ಕೃತಕ ಬುದ್ಧಿಮತ್ತೆ: ಅವಕಾಶ ಹಲವು

Team Udayavani, Oct 30, 2019, 5:00 AM IST

ಯಂತ್ರವು ತನ್ನ ಸ್ವಂತ ಗುಣವನ್ನು ಉಪಯೋಗಿಸಿ, ಯೋಚನೆ ಜತೆಗೆ ತಾನೇ ಎಲ್ಲ ಕಾರ್ಯವನ್ನು ಮಾಡುವಂತಹುದ್ದು ಕೃತಕ ಬುದ್ದಿವಂತಿಕೆಯಾಗಿದೆ. ಸಾಮಾನ್ಯವಾಗಿ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಎಂಬುವುದಾಗಿ ಹೇಳಬಹುದಾಗಿದೆ.

ಕೃತಕ ಬುದ್ಧಿಮತ್ತೆ ಎಂಬ ವಿಷಯವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಬಿಎಸ್‌ಯ ಪಠ್ಯದ ವಿಷಯವಾಗಿ ಅಳವಡಿಸಲು ಚರ್ಚೆ ನಡೆದಿದೆ. ವಿದ್ಯಾರ್ಥಿಗಳಲ್ಲಿ ಮಾಮೂಲಿ ಪಠ್ಯದ ವಿಷಯ ಗಳ ಹೊರತಾಗಿ ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಪಾಠದಲ್ಲಿ ಅಳವಡಿಸಲು ಚಿಂತಿಸಿದೆ. ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೆ ಇದು ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಕೃತಕ ಬುದ್ಧಿಮತ್ತೆಗೆ ಅತೀ ಹೆಚ್ಚು ಪ್ರಾಶಸ್ತವಿದೆ. ಅಲ್ಲದೇ, ಈಗಾಗಲೇ ಸಂಶೋಧಕರು ಕೃತಕ ಬುದ್ಧಿಮತ್ತೆ ಯನ್ನು ನಾಲ್ಕನೇ ಕೈಗಾರಿಕೆ ಕ್ರಾಂತಿ ಎಂಬುವುದಾಗಿ ಬಣ್ಣಿಸಿದ್ದಾರೆ. ಅಂಕಿಅಂಶದ ಪ್ರಕಾರ 78,000 ಮಂದಿ ಮತ್ತು ಚೀನದಲ್ಲಿ ಸುಮಾರು 40,000 ಮಂದಿ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಚೀನದ ಈಗ ಒಂದು ಹೆಜ್ಜೆ ಮುಂದೆಹೋಗಿ 2030ರಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೇರಲು ಪೈಪೋಟಿ ನಡೆಸುತ್ತಿದೆ.

ವಿವಿಧ ಉದ್ಯೋಗಾವಕಾಶಗಳು
ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಸಂಸ್ಥೆಗಳು ಕೃತಕ ಬುದ್ಧಿಮತ್ತೆ ವಿಷ ಯ ದಲ್ಲಿ ಪದವಿಯನ್ನು ಪರಿಚಯಿಸಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಷೇತ್ರದಲ್ಲಿ ಹೈದರಾಬಾದ್‌ ವಿ.ವಿ., ಐಐಟಿ ಮುಂಬಯಿ, ಐಐಟಿ ಮದ್ರಾಸ್‌, ಐಐಎಸ್‌ಐ ಬೆಂಗಳೂರು, ಐಎಸ್‌ಐ ಕೊಲ್ಕತ್ತಾ ಸಹಿತ ಇನ್ನಿತರ ವಿವಿಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣವಿದೆ. ಒಂದು ವೇಳೆ ಈ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಸಾಧ್ಯವಾಗದಿದ್ದರೆ ಆನ್‌ಲೈನ್‌ ಕೋರ್ಸ್‌ ಮಾಡಿ ಪ್ರಮಾಣಪತ್ರ ಪಡೆಯಬಹುದಾಗಿದೆ. ಕೃತಕ ಬುದ್ಧಿಮತ್ತೆ ವಿಷಯವನ್ನು ಕಲಿತರೆ ಮಷಿನ್‌ ಲರ್ನಿಂಗ್‌ ರಿಸರ್ಚರ್‌, ಎಐ ಎಂಜಿನಿಯರ್‌, ಡೇಟಾ ಮೈನಿಂಗ್‌, ಅನಾಲಿಸಿಸ್‌, ಮಷಿನ್‌ ಲರ್ನಿಂಗ್‌ ಎಂಜಿನಿಯರ್‌, ಡೇಟಾ ಸೈಂಟಿಸ್ಟ್‌, ಬ್ಯುಸಿನೆಸ್‌ ಇಂಟಲಿಜೆನ್ಸ್‌ ಡೆವಲಫರ್ ಸಹಿತ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದು.

