ಡಿಸೈನಿಂಗ್‌ ಕೋರ್ಸ್‌ ಆಸಕ್ತಿಯೇ ಅರ್ಹತೆ

Team Udayavani, Apr 24, 2019, 5:50 AM IST

ಇಂದು ಉದ್ಯೋಗದ ಮಾದರಿ ಎಲ್ಲಾ ರೀತಿಯಿಂದಲೂ ಬದಲಾವಣೆಗೊಂಡಿದೆ. ಕೇವಲ ಔಪಚಾರಿಕ ಶಿಕ್ಷಣ ಪಡೆದರೆ ಮಾತ್ರ ಕೈತುಂಬಾ ಸಂಬಳ ಪಡೆಯಬಹುದು ಎಂಬ ಮಾತಿತ್ತು. ಅದಕ್ಕೆ ಅಪವಾದವೆಂಬತೆ ಹಲವಾರು ವೃತ್ತಿ ಕೌಶಲ ಉದ್ಯೋಗಗಳು ಬೆಳದು ನಿಂತಿವೆ. ಅದರಲ್ಲಿ ಒಂದಾದ ಡಿಸೈನಿಂಗ್‌ ಕ್ಷೇತ್ರವೂ ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ಉದ್ಯೋಗ ನೀಡುತ್ತಿದೆ. ಡಿಸೈನಿಂಗ್‌ ಕ್ಷೇತ್ರದಲ್ಲಿ ಆಸಕ್ತಿಯೊಂದು ಇದ್ದರೆ ಸಾಕು ಯಶಸ್ವಿಯಾಗಬಹುದು ಎಂಬುದು ಈ ಲೇಖನ ತಿರುಳು.

ಕಲಿಕೆಯ ಆಸಕ್ತಿಯಿದ್ದರಾಯಿತು; ಕಲಿಕಾ ಜಗತ್ತು ವಿಶಾಲವಾಗಿದೆ ಎಂಬ ಯುಗದಲ್ಲಿ ನಾವಿದ್ದೇವೆ. ಡಿಗ್ರಿ, ಸ್ನಾತಕೋತ್ತರ ಪದವಿ ಪಡೆದುಕೊಂಡೋ, ವಿಜ್ಞಾನ ಅಧ್ಯಯನ ಮಾಡಿದರೆ ಮಾತ್ರ ಜೀವನ ಸುಸೂತ್ರವಾಗಿ ಸಾಗುತ್ತದೆ ಎಂದಂದುಕೊಂಡರೆ ಖಂಡಿತ ಊಹೆ ತಪ್ಪಾಗುತ್ತದೆ. ಏಕೆಂದರೆ, ಈ ಆಧುನಿಕ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಕೋರ್ಸ್‌ ಗಳಿಗಷ್ಟೇ ಶಿಕ್ಷಣ ಸೀಮಿತವಾಗಿಲ್ಲ. ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಸೂಪ್ತ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯು ಬಾಹ್ಯಾಕಾಶಕ್ಕೆ ಉಪಗ್ರಹ ಉಡ್ಡಯನ ಮಾಡುವಂತದ್ದು ಆಗಬೇಕೆಂದೇನಿಲ್ಲ. ಮನೆಯಲ್ಲೇ ಕುಳಿತು ಜುವೆಲ್ಲರಿ ತಯಾರಿಸುವುದೂ ಆಗಿರಬಹುದು. ಯಾವುದೇ ಕೆಲಸಗಳು ಹೆಚ್ಚು-ಕಡಿಮೆ ಎಂದು ಭಾವಿಸದೇ, ಆಸಕ್ತಿಯ ಕ್ಷೇತ್ರದಲ್ಲಿ ಒಂದಷ್ಟು ಶ್ರಮ ಹಾಕಿದರೆ, ಮುಂದೆ ಅದೇ ಕ್ಷೇತ್ರದಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆಯಬಹುದು; ನೂರಾರು ಮಂದಿಗೆ ಉದ್ಯೋಗದಾತರಾಗಬಹುದು ಅಥವಾ ಆ ಕ್ಷೇತ್ರದಲ್ಲಿ ಇನ್ನೊಬ್ಬರ ಬದುಕು ಅರಳಿಸುವ ಶಿಕ್ಷಕನೂ ಆಗಬಹುದು. ಅದಕ್ಕೆ ತಕ್ಕಂತೆ ಬೆಳೆಯುತ್ತಿರುವ ಕ್ಷೇತ್ರವೆಂದರೆ ಡಿಸೈನಿಂಗ್‌ ಕ್ಷೇತ್ರ.

