ಕಣ್ತುಂಬಿಕೊಳ್ಳಿ ಬಾಳೆಬರೆ ಜಲಧಾರೆ

Team Udayavani, Jul 25, 2019, 5:00 AM IST

ಮುಂಗಾರಿನ ಪ್ರವಾಸಕ್ಕೆ ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು ಮುದ ನೀಡು ವಂತಹದ್ದು. ಇಂತಹುದೇ ಒಂದು ಅತ್ಯದ್ಭುತ, ಮನಕೆ ಮುದ ನೀಡುವಂತಹ ಅನುಭವ ನೀಡುವ ಸ್ಥಳ ಹೊಸಂಗಡಿ ಸಮೀಪದ ಬಾಳೆ ಬರೆ ಘಾಟಿಯಲ್ಲಿ ಕಾಣ ಸಿಗುವ ಹುಲಿಕಲ್ ಜಲಪಾತ. ಮಳೆಗಾಲ ಮುಗಿಯೋ ಮೊದಲು ಇಲ್ಲಿಗೊಂದು ಬಾರಿ ಭೇಟಿ ನೀಡಿ.

ಮುಂಗಾರಿನ ಪ್ರವಾಸವೆಂದರೆ ಏನೋ ಒಂಥರಾ ಮನಸ್ಸಿಗೆ ಆಹ್ಲಾದಕರ ಅನುಭವ ಕೊಡುತ್ತದೆ. ಅದರಲ್ಲೂ ಪಶ್ಚಿಮ ಘಟ್ಟದಾಚೆ ಹೊರಟರಂತೂ ಕಣ್ಣಿಗೂ, ಮನಸ್ಸಿಗೂ ಹಬ್ಬ. ಸುತ್ತಲೂ ಹಚ್ಚ – ಹಸುರಿನಿಂದ ಕಂಗೊಳಿಸುವ ಅಡವಿ, ನವ ವಧುವಿನಂತೆ ಸಿಂಗಾರಗೊಂಡಂತೆ ಕಾಣುವ ಗಿರಿ- ಶಿಖರಗಳು, ಮುಸುಕಿದ ಮಂಜಿನೊಳಗಿಂದ ನುಸುಳುವ ಮರ- ಗಿಡಗಳು, ಕಲ್ಲು- ಬಂಡೆಗಳ ಮಧ್ಯೆ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಪಾತ.

ಇಂತಹುದೇ ಒಂದು ಅತ್ಯದ್ಭುತವಾದ ಸಹಜ ಸುಂದರ ಸೊಬಗನ್ನು ನೀವು ಈಗ ಹೊಸಂಗಡಿ ಸಮೀಪದ ಬಾಳೆಬರೆ ಘಾಟಿಯಲ್ಲಿ ಕಾಣ ಸಿಗುವ ಹುಲಿಕಲ್ ಜಲಪಾತದಲ್ಲಿ ಆಸ್ವಾದಿಸಬಹುದು. ಮಳೆರಾಯನ ಭೋರ್ಗರೆತಕ್ಕೆ ರುದ್ರರಮಣೀಯವಾಗಿ ಹಾಲ್ನೊರೆಯಂತೆ ಹರಿಯುವ ಜಲಪಾತದ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಪಶ್ಚಿಮಘಟ್ಟದ ತಪ್ಪಲಿನ ರಸ್ತೆಯಲ್ಲಿ ಸಂಚರಿಸುವುದೇ ಮನಸ್ಸಿಗೆ ಮುದ ನೀಡುತ್ತದೆ.

ಹಸುರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು. ಇಲ್ಲಿ ಹೊಸತೊಂದು ಲೋಕವೇ ಧರೆಗಿಳಿದಂತೆ ಭಾಸವಾಗುತ್ತದೆ. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಸ್ವರ್ಗ. ಮಳೆಗಾಲ ಆರಂಭವಾಗುತ್ತಿದ್ದಂತೆ ಬಾಳೆಬರೆ ಜಲಪಾತವು ಹರಿಯಲು ಆರಂಭವಾಗುತ್ತದೆ. ಬಂಡೆಯಿಂದ, ಬಂಡೆಗೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಜಲಪಾತದ ಸೌಂದರ್ಯಕ್ಕೆ ಮನ ಸೋಲದವರಿಲ್ಲ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ – ಹೊಸಂಗಡಿಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿದರೆ ಈ ಸುಂದರ ಜಲಧಾರೆಯನ್ನು ನೋಡಬಹುದು. ಉಡುಪಿ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಹೊಸಂಗಡಿಯಿಂದ ಮುಂದಕ್ಕೆ ಬಾಳೆಬರೆ ಘಾಟಿಯಲ್ಲಿ ಸಂಚರಿಸಿದರೆ ಈ ಜಲಪಾತದ ಸೌಂದರ್ಯ ನೋಡಬಹುದು.

