ಪ್ರಮಾಣಪತ್ರಕ್ಕೆ ಸಹಿ ಹಾಕಿ…ಸಂಭಾವ್ಯ ಪಕ್ಷಾಂತರ ತಡೆಗಾಗಿ ಗೋವಾದಲ್ಲಿ ಆಪ್ ಸೂಚನೆ!
ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕೆ ಸಹಿ ಮಾಡಬೇಕು, ಪಕ್ಷಾಂತರ ನಿಷೇಧಕ್ಕೆ ಹೊಸ ಕ್ರಮ
Team Udayavani, Dec 31, 2021, 1:09 PM IST
ಗೋವಾ : ಗೋವಾ ವಿಧಾನಸಭಾ ಚುನಾವಣೆಗೆ ಬರದ ಸಿದ್ದತೆ ನಡೆಸಿರುವ ಆಮ್ ಆದ್ಮಿ ಪಕ್ಷ ಫಲಿತಾಂಶದ ಬಳಿಕದ ಸಂಭಾವ್ಯ “ಜಿಗಿತʼʼ ತಡೆಯಲು ಕಾನೂನುಬದ್ಧ ಪ್ರಮಾಣಪತ್ರಕ್ಕೆ ಎಲ್ಲ ಅಭ್ಯರ್ಥಿಗಳಿಂದ ಸಹಿ ಮಾಡಿಸಿಕೊಳ್ಳಲು ನಿರ್ಧರಿಸದೆ.
ದಕ್ಷಿಣದ ರಾಜ್ಯಗಳಲ್ಲಿ “ಪಕ್ಷಾಂತರ ಪಿಡುಗುʼʼ ದೊಡ್ಡ ಪ್ರಮಾಣದಲ್ಲಿದೆ. ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಫಲಿತಾಂಶೋತ್ತರ “ಆಪರೇಷನ್ʼʼ ರಾಜಕೀಯ ಚಿತ್ರಣವನ್ನೇ ಬದಲು ಮಾಡುತ್ತಿದೆ. ಇಂಥ ಕುಖ್ಯಾತಿಗೆ ಇತಿಶ್ರೀ ಹೇಳುವುದಕ್ಕಾಗಿ “ಫಲಿತಾಂಶ ಏನೇ ಆದರೂ ಪಕ್ಷ ಬಿಡುವುದಿಲ್ಲʼʼ ಎಂಬ ಪ್ರಮಾಣ ಪತ್ರಕ್ಕೆ ಅಭ್ಯರ್ಥಿಗಳಿಂದ ಸಹಿ ಹಾಕಿಸಿಕೊಳ್ಳಲು ನಿರ್ಧರಿಸಿದೆ. ಆ ಮೂಲಕ ಪಕ್ಷಾಂತರಕ್ಕೆ ಕಡಿವಾಣ ಹಾಕುವ ಲೆಕ್ಕಾಚಾರ ಆಪ್ ಹೊಂದಿದೆ.
ತಮ್ಮ ವಿಶಿಷ್ಟ ರಾಜಕೀಯ “ಸ್ಟ್ರೋಕ್ʼʼ ಮೂಲಕ ಆಗಾಗ ಎದುರಾಳಿಗಳನ್ನು ದಂಗುಬಿಡಿಸುವ ಕೇಜ್ರೀವಾಲಾ ನೇತೃತ್ವದ ಆಪ್ ನ ಈ ನಡೆ ಗೋವಾದಲ್ಲಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಗೋವಾದ 40 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಸ್ಪರ್ಧೆ ನಡೆಸುವುದಕ್ಕೆ ಆಪ್ ನಿರ್ಧರಿಸಿದೆ. ಸಣ್ಣ ರಾಜ್ಯವಾದರೂ ಪಕ್ಷಾಂತರದ ಕಾರಣಕ್ಕಾಗಿ ಗೋವಾ ದೊಡ್ಡ ಸುದ್ದಿ ಮಾಡುತ್ತದೆ. ಹೀಗಾಗಿ ನಾವು ಈ ಪ್ರಮಾಣ ಪತ್ರಕ್ಕೆ ಸಹಿ ಮಾಡಿಸಿಕೊಳ್ಳುತ್ತಿದ್ದೇವೆ ಎಂದು ಗೋವಾ ಆಮ್ ಆದ್ಮಿ ಮುಖಂಡ ಅಮಿತ್ ಪಾಲೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.