ಆದರೆ ಪಾಕಿಸ್ಥಾನ ದಲ್ಲಿ ಇದಕ್ಕೆ ಪೂರಕವಾದ ವಾತಾವರಣ ಇದೆಯೇ ಎನ್ನುವುದು ಪ್ರಶ್ನೆ. ಸದ್ಯದ ಪರಿಸ್ಥಿತಿಯಲ್ಲಿ ಅಂಥ ವಾತಾವರಣ ಕಾಣಿಸದು. ಇಮ್ರಾನ್‌ ಖಾನ್‌ ಜುಟ್ಟು ಸೇನೆಯ ಕೈಯಲ್ಲಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ. ಅಂತೆಯೇ ಉಗ್ರರತ್ತ ಇಮ್ರಾನ್‌ ಮೃದುಧೋರಣೆ ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ರಚನಾತ್ಮಕವಾದ ಮಾತುಕತೆ ನಡೆಯಲು ಸಾಧ್ಯವೆ? ನಡೆದರೂ ಅದು ಫ‌ಲಪ್ರದವಾಗಲು ಪಾಕಿಸ್ಥಾನದ ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ಕೊಡುತ್ತವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಹೀಗಾಗಿ ಈ ಹಂತದಲ್ಲಿ ಪಾಕಿಸ್ಥಾನದ ಬಗ್ಗೆ ಯಾವುದೇ ಭ್ರಮೆಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ನಯವಾಗಿ ಬೆನ್ನಿಗಿರಿಯುವ ಗುಣ ಆ ದೇಶಕ್ಕೆ ಜನ್ಮಜಾತವಾಗಿಯೇ ಬಂದಿದೆ. ಎಪ್ಪತ್ತು ವರ್ಷಗಳಲ್ಲಿ ಪಾಕಿಸ್ಥಾನದ ಈ ಬುದ್ಧಿಯನ್ನು ಸಾಕಷ್ಟು ಸಲ ನೋಡಿದ್ದೇವೆ. ಮಾತುಕತೆ ಪ್ರಾರಂಭಿಸ ಬೇಕಿದ್ದರೆ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು ಎನ್ನುವ ಶರತ್ತನ್ನು ಭಾರತ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಇಮ್ರಾನ್‌ ಖಾನ್‌ ತನ್ನ ನಿಲುವು ಏನೆಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ಒಂದಿನಿತೂ ಕಡಿಮೆಯಾಗಿಲ್ಲ. ಕಾಶ್ಮೀರದಲ್ಲಿ ನಿತ್ಯ ಗುಂಡಿನ ಚಕಮಕಿ ನಡೆಯುತ್ತಿದೆ. ಅದೇ ರೀತಿ ಕದನ ವಿರಾಮ ಉಲ್ಲಂಘನೆಯೂ ನಡೆಯುತ್ತಿದೆ. ಹೊಸ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ವಿದೇಶಾಂಗ ಇಲಾಖೆ ಭಾರತದ ಡೆಪ್ಯುಟಿ ಹೈಕಮಿಶನರ್‌ ಅವರನ್ನು ಕರೆಸಿರುವುದು ಪಾಕಿಸ್ಥಾನದ ಧೋರಣೆಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ ಎನ್ನುವುದನ್ನು ತಿಳಿಸುತ್ತಿದೆ. ಪಾಕಿಸ್ಥಾನದ ಈ ಮನೋಧರ್ಮ ಬದಲಾಗದೆ ಶಾಂತಿ ಮಾತುಕತೆ ನಿಷ್ಪ್ರಯೋಜಕ. 

ಇಮ್ರಾನ್‌ ಖಾನ್‌ ಕಾಶ್ಮೀರ ವಿವಾದಕ್ಕೆ ಭಾರೀ ಮಹತ್ವ ನೀಡುತ್ತಿರುವುದರ ಹಿಂದೆ ಯಾವ ಯೋಚನೆಯಿದೆ ಎನ್ನುವುದು ನಿಗೂಢವಾಗಿದೆ. ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ಮಾಡಿದ ಭಾಷಣದಲ್ಲೂ ಅವರು ಮೊದಲು ಕಾಶ್ಮೀರದ ಬಗ್ಗೆ ಮಾತುಕತೆ ನಡೆಸಬೇಕೆಂದು ಪ್ರತಿಪಾದಿಸಿದ್ದರು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಪಾಕಿಸ್ಥಾನವನ್ನು ದೂರಬಾರದು, ಅಂತೆಯೇ ಬಲೂಚಿಸ್ಥಾನಕ್ಕೆ ಸಂಬಂಧಿಸಿ ಪಾಕಿಸ್ಥಾನ ಭಾರತವನ್ನು ದೂಷಿಸಬಾರದು ಎನ್ನುವ ಮೂಲಕ ಈ ಎರಡು ಸಮಸ್ಯೆ ಗಳನ್ನು ಒಂದೇ ತಕ್ಕಡಿಯಲ್ಲಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಪಾಕಿಸ್ಥಾನದಂತೆ ಭಾರತ ಬಲೂಚಿಸ್ಥಾನದಲ್ಲಿ ನಿತ್ಯ ರಕ್ತದ ಕಾಲುವೆ ಹರಿಯಲು ಉಗ್ರರನ್ನು ಛೂ ಬಿಡುತ್ತಿಲ್ಲ. ಅದಾಗ್ಯೂ ಇಮ್ರಾನ್‌ ಈ ಎರಡು ಸಮಸ್ಯೆಗಳಿಗೆ ಒಂದೇ ಪರಿಹಾರ ಎಂಬ ಧಾಟಿಯಲ್ಲಿ ಮಾತನಾಡುತ್ತಿರುವುದು ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸುವಾಗ ಇಮ್ರಾನ್‌ ಮೂಲಕ ಪಾಕ್‌ ಸೇನೆ ಬೇರೆಯದ್ದೇ ಆಟ ಆಡುವ ಸಿದ್ಧತೆಯಲ್ಲಿರುವಂತೆ ಕಾಣಿಸುತ್ತಿದೆ. ಹೀಗಾಗಿ ಪಾಕಿಸ್ಥಾನದ ಜತೆಗೆ ವ್ಯವಹರಿಸುವ ಪ್ರತಿ ನಡೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು ಎಂಬುದು ಸ್ಪಷ್ಟ.


Trending videos

Back to Top