ತಿಂಡಿ, ತಿನಿಸು ತೆಗೆದುಕೊಂಡು ಹೋಗಿ
ಈ ಜಲಪಾತ ಘಾಟಿ ಮಧ್ಯೆ ಬರುವುದರಿಂದ ಬೆಳಗ್ಗಿನಿಂದ ಸಂಜೆವರೆಗೆ ನೀವು ಅಲ್ಲಿಯೇ ಕಾಲ ಕಳೆಯ ಬಯಸುವಿರಾದರೆ ಉಡುಪಿ, ಸಿದ್ದಾಪುರ, ಕುಂದಾಪುರ ಕಡೆಯಿಂದ ಹೋಗುವುದಾದರೆ ಹೊಸಂಗಡಿ ಅಥವಾ ಅದಕ್ಕೂ ಮೊದಲೇ ಸಿಗುವ ಪೇಟೆಯಲ್ಲಿ ಆಹಾರ, ನೀರು ತೆಗೆದುಕೊಂಡು ಹೋಗುವುದು ಉತ್ತಮ. ಘಾಟಿ ಮಧ್ಯೆ ಅಥವಾ ಜಲಪಾತದ ಸಮೀಪ ಎಲ್ಲೂ ಹೊಟೇಲ್, ಅಂಗಡಿಗಳು ಕಾಣ ಸಿಗುವುದಿಲ್ಲ. ತೀರ್ಥಹಳ್ಳಿ ಕಡೆಯಿಂದ ಬರುವುದಾದರೆ ಮಾಸ್ತಿಕಟ್ಟೆ, ಹೊಸನಗರದಿಂದ ಏನಾದರೂ ತೆಗೆದುಕೊಂಡು ಬರುವುದು ಒಳ್ಳೆಯದು.

ಹೇಗೆ ಬರುವುದು?
ಬೆಳ್ತಂಗಡಿ, ಪುತ್ತೂರಿನಿಂದ ಬರುವುದಾದರೆ ಗುರುವಾಯನಕೆರೆಯಾಗಿ ಕಾರ್ಕಳಕ್ಕೆ ಬಂದು, ಅಲ್ಲಿಂದ ಹೆಬ್ರಿಗೆ ಬಂದು ಸಿದ್ದಾಪುರದ ಮೂಲಕ ಸಂಚರಿಸಬಹುದು. ಮಂಗಳೂರಿನಿಂದ ಬರುವುದಾದರೆ ಉಡುಪಿಯಾಗಿ ಬ್ರಹ್ಮಾವರಕ್ಕೆ ಬಂದು, ಬಾರ್ಕೂರು ಮೂಲಕವಾಗಿ ಹಾಲಾಡಿಗೆ ಬಂದು ಸಿದ್ದಾಪುರವಾಗಿ ಹುಲಿಕಲ್ ಜಲಪಾತ ನೋಡಬಹುದು.

ಯಾವ್ಯಾವ ಸ್ಥಳಗಳಿವೆ?
ಪ್ರಕೃತಿ ಪ್ರಿಯರಿಗೆ ಇದೊಂದು ಸುಂದರ ತಾಣವೂ ಹೌದು. ಕೇವಲ ಜಲಪಾತ ಮಾತ್ರವಲ್ಲ. ಘಾಟಿಯಲ್ಲಿನ ಸೌಂದರ್ಯವನ್ನು ಅನುಭವಿಸಬಹುದು. ಅದೇ ದಾರಿಯಲ್ಲಿ ತುಸು ಮುಂದಕ್ಕೆ ಸಂಚರಿಸಿದರೆ ಪುರಾಣ ಪ್ರಸಿದ್ಧ ಚಂಡಿಕಾಂಬಾ ದೇವಿಯ ಸನ್ನಿಧಾನಕ್ಕೂ ದರ್ಶನ ನೀಡಬಹುದು. ಘಾಟಿ ದಾಟಿ ಮುಂದೆ ಬಂದರೆ ಕವಲೆದುರ್ಗ ಕೋಟೆಗೂ ತೆರಳಬಹುದು. ಜಲಪಾತದ ಸ್ಥಳದಿಂದ ಸುಮಾರು 30 ಕಿ.ಮೀ. ದೂರವಿದೆ. ಇನ್ನು ಈ ಜಲಪಾತದ ಸುತ್ತಲಿನ ಪ್ರದೇಶವನ್ನು ವನ್ಯಜೀವಿ ವಲಯದಿಂದ ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿ ಘೋಷಿಸಿದೆ. ಇದರೊಂದಿಗೆ ಇಲ್ಲಿ ನೀರಿಗಿಳಿದು ಆಟ ಆಡುವುದು ಅತ್ಯಂತ ಅಪಾಯಕಾರಿಯಾಗಿರುವುದರಿಂದ ನೀರಿಗೆ ಇಳಿಯುವುದನ್ನು ಕೂಡ ನಿಷೇಧಿಸಲಾಗಿದೆ.

