ಯಶೋದಾ ಕೃಷ್ಣ: ಸಿದ್ಧರೂಪದ ಮಧ್ಯೆ ಪ್ರಯೋಗ ಶೀಲತೆಯ ಹೊಳಪು

23

ಶ್ರೀ ಕೃಷ್ಣನನ್ನು ಹೆತ್ತವಳು ದೇವಕಿ, ಜಗಕೆ ಪರಿಚಯಿಸಿದವಳು ಯಶೋದೆ. ಈ ಯಶೋದೆ ಮತ್ತು ಕೃಷ್ಣನ ನಡುವಿನ ಬಾಂಧವ್ಯ ವಿಶೇಷವೆನಿಸಿದ್ದು.

ಉದಯವಾಣಿಯು ಅಮ್ಮ ಮತ್ತು ಮಗುವನ್ನು ಯಶೋದೆ ಮತ್ತು ಕೃಷ್ಣರ ರೂಪದಲ್ಲಿ ಕಾಣಲು ಕಳೆದ ವರ್ಷ ರೂಪಿಸಿದ್ದೇ “ಯಶೋದೆ ಕೃಷ್ಣ’ ಫೋಟೋ ಆಹ್ವಾನ. ಆ ವರ್ಷ ಓದುಗರಿಂದ ವ್ಯಕ್ತವಾದ ಸ್ಪಂದನೆ ಅನುಪಮ. ಈ ಕಾರಣಕ್ಕಾಗಿ ಈ ವರ್ಷ ಶ್ರೀ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಇದನ್ನೇ ಯಶೋದೆ ಕೃಷ್ಣ ಫೋಟೋ ಸ್ಪರ್ಧೆಯಾಗಿ ರೂಪಿಸಿದೆವು. ಉಡುಪಿಯ ಪ್ರತಿಷ್ಠಿತ ಬೃಹತ್‌ ಜವುಳಿ ಉದ್ಯಮ ಗೀತಾಂಜಲಿ ಸಿಲ್ಕ್ಸ್ ನವರು ಸಹಯೋಗ ನೀಡಲು ಮುಂದಾದರು. ಅದರ ಫ‌ಲಿತಾಂಶವಿದು.

 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ 3,500ಕ್ಕೂ ಹೆಚ್ಚು ಫೋಟೋಗಳು ಸ್ಪರ್ಧೆಗೆ ಬಂದಿದ್ದವು. ಇವುಗಳಲ್ಲಿ ಮೊಬೈಲ್‌ನಿಂದ ತೆಗೆದದ್ದರಿಂದ ಹಿಡಿದು ವೃತ್ತಿನಿರತ ಮತ್ತು ಹವ್ಯಾಸಿ ಛಾಯಾಚಿತ್ರಗ್ರಾಹಕರು ತೆಗೆದ ಛಾಯಾಚಿತ್ರಗಳೂ ಇದ್ದವು. ತೀರ್ಪುಗಾರರು ನಿಜಕ್ಕೂ ಶ್ರಮವಹಿಸಿ ಗುಣಮಟ್ಟ ಮತ್ತು ಸ್ಪರ್ಧೆಯ ಪರಿಕಲ್ಪನೆ (ಥೀಮ್‌)ಗೆ ಪೂರಕವಾದವುಗಳಿಗೆ ಪ್ರಾಶಸ್ತ್ಯ ನೀಡಿದ್ದಾರೆ. ಉಡುಪು, ಸಾಂಪ್ರದಾಯಿಕತೆ ಎಲ್ಲವನ್ನೂ ಅಳೆದು ತೂಗಿ ಆರಿಸಲಾಗಿದೆ. ಈ ಛಾಯಾಚಿತ್ರಗಳ ಸೊಗಸೆಂದರೆ ಎಲ್ಲರೂ ಯಶೋದೆಯರೇ, ಎಲ್ಲರೂ ಕೃಷ್ಣರೇ. ಇದು ಯಶೋದಾ-ಕೃಷ್ಣರ ವಿಶ್ವರೂಪ!

