ಪ್ರಕೃತಿಪ್ರಿಯರ ಮನಸೂರೆಗೊಳ್ಳುವ ಚಾರ್ಮಾಡಿಯ ಚೆಲುವು

Team Udayavani, Oct 1, 2019, 7:15 PM IST

ಬದುಕಿನ ದಿನನಿತ್ಯದ ಜಂಜಾಟದಲ್ಲಿ ಸ್ವಲ್ಪ ರಿಲಾಕ್ಸ್ ಆಗಬೇಕು. ಜೀವನದಲ್ಲಿ ನಾನಾ ತರದ ಒತ್ತಡಗಳ ಮದ್ಯೆ ಸ್ವಲ್ಪ ರಿಲಾಕ್ಸ್ ಆಗೋಣ ಎಂಬ ಬಯಕೆಯಿಂದ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಗಳಿಗೆ ತೆರಳಲು ಮನಸ್ಸು ಕಾಡುತ್ತದೆ. ನಮ್ಮ ಮನಸ್ಸಿನ ಒತ್ತಡವನ್ನು ತಣಿಸುವ ಅಘೋಘ ಶಕ್ತಿ ಪರಿಸರಕ್ಕೆ ಇದೆ.

ಹಾಗಿದ್ದರೆ ನೀವು ಎಲ್ಲಾದರೂ ಹಚ್ಚ ಹಸುರಿನ ತಾಣಕ್ಕೆ ಹೋಗಬೇಕನಿಸಿದರೆ ಚಾರ್ಮಾಡಿಗೆ ಹೋಗಿ ಬನ್ನಿ. ಮೈ ಮನಸ್ಸು ರಿಲಾಕ್ಸ್ ಆಗುತ್ತದೆ. ಅಂದ ಹಾಗೆ ಈ ಚಾರ್ಮಾಡಿ ಅನ್ನೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಹಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ತೆರಳುವ ರಸ್ತೆಯ ಮದ್ಯೆ ಈ ಚಾರ್ಮಾಡಿ ಘಾಟ್ ಸಿಗುತ್ತದೆ.

ಎಲ್ಲಾ ಸಮಯದಲ್ಲಿ ಈ ಚಾರ್ಮಾಡಿ ಘಾಟ್ ನಮ್ಮನ್ನು ಸೆಳೆಯುತ್ತದೆ ಯಾದರೂ ಮಳೆಗಾಲದಲ್ಲಿ ವಿಶೇಷವಾಗಿ ಈ ಘಟ್ಟ ಪ್ರದೇಶಕ್ಕೆ ವಿಶೇಷ ಜೀವ ಕಳೆ ಬಂದಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ಕೊಡುವುದು ಸೂಕ್ತ. ಅಲ್ಲಲ್ಲಿ ಹರಿಯುವ ಪುಟ್ಟ ಪುಟ್ಟ ಜಲಪಾತಗಳು ನೀವು ಸಾಗುವಾಗ ನಿಮ್ಮನ್ನು ಆನಂದಮಯಗೊಳಿಸಲು ತಯಾರಾಗಿರುತ್ತದೆ. ಬೆಟ್ಟದಾಚೆ ಕಣ್ಣು ಹಾಯಿಸಿದರೆ ಹಾಲಿನಂತೆ ನೊರೆ ನೊರೆಯಾಗಿ ಹರಿಯುತ್ತಿರುವ ಜಲಪಾತಗಳು ಕಣ್ಣಿಗೆ ಆನಂದಮಯ. ಚಾರ್ಮಾಡಿ ಘಾಟ್ಗೆ ನೀವು ಜೀಪ್ ಅಥವಾ ಬೈಕ್ ಮೂಲಕ ಹೋಗುವುದು ಉತ್ತಮ. ಸೈಕಲಿಂಗ್ ಮಾಡಲು ಈ ತಾಣ ಅದ್ಭುತವಾಗಿದೆ. ಆದರೆ ಸ್ವಲ್ಪ ಜಾಗೃತೆ ಇರಬೇಕು. ಮಳೆಗಾಲದಲ್ಲಿ ನೀವು ಈ ತಾಣಕ್ಕೆ ಹೋಗುವಾಗ ಅಲ್ಲಿನ ಪರಿಸ್ಥಿಯನ್ನು ತಿಳಿದುಕೊಂಡು ಹೋಗುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಭಾರಿ ಮಳೆಯಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ.

