CONNECT WITH US  

ಧರ್ಮ ವಿಘಟಕರ ವಿರುದ್ಧ ಜಾಗೃತಿ ಸಮರ 

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ರವಾನೆ ವಿರುದ್ಧ ಜಾಗೃತಿ

ಮಂತ್ರಾಲಯದ ಟಿಟಿಡಿ ವಸತಿ ಭವನದಲ್ಲಿ ನಡೆದ ರಾಷ್ಟ್ರೀಯ ಸಮನ್ವಯ ಬೈಠಕ್‌ ಸಮಾರೋಪದಲ್ಲಿ ಆರ್‌ಎಸ್‌ಎಸ್‌ ಅಧ್ಯಕ್ಷ ಮೋಹನ್‌ ಭಾಗವತ್‌ ಅವರಿಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸನ್ಮಾನಿಸಿ ಆಶೀರ್ವದಿಸಿದರು.

ರಾಯಚೂರು: "ಜನರಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಹುನ್ನಾರ ಜೋರಾಗಿ ನಡೆಯುತ್ತಿದೆ. ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಇಂಥ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ಆರ್‌ಎಸ್‌ಎಸ್‌ ರಾಷ್ಟ್ರೀಯ ಸಮನ್ವಯ ಬೈಠಕ್‌ನಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು' ಎಂದು ಸಂಘದ ಸಹ ಸರಕಾರ್ಯವಾಹಕ ಮನಮೋಹನ್‌ ವೈದ್ಯ ತಿಳಿಸಿದರು.

ಮಂತ್ರಾಲಯದ ಸುಜಯಿಂದ್ರ ವಿಶ್ರಾಂತ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನ ನಡೆದ ಆರ್‌ ಎಸ್‌ಎಸ್‌ ರಾಷ್ಟ್ರೀಯ ಸಮನ್ವಯ ಬೈಠಕ್‌ನಲ್ಲಿ ಚರ್ಚಿತವಾದ ವಿಚಾರಗಳ ಕುರಿತು ವಿವರಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ದೇಶದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ಸುಳ್ಳು ಸುದ್ದಿ ಹರಡಿಸಿ ಜನರ ಭಾವನೆ ಒಡೆಯಲಾಗುತ್ತಿದೆ. ವಿಘಟನೆ ಕೆಲಸ ಜೋರಾಗಿ
ನಡೆಯುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಇಂಥ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು ಎಂದರು.

ಕೇರಳದ ಪ್ರವಾಹದಲ್ಲಿ ಸಂಘದಿಂದ ಕೈಗೊಂಡ ಪರಿಹಾರ ಕಾರ್ಯದ ಬಗ್ಗೆ ವಿವರಿಸಿದ ಅವರು, 1.20 ಲಕ್ಷ ಕಾರ್ಯಕರ್ತರು ಸಂತ್ರಸ್ತರಿಗಾಗಿ ಶ್ರಮಿಸಿದ್ದಾರೆ. 650 ವೈದ್ಯರು 250 ಆರೋಗ್ಯ ಶಿಬಿರ ನಡೆಸಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಸ್ವಯಂ ಸೇವಕರು 75,600 ಜನರ ಜೀವ ಉಳಿಸಿದ್ದು, 300 ಶಿಬಿರ ಆಯೋಜಿಸಲಾಗಿದೆ. 350 ಬೋಟ್‌ಗಳ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ಟನ್‌ ಆಹಾರಧಾನ್ಯ ವಿತರಿಸಿದ್ದು, ಪ್ರಸ್ತುತ 2 ಲಕ್ಷ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.  ಸೆಪ್ಟೆಂಬರ್‌ನಲ್ಲಿ 800 ಸ್ವತ್ಛತಾ ಶಿಬಿರ ಆಯೋಜಿಸಲು ಚಿಂತಿಸಲಾಗಿದೆ ಎಂದರು.

ನೀರಿನ ಸದ್ಬಳಕೆಗೆ ಮಾರ್ಗದರ್ಶನ ನೀಡುವುದು, ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ತೀರ್ಮಾನಿಸಲಾಗಿದೆ. ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಮನಃ ಪರಿವರ್ತಿಸಲು ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚಿಸಲಾಗಿದೆ. ಇಂದಿನ ಜೀವನ ಪದ್ಧಯಿಂದ ದೇಶದಲ್ಲಿ ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ. ಕುಟುಂಬಗಳು ವಿಘಟನೆ ಹೆಚ್ಚಾಗುತ್ತಿದೆ. ಹೀಗಾಗಿ ಕುಟುಂಬ ಪ್ರಬೋಧನ ವ್ಯವಸ್ಥೆ ಪುನರ್‌ ಸ್ಥಾಪನೆಗೆ ಬೈಠಕ್‌ನಲ್ಲಿ ಸಮ್ಮತಿ ನೀಡಲಾಯಿತು ಎಂದರು. ಆರ್‌ಎಸ್‌ಎಸ್‌ ಅಖೀಲ ಭಾರತ ಪ್ರಚಾರ
ಪ್ರಮುಖ ಅರುಣಕುಮಾರ, ಆಂಧ್ರಪ್ರದೇಶ ಪ್ರಾಂತ ಪ್ರಚಾರಕ ಭರತಕುಮಾರ ಇದ್ದರು. 

ಇದು ಕೇವಲ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಸಭೆಯಾಗಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಯಾವುದೇ ವಿಚಾರಗಳು ಚರ್ಚೆಯಾಗಿಲ್ಲ. ನೋಟು ಅಮಾನ್ಯಿಕರಣ, ಜಿಎಸ್‌ಟಿ ಹಾಗೂ ರಾಜಕೀಯ ಬೈಠಕ್‌ನಲ್ಲಿ ಚರ್ಚೆಗೆ ಬರಲಿಲ್ಲ. ಕೇಂದ್ರ ಸರ್ಕಾರ ಹೇಗೆ ಕೆಲಸ ಮಾಡಿದೆ ಎನ್ನುವುದನ್ನು ಶೀಘ್ರದಲ್ಲಿ ದೇಶದ ಜನರೇ ನಿರ್ಧರಿಸುವರು. ಆ ಬಗ್ಗೆ ಆರ್‌ಎಸ್‌ ಎಸ್‌ ಚಿಂತನೆ ಮಾಡಿಲ್ಲ.
● ಮನಮೋಹನ್‌ ವೈದ್ಯ, ಆರ್‌ಎಸ್‌ಎಸ್‌ ಸಹ ಸರ ಕಾರ್ಯವಾಹಕ


Trending videos

Back to Top