ಅವಕಾಶಗಳ ಆಗರ ಸ್ವೋದ್ಯೋಗ ಕ್ಷೇತ್ರ

Team Udayavani, May 8, 2019, 5:50 AM IST

ಕಲಿಕೆ ಜೀವನದ ನಿರಂತರ ಪ್ರಕ್ರಿಯೆ. ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು ಬದುಕು ಮಗಿಯುವವರೆಗೆ ಇಲ್ಲಿ ಕಲಿಯುವ ವಿಚಾರ ಬಹಳಷ್ಟಿದೆ. ನಮ್ಮಲ್ಲಿ ಹೆಚ್ಚಿನವರ ಭಾವನೆ ಕಲಿಕೆ ಎಂದರೆ ಶಾಲಾ ಶಿಕ್ಷಣ ಎಂಬುದು. ಅದರ ಆಧಾರದಲ್ಲಿಯೇ ಮನುಷ್ಯನ ಯೋಗ್ಯತೆ ಅಳೆಯುವವರಿಗೂ ನಮ್ಮಲ್ಲೆನೂ ಕೊರತೆ ಇಲ್ಲ ಬಿಡಿ. ವ್ಯಕ್ತಿಯೊಬ್ಬ ಸುಶಿಕ್ಷಿತನಾಗಿ, ಐದರಿಂದ ಆರು ಅಂಕೆಗಳ ಸಂಬಳ ಪಡೆಯುವ ಉದ್ಯೋಗದಲ್ಲಿದ್ದಾನೆ ಎಂದರೆ ಅವನನ್ನು ಮಾತ್ರವೇ ಯಶಸ್ವಿ ವ್ಯಕ್ತಿ ಎಂದು ನಂಬುವವರು ನಮ್ಮಲ್ಲಿ ಹಲವರು.

ಆದರೆ, ಬದುಕು ಹಾಗಲ್ಲ. ಬದುಕಿನ ಪಾಠಗಳನ್ನು ಸರಿಯಾಗಿ ಅರಿತುಕೊಂಡು, ವಿದ್ಯೆ ಇದ್ದೊ ಇಲ್ಲದೆಯೋ ತನ್ನ ಸ್ವಂತ ಶಕ್ತಿಯಿಂದ ಬದುಕು ಕಟ್ಟಿಕೊಳ್ಳು ವ ಮತ್ತು ಅ ಮೂಲಕ ಇತರರಿಗೆ ಮಾದರಿಯಾಗುವ ವ್ಯಕ್ತಿಗಳ ಬದುಕು ನಮಗೆ ನಿಜಕ್ಕೂ ದಾರಿದೀಪ. ಕೇವಲ ಮಲ್ಟಿ ನ್ಯಾಶನಲ್ ಕಂಪೆನಿಯಲ್ಲಿನ ಉದ್ಯೋಗಿ, ಸರಕಾರಿ ಕೆಲಸ ಪಡೆದುಕೊಂಡವ ಸುಶಿಕ್ಷಿತನಲ್ಲ. ಬದಲಾಗಿ ಯಾವುದೇ ವಿದ್ಯೆ ಪಡೆಯದೆ ರಸ್ತೆ ಬದಿಯಲ್ಲಿ ಸೀಯಾಳ ಮಾರುವಾತ, ಚಿಕ್ಕ ಹೋಟೆಲ್ ನಡೆಸುತ್ತಿರುವವರು, ಅಥವಾ ಇನ್ಯಾವುದೋ ಸ್ವೋದ್ಯೋಗ ನಡೆಸುತ್ತಿರುವಾತನಿಂದಲೂ ಜೀವನವನ್ನು ಕಲಿಯುವುದು ಬಹಳಷ್ಟಿದೆ.

