ಆ್ಯನಿಮೇಶನ್‌ ಭವಿಷ್ಯದ ಭರವಸೆ

Team Udayavani, Jun 25, 2019, 5:00 AM IST

ಸಾಂದರ್ಭಿಕ ಚಿತ್ರ

ಪಿಯುಸಿ ಶಿಕ್ಷಣ ಮುಗಿಯುತ್ತಿದ್ದಂತೆಯೇ ಮುಂದೇನು ಎಂಬ ಆತಂಕ, ಗೊಂದಲ ಸಹಜವಾಗಿಯೇ ಇರುತ್ತದೆ. ಹೆತ್ತವರು- ವಿದ್ಯಾರ್ಥಿಗಳು ಸಂಸ್ಥೆಗಳಿಂದ ಸಂಸ್ಥೆಗಳಿಗೆ ಅಲೆದಾಡಿ, ಅವರಿವರೊಂದಿಗೆ ಮಾಹಿತಿ ಕಲೆ ಹಾಕಿ, ಕೊನೆಗೆ ಯಾವುದೇ ಕೋರ್ಸ್‌ ಅನ್ನು ಸರಿಯಾಗಿ ಆರಿಸಿಕೊಳ್ಳಲಾಗದೆ, ಸಾಂಪ್ರದಾಯಿಕ ಕೋರ್ಸ್‌ಗಳಿಗಷ್ಟೇ ಮನ್ನಣೆ ನೀಡಬೇಕಾದ ಕಾಲಘಟ್ಟ ಈಗಿಲ್ಲ. ಏಕೆಂದರೆ, ಜಗತ್ತು ವಿಶಾಲವಾಗುತ್ತಿದ್ದಂತೆ ಆಯ್ಕೆಗೆ ಅವಕಾಶಗಳೂ ವಿಫುಲವಾಗಿವೆ. ಅದಕ್ಕೆ ತಕ್ಕಂತೆ ಹೊಸ ಹೊಸ ಕೋರ್ಸ್‌ಗಳು ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಲಗ್ಗೆ ಇಡತೊಡಗಿವೆ.

ಪಿಯುಸಿ ಅನಂತರ ಮುಂದಿನ ಹಂತದ ಆಯ್ಕೆಯ ಕೋರ್ಸ್‌ ವ್ಯಕ್ತಿಯ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಆ ಕೋರ್ಸ್‌ ಆಯ್ಕೆಗೆ ಸಾಕಷ್ಟು ತಯಾರಿ, ಮುಂದಾಲೋಚನೆ ಇರಬೇಕಾಗುತ್ತದೆ. ಯೋಚಿಸಿ- ಯೋಜಿಸಿ ಹೆಜ್ಜೆ ಇಡಬೇಕಾದ ಸವಾಲಿನ ಕಾಲಘಟ್ಟವೂ ಇದಾಗಿದೆ.

ಆ್ಯನಿಮೇಶನ್‌ನಲ್ಲಿ ಭವಿಷ್ಯಈಗಾಗಲೇ ಪಿಯುಸಿ ಮುಗಿದಿದ್ದರೂ ಮುಂದೇನು ಎಂದು ಯೋಚಿಸುತ್ತಾ ಕಾಲ ಕಳೆಯುತ್ತಿರುವ ವಿದ್ಯಾರ್ಥಿಗಳಿಗೆ ಆ್ಯನಿಮೇಶನ್‌ ಕೋರ್ಸ್‌ನ ವ್ಯಾಪ್ತಿ, ಉದ್ಯೋಗಾವಕಾಶಗಳ ಲಭ್ಯತೆಯ ಬಗ್ಗೆಯೂ ತಿಳಿದುಕೊಳ್ಳಲು ಇದು ಸಕಾಲ. ಏಕೆಂದರೆ, ಭರವಸೆಯ ಕ್ಷೇತ್ರವಾಗಿ ವಿದ್ಯಾರ್ಥಿಗಳನ್ನು ಮುನ್ನಡೆಸುವ ಕೋರ್ಸ್‌ಗಳ ಪೈಕಿ ಆ್ಯನಿಮೇಶ ನ್‌ ಕ್ಷೇತ್ರ ಇತ್ತೀಚಿನ ಕೆಲವು ವರ್ಷಗಳಿಂದ ಮನ್ನಣೆ ಪಡೆದುಕೊಂಡಿದೆ.

