ಮಳೆಯಲಿ ಜತೆಯಲಿ ‘ಇಂಗ್ಲೀಷ್’
Team Udayavani, Aug 15, 2019, 5:48 AM IST
ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್ ಶೆಟ್ಟಿ ಅವರ ‘ಇಂಗ್ಲೀಷ್’ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ ಶೂಟಿಂಗ್ ನಡೆಸಲು ಅಣಿಯಾಗಿದೆ. ಒಟ್ಟು ನಾಲ್ಕು ಹಾಡುಗಳಿರುವ ಈ ಸಿನೆಮಾದ ಎರಡು ಹಾಡುಗಳು ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದೆ. ಉಳಿದ ಎರಡು ಹಾಡುಗಳ ಶೂಟಿಂಗ್ ಬಾಕಿ ಇತ್ತು. ಸಿನೆಮಾದ ಎಡಿಟಿಂಗ್ ಕೂಡ ಈಗಾಗಲೇ ಪೂರ್ಣವಾಗಿದೆ. ಬಾಕಿ ಉಳಿದ ಎರಡು ಹಾಡುಗಳನ್ನು ಅದ್ಧೂರಿಯಾಗಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ವಿಭಿನ್ನ ಟೈಟಲ್ಗಳ ಮೂಲಕವೇ ಕೋಸ್ಟಲ್ವುಡ್ನಲ್ಲಿ ಸಕ್ಸಸ್ ಸಿನೆಮಾಗಳನ್ನು ನೀಡಿದ ಸೂರಜ್ ಅವರ ‘ಎಕ್ಕಸಕ್ಕ’, ‘ಪಿಲಿಬೈಲ್ ಯಮುನಕ್ಕ’, ‘ಅಮ್ಮೆರ್ ಪೊಲೀಸಾ’ ಹಿಟ್ ಆದ ಬಳಿಕ ಈಗ ನಾಲ್ಕನೇ ಸಿನೆಮಾವಾಗಿ ‘ಇಂಗ್ಲೀಷ್’ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿ, ‘ಮಾರ್ಚ್ 22’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ ‘ಇಂಗ್ಲೀಷ್’ ರೆಡಿಯಾಗುತ್ತಿದೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಸಹಿತ ತುಳುನಾಡಿನ ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ. ಪೃಥ್ವೀ ಅಂಬರ್ ಹಾಗೂ ನವ್ಯಾ ಪೂಜಾರಿ ಮುಖ್ಯಭೂಮಿಕೆ ಯಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಶಶಿರಾಜ್ ಕಾವೂರು ಹಾಗೂ ಅರ್ಜುನ್ ಲೂಯಿಸ್ ಸಾಹಿತ್ಯ, ಕೆಮರಾ ಕೃಷ್ಣ ಸಾರಥಿ, ಸಂಕಲನವನ್ನು ಮನು ನಡೆಸುತ್ತಿದ್ದಾರೆ.