ಸಮಸ್ಯೆಗಳಿಗೆ ಪರಿಹಾರ
ಗೂಗಲ್‌ ಸಂಸ್ಥೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ಲ್ಯಾಬ್‌) ಸ್ಥಾಪನೆ ಮಾಡಲು ಮುಂದಾಗಿದೆ. ದೇಶದಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ, ಆರೋಗ್ಯ, ಕೃಷಿ, ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಈ ಸಂಸ್ಥೆ ನೆರವಾಗಲಿದೆ.

ಮುಂದುವರಿದ ತಂತ್ರಜ್ಞಾನ
ಆಟೋಮೊಬೈಲ್‌ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆಯು ಕೆಲಸ ಮಾಡುತ್ತಿದೆ. ಇನ್ನು ಕೆಲವು ವರ್ಷಗಳಲ್ಲೇ ಚಾಲಕ ರಹಿತ ಕಾರು ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಬಹಳಷ್ಟು ಕಂಪೆನಿಗಳು ಈ ನಿಟ್ಟಿನಲ್ಲಿ ಪ್ರಯೋಗವನ್ನು ನಡೆಸುತ್ತಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಎಲ್ಲ ಮಾಹಿತಿಗಳನ್ನು ಅರಿತ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಈ ಕಾರು ಹೊಂದಿರಲಿದೆ. 2025ರೊಳಗೆ ಚಾಲಕ ರಹಿತ ಕಾರು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರೆನೋ ಮತ್ತು ನಿಸಾನ್‌ ಕಂಪೆನಿಗಳು ಮೈಕ್ರೋಸಾಫ್ಟ್ ಜತೆಗೂಡಿ ಕೆಲಸ ಮಾಡುತ್ತಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸುವ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಕೃತಕ ಬುದ್ಧಿಮತ್ತೆ ಮುಖೇನ ಯಂತ್ರಗಳು ತಾವೇ ಸ್ವತಃ ನಿರ್ಣಯ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಮಾನವನನ್ನು ನಿರ್ನಾಮ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಈಗಾಗಲೇ ಚರ್ಚೆ ಕೂಡ ಆರಂಭವಾಗಿದೆ. ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಎಂಬುವವರು ಹೇಳುವ ಪ್ರಕಾರ
ಮನುಕುಲದ ಅಂತ್ಯಕ್ಕೆ ಕೃತಕ ಬುದ್ಧಿಮತ್ತೆ ಕಾರಣವಾಗುತ್ತದೆ. ಇದು ಮನುಕುಲವನ್ನು ಕೊನೆಗೊಳಿಸಬಹುದು ಎಂದು ವಿಚಾರವನ್ನು ಮುಂದಿಟ್ಟಿದ್ದಾರೆ.

ಶೀಘ್ರ ಉತ್ತರ
ವಿಶ್ವದ ಮೊದಲ ಕೃತಕ ಬುದ್ಧಿ ಮತ್ತೆ ರಾಜಕಾರಣಿಯೊಬ್ಬನನ್ನು ನ್ಯೂಜಿಲೆಂಡ್‌ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ರಾಜಕಾರಣಿಗಳ ಬಳಿ ಸ್ಥಳೀಯ ಸಮಸ್ಯೆಗಳ ಬಗ್ಗೆ ದೂರು ನೀಡಲು ಬರುವಾಗ ಅವರು ಕೈಗೆ ಸಿಗದೇ ಇರಬಹುದು. ಈ ಕೃತಕ ಬುದ್ಧಿ ಮತ್ತು ರಾಜಕಾರಣಿ ಸ್ಥಳೀಯ ವಿಚಾರಗಳು, ವಸತಿ, ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಇದನ್ನು ನ್ಯೂಜಿಲೆಂಡ್‌ ಉದ್ಯಮಿ ನಿಕ್‌ ಗಾರಿಟ್‌ಸೆನ್‌ ಸೃಷ್ಟಿಸಿದ್ದು, ಸ್ಯಾಮ್‌ ಎಂದು ಹೆಸರಿಟ್ಟಿದ್ದಾನೆ.

 ನವೀನ್‌ ಭಟ್‌, ಇಳಂತಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