CONNECT WITH US  

ಭಾರತೀಯ ಸಂಸ್ಕೃತಿ ವಿಶ್ವಕ್ಕೇ ಮಾದರಿ

ಚಿಕ್ಕಬಳ್ಳಾಪುರ: ದೇಶದ ಸಂಸ್ಕೃತಿ, ಪರಂಪರೆ ಇಡೀ ವಿಶ್ವಕ್ಕೇ ಮಾದರಿಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಸಮುದಾಯ ಹೆಚ್ಚು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಬೇಸರದ ಸಂಗತಿ. ನಾವು ದೇಶಿತನವನ್ನು ಉಳಿಸಿಕೊಳ್ಳದಿದ್ದರೆ ಮತ್ತೆ ಪರಕೀಯರ ಗುಲಾಮಗಿರಿ ಒಳಗಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕ ಅನಿಲ್‌ ತಿಳಿಸಿದರು.

ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರ್‌ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಸೋಮವಾರ ರಕ್ಷಾಬಂಧನ ಮತ್ತು ಸಂಸ್ಕೃತ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ವಿದ್ಯಾರ್ಥಿಗಳು ಉಳಿಸಿ, ಬೆಳೆಸಬೇಕು. ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಭಾರತೀಯರೆಲ್ಲಾ ಒಂದು ಎನ್ನುವ ಏಕತೆ ಇಂದು ಮರೆಯಾಗಿದೆ.

ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಹೆಚ್ಚು ಅಪಾಯಕಾರಿಯಾಗಿರುವುದನ್ನು ಇಂದು ನಾವು ದೇಶದಲ್ಲಿ ಕಾಣುವಂತಾಗಿದೆ. ಆಚಾರ, ಆಹಾರ, ಚಿಂತನೆಗಳು ಪರಕೀಯರ ಗುಲಾಮಗಿರಿಗೆ ಒಳಗಾಗಿ ನಮ್ಮ ಮೌಲ್ಯಗಳನ್ನು ಕಳೆದುಕೊಂಡು ನಾವು ಮಾಡಿದ್ದೇ ಸರಿ ಎನ್ನುವ ನೆಲೆಗೆ ಇಂದು ನಾವು ಬಂದು ತಲುಪಿದ್ದೇವೆ. ಈ ಬಗ್ಗೆ ವಿದ್ಯಾರ್ಥಿಗಳು, ಯುವ ಸಮುದಾಯ ಎಚ್ಚರಗೊಳ್ಳಬೇಕಿದೆ ಎಂದು ತಿಳಿಸಿದರು.

ಸಂಸ್ಕೃತಿಗೆ ಸಂಸ್ಕೃತ ಜೀವಾಳ: ಸಂಸ್ಕೃತ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಉಷಾದೇವಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಜೀವಾಳ ಸಂಸ್ಕೃತ ಭಾಷೆಯಲ್ಲಿದೆ. ಹಿಂದೆ ವಿಶ್ವಮಾನ್ಯವಾಗಿದ್ದ ಸಂಸ್ಕೃತ ಭಾಷೆ ಇಂದು ಸಂವಹನದ ಕೊರತೆಯಿಂದ ಸೊರಗಿ ಹೋಗಿದೆ. ಸಮಾಜದಲ್ಲಿ ಯಾರು ಬೇಕಾದರೂ ಸಂಸ್ಕೃತ ಭಾಷೆಯನ್ನು ಕಲಿಯಬಹುದು. ಸಂಸ್ಕೃತ ಜೀವನ ಕ್ರಮವಾಗಿದೆ.

ಸಂಸ್ಕೃತ ಭಾಷೆಯನ್ನು ಕಲಿಯುವುದರಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ರಕ್ಷಾಬಂಧನದ ಉದ್ದೇಶವೇ ಒಡಹುಟ್ಟಿದ ಸಹೋದರರು ತಮ್ಮ ಸಹೋದರಿಯರು ಸಂಕಷ್ಟ ಪಡುವಾಗ ಅವರ ನೆರವಿಗೆ ನಿಲ್ಲುವಂತೆ ವಿವೇಕವನ್ನು ಬೋಧಿಸುವುದಾಗಿದೆ. ರಕ್ಷಾಬಂಧನ ವಿಶ್ವದ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್‌ಎಂವಿ ಶಾಲೆಯ ಉಪ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಸಮಾಜ ಸೇವಕಿ ಪ್ರೇಮಲೀಲಾ ವೆಂಕಟೇಶ್‌, ಮುಖ್ಯ ಶಿಕ್ಷಕ ನರಸಿಂಹ ಮಾತನಾಡಿದರು. ವೇದಿಕೆಯಲ್ಲಿ ಕನ್ನಡ ಭಾಷಾ ಶಿಕ್ಷಕ ಪರಶಿವಮೂರ್ತಿ, ಗೋಪಿನಾಥ್‌, ಸಂಸ್ಕೃತ ಶಿಕ್ಷಕ ನಾಗೇಶ, ಹಿಂದಿ ಶಿಕ್ಷಕ ತಿಮ್ಮರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top