ರೂಟ್ ಮ್ಯಾಪ್‌

·ಹುಲಿಕಲ್ ಜಲಪಾತವು ಕುಂದಾಪುರದಿಂದ 42 ಕಿ.ಮೀ. ದೂರ

·ಮಂಗಳೂರಿನಿಂದ 122 ಕಿ.ಮೀ., ಕಾರ್ಕಳದಿಂದ 80 ಕಿ.ಮೀ.,

· ಬೆಳ್ತಂಗಡಿಯಿಂದ 123 ಕಿ.ಮೀ., ಪುತ್ತೂರಿನಿಂದ 153 ಕಿ.ಮೀ. ದೂರವಿದೆ.

· ಮಂಗಳೂರಿನಿಂದ ಬರುವುದಾದರೆ ಉಡುಪಿಯಾಗಿ ಬ್ರಹ್ಮಾವರಕ್ಕೆ ಬಂದು, ಬಾರ್ಕೂರು ಮೂಲಕವಾಗಿ ಹಾಲಾಡಿಗೆ ಬಂದು ಸಿದ್ದಾಪುರವಾಗಿ ಹುಲಿಕಲ್ ಜಲಪಾತ ನೋಡಬಹುದು.

- ಪ್ರಶಾಂತ್‌ ಪಾದೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • 'ಇಲ್ಲೊಕ್ಕೆಲ್' ಕೋಸ್ಟಲ್ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ಇದೂ ಕೂಡ ಹಲವು ದಿನಗಳ ಹಿಂದೆಯೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ....

  • ಕೋಸ್ಟಲ್ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ 'ಇಂಗ್ಲೀಷ್‌' ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ...

  • ಭಾರೀ ಮಳೆಯ ಕಾರಣದಿಂದ ಕೋಸ್ಟಲ್ವುಡ್‌ ಕೂಡ ಮರುಗಿದ್ದು, ತುಳು ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಮುಂದೂಡಿದೆ. ರಾಜ್ಯದಲ್ಲಿ ಹಾಗೂ ದ.ಕ. ಜಿಲ್ಲೆಯ ವಿವಿಧೆಡೆ ನೆರೆ...

  • ಸಂಗಾತಿಯ ಸಾಂಗತ್ಯವಿಲ್ಲದೆ ನೊಂದು ಬೆಂದಿದ್ದ ಇಳೆಯ ಸಕಲ ಬಯಕೆಗಳನ್ನು ಪೂರೈಸುವಂತೆ ಮಳೆ ಧಾರೆಯಾಗಿ ಸುರಿಯುತ್ತಿತ್ತು. ಮುಂಗಾರಿನ ಅಭಿಷೇಕದಿಂದ ಪ್ರೀತಿಯಂಥ...

  • ಪತ್ನಿಯನ್ನು ಕಳೆದುಕೊಂಡ ಪತಿ ಅದೇ ಆಘಾತದಿಂದ ಹೊರಗೆ ಬಂದಿರುವುದಿಲ್ಲ. ಪತ್ನಿ ಸತ್ತರೂ ಆಕೆ ಇನ್ನೂ ಜತೆಗಿದ್ದಾಳೆ ಎಂದು ಹುಡುಕುವ ಆತ ಅದೇ ಗುಂಗಿನಲ್ಲಿ ದಿನಕಳೆಯುತ್ತಾನೆ! ಇದೇ...

ಹೊಸ ಸೇರ್ಪಡೆ