ಇತ್ತೀಚೆಗೆ ಟೈಲರಿಂಗ್‌, ಬ್ಯೂಟಿಶಿಯನ್‌, ಬಾರ್ಬರ್‌ಗಳು ಹಿಂದಿಗಿಂತ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಕೇವಲ ವೈಟ್ ಕಾಲರ್‌ ಜಾಬ್‌ಗಳಿಂದಷ್ಟೇ ಸಂತೃಪ್ತಿ ಹೊಂದಬಹುದು ಎಂದು ಯೋಚಿಸುವ ಜನಾಂಗ ಕಣ್ಣಿಗೆ ಸ್ವೋದ್ಯೋಗದ ಮೂಲಕ ಬದುಕು ಕಟ್ಟಿಕೊಂಡವರ ಬದುಕಿನ ರೋಚಕತೆ ಅರಿವಾಗುವುದೇ ಇಲ್ಲ. ಬದುಕು ಕಟ್ಟಿಕೊಳ್ಳಬೇಕು, ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು ಎನ್ನುವವನಿಗೆ ಈ ಪ್ರಪಂಚದಲ್ಲಿ ಹೆಚ್ಚೇನೂ ವಿದ್ಯೆ ಇಲ್ಲದೇ ಹೋದರೂ ಸಾವಿರಾರು ದಾರಿಗಳು ಗೋಚರವಾಗುತ್ತ ಹೋಗುತ್ತವೆ. ಉನ್ನತ ಶಿಕ್ಷಣ ಪಡೆದು ಕೈತುಂಬಾ ಸಂಬಳ ಪಡೆಯುತ್ತಿದ್ದ ಹಲವರು ಇಂದು ಸ್ವೋದ್ಯೋಗದತ್ತ ಆಕರ್ಷಿತರಾಗಿ ಸ್ವಾವಲಂಬಿ ಬದುಕಿನ ದಾರಿಯಲ್ಲಿ ಹೆಜ್ಜೆ ನೆಟ್ಟು ಯಶಸ್ಸು ಪಡೆದ ಬಗ್ಗೆ ಆಗಾಗ್ಗೆ ಓದುತ್ತೇವೆ. ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೆವೆ. ಇನ್ನು ಸ್ವೋದ್ಯೋಗದ ಕನಸಿನೊಂದಿಗೆ ಹೆಜ್ಜೆ ನೆಡುತ್ತಿರುವವರಿಗೆ ಆರಂಭದಲ್ಲಿ ಹಣ ಹೊಂದಿಕೆಗೆ ಇಂದು ಸರಕಾರ, ಬ್ಯಾಂಕ್‌ಗಳು, ಸಂಘ ಸಂಸ್ಥೆಗಳು ಹಲವಾರು ಯೋಜನೆಯನ್ನು, ಸಾಲ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿವೆ. ಇವುಗಳ ಉಪಯೋಗ ಪಡೆದು ಒಂದು ನಿರ್ದಿಷ್ಟ ಗುರಿಯೊಂದಿಗೆ ಸಾಗಿದಲ್ಲಿ ನಿರೀಕ್ಷಿತ ಗುರಿ ತಲುಪುವುದು ಸಾಧ್ಯವಾಗುತ್ತದೆ.

ಸ್ವೋದ್ಯೋಗ ಕ್ಷೇತ್ರದಲ್ಲಿನ ಸ್ವಾವಲಂಬನೆ, ಸ್ವಾತಂತ್ರ್ಯ ನಮಗೆ ಯಾವುದೇ ಎಂಎನ್‌ಸಿ ಕಂಪೆನಿಗಳಲ್ಲಿಯೂ ದೊರೆಯುವುದು ಅಸಾಧ್ಯ. ನಮ್ಮ ಯೋಚನೆಗಳನ್ನು ಬಿತ್ತಿ ಅದರಿಂದ ಪಡೆದ ಫ‌ಲವನ್ನು ನಾವೇ ಉಣ್ಣುವುದಿದೆಯಲ್ಲಾ ಅದಕ್ಕಿಂತ ನೆಮ್ಮದಿಯ ಬದುಕು ಮತ್ತೂಂದಿರುವುದು ಅಸಾಧ್ಯ. ಯಾವುದೇ ಒತ್ತಡವಿಲ್ಲದ ಬದುಕಿಗೂ ಸ್ವೋದ್ಯೋಗ ಹೆಚ್ಚು ಸೂಕ್ತ. ಸಮಯದ ಹೊಂದಾಣಿಕೆಯ ವಿಚಾರದಲ್ಲಿಯೂ ಸ್ವೋದ್ಯೋಗ ಉಪಯೋಗಕಾರಿಯೇ ಸರಿ. ಒಂದಷ್ಟು ಯೋಚನೆ, ಯೋಜನೆ, ಚಿಂತನೆಗಳನ್ನು ನಡೆಸಿ ಸ್ವೋದ್ಯೋಗತ್ತ ಹೆಜ್ಜೆ ನೆಟ್ಟಲ್ಲಿ ಎಲ್ಲರಿಗೂ ಯಶಸ್ವಿ ಬದುಕು ನಡೆಸುವುದು ಸಾಧ್ಯ.

– ಭುವನ ಬಾಬು, ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