CONNECT WITH US  

ಯಜಮಾನದಲ್ಲಿ ಅಪ್ಪ-ಮಗ

ಹಾಡಿನಲ್ಲಿ ಕಾಣಿಸಿಕೊಂಡ ದರ್ಶನ್‌ ಪುತ್ರ ವಿನೀಶ್‌

ದರ್ಶನ್‌ ಅಭಿನಯದ "ಯಜಮಾನ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಹುತೇಕ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಈಗ "ಯಜಮಾನ' ಚಿತ್ರದ ಸೆಟ್‌ನಿಂದ ಸುದ್ದಿಯೊಂದು ಬಂದಿದೆ. ಅದು ದರ್ಶನ್‌ ಪುತ್ರ ವಿನೀಶ್‌ ಕುರಿತಾಗಿ. "ಯಜಮಾನ' ಚಿತ್ರದಲ್ಲಿ ದರ್ಶನ್‌ ಪುತ್ರ ವಿನೀಶ್‌ ಕೂಡಾ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಂದೆಯೊಂದಿಗೆ ಎರಡನೇ ಬಾರಿ ತೆರೆಹಂಚಿಕೊಳ್ಳುತ್ತಿದ್ದಾರೆ ವಿನೀಶ್‌.

ಈ ಹಿಂದೆ  "ಐರಾವತ' ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯವೊಂದರಲ್ಲಿ ವಿನೀಶ್‌ ಪೊಲೀಸ್‌ ಯುನಿಫಾರಂನಲ್ಲಿ ಕಾಣಿಸಿಕೊಂಡಿದ್ದರು. ಅಪ್ಪ-ಮಗನನ್ನು ತೆರೆಮೇಲೆ ಕಂಡ ದರ್ಶನ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದರು. ಈಗ "ಯಜಮಾನ'ದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ವಿನೀಶ್‌ ಹಾಗೂ ದರ್ಶನ್‌ ತೆರೆಹಂಚಿಕೊಳ್ಳಲಿದ್ದು, ಈಗಾಗಲೇ ಚಿತ್ರೀಕರಣ ನಡೆದಿದೆ. ಶನಿವಾರ ನಡೆದ ಚಿತ್ರೀಕರಣದಲ್ಲಿ ವಿನೀಶ್‌, ಅಪ್ಪನ ಜೊತೆ ಖುಷಿಯಿಂದ ತೆರೆಹಂಚಿಕೊಂಡಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಕೂಡಾ ಅಪ್ಪ-ಮಗನ ಹಾಡಿನ ಚಿತ್ರೀಕರಣವನ್ನು ಶನಿವಾರ ಕಣ್ತುಂಬಿಕೊಂಡಿದ್ದಾರೆ. ಎಲ್ಲಾ ಓಕೆ, ವಿನೀಶ್‌ ಅವರನ್ನೇ ಹಾಡಿನಲ್ಲಿ ಬಳಸಿಕೊಳ್ಳಲು ಕಾರಣವೇನು ಎಂದು ನೀವು ಕೇಳಿದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಸಿನಿಮಾ ಬಿಡುಗಡೆವರೆಗೆ ಕಾಯಲೇಬೇಕು. ದರ್ಶನ್‌ ಹಾಗೂ ವಿನೀಶ್‌ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿರುವುದಂತೂ ಸುಳ್ಳಲ್ಲ. "ಯಜಮಾನ' ಚಿತ್ರವನ್ನು ಪಿ.ಕುಮಾರ್‌ ನಿರ್ದೇಶಿಸುತ್ತಿದ್ದಾರೆ.

ಈ ಹಿಂದೆ "ವಿಷ್ಣುವರ್ಧನ', "ಚಾರುಲತಾ', "ರಾಜ ರಾಜೇಂದ್ರ' ಸೇರಿದಂತೆ ಹಲವು ಚಿತ್ರಗಳನಮು° ನಿರ್ದೇಶಿಸಿರುವ ಕುಮಾರ್‌ ಈಗ ದರ್ಶನ್‌ಗೆ "ಯಜಮಾನ' ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ಈ ಚಿತ್ರದ ನಿರ್ಮಾಪಕರು. ಈ ನಡುವೆಯೇ ದರ್ಶನ್‌ ಅವರ "ಒಡೆಯ' ಚಿತ್ರಕ್ಕೂ ಮುಹೂರ್ತ ನಡೆದಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಎಂ.ಡಿ.ಶ್ರೀಧರ್‌ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. 


Trending videos

Back to Top