
ಕೋಲಾರದಿಂದ ಸ್ಪರ್ಧೆ ನನಗೆ ತಿಳಿದಿಲ್ಲ; ಹೈಕಮಾಂಡ್ ತೀರ್ಮಾನಿಸಲಿದೆ: ಸಿದ್ದರಾಮಯ್ಯ
ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ
Team Udayavani, Nov 14, 2022, 5:09 PM IST

ಮಂಡ್ಯ: ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲಿನ ಬೆಂಬಲಿಗರು ನನ್ನನ್ನು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದೇ ಅಲ್ಲದೇ ರಾಜ್ಯದ ಅನೇಕ ಕ್ಷೇತ್ರಗಳಿಂದಲೂ ನನ್ನ ಬೆಂಬಲಿಗರೂ ಒತ್ತಾಯ ಮಾಡುತ್ತಿದ್ದಾರೆ. ಹೈಕಮಾಂಡ್ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಸೂಚನೆ ನೀಡುತ್ತದೆಯೋ ಅಲ್ಲಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿದ್ದ ರೈತರ ಧರಣಿಗೆ ಬೆಂಬಲ ವ್ಯಕ್ತಪಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ವರ್ಗದ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ತೀರ್ಪು ನೀಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣದಲ್ಲಿ ಕಾಂಗ್ರೆಸ್ ಪಕ್ಷ ಈ ತೀರ್ಪನ್ನು ಸ್ವಾಗತಿಸಿತ್ತು. ಆದರೆ ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಪುನರ್ ಪರಿಶೀಲನೆ ನಡೆಸಲಿದೆ ಎಂದರು.
ಕೇವಲ ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಆರ್ಥಿಕವಾಗಿ ದುರ್ಬಲರಾದವರು ಕೇವಲ ಮೇಲ್ಜಾತಿಗಳಲ್ಲಿ ಮಾತ್ರ ಇಲ್ಲ. ಈ ಬಗ್ಗೆ ಈಗಾಗಲೇ ತಮಿಳುನಾಡು ಸರ್ಕಾರ ಶೇ.10 ರಷ್ಟು ಮೀಸಲಾತಿಯನ್ನು ರಾಜ್ಯದಲ್ಲಿ ತಿರಸ್ಕರಿಸುವುದಾಗಿ ಹೇಳಿದೆ. ಆದ್ದರಿಂದ ಐಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