ಚಾರ್ಮಾಡಿ ಕಣ್ಣಿಗೆ ಮುದ ನೀಡುವ ಪ್ರದೇಶ ಮಾತ್ರವಲ್ಲ ಬದಲಾಗಿ ಆನೇಕ ವೈವಿಧ್ಯ ಜೀವರಾಶಿಗಳು ಅಪರೂಪದ ಸಸ್ಯಗಳು, ಜೌಷಧೀಯ ಗುಣವುಳ್ಳ ಸಸ್ಯಗಳನ್ನು ಹೊಂದಿದ ಶ್ರೀಮಂತ ಸಂಪತ್ತಿನ ತಾಣವಾಗಿದೆ. ಒಂದು ವೇಳೆ ನೀವು ಚಾರ್ಮಾಡಿ ಮಾರ್ಗವಾಗಿ ಲ್ಲಿಗಾದರೂ ಪ್ರಯಾಣ ಬೆಳೆಸುತ್ತಿದ್ದೀರಿ ಅಂದರೆ ನಿಮ್ಮ ವಾಹನಗಳನ್ನು ಸ್ವಲ್ಪ ಬದಿಗೆ ಹಾಕಿ. ಚಾರ್ಮಾಡಿಯ ಸೊಬಗನ್ನು ಕಣ್ತುಂಬಿಕೊಳ್ಳಿ.

ಚಾರ್ಮಾಡಿ ಘಾಟ್ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಚಿಕ್ಕಮಗಳೂರುಗಳಿಂದ 280, 205, 95 ಹಾಗೂ 60 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಹಾಸನ, ಬೇಲೂರು, ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ತಲುಪಿದರೆ, ಮಂಗಳೂರಿನಿಂದ ಬಂಟ್ವಾಳ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಚಾರ್ಮಾಡಿ ಘಾಟನನ್ನು ತಲುಪಬಹುದು.

ಇನ್ನು ನೀವು ಚಾರ್ಮಾಡಿಯಲ್ಲಿ ಮುಂದಕ್ಕೆ ಹೋದರೆ ಕೊಟ್ಟಿಗೆ ಹಾರ ಎಂಬ ಹಳ್ಳಿ ಸಿಗುತ್ತದೆ. ಈ ಘಟ್ಟ ಪ್ರದೇಶದಲ್ಲಿ ಒಂದು ರೀತಿಯ ಹಿತವಾದ ತಂಪು ವಾತಾರಣ ನಿಮ್ಮ ಮೈ ಮನಗಳಲ್ಲಿ ರೋಮಾಂಚನಗೊಳಿಸುವುದನ್ನು ನೀವು ಅನುಭವಿಸಲೇ ಬೇಕು. ಕೊಟ್ಟಿಗೆ ಹಾರದಲ್ಲಿ ನೀರು ದೋಸೆ ಸ್ಪೆಶಾಲಿಟಿ. ಅಲ್ಲಿನ ಹಿತವಾದ ಚಳಿಗೆ ಬೆಚ್ಚಗಿನ ನೀರು ದೋಸೆ ನನಿಮ್ಮ ನಾಲಿಗೆಗೆ ಮತ್ತಷ್ಟು ರುಚಿಕರವನ್ನಾಗಿಸುತ್ತದೆ. ಅಲ್ಲಿ ನೀವು ನೀರು ದೋಸೆಯ ರುಚಿಯನ್ನು ಸವಿಯಲೇ ಬೇಕು. ಒಟ್ಟಿನಲ್ಲಿ ನಿಮ್ಮ ಮನದ ಹಸಿವವನ್ನು ಕಳೆಯಲು ಚಾರ್ಮಾಡಿ ಘಾಟ್ ಹೊಟ್ಟೆಯ ಹಸಿವನ್ನು ತಣಿಸಲು ಕೊಟ್ಟಿಗೆಹಾರದ ನೀರು ದೋಸೆ ಹೇಳಿಮಾಡಿಸಿದ್ದು.

ಪೂರ್ಣಿಮಾ ಪೆರ್ಣಂಕಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