ಇಲ್ಲೊಂದು ಟೈಟಾನಿಕ್ ಚರ್ಚ್

Team Udayavani, Jul 4, 2019, 5:00 AM IST

ಅಲ್ಲಿ ಮುಳುಗಿದೆ ನೋಡಿ ಕಮಾನು ಕಾಣಿಸ್ತಿದೆಯಲ್ಲ, ಅದೇ ಚರ್ಚ್‌- ಹಾಗಂತ ಗೈಡ್‌ ಒಬ್ಬ ಕತೆ ಹೊಡೆಯೋದಿಕ್ಕೆ ಶುರುಮಾಡಿದರೆ, ನೀರೊಳಗೆ ಟೈಟಾನಿಕ್‌ ಹಡಗಿನಂತೆ ಮಲಗಿದ್ದ ಚರ್ಚ್‌ ಒಳಗಿಂದಲೇ ಏನನ್ನೋ ಪಿಸುಗುಡುತ್ತದೆ. ಅದು ಶೆಟ್ಟಿಹಳ್ಳಿಯ ರೋಸರಿ ಚರ್ಚ್‌. ಮಳೆಗಾಲ ಪ್ರಾರಂಭವಾಗಿ ಹಿನ್ನೀರು ಹೆಚ್ಚಾಗುತ್ತಿದ್ದಂತೆ ಈ ಚರ್ಚ್‌ ಮುಳುಗುತ್ತದೆ. ಆಗ ಇದನ್ನು ನೋಡಲೆಂದೇ, ಪ್ರವಾಸಿಗರು ತೆಪ್ಪದಲ್ಲಿ ತೆರಳಿ ವೀಕ್ಷಿಸುತ್ತಾರೆ. ನೀರಿನ ಮಟ್ಟ ತಗ್ಗಿದಂತೆ, ಬೈಕ್‌- ಕಾರು- ಆಟೋಗಳಲ್ಲಿ ಹೋಗಿ, ಚರ್ಚ್‌ನ ಸೌಂದರ್ಯ ವೀಕ್ಷಿಸಿ ಬರುವುದೆಂದರೆ ಪ್ರವಾಸಿಗರಿಗೆ ಅದೇನೋ ರೋಮಾಂಚನ.

ಹಾಸನದಿಂದ 20 ಕಿ.ಮೀ. ದೂರದಲ್ಲಿರುವ ಶೆಟ್ಟಿಹಳ್ಳಿ ಎಂಬ ಗ್ರಾಮದ ಈ ಚರ್ಚ್‌ ಹಿಂದೊಮ್ಮೆ ಕ್ರೈಸ್ತರ ಹೆಮ್ಮೆಯ ಆರಾಧನಾ ಕೇಂದ್ರ. ಹಾಸನದ ಪ್ರವಾಸಿ ತಾಣಗಳಾದ ಬೇಲೂರು, ಹಳೆಬೀಡು, ಶ್ರವಣ ಬೆಳಗೊಳ ಹಾಗೂ ಸಕಲೇಶಪುರದ ಪೈಕಿ ಇದೂ ಒಂದು ಪ್ರೇಕ್ಷಣೀಯ ಸ್ಥಳ. ಇಂದು ಕಾಲಗರ್ಭದೊಳಗೆ ಅದು ಹೂತು ಹೋಗಿದ್ದರೂ ಸಹಸ್ರಾರು ಮಂದಿಗೆ ಆ ದಿನಗಳ ಪ್ರಾರ್ಥನೆಯ ನೆನಪುಗಳು ಈಗಲೂ ಕಣ್ಣಿಗೆ ಕಟ್ಟಿವೆ.

ಚರ್ಚ್‌ನ ಜಾಗತಿಕ ಕಳೆ
ಜಲಾಶಯದ ನೀರು ಬಂತು ಎಂದರೆ ಚರ್ಚ್‌ ಮುಳುಗಿ ಟೈಟಾನಿಕ್‌ ಹಡಗಿನಂತೆ ತೋರುತ್ತದೆ. ಸಿನಿಮಾ ಮಂದಿಗೆ ಈ ಕಟ್ಟಡ ಅಮರ ಪ್ರೇಮದ ಸ್ಮಾರಕವಾದರೆ, ಊರಿನವರಿಗೆ ಹಾಳು ಕೊಂಪೆ. ನಗರದ ಜಂಜಡದಿಂದ ಬೇಸತ್ತು ಬಂದ ಮಂದಿಗೆ ಇದು ನೆಮ್ಮದಿಯ ತಾಣ. ಚರ್ಚ್‌ ಗೋಡೆಗಳು ವಿಕೃತ ಮನದ ಪ್ರೇಮಿಗಳ ಕೈಗೆ ಸಿಲುಕಿ, ನೋಡಬಾರದ ಶಾಸನಗಳಂತಾಗಿವೆ.

ಹತ್ತೆಂಟು ದೇಶಗಳ ಸಮನ್ವಯದ ಸಂಕೇತದಂತಿದ್ದ ಈ ಚರ್ಚ್‌ ನಿರ್ಮಾಣವಾಗಿದ್ದು 1810ರಲ್ಲಿ. ಧರ್ಮಗುರು ಅಬ್ಬೆ ದುಬಾಯ್ಸ ಅವರ ಕಲ್ಪನೆಯ ಸಾಕಾರವಿದು. ಜರ್ಮನಿ, ಇಂಗ್ಲೆಂಡ್