ಭಾರತದ ಸಿನೆಮಾ ಕ್ಷೇತ್ರ ಆ್ಯನಿಮೇಶ ನ್‌ ಮೂಲಕ ಹೆಸರುಗಳಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಾಹುಬಲಿ ಚಿತ್ರದಲ್ಲಿ ಪಾತ್ರಗಳಿಗಿಂತ ಹೆಚ್ಚು ಸದ್ದು ಮಾಡಿದ್ದು, ಆ ಚಿತ್ರದಲ್ಲಿ ಬಳಕೆಯಾಗಿರುವ ಆಧುನಿಕ ತಂತ್ರಜ್ಞಾನ. ಇಡೀ ಸಿನೆಮಾ ಕ್ಷೇತ್ರವನ್ನೇ ನಿಬ್ಬೆರಗಾಗಿಸಿದ ಈ ಚಿತ್ರದ ಹಿಂದೆ ಕೆಲಸ ಮಾಡಿದ್ದು ಇದೇ ಆ್ಯನಿಮೇಶ ನ್‌ ಹಾಗೂ ಗ್ರಾಫಿಕ್ಸ್‌ ಕ್ಷೇತ್ರ.

ಚಿತ್ರಕಲೆ ಹಾಗೂ ದೃಶ್ಯ ಮಾಧ್ಯಮದ ಬಗ್ಗೆ ಒಂದಷ್ಟು ಮಾಹಿತಿ ಅನುಭವ ಇದ್ದರೆ ಆ್ಯನಿಮೇಶ ನ್‌ ಕೋರ್ಸ್‌ ಕಲಿಕೆ ಬಹಳ ಸುಲಭ. ಕ್ರಿಯಾತ್ಮಕ ಮತ್ತು ಸೃಜನಶೀಲವಾಗಿ ಯೋಚಿಸುವ ಕಲೆ ಈ ಕ್ಷೇತ್ರದ ಪರಿಣತಿಯಾಗಿರುತ್ತದೆ. ಬಣ್ಣಗಳ ಬಗ್ಗೆ ಆಸಕ್ತಿ, ದೊಡ್ಡ ವಿಚಾರಗಳನ್ನೂ ಸೂಕ್ಷ್ಮವಾಗಿ ಹೇಳುವ ಕಲೆ ನಿಮ್ಮಲ್ಲಿದ್ದರೆ ನೀವೊಬ್ಬ ಆ್ಯನಿಮೇಟರ್‌ ಆಗಿ ಗುರುತಿಸಿಕೊಳ್ಳಲು ತುಂಬ ಸಮಯವೇನೂ ಬೇಕಿಲ್ಲ.

ಪದವಿ ಮಾನ್ಯತೆ
ಆ್ಯನಿಮೇಶನ್‌ ಕ್ಷೇತ್ರ ಈ ಮೊದಲು ತರಬೇತಿ ಪಡೆದುಕೊಂಡರೂ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಗಣಕಯಂತ್ರ, ಮೊಬೈಲ್‌ ಜಗತ್ತು ವೃದ್ಧಿಯಾದಂತೆ ಆ್ಯನಿಮೇಶ ನ್‌ ಕ್ಷೇತ್ರಕ್ಕೂ ಮಾನ್ಯತೆ ಸಿಕ್ಕಿದೆ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಆ್ಯನಿಮೇಶ ನ್‌ ಕೋರ್ಸ್‌ ಕಲಿಕೆಗೆ ಪದವಿ ಮಾನ್ಯತೆ ಸಿಕ್ಕಿರುವುದರಿಂದ ಯಾವುದೇ ಆತಂಕವಿಲ್ಲದೆ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರಕಲೆ ಮತ್ತು ದೃಶ್ಯ ಮಾಧ್ಯಮದೆಡೆಗಿನ ಆಸಕ್ತಿಯೇ ಇದಕ್ಕೆ ಬೇಕಾದ ಮೊದಲ ಅರ್ಹತೆಯೇ ಹೊರತು ಪಿಯುಸಿಯ ಅಂಕದಲ್ಲಿ ಕೋರ್ಸ್‌ ಪ್ರವೇಶಾತಿ ನಿರ್ಧಾರವಾಗುವುದಿಲ್ಲ.

