CONNECT WITH US  

ವಿಜಯಪುರ: ಅಪ್ರಕಟಿತ ಅರೇಬಿಕ್‌ ಶಾಸನ ಪತ್ತೆ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಅಪ್ರಕಟಿತ ಅರೇಬಿಕ್‌ ಶಾಸನ ಪತ್ತೆಯಾಗಿದೆ. ಅಲಿಕ್‌ ರೋಜಾ ಸಮೀಪದ ಸಾದಾತ್‌ ಮಸೀದಿ ದರ್ಗಾ ಸ್ಥಳದಲ್ಲಿ ಸಂಶೋಧಕ ಡಾ| ಎ.ಎಲ್‌. ನಾಗೂರ ಶಾಸನ ಪತ್ತೆ ಹಚ್ಚಿದ್ದಾರೆ.

ಅಪ್ರಕಟಿತ ಸದರಿ ಶಾಸನ ಮಹ್ಮದ್‌ ಆದಿಲಶಾಹನ ಕಾಲಕ್ಕೆ ಸೇರಿದ್ದು, ಅರೇಬಿಯಾ ದೇಶದ ತುರೇಮಿ ಪಟ್ಟಣ ಸಮೀಪದ ಹಜರ್‌ ಮೌತ್‌ ನಿಂದ ವಿಜಯಪುರ ನಗರಕ್ಕೆ ಆಗಮಿಸಿದ್ದ ಖಾದ್ರಿಯಾ ಶಾಖೆ ಸೂಫಿ ಸಂತರಾದ ಸೈಯದ್‌ ಶಾಹ ಜಾಫರ್‌ ಸಕಾಫ್‌ ಇವರ ನಿಧನದ ಕುರಿತು ಮಾಹಿತಿ ನೀಡುತ್ತಿದೆ. 

ಹತ್ತು ಸಾಲುಗಳನ್ನು ಹೊಂದಿರುವ ಶಾಸನದಲ್ಲಿ 8ನೇ ಸಾಲು ಮಾತ್ರ ಪರ್ಶಿಯನ್‌ ಭಾಷೆ ಬಳಸಲಾಗಿದೆ. ಅಲ್ಲಾಹನು ಪರಮದಯಾಳು; ಆತನೊಬ್ಬನೆ ಮೊಹಮ್ಮದರು (ಸ) ಆತನ ಪ್ರವಾದಿಗಳು. ಅಲ್ಲಾಹನ ಸಂತರ ಮೇಲೆ ಯಾವುದೇ ಭಯ ದುಃಖಗಳು ಉಂಟಾಗವು, ಇದು ನಿಸ್ಸಂಶಯ. ಅವರ ಸಮಾಧಿ  ಪವಿತ್ರವಾದುದು. ಗುರುವಿನ ಗುರುವಾದ ಸಾದಾತರ ಮುಖ್ಯಸ್ಥ ಸೈಯದ್‌ ಶಾಹ ಜಾಫರ್‌ ಸಕಾಫರ್‌ ಅವರಿಗೆ ಗೌರವಾರ್ಪಣೆ. ಅರೇಬಿಯಾದ ತುರೇಮಿ
ಪ್ರದೇಶದಿಂದ ಬಂದು ವಿಜಯಪುರದಲ್ಲಿ ನೆಲೆಸಿದ್ದಾರೆ. ಇವರು ಸೈಯದ್‌ ಅಬ್ದುಲ್ಲಾ ಅವರ ಪುತ್ರ. ತುರೇಮಿ ಪಟ್ಟಣದ ಹಜರ್‌ ಮೌತ್‌ನವರು.

ಪ್ರವಾದಿ ಮೊಹಮ್ಮದರ (ಸ) ನಂತರದ 28ನೇ ತಲೆಮಾರಿಗೆ ಸೇರಿದವರು. ಸೈಯದ್‌ ಶಾಹ ಜಾಫರ್‌ ಸಕಾಫ್‌ ಅವರು 20, ಜಿಲ್ಲಾದಾ 1057ರಲ್ಲಿ (ಹಿ.ಶ.) ಸ್ವರ್ಗಸ್ಥರಾದರು ಎಂದು ಶಾಸನ ಸಾರುತ್ತದೆ. ಸಂತ ಸೈಯದ್‌ ಶಾಹ ಜಾಫರ್‌ ಸಕಾಫ್‌ ಅವರು ವಿಜಯಪುರದಲ್ಲಿ ನೆಲೆಸಿದ್ದಕ್ಕೆ ಸಾಕ್ಷಿಯಾಗಿ ಸೂಫಿ ಮಠ (ಖಾನಖಾ) ಒಂದು ಅಲಿಕ್‌ ರೋಜಾ ಪ್ರದೇಶದಲ್ಲಿ ಇದೆ.  ಈ ಶಾಸನದ ಶೋಧ ಕಾರ್ಯದಲ್ಲಿ ಸಾದಾತ್‌ ದರ್ಗಾದ ಸಜ್ಜಾದೆ ನಶೀನ್‌ (ಪೀಠಾಧಿಪತಿ)
ಮತ್ತು ಖಾನದಾನಿ ಮುತವಲ್ಲಿಗಳಾದ ಸೈಯದ್‌ ಆಮೀರ ಸಕಾಫ್‌ ಸಾದಾತ್‌ ಮತ್ತು ಅವರ ವಂಶಸ್ಥ ಅರೇಬಿಕ ಪಂಡಿತ ಸೈಯದ್‌ ಮುರ್ತುಜಾ ಖಾದ್ರಿ ಸಕಾಫ್‌ ಸಾದಾತ್‌ ಅವರು ನೆರವು ನೀಡಿದ್ದಾರೆ.


Trending videos

Back to Top