ಫೂರೆನ್ಸಿಕ್‌ ಸೈನ್ಸ್‌ ಅವಕಾಶಗಳ ಆಗರ

Team Udayavani, Nov 6, 2019, 4:58 AM IST

ಶೈಕ್ಷಣಿಕವಾಗಿ ಮತ್ತು ಜೌದ್ಯೋಗಿಕವಾಗಿ ಫೊರೆನ್ಸಿಕ್‌ ಸೈನ್ಸ್‌ ಕೋರ್ಸ್‌ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳಬಹುದಾಗಿದೆ. ಈ ಕೋರ್ಸ್‌ ಅಧ್ಯಯನದ ಪ್ರಾಮುಖ್ಯ, ಉದ್ಯೋಗಾವಕಾಶಗಳ ಸಹಿತ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಕಾನೂನಾತ್ಮಕ, ವೈದ್ಯಕೀಯವಾಗಿ ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿರುವ ಫೂರೆನ್ಸಿಕ್‌ ಸೈನ್ಸ್‌ ಅಂದರೆ ವಿಧಿವಿಜ್ಞಾನ ವಿಭಾಗಕ್ಕೆ ಸದ್ಯ ಅವಕಾಶಗಳು ಹೆಚ್ಚಾಗುತ್ತಿವೆ. ಫೂರೆನ್ಸಿಕ್‌ ಸೈನ್ಸ್‌ ತಜ್ಞರು ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಬಂಧಿತ ಸಮಸ್ಯೆಗಳ ಪರಿಹಾರ ಕಂಡುಹಿಡಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಅವರ ವರದಿಯ ಆಧಾರದ ಮೇಲೆ ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬಲ್ಲದು.

ವಿಧಿವಿಜ್ಞಾನ ತಜ್ಞರು ಕಾನೂನಾತ್ಮಕವಾಗಿ ಇರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಹಾಗೂ ಪಾರದರ್ಶಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಕೊಲೆ ಅಥವಾ ಇನ್ನಿತರ ಸಾವಿಗೆ ಸಂಬಂಧಿಸಿ ಗೊಂದಲ ಅಥವಾ ಸಂಶಯಗಳಿದ್ದರೆ ಆ ಬಗ್ಗೆ ಸಂಪೂರ್ಣ ಚಿತ್ರಣ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ವ್ಯಕ್ತಿಯ ಆರೋಗ್ಯದ ಬಗ್ಗೆ ಕಾನೂನಾತ್ಮಕವಾಗಿ ವರದಿಯನ್ನು ನೀಡುವ ಅಧಿಕಾರ ಪಡೆದುಕೊಂಡಿರುವ ಇವರು ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ ಕಾನೂನು ವಿಭಾಗದಲ್ಲೂ ನ್ಯಾಯ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ವಿಧಿವಿಜ್ಞಾನ ವಿಭಾಗದ ತಜ್ಞರಿಗೆ ಅವಕಾಶಗಳು
ಫೊರೆನ್ಸಿಕ್‌ ವಿಭಾಗದ ಕೋರ್ಸ್‌ಗಳನ್ನು ಪೂರ್ಣ ಮಾಡಿದ ಅನಂತರ ಅವರಿಗೆ ಸರಕಾರಿ ದೃಢೀಕೃತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ವಿಧಿವಿಜ್ಞಾನ ವಿಭಾಗದಲ್ಲಿ ಲ್ಯಾಬ್‌ ಟೆಕ್ನಿಶಿಯನ್ಸ್‌ ಸಹಿತ ಕೆಲವು ವಿಭಾಗಗಳಿದ್ದು, ಇದರಲ್ಲಿ ಪರೀಕ್ಷೆ ಹಾಗೂ ಸರ್ಟಿಫಿಕೇಟ್‌ಗಳನ್ನು ನೀಡುವ ತಜ್ಞರು ಫೊರೆನ್ಸಿಕ್‌ ಮೆಡಿಸಿನ್‌ನಲ್ಲಿ ಎಂ.ಡಿ. ಮಾಡುವುದು ಕಡ್ಡಾಯವಾಗಿರುತ್ತದೆ. ಅವರು ನೀಡುವ ವರದಿಯ ಆಧಾರದ ಮೇಲೆ ನ್ಯಾಯಾಲಯದ ತೀರ್ಪು ತೀರ್ಮಾನವಾಗುತ್ತದೆ. ಅವರು ವೈದ್ಯಕೀಯ ವರದಿಗಳನ್ನು ನೀಡಬಲ್ಲ ತಜ್ಞರಾಗಿ ಕೆಲಸ ಮಾಡಬಹುದಾಗಿದೆ. ಅಲ್ಲದೆ ಸರಕಾರಿ ಅಥವಾ ಖಾಸಗಿ ಸ್ವಾಮ್ಯದ ಆಸ್ಪತ್ರೆಗಳ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮುಖ್ಯಸ್ಥರಿಗೆ ಕರ್ತವ್ಯ ನಿರ್ವಹಿಸುವ ಅಧಿಕಾರ ಪಡೆಯುತ್ತಾರೆ. ಇದರೊಂದಿಗೆ ಮೆಡಿಕಲ್‌ ಕಾಲೇಜುಗಳ ಫೊರೆನ್ಸಿಕ್‌ ಸೈನ್ಸ್‌ನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬಹುದಾಗಿದೆ. ವಯಸ್ಸು ಧೃಡೀಕರಣ ಪತ್ರ, ದೇಹದ ಭಾಗಗಳು ದೊರೆತಾಗ ಅದರ ವಾರಸುದಾರರನ್ನು ಕಂಡು ಹಿಡಿಯುವ ಕಾನೂನಾತ್ಮಕ ಕೆಲಸಗಳನ್ನು ಮಾಡುವವರಾಗಿ ಕೆಲಸ ಮಾಡಬಹುದಾಗಿದೆ. ಖಾಸಗಿ ಪತ್ತೇದಾರಿ ಸಂಸ್ಥೆ, ಹ್ಯೂಮನ್‌ ರೈಟ್ಸ್‌ ಕಮಿಷನ್‌ಗಳಲ್ಲೂ ವೈದ್ಯಕೀಯ ಸಲಹೆಗಾರರಾಗಿ ಕೆಲಸ ಮಾಡಬಹುದಾಗಿದೆ.

