CONNECT WITH US  

ನೋಟ್‌ ಬಂದಿಯಿಂದ ಸಂಕಷ್ಟದಲ್ಲಿದೇಶ

ಸೊಲ್ಲಾಪುರ: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸುಳ್ಳು ಭರವಸೆಗೆ ಸಾಮಾನ್ಯ ಜನರು ಮೋಸ ಹೋಗಿದ್ದಾರೆ. ನೋಟ್‌ ಬಂದಿಯಿಂದ ದೇಶ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿದೆ. ಇಂಥ ಸರಕಾರ ಜನತೆಗೆ ಬೇಡವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಶೋಕ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಕಲಕೋಟ ನಗರದ ವಾಗರಿ ರಸ್ತೆಯಲ್ಲಿರುವ ಟಿನವಾಲಾ ಮಂಗಲ ಕಾರ್ಯಾಲಯ ಆವರಣದಲ್ಲಿ ನಡೆದ ಜನಸಂಘರ್ಷ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು. ನೋಟು ಬಂದಿಯಿಂದ ದೇಶ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿದೆ. ಕಪ್ಪು ಹಣ ಬಿಳಿಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಲಕ್ಷಾಂತರ ಯುವಕ-ಯುವತಿಯರು ನೌಕರಿಗಾಗಿ ಅಲೆದಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸುಳ್ಳು ಭರವಸೆಗೆ ಜನರು ಮೋಸ ಹೋಗಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣ ವಿಫಲಗೊಂಡಿದೆ. ಬಿಜೆಪಿಗೆ ಸುಳ್ಳು ಹೇಳುವುದೇ ದೊಡ್ಡ ಸಾಧನೆಯಾಗಿದೆ ಎಂದರು.

ಬಿಜೆಪಿ ಶಾಸಕ ರಾಮ ಕದಂ ಸ್ತ್ರೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಗೆ ತಾಕತ್ತಿದ್ದರೆ ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಲಿ ಎಂದು ಸವಾಲು ಹಾಕಿದರು. ಇಂತಹ ಸರ್ಕಾರ ಜನರಿಗೆ ಬೇಡವಾಗಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಜನರು ಬೆಂಬಲ ನೀಡಲು ಸಜ್ಜಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಬಾಳಾಸಾಹೇಬ ಥೋರಾತ್‌, ಅಕ್ಕಲಕೋಟ ಶಾಸಕ ಸಿದ್ಧರಾಮ ಮೆತ್ರೆ ಮಾತನಾಡಿದರು. ಇದಕ್ಕೂ ಮುನ್ನ ಅಕ್ಕಲಕೋಟ ತಾಲೂಕು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಂಕರ ಮೆತ್ರೆ ನೇತೃತ್ವದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚಿನ ಬೈಕ್‌ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. 

ಕಾಂಗ್ರೆಸ್‌ ಜೇಷ್ಠ ನಾಯಕ ಸಾತಲಿಂಗಪ್ಪ ಮೆತ್ರೆ, ಶಾಸಕ ರಾಮಹರಿ ರೂಪನವರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ ಪಾಟೀಲ, ಜಿ.ಪಂ. ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ತಾ.ಪಂ. ಅಧ್ಯಕ್ಷೆ ಸುರೇಖಾ ಕಾಟಗಾವ್‌, ಸುನೀತಾ ಹಡಲಗಿ, ಮಂಗಲಾ ಪಾಟೀಲ, ಮಾಜಿ ನಗರಾಧ್ಯಕ್ಷೆ ಅನಿತಾ ಖೋಬರೆ, ಭೀಮಾ ಕಾಪಸೆ, ಶಿವು ಸ್ವಾಮಿ, ಅರುಣ ಜಾಧವ್‌, ಪಿಂಟು ಪಾಟೀಲ, ಸಾತಲಿಂಗ ಶಟಗಾರ, ರಾಮಚಂದ್ರ ಗದ್ದಿ, ವಿಶ್ವನಾಥ ಹಡಲಗಿ, ಸುಭಾಷ ಪರಮಶೆಟ್ಟಿ, ರಾಜಶೇಖರ ಧೋಶಿ, ಶಂಕರ ಭಾಂಜಿ, ಗುರುಶಾಂತ ಧಂಗೆ, ಉಮರ್ಷಾ ಮಕಾಂದರ, ರಯಿಸ್‌ ಟಿನವಾಲಾ, ಕಾಶಿನಾಥ ಗೋಳ್ಳೆ, ಕಾಶಿನಾಥ ಕುಂಬಾರ, ಬಾಬಾಸಾಹೇಬ ಪಾಟೀಲ ಪಾಲ್ಗೊಂಡಿದ್ದರು. ಶ್ವೇತಾ ಹುಲ್ಲೆ ನಿರೂಪಿಸಿದರು. ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಶಂಕರ ಮೆತ್ರೆ ವಂದಿಸಿದರು.

ಬಿಜೆಪಿ ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುತ್ತಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ, ಸಂಶೋಧಕ ಡಾ| ಎಂ.ಎಂ. ಕಲಬುರಗಿ ಅವರಿಗೆ ಹತ್ಯೆ ಮಾಡಿದ್ದು ಸನಾತನ ಧರ್ಮದವರು. ಇಂತಹ ಸನಾತನ ಸಂಘಟನೆಯನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಬರೀ ನಾಲ್ಕು ವರ್ಷಗಳಲ್ಲಿ ಸಾಮಾನ್ಯ ಜನರಿಗೆ ಬಿಜೆಪಿ ಸರ್ಕಾರ ಬೇಡವಾಗಿದೆ.
ಪೃಥ್ವಿರಾಜ ಚವ್ಹಾಣ, ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರ

Trending videos

Back to Top