CONNECT WITH US  

ಗ್ರಾಪಂ ಸದಸ್ಯರ ಪ್ರತಿಭಟನೆ

ಚಿಕ್ಕಮಗಳೂರು: ಸದಸ್ಯರ ಗಮನಕ್ಕೆ ತಾರದೆ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು
ಗುರುವಾರ ಗ್ರಾಮ ಪಂಚಾಯತ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಾಲೂಕಿನ ಕರ್ತಿಕೆರೆ ಗ್ರಾಪಂನಲ್ಲಿ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಗೆ ಪಾಲ್ಗೊಳ್ಳಲು ಸದಸ್ಯರು ಗ್ರಾಪಂ ಕಚೇರಿ ಬಳಿ ಬಂದಾಗ ಅಲ್ಲಿದ್ದ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪಂಚಾಯತ್‌ ಸಿಬ್ಬಂದಿ ಸದಸ್ಯರಿಗೆ ತಿಳಿಸಿದ್ದಾರೆ.

ಇದರಿಂದ ಅಸಮಾಧಾನಗೊಂಡ ಸದಸ್ಯರು ತಮ್ಮ ಗಮನಕ್ಕೆ ತಾರದೆ ಗ್ರಾಪಂ ಅಧ್ಯಕ್ಷ ಆನಂದ್‌ ರಾಜ್‌ ಅರಸ್‌ ಏಕಪಕ್ಷೀಯ ನಿರ್ಣಯ ಕೈಗೊಂಡು ಕಚೇರಿ ಸ್ಥಳಾಂತರಿಸಲಾಗಿದೆ ಎಂದು ದೂರಿ ದಿಢೀರ್‌ ಪ್ರತಿಭಟನೆ ನಡೆಸಿದರು.
 
ಗ್ರಾಪಂ ಅಧ್ಯಕ್ಷರು ಯಾವುದೇ ಸದಸ್ಯರನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಎಲ್ಲದರಲ್ಲಿಯೂ ಏಕಪಕ್ಷೀಯ
ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹಳೇ ಕಚೇರಿಯಲ್ಲಿಯೇ ಸಭೆ ಕರೆಯಲಾಗಿತ್ತು. ಆದರೆ ದಿಢೀರನೆ ಕಚೇರಿ ಬದಲಿಸಲಾಗಿದೆ. ಕೂಡಲೆ ಹಳೇ ಕಚೇರಿಯಲ್ಲಿಯೇ ಸಭೆ ಕರೆದು ಸರ್ವಾನುಮತದ ನಿರ್ಣಯ ಕೈಗೊಂಡು ಕಚೇರಿ ಸ್ಥಳಾಂತರಿಸುವವರೆಗೂ ಇಲ್ಲಿಯೇ ಕಚೇರಿ ನಡೆಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಆನಂದ್‌ ರಾಜ್‌ ಅರಸ್‌, ಈಗ ಇದ್ದ ಕಚೇರಿಯು
ಸಂಪೂರ್ಣ ಶಿಥಿಲಗೊಂಡಿತ್ತು.  ಮಳೆಯಲ್ಲಿ ನೀರು ಒಳಗೆ ಇಳಿಯುತ್ತಿದ್ದು, ಇದರಿಂದ ಕಚೇರಿ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದ್ದುದಲ್ಲದೆ, ಕಚೇರಿಯ ದಾಖಲಾತಿಗಳೂ ಹಾಳಾಗುತ್ತಿದ್ದವು . ಕಚೇರಿ ಕಟ್ಟಡ ಶಿಥಿಲಗೊಂಡಿದ್ದರಿಂದಲೇ ಹೊಸದಾಗಿ ಕಚೇರಿ ಕಟ್ಟಲಾಗಿತ್ತು. ಕಚೇರಿ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲು ಸಭೆ ಕರೆದರೂ ಸದಸ್ಯರು ಸಭೆಗೆ ಪೂರ್ಣ ಪ್ರಮಾಣದಲ್ಲಿ ಬಾರದೆ ಜನವರಿ ತಿಂಗಳಿನಿಂದ ಸಭೆ ನಡೆದೇ ಇಲ್ಲ ಎಂದು ತಿಳಿಸಿದರು. ಕಚೇರಿ ಸ್ಥಳಾಂತರಿಸುವ ಬಗ್ಗೆ ಕಳೆದ ವಾರ ಎಲ್ಲ ಸದಸ್ಯರಿಗೂ ದೂರವಾಣಿ ಕರೆ ಮಾಡಿ ತಿಳಿಸಲಾಗಿತ್ತು. ಆದರೆ ಕೆಲವು ಸದಸ್ಯರು ಕರೆ ಸ್ವೀಕರಿಸಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹೊಸ ಕಟ್ಟಡದಲ್ಲಿ ನಡೆಸುವ ಬಗ್ಗೆ ಎಲ್ಲ ಸದಸ್ಯರಿಗೆ ನೋಟಿಸ್‌ ನೀಡಲಾಗಿತ್ತು.

ಕಚೇರಿ ಸ್ಥಳಾಂತರಿಸುವ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಸಹ ರಾಜಕೀಯ ಪ್ರೇರಿತವಾಗಿ ಇಂದು ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು. 


Trending videos

Back to Top