ಮಂಗಳೂರಿನಲ್ಲಿ ಆ್ಯನಿಮೇಶನ್‌
ಆ್ಯನಿಮೇಷನ್‌ ಕಲಿಕೆಗೆ ಮಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ. ಅರೇನಾ ಮಲ್ಟಿ ಮೀಡಿಯಾ, ದ ವಿನ್ಸಿ ಇಂಟರ್‌ನ್ಯಾಶನಲ್‌ ಇನ್‌ಸ್ಟಿಟ್ಯೂಶನ್‌ ಆಫ್‌ ಡಿಸೈನ್‌, ಝೀ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಯೇಟಿವ್‌ ಆರ್ಟ್‌, ಮಾಯಾ ಅಕಾಡೆಮಿ ಆಫ್‌ ಎಡ್ವಾನ್ಸ್‌ಡ್‌ ಸಿನೆಮಾಟಿಕ್ಸ್‌, ಆ್ಯಂಬಿಟ್‌ ಆ್ಯನಿಮೇಶನ್ಸ್‌, ವೆಕ್ಟರ್‌ ಆ್ಯನಿಮೇಶನ್‌ ಅಕಾಡೆಮಿ ಸೇರಿದಂತೆ ಹಲವಾರು ಆ್ಯನಿಮೇಶನ್‌ ಕೋರ್ಸ್‌ ಕಲಿಕಾ ಸಂಸ್ಥೆಗಳು ಮಂಗಳೂರಿನಲ್ಲಿವೆ. ಗೂಗಲ್‌ನಲ್ಲಿ ಸರ್ಚ್‌ ನೀಡಿದರೆ ಮಂಗಳೂರಿನ ಆ್ಯನಿಮೇಶನ್‌ ಕಲಿಕಾ ಸಂಸ್ಥೆಗಳ ಜಗತ್ತೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ಕೋರ್ಸ್‌ಗಳು ಹಲವು
ಆ್ಯನಿಮೇಶನ್‌ನಲ್ಲಿ 1 ಮತ್ತು 2 ವರ್ಷದ ಕೋರ್ಸ್‌ಗಳಿವೆ. 1 ವರ್ಷದ ಕೋರ್ಸ್‌ ನಲ್ಲಿ ಡಿಸೈನಿಂಗ್‌, 2ಡಿ ಆ್ಯನಿಮೇಶನ್‌ ಬಗ್ಗೆ ಕಲಿಯಬಹುದು. 2 ವರ್ಷದ ಕೋರ್ಸ್‌ನಲ್ಲಿ ವಿಶುವಲ್‌ ಎಫೆಕ್ಟ್, ಮೂವೀ ಮೇಕಿಂಗ್‌, 3ಡಿ ಆ್ಯನಿಮೇಶನ್‌ ಮುಂತಾದ ವಿಷಯಗಳನ್ನು ಕಲಿಸಲಾಗುತ್ತದೆ. 2ಡಿ ಆ್ಯನಿಮೇಶನ್‌ ಮತ್ತು 3ಡಿ ಆ್ಯನಿಮೇಶನ್‌ನಲ್ಲಿ ಪ್ರಸ್ತುತ ಅವಕಾಶಗಳು ಜಾಸ್ತಿ ಇವೆ. ಆ್ಯನಿಮೇಶನ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ.

ಇಲ್ಲಿದೆ ಉದ್ಯೋಗ ಆವಕಾಶ
ಮಾಧ್ಯಮ, ಸಿನೆಮಾ, ಜಾಹೀರಾತು ಕ್ಷೇತ್ರ, ಕಾರ್ಪೊರೇಟ್‌ ಕಂಪೆನಿಗಳಲ್ಲಿ ಆ್ಯನಿಮೇಶನ್‌ ಕೋರ್ಸ್‌ ಕಲಿತವರಿಗೆ ಬೇಡಿಕೆ ಇರುವುದರಿಂದ ಜೀವನದಲ್ಲಿ ಗೆಲುವು ಸಾಧಿಸಲು ಆ್ಯನಿಮೇಶನ್‌ ಕ್ಷೇತ್ರ ಅತ್ಯುತ್ತಮ ಆಯ್ಕೆ. ವಿದೇಶಿ ಕಂಪೆನಿಗಳಿಂದಲೂ ಭಾರತದ ಆ್ಯನಿಮೇಟರ್‌ಗಳಿಗೆ ಬೇಡಿಕೆ ಇರುವುದ ರಿಂದ ಕೈತುಂಬಾ ಸಂಬಳ ಗಳಿಸಲು ಈ ಕೋರ್ಸ್‌ ಆಯ್ಕೆಗೆ ಪ್ರಾಧಾನ್ಯ ನೀಡಬಹುದು.

– ಧನ್ಯಾ ಬಾಳೆಕಜೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