ಹಲವು ಛಾಯಾಚಿತ್ರಗಳಿಗೆ ಮೂಲ ಮಾಹಿತಿಯಾದ ಹೆಸರು, ಸಂಪರ್ಕ ಸಂಖ್ಯೆಗಳಿರಲಿಲ್ಲ. ಕೆಲವು ಸಿಕ್ಕಾಪಟ್ಟೆ ಪರಿಷ್ಕರಿಸಿದವಾಗಿದ್ದವು, ಕೆಲವುಗಳಲ್ಲಿ ಫೋಟೋ ಬದಿಯಲ್ಲೇ ತೆಗೆದವರ ಹೆಸರುಗಳಿದ್ದವು. ಇನ್ನು ಕೆಲವು ತೀರಾ ಅಸ್ವಾಭಾವಿಕ ಎನಿಸುವಷ್ಟು ಒನಪು ಹೊಂದಿದ್ದವು. ಅವುಗಳನ್ನು ಬದಿಗೆ ಸರಿಸುವುದು ಅನಿವಾರ್ಯವೆನಿಸಿತು. ಇನ್ನಷ್ಟು ತೀರ್ಪುಗಾರರ ಮೆಚ್ಚುಗೆ ಪಡೆದ ಛಾಯಾಚಿತ್ರಗಳು ಸ್ಥಳೀಯ ಪುರವಣಿಗಳಲ್ಲಿ ಬುಧವಾರ ಪ್ರಕಟಗೊಳ್ಳಲಿದೆ. ಬಹುಮಾನ ವಿತರಣೆಯೂ ಶೀಘ್ರವೇ ನಡೆಯಲಿದೆ.

ವಿಶೇಷ ಬಹುಮಾನ
ಉದಯವಾಣಿ ವಿಶೇಷ ಬಹುಮಾನವು ನಾಗೇಶ ಯರುಕೋಣೆ ಅವರು ತೆಗೆದ ಛಾಯಾಚಿತ್ರಕ್ಕೆ ಸಂದಿದೆ. ಇದಕ್ಕೂ ಇಮೇಲ್‌ ಹೊರತುಪಡಿಸಿದಂತೆ ಸಂಪರ್ಕ ಸಂಖ್ಯೆ, ಊರು ಇತ್ಯಾದಿ ಮಾಹಿತಿ ಇರಲಿಲ್ಲ. ಈ ಸಂಬಂಧ ವಿವರ ಕೋರಿದರೂ ಪ್ರಯೋಜನವಾಗಲಿಲ್ಲ. ನಮ್ಮ ನಿಯಮದ ಪ್ರಕಾರ ಅದು ತಿರಸ್ಕೃತ. ಆದರೆ, ಯಶೋದೆ-ಕೃಷ್ಣರ ಬಗೆಗೆ ಇರುವ ಈಗಾಗಲೇ ಘೋಷಿತ (ಕಾಸ್ಟ್ಯೂಮ್ಸ್‌ ಇತ್ಯಾದಿ) ಕಲ್ಪನೆಯನ್ನು ಬದಲಿಸಿ ಬಿಡುವಷ್ಟು ಈ ಚಿತ್ರದ ಕಲ್ಪನೆ ಸಶಕ್ತ. ಇವರು ನಮ್ಮ ಮನೆ ಯಶೋದೆ-ಕೃಷ್ಣ ಎಂಬಂತಿದೆ ಈ ಚಿತ್ರ. ತೀರಾ ಸ್ವಾಭಾವಿಕ ಹಾಗೂ ಮಾನವೀಯ ಎಳೆಯನ್ನು ಹೊಂದಿರುವಂಥದ್ದಿದು. ಫೋಟೋ ಸ್ಪರ್ಧೆಗಳ ಸಿದ್ಧ ಸೂತ್ರವನ್ನು ಒಡೆಯುವ ಇಂಥ ಪ್ರಯೋಗಶೀಲತೆಯನ್ನು ಬೆಂಬಲಿಸುವುದಕ್ಕಾಗಿ ಈ ಪುರಸ್ಕಾರ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಹೊಸ ಸೇರ್ಪಡೆ