CONNECT WITH US  

ವಿದ್ಯುತ್‌ ಕಂಪನಿಗಳ ವಿರುದ್ಧ ನಾಳೆ ರೈತರ ಪ್ರತಿಭಟನೆ 

ತುಮಕೂರು: ಜಿಲ್ಲೆಯಲ್ಲಿ ಪ್ರವರ್‌ಗ್ರಿಡ್‌, ಕೆಪಿಟಿಸಿಎಲ್‌ ಹಾಗೂ ಇನ್ನಿತರ ವಿದ್ಯುತ್‌ ಕಂಪನಿಗಳು ಕೈಗೊಂಡಿರುವ ಕಾಮಗಾರಿಗಳಿಗೆ ರೈತರ ಭೂಮಿಗೆ ಪರಿಹಾರ ನೀಡುವಲ್ಲಿ ತಾರತಮ್ಯವೆಸಗಿದ್ದು, ಇದನ್ನು ವಿರೋಧಿಸಿ ಮಂಗಳವಾರ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಆನಂದಪಟೇಲ್‌ ತಿಳಿಸಿದರು. 

ನಗರದ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡುತ್ತಾ ಒನ್‌ ನೇಷನ್‌, ಒನ್‌ ಗ್ರಿಡ್‌ ಎಂಬ ತತ್ವದಡಿ ತುಮಕೂರು, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಜಿಲ್ಲೆಗಳಲ್ಲಿ ಕೆಪಿಟಿಸಿಎಲ್‌, ಪವರ್‌ಗ್ರಿಡ್‌ ಮತ್ತು ಎಲ್‌ಎಸ್‌ಟಿನವರು ಲೈನ್‌ ಎಳೆಯುವ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ರೈತರಿಂದ ವಶಪಡಿಸಿ ಕೊಂಡಿರುವ ಭೂಮಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ವೆಸಗುತ್ತಿದ್ದಾರೆ ಎಂದು ಆಪಾದಿಸಿದರು.

ಚಿಕ್ಕಬಳ್ಳಾಪುರದಲ್ಲಿ ಒಂದು ಎಕರೆಗೆ 5.25 ಲಕ್ಷ ರೂ. ನೀಡಿದರೆ, ದೊಡ್ಡ ಬಳ್ಳಾಪುರದಲ್ಲಿ 9 ಲಕ್ಷ ದಿಂದ 12 ಲಕ್ಷ ರೂ. ನೀಡುತ್ತಿದ್ದಾರೆ. ಅಲ್ಲದೆ ದೇವನಹಳ್ಳಿ ಸುತ್ತಮುತ್ತ ಎಕರೆಗೆ 15 ಲಕ್ಷ ರೂ. ನೀಡುತಿದ್ದಾರೆ. ಆದರೆ ತುಮಕೂರು ಜಿಲ್ಲೆಯಲ್ಲಿ ಮಾತ್ರ ಎಕರೆಗೆ ಕೇವಲ 2 ಲಕ್ಷ ರೂ ನೀಡಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಎಂದು ತಿಳಿಸಿದರು. 

ಜಿಲ್ಲೆಯ ಗುಬ್ಬಿ ಮತ್ತು ತುಮಕೂರು ಗಡಿ ಭಾಗದಲ್ಲಿರುವ ಕಳ್ಳಿಪಾಳ್ಯ, ಹೊಸಪಾಳ್ಯ ಗ್ರಾಮಗಳ ಸುಮಾರು 48 ಕುಟುಂಬಗಳಿಗೆ ಒಂದು ನೈಯಾ ಪೈಸೆ ಪರಿಹಾರ ನೀಡಿಲ್ಲ. ದೌರ್ಜನ್ಯದಿಂದ ರೈತರ ಭೂಮಿಗಳಲ್ಲಿ ಕಂಬ ಹಾಕುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ರೈತರ ನೆರವಿಗೆ ಬಂದಿಲ್ಲ.

ಪವರ್‌ಗ್ರಿಡ್‌ನಿಂದ ತೊಂದರೆಗೆ ಒಳಗಾಗಿರುವ ಹಳ್ಳಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಮಹಿಳಾ ಅಧ್ಯಕ್ಷರಾದ ಶಿವರತ್ನ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಬಿ.ಸುರೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್‌ ಮೊದಲಾದವರು ಇದ್ದರು. 

Trending videos

Back to Top