CONNECT WITH US  

ಮಾನಪ್ಪಾಡಿ ವರದಿಗೆ ಮಾನ್ಯತೆಯೇ ಇಲ್ಲ: ಜಮೀರ್‌

ಕೊಪ್ಪಳ: "2013ರಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾನಪ್ಪಾಡಿ ಅವರು ತಮ್ಮ ಅಧಿಕಾರಾವಧಿ ಮುಗಿದ ಒಂದು ತಿಂಗಳ ಬಳಿಕ ಸರ್ಕಾರಕ್ಕೆ ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ವರದಿ ಕೊಟ್ಟಿದ್ದಾರೆ. ಅಧಿಕಾರಾವಧಿ ಮುಗಿದ ಬಳಿಕ ಅವರು ಕೊಟ್ಟ ವರದಿಗೆ ಮಾನ್ಯತೆಯೇ ಇಲ್ಲ. ಅದನ್ನು ಈ ಹಿಂದಿನ ಸರ್ಕಾರದಲ್ಲೇ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ' ಎಂದು ಸಚಿವ ಜಮೀರ್‌ ಅಹ್ಮದ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2013ರ ಫೆಬ್ರವರಿಯಲ್ಲಿ ಅನ್ವರ್‌ ಮಾನಪ್ಪಾಡಿ ಅವರ 3 ವರ್ಷದ ಅಧಿಕಾರಾವಧಿ ಮುಗಿದಿದೆ. ಅವಧಿ ಮುಗಿದ ಬಳಿಕ ಮಾರ್ಚ್‌ನಲ್ಲಿ ಆಸ್ತಿ ಕಬಳಿಕೆಯ ಬಗ್ಗೆ ಸದಾನಂದಗೌಡರಿಗೆ ವರದಿ ಸಲ್ಲಿಸಿದ್ದಾರೆ. ಆದರೆ, ಅವಧಿ ಒಳಗೆ ಅವರು ಏಕೆ ವರದಿ ಸಲ್ಲಿಸಲಿಲ್ಲ? ಆಗ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿತ್ತು. ಆ ಸರ್ಕಾರ ವರದಿ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಅವರ ವರದಿಗೆ ಮಾನ್ಯತೆ ಇಲ್ಲ ಎಂದರು. 

"ಆ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೋರ್ಟ್‌ ಏನು ಆದೇಶ ಮಾಡಿದೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾನಪ್ಪಾಡಿ ವರದಿಯನ್ನು ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ತಂದು ತಿರಸ್ಕರಿಸಿದ್ದಾರೆ. ವಕ್ಫ್ ಸೇರಿದಂತೆ ಮುಜರಾಯಿ ಆಸ್ತಿ ದೇವರ ಆಸ್ತಿ ಎಂದು ನಾನು ಭಾವಿಸುವೆ ಎಂದರು.

ಮಾನಪ್ಪಾಡಿ ಅವರು ವಕ್ಫ್ ಆಸ್ತಿಯನ್ನು ರಾಜಕಾರಣಿಗಳು ಕಬಳಿಕೆ ಮಾಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಿದ್ದಾರೆ. ಅವರಿಗೆ ಮೂರು ದಿನ ಕಾಲಾವಕಾಶ ಕೊಡುತ್ತೇನೆ. ನನ್ನ ಬಳಿ ಬರಲಿ, ಯಾರೆಂದು ನನಗೆ ಹೇಳಲಿ, ಸ್ಥಳ ಪರಿಶೀಲನೆಗೆ ನಾನೇ ಅಧಿಕಾರಿಗಳೊಂದಿಗೆ ತೆರಳುತ್ತೇನೆ. ವಕ್ಫ್ ಆಸ್ತಿ ಕಬಳಿಕೆ ಮಾಡಿದ ಎಂತಹ ದೊಡ್ಡ ರಾಜಕಾರಣಿಯೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.


Trending videos

Back to Top