CONNECT WITH US  

ನವರಾತ್ರಿಗೆ ಸಲ್ಮಾನ್‌ ಖಾನ್‌ ಲವ್‌ರಾತ್ರಿ: ಬಿಹಾರ ಕೋರ್ಟಿನಲ್ಲಿ ದೂರು

ಮುಜಫ‌ರಪುರ : 'ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರ ಸ್ವಂತ ನಿರ್ಮಾಣದ ಮುಂದಿನ ಚಿತ್ರದ ಹೆಸರು ಲವ್‌ರಾತ್ರಿ; ಇದು ಹಿಂದೂ ಹಬ್ಬ ನವರಾತ್ರಿಯನ್ನು ಧ್ವನಿಸುತ್ತದೆ. ಸಲ್ಮಾನ್‌ ಖಾನ್‌ ಅವರ ಚಿತ್ರಗಳು ಸಾಮಾನ್ಯವಾಗಿ ಅಶ್ಲೀಲತೆಯನ್ನು ಮೆರೆಯುವುದರಿಂದ ನವರಾತ್ರಿ ಪದವನ್ನು ಸಂಕೇತಿಸುವ ಲವ್‌ ರಾತ್ರಿ ಚಿತ್ರದಲ್ಲಿ ದುರ್ಗಾ ದೇವಿಯನ್ನು ಅವಮಾನಿಸುವ ಸಾಧ್ಯತೆ ಇದೆ' ಎಂದು ಆರೋಪಿಸಿ ಇಲ್ಲಿನ ವಕೀಲ ಸುಧೀರ್‌ ಕುಮಾರ್‌ ಓಝಾ ಎಂಬವರು ಬಿಹಾರದ ನ್ಯಾಯಾಲಯದಲ್ಲಿ ಸಲ್ಮಾನ್‌ ಖಾನ್‌ ವಿರುದ್ಧ ದೂರು ದಾಖಲಿಸಿದ್ದಾರೆ. 
 
ವಕೀಲ ಓಝಾ ಅವರ ದೂರಿನ ವಿಚಾರಣೆಯನ್ನು ಉಪ ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಶೈಲೇಂದ್ರ ಕುಮಾರ್‌ ಅವರು ಇದೇ ಸೆ.12ಕ್ಕೆ ನಿಗದಿಸಿದ್ದಾರೆ.

'ಸಲ್ಮಾನ್‌ ಅವರ ಲವ್‌ ರಾತ್ರಿ ಚಿತ್ರ ನವರಾತ್ರಿ ಸನಿಹ, ಈ ವರ್ಷ ಅಕ್ಟೋಬರ್‌ 5ರಂದು ಬಿಡುಗಡೆಯಾಗಲಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸುವಂತಿದೆ' ಎಂದು ವಕೀಲ ಓಝಾ ತಮ್ಮ ದೂರಿನಲ್ಲಿ ಹೇಳಿದ್ದಾರೆ. 

ಯೂ ಟ್ಯೂಬ್‌ ಮತ್ತಿತರ ಚ್ಯಾನಲ್‌ಗ‌ಳಲ್ಲಿ ಈಗಾಗಲೇ ಲವ್‌ ರಾತ್ರಿ ಚಿತ್ರದ ಪ್ರೋಮೋಗಳು, ಟೀಸರ್‌ಗಳು ಬಿಡುಗಡೆಯಾಗಿದ್ದು  ಅವನ್ನು  ತಾನು ಕಂಡಿರುವ ಕಾರಣ ತನಗೆ ಚಿತ್ರದ ಬಗ್ಗೆ ಈ ಅಭಿಪ್ರಾಯ ಬಂದಿದೆ ಎಂದು ಓಝಾ ಹೇಳಿದ್ದಾರೆ. 

ಓಝಾ ಅವರು ತಮ್ಮ ದೂರಿನಲ್ಲಿ ಸಲ್ಮಾನ್‌ ಖಾನ್‌, ಅವರ ಭಾವ ಆಯುಷ್‌ ಶರ್ಮಾ, ಹೊಸ ನಟಿ ವರೀನಾ ಹುಸೇನ್‌ ಅವರನ್ನು ಉತ್ತರದಾಯಿಗಳನ್ನಾಗಿ ಹೆಸರಿಸಿದ್ದಾರೆ. 

ಲವ್‌ ರಾತ್ರಿ ಚಿತ್ರವು ಅಭಿರಾಜ್‌ ಮಿನಾವಾಲಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದಲ್ಲಿ ರಾಮ್‌ ಕಪೂರ್‌ ಮತ್ತು ರೋನಿತ್‌ ರಾಯ್‌ ಕೂಡ ನಟಿಸಿದ್ದು ಇವರನ್ನು ಕೂಡ ದೂರಿನಲ್ಲಿ ಉತ್ತರದಾಯಗಳನ್ನಾಗಿ ಮಾಡಲಾಗಿದೆ. 


Trending videos

Back to Top