ಸಾಲ ವಸೂಲಿಗೆ ಒತ್ತಡ-ದೌರ್ಜನ್ಯಕ್ಕೆ ಡಿಸಿ ವಾರ್ನಿಂಗ್

ದಾವಣಗೆರೆ: ಸಾಲ ಪಡೆದಂತವರ ಮೇಲೆ ಖಾಸಗಿ ಬ್ಯಾಂಕ್, ಕಿರು ಹಣಕಾಸು ಸಂಸ್ಥೆ, ಬ್ಯಾಂಕಿಂಗೇತರ ಪ್ರತಿನಿಧಿಗಳು ಒತ್ತಡ ಹೇರುವುದು, ದೌರ್ಜನ್ಯವೆಸಗ ಕೂಡದು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೆಶ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬುಧವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಖಾಸಗಿ ಬ್ಯಾಂಕ್, ಕಿರು ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕಿಂಗೇತರ ಪ್ರತಿನಿಧಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಪಡೆದವರ ಮೇಲೆ ಒತ್ತಡ ಹಾಕುವುದು, ದೌರ್ಜನ್ಯ ನಡೆಸುವಂತಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿನ ಋಣಭಾರ ಪೀಡಿತ ಸಣ್ಣ ರೈತರು, ಭೂರಹಿತ ರೈತ ಕೃಷಿ ಕಾರ್ಮಿಕರು ಹಾಗೂ ಆಸಕ್ತ ವರ್ಗದ ಜನರಿಗೆ ಋಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಋಣಭಾರ ಮಸೂದೆ-2018 ಮಂಡಿಸಲು ಪರಿಶೀಲಿಸುತ್ತಿದೆ. ಮಸೂದೆ ಜಾರಿ ಪರಿಶೀಲನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಸಾಲ ನೀಡಿರುವ
ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳವರು ಸಾಲ ಪಡೆದವರ ಮೇಲೆ ವಿವಿಧ ರೀತಿಯ ಒತ್ತಡ ಹಾಕುತ್ತಿರುವುದು
ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಸಾಲ ಪಡೆದವರ ಮೇಲೆ ಯಾವುದೇ ರೀತಿಯ ಕಾನೂನು ಬಾಹಿರ ಒತ್ತಡ ಹಾಕಬಾರದು ಹಾಗೂ ದೌರ್ಜನ್ಯವೆಸಗಬಾರದು. ತಪ್ಪಿದಲ್ಲಿ ಲೇವಾದೇವಿಗಾರರು ಹಾಗೂ ಸಂಬಂಧಿಸಿದ ಹಣಕಾಸು ಸಂಸ್ಥೆಗಳ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಲೀಡ್ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಎನ್.ಟಿ. ಎರ್ರಿಸ್ವಾಮಿ, ಕಿರು ಹಣಕಾಸು ಸಂಸ್ಥೆಗಳ ಸಂಘಟನೆಯ
ಮುಖ್ಯಸ್ಥ ಮಂಜುನಾಥ್, ಖಾಸಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳ 48 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.