ಮನುಷ್ಯರಲ್ಲಿ ಫ್ಯಾಶನ್‌ ಜಾಗೃತಿ ವಿಸ್ತಾರವಾದಂತೆ ಚೆನ್ನಾಗಿ ಕಾಣಬೇಕೆಂಬ ಹಂಬಲವೂ ಹೆಚ್ಚಾಗತೊಡಗಿದೆ. ಅದು ಕೇವಲ ತಾವಷ್ಟೇ ಚೆಂದವಾದರೆ ಸಾಲದು, ಕನಸಿನರಮನೆಯೂ ಅಂದವಾಗಿರಬೇಕೆಂಬುದು ಜಾಗೃತ ಪ್ರಜ್ಞೆ. ಮನುಷ್ಯನ ಈ ದೊಡ್ಡ ದೊಡ್ಡ ಆಸೆಗಳನ್ನು ಪೂರೈಸಬೇಕಾದರೆ ಪರಿಣತಿ ಸಾಧಿಸಿದ ಕೆಲಸಗಾರರೂ ಅಷ್ಟೇ ಮುಖ್ಯ. ಆದರೆ, ಅನುಭವದೊಂದಿಗೆ ಶಿಕ್ಷಣವೂ ಸೇರ್ಪಡೆಗೊಂಡರೆ ಹೆಚ್ಚು ಸಾಧನೆ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿಯೇ ಇಂಟೀರಿಯರ್‌ ಡಿಸೈನ್‌ ಕೋರ್ಸ್‌ ಮಹತ್ವ ಪಡೆದುಕೊಳ್ಳುತ್ತಿದೆ.

ಮನೆಯ ಕುರಿತು ಇರುವ ಕಲ್ಪನೆಗಳು ಬೆಳೆಯುತ್ತಿದ್ದಂತೆ ಮತ್ತು ಡಿಜಿಟಲೀಕರಣ ವ್ಯವಸ್ಥೆಗೆ ತೆರೆದುಕೊಂಡಂತೆ ಆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದವರಿಗೂ ಉನ್ನತ ಅವಕಾಶಗಳು ಲಭ್ಯವಾಗುತ್ತಿವೆ. ಅದಕ್ಕೆ ತಕ್ಕಂತೆ ಡಿಸೈನಿಂಗ್‌ ಕೋರ್ಸ್‌ಗಳು ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿವೆ. ಸಾಮಾನ್ಯವಾಗಿ ಅಲ್ಪಾವಧಿಯ ಕೋರ್ಸ್‌ಗಳಾಗಿರುವ ಡಿಸೈನಿಂಗ್‌ ಕೋರ್ಸ್‌ಗಳು ಪರಿಪೂರ್ಣ ಸ್ವಯಂ ಉದ್ಯೋಗ ನಡೆಸಲು ನೆರವಾಗುವುದು ನಿಚ್ಚಳ.

ಮನೆ, ಕಚೇರಿ ಚೆನ್ನಾಗಿರಬೇಕು; ಅತ್ಯುತ್ತಮ ಮಾದರಿಯ ವಿನ್ಯಾಸಗಳನ್ನು ಹೊಂದಿರಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿದೆ. ಈ ಆಧುನಿಕ ಯುಗದಲ್ಲಿ ಜನ ಉಡುಗೆ-ತೊಡುಗೆಗಳ ಬಗ್ಗೆ ಎಷ್ಟು ಫ್ಯಾಶನೆಬಲ್‌ ಆಗಿರುತ್ತಾರೋ, ತಮ್ಮ ಮನೆಯ ವಿಚಾರದಲ್ಲಿಯೂ ಅಷ್ಟೇ ಫ್ಯಾಶನೆಬಲ್‌ ಆಗಿರುತ್ತಾರೆ. ಅದಕ್ಕಾಗಿ ಒಳಾಂಗಣ ವಿನ್ಯಾಸಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಲಾಗುತ್ತದೆ. ಈಗಿನ ಜಮಾನದ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಇಂಟೀರಿಯರ್‌ ಡಿಸೈನಿಂಗ್‌ ಅಥವಾ ಒಳಾಂಗಣ ವಿನ್ಯಾಸಕ್ಕೆಂದೇ ಶಿಕ್ಷಣ ಪ್ರಚಲಿತದಲ್ಲಿದೆ. ಒಳಾಂಗಣ ವಿನ್ಯಾಸ, ಕನ್‌ಸ್ಟ್ರಕ್ಷನ್‌ ಆರ್ಟ್‌, ಗ್ರಾಫಿಕ್ಸ್‌ ವಿಷಯಗಳಲ್ಲಿ ಆಸಕ್ತಿ ಇದ್ದರೆ ದ್ವಿತೀಯ ಪಿಯುಸಿ ಬಳಿಕ ಈ ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಮಂಗಳೂರಿನ ಶ್ರೀದೇವಿ ಕಾಲೇಜು, ಕರಾವಳಿ ಕಾಲೇಜು, ಡ್ರೀಮ್‌ ಝೋನ್‌ ಸಹಿತ ಶಿಕ್ಷಣ ಸಂಸ್ಥೆಗಳಲ್ಲದೆ, ಇತರ ಕೆಲವು ಖಾಸಗಿ ಸಂಸ್ಥೆಗಳೂ ಇಂಟೀರಿಯರ್‌ ಡಿಸೈನ್‌ ಶಿಕ್ಷಣ ನೀಡುತ್ತಿವೆ.

ಡಿಸೈನಿಂಗ್‌ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಇನ್ನೊಂದು ಬಹು ಮುಖ್ಯ ರಂಗವೆಂದರೆ, ಗೇಮ್‌ ಡಿಸೈನಿಂಗ್‌ ಮಲ್ಟಿಮೀಡಿಯಾ, ವೆಬ್‌ ಡೆವಲಪ್‌ಮೆಂಟ್‌ ಮುಂತಾದವು. ದ ವಿನ್ಸಿ ಇಂಟರ್‌ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌, ಸಹಿತ ಕೆಲವು ಖಾಸಗಿ ಸಂಸ್ಥೆ, ಕಾಲೇಜುಗಳಲ್ಲಿ ಈ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.

ಸ್ವಯಂ ಉದ್ಯೋಗ ತರಬೇತಿ
ಕಾಲೇಜು ಹಂತದಲ್ಲಿಯೇ ಕರಕುಶಲ ತರಬೇತಿಗಳೂ ನಡೆಯುತ್ತಿರುತ್ತವೆ. ವಿದ್ಯಾಭ್ಯಾಸದ ಬಳಿಕ ಕೇವಲ ಉದ್ಯೋಗವನ್ನು ನೆಚ್ಚಿಕೊಂಡಿರದೆ, ವಿದ್ಯಾರ್ಥಿಗಳು ಸ್ವಯಂಸ್ಫೂರ್ತಿಯಿಂದ ಸ್ವಯಂ ಉದ್ಯೋಗವನ್ನು ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಇಂತಹ ತರಬೇತಿ ಕಾಲೇಜುಗಳಲ್ಲಿ ನಡೆಯುತ್ತವೆ. ಇದನ್ನು ಅಲ್ಪಾವಧಿ ಕೋರ್ಸ್‌ ಮಾದರಿಯಲ್ಲಿ ಉಚಿತವಾಗಿಯೇ ವಿದ್ಯಾರ್ಥಿಗಳಿಗೆ ನೀಡುವುದನ್ನು ಗಮನಿಸಬಹುದು. ಉಡುಪು ತಯಾರಿಕೆ, ಆಭರಣ ತಯಾರಿಕೆ, ವಿವಿಧ ಉತ್ಪನ್ನಗಳ ತಯಾರಿಕೆಗಳಿಗೂ ತರಬೇತಿಗಳನ್ನು ನೀಡುವುದು ನಡೆಯುತ್ತಲೇ ಇರುತ್ತದೆ. ಕಾಲೇಜುಗಳಲ್ಲದೆ, ಹೊರಗಿನ ಸಂಘ-ಸಂಸ್ಥೆಗಳೂ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸುತ್ತಿವೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಹಿತ ಹೊರಗಿನವರಿಗೂ ಅಲ್ಪಾವಧಿ ತರಬೇತಿಗಳನ್ನು ನೀಡಲಾಗುತ್ತದೆ. ಇದರಲ್ಲಿ ಟೈಲರಿಂಗ್‌ ಮತ್ತು ಗಾರ್ಮೆಂಟ್‌ ಮೇಕಿಂಗ್‌, ಫ್ಯಾಶನ್‌ ಡಿಸೈನಿಂಗ್‌, ಕ್ರಾಫ್ಟ್‌ ಮೇಕಿಂಗ್‌ ಕೋರ್ಸ್‌ಗಳು, ಮೆಶಿನ್‌ ಎಂಬ್ರಾಯxರಿಗಳನ್ನು ಕಲಿಸಲಾಗುತ್ತದೆ.

