CONNECT WITH US  

ನಾರಾಯಣಗುರು ತತ್ವಾದರ್ಶ ಸಾರ್ವಕಾಲಿಕ

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ಧತಿ, ಲಿಂಗ ತಾರತಮ್ಯ, ಅಸಮಾನತೆ ವಿರುದ್ಧ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದಂತಹ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ಜಿ.ಹೆಚ್‌.ನಾಗರಾಜ್‌ ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಅತಿ ಕಡಿಮೆ ಜನಸಂಖ್ಯೆ ಇರುವಂತಹ ಈಡಿಗ ಸಮುದಾಯದಲ್ಲಿ ಹುಟ್ಟಿದ ನಾರಾಯಣ ಗುರುಗಳು ದೇಶದಲ್ಲಿ ಸಂಚರಿಸಿ ಪ್ರತಿಯೊಬ್ಬರು ನೀತಿ, ಜ್ಞಾನವಂತರಾಗಬೇಕು ಎಂದು ಜಾಗೃತಿ ಮೂಡಿಸಿದರು. ಸೇವಾ ಮನೋಭಾವನೆಯನ್ನು ಜನರಲ್ಲಿ ಬಿತ್ತಿದರು. ಹೆಣ್ಣುಮಕ್ಕಳ ಹಕ್ಕಿಗಾಗಿ ಹೋರಾಡಿದ ಮಹಾನ್‌ ಚೇತನರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಕುಗ್ರಾಮದಲ್ಲಿ ಜನಿಸಿದ ನಾರಾಯಣಗುರು: ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೊ›.ವೆಂಕಟರಾಮ್‌ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಾರಾಯಣ ಗುರು ಕೇರಳದ ಕುಗ್ರಾಮದಲ್ಲಿ ರೈತರ ಮನೆಯಲ್ಲಿ ಜನಿಸಿದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪೋಷಣೆಯಲ್ಲಿ ವೈಚಾರಿಕ ವ್ಯಕ್ತಿಯಾಗಿ ಬೆಳೆಯುತ್ತಾರೆ.

ಸ್ವಾತಂತ್ರ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಭೂ ದಾನ ಚಳುವಳಿ ಪ್ರಾರಂಭಿಸಿದರು. ಅಂದಿನ ಕಾಲದಲ್ಲಿ ಕೇರಳದಲ್ಲಿ ಹೆಚ್ಚು ಜಾತಿ ಪದ್ಧತಿ, ಲಿಂಗ ತಾರತಮ್ಯ, ಅಸಮಾನತೆ ಇರುತ್ತದೆ. ಇದರ ವಿರುದ್ಧ ಧ್ವನಿಎತ್ತಿ ಹೋರಾಡಿದ ನಾಯಕ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆರ್ಯ ಈಡಿಗ ಸಮಾಜದ ಕಾರ್ಯಾಧ್ಯಕ್ಷರಾದ ಎಸ್‌.ಎನ್‌.ಚಿನ್ನಪ್ಪ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ಅಪರ ಜಿಲ್ಲಾಧಿಕಾರಿ ಡಾ.ಕೆ.ಎನ್‌.ಅನುರಾಧ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್‌.ವೆಂಕಟಾಚಲಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top