ಫೊರೆನ್ಸಿಕ್‌ ಕೋರ್ಸ್‌ಗಳು
ವಿಧಿ ವಿಜ್ಞಾನ ವಿಭಾಗಗಳಲ್ಲಿ ವಿವಿಧ ಭಾಗಗಳಿದ್ದು, ಅದರಲ್ಲಿ ಕರ್ತವ್ಯ ನಿರ್ವಹಿಸಲು ಅದರದ್ದೇ ಆದ ಕೋರ್ಸ್‌ಗಳಿವೆ. ಕೋರ್ಟ್‌ ಸಹಿತ ಇತರ ಕಾನೂನಾತ್ಮಕ ವರದಿಗಳನ್ನು ನೀಡಲು ಫೊರೆನ್ಸಿಕ್‌ ಸೈನ್ಸ್‌ನಲ್ಲಿ ಎಂ.ಡಿ. ಮಾಡುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ಅವರು ಎಂಬಿಬಿಎಸ್‌ ಮಾಡಿ ನೀಟ್‌ ಪರೀಕ್ಷೆ ಬರೆದು ಅದರಲ್ಲಿ ರ್‍ಯಾಂಕ್‌ ಪಡೆದ ಬಳಿಕ ಫೊರೆನ್ಸಿಕ್‌ ಸೈನ್ಸ್‌ನಲ್ಲಿ ಎಂಡಿ ಮಾಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಬಿ.ಎಸ್ಸಿ ಫೊರೆನ್ಸಿಕ್‌ ಸೈನ್ಸ್‌, ಎಂ.ಎಸ್ಸಿ ಫೊರೆನ್ಸಿಕ್‌ ಸೈನ್ಸ್‌, ಪಿಜಿ ಡಿಪ್ಲೊಮಾ ಇನ್‌ ಫೊರೆನ್ಸಿಕ್‌ ಸೈನ್ಸ್‌ , ಪಿಹೆಚ್‌.ಡಿ. ಇನ್‌ ಫೊರೆನ್ಸಿಕ್‌ ಸೈನ್ಸ್‌, ಎಂ.ಫಿಲ್‌. ಇನ್‌ ಫೊರೆನ್ಸಿಕ್‌ ಸೈನ್ಸ್‌ ಮಾಡಬಹುದಾಗಿದೆ. ವಿಧಿ ವಿಜ್ಞಾನ ವಿಭಾಗದಲ್ಲಿ ಈ ಕೋರ್ಸ್‌ಗಳನ್ನು ಹೊರತುಪಡಿಸಿ ವಿಶೇಷ ವಿಭಾಗಗಳಿದ್ದು, ಅದನ್ನು ಮಾಡಲು ಫೊರೆನ್ಸಿಕ್‌ ಬಯೋಲಜಿ, ಫೊರೆನ್ಸಿಕ್‌ ಸೆರೋಲಾಜಿ, ಫೂರೆನ್ಸಿಕ್‌ ಕೆಮಸ್ಟ್ರಿ, ಫೊರೆನ್ಸಿಕ್‌ ಟಾಕ್ಸಿಕಾಲಜಿ, ಫೊರೆನ್ಸಿಕ್‌ ಬಾಟನಿ ಮೊದಲಾದ ವಿಭಾಗಗಳಿವೆ. ವಿದ್ಯಾರ್ಥಿಗಳಿಗೆ ಆಸಕ್ತ ವಿಭಾಗವನ್ನು ಆಯ್ದುಕೊಂಡು ಮುಂದುವರಿಯಬಹುದಾಗಿದೆ.