ಆಸಕ್ತಿ ಬೇಕು
ಪಿಯುಸಿ ಶಿಕ್ಷಣ ಪೂರೈಸಿದ ಬಳಿಕ ಇಂಟೀರಿಯರ್‌ ಡಿಸೈನಿಂಗ್‌, ಗೇಮ್‌ ಡಿಸೈನಿಂಗ್‌ ಕ್ಷೇತ್ರವನ್ನು ಆಯ್ದುಕೊಳ್ಳಲು ಅವಕಾಶಗಳಿವೆ. ಗಾರ್ಮೆಂಟ್‌ ಮೇಕಿಂಗ್‌, ಆಭರಣ ತಯಾರಿಕೆಯಂತಹ ಕೋರ್ಸ್‌ ಅಲ್ಪಾವಧಿ ಕೋರ್ಸ್‌ ಗಳಾಗಿದ್ದು, ಸಂಸ್ಥೆಗಳಲ್ಲೇ ಪಾಠಗಳ ಮಧ್ಯೆ ಕಲಿಸುವುದರಿಂದ ಇದಕ್ಕೆ ಪ್ರತ್ಯೇಕ ಅರ್ಹತೆ ಬೇಕಿಲ್ಲ. ಏಕೆಂದರೆ, ಆಸಕ್ತಿಯೇ ಅರ್ಹತೆಯಾಗಿರುತ್ತದೆ.

ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿದೇಶದಲ್ಲಿ ಕಲಿಯಬೇಕು ಎಂಬ ಆಸೆ ಅನೇಕ ಮಂದಿಯಲ್ಲಿ ಇರುತ್ತದೆ. ಅದರಲ್ಲಿಯೂ ಉನ್ನತ ವಿದ್ಯಾಭ್ಯಾಸವನ್ನು ವಿದೇಶಗಳ ಪ್ರತಿಷ್ಠಿತ ಕಾಲೇಜುಗಳಾದ ಹಾರ್ವರ್ಡ್‌,...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ, ಶಿಕ್ಷಣವನ್ನು ಅಳೆಯುವ ಕಾಲ ಹೋಗಿದೆ. ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ನಿರ್ಧರಿಸುವುದು...

  • ಬದುಕಿನಲ್ಲಿ ಸೋಲು-ಗೆಲುವು, ನೋವು-ನಲಿವು ಇವುಗಳು ಇದ್ದೇ ಇರುತ್ತವೆ. ಅಂತೆಯೇ ಜೀವನಕ್ಕೊಂದು ಅರ್ಥ ಬರಬೇಕಾದರೆ ಇವುಗಳ ಮಧ್ಯೆಯೇ ನಾವು ಜೀವಿಸುವುದು ಹೇಗೆ ಎಂಬ...

  • ಸಂತೋಷವಾಗಿರುವುದಕ್ಕೆ ನಾವು ಹುಟ್ಟಿದವರು ಮತ್ತು ಅದು ಪ್ರತಿಯೊಬ್ಬರ ಹಕ್ಕು ಎನ್ನುವ "ಸಂತೋಷವಾಗಿ ಇದ್ದುಬಿಡಿ' ಸಂತೋಷವಾಗಿ ಯಾಕಿರಬೇಕು ಮತ್ತು ಸಂತೊಷವಾಗಿರಲು...

ಹೊಸ ಸೇರ್ಪಡೆ