ಈ ಕೋರ್ಸ್‌ಗಳು ದೇಶದ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಲಭ್ಯವಿದೆ. ಇನ್ನೂ ಖಾಸಗಿ ಹಾಗೂ ಸರಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಇವೆ. ಇದಕ್ಕೆ ಪ್ರವೇಶಾತಿಯನ್ನು ಪಡೆಯುವುದು ಕ್ಲಿಷ್ಟಕರ ಕೆಲಸ ಎಂದರೆ ತಪ್ಪಾಗಲಾರದು. ಪ್ರವೇಶಾತಿ ಪರೀಕ್ಷೆಗಳನ್ನು ಎದುರಿಸಿದ ಬಳಿಕ ಕೋರ್ಸ್‌ಗಳನ್ನು ಮಾಡಬಹುದಾಗಿದೆ.

ಫೊರೆನ್ಸಿಕ್‌ ಸೈನ್ಸ್‌ನಲ್ಲಿ ಯಾವುದೇ ಕೋರ್ಸ್‌ಗಳನ್ನು ಮಾಡಿದರೂ ಉತ್ತಮ ಉದ್ಯೋಗಾವಕಾಶದ ಜತೆಗೆ ಉತ್ತಮ ವೇತನ ಲಭಿಸುತ್ತದೆ. ದೇಶದ ಕಾನೂನು ಹಾಗೂ ವೈದ್ಯಕೀಯ ವಿಭಾಗದಲ್ಲಿ ಮಹತ್ತರ ಕೆಲಸವನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಇವರಿಗೆ ಅವಕಾಶಗಳು ಅಪಾರ.

ನೇಮಕಾತಿ ಅವಕಾಶಗಳು
ವಿಧಿ ವಿಜ್ಞಾನ ವಿಭಾಗದಲ್ಲಿ ಕೋರ್ಸ್‌ಗಳನ್ನು ಮಾಡಿದವರಿಗೆ ವಿವಿಧ ಕ್ಷೇತ್ರಗಳಲ್ಲಿ ನೇಮಕಾತಿ ಅವಕಾಶಗಳು ದೊರೆಯುತ್ತವೆ. ಪ್ರಮುಖವಾಗಿ ಈ ಕೆಳಗಿನ ವಿಭಾಗಗಳಲ್ಲಿ ಹೆಚ್ಚು ನೇಮಕಾತಿ ಅವಕಾಶಗಳಿರುತ್ತದೆ.

·  ಇಂಟಲಿಜೆನ್ಸ್‌ ಬ್ಯೂರೋ(ಐಬಿ)
· ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವೇಸ್ಟಿಗೇಷನ್‌(ಸಿಬಿಐ)
· ಕೇಂದ್ರ ಸರಕಾರದ ಫೊರೆನ್‌ ಸೈನ್ಸ್‌ ಲ್ಯಾಬ್‌
· ಆಸ್ಪತ್ರೆಗಳು
· ಖಾಸಗಿ ಪತ್ತೇದಾರಿ
ಸಂಸ್ಥೆಗಳು
· ಕಾನೂನು ವಿಭಾಗ
· ಪೊಲೀಸ್‌ ಇಲಾಖೆ
· ಬ್ಯಾಂಕ್‌
· ವಿಶ್ವವಿದ್ಯಾನಿಲಯಗಳು
· ಸೇನೆ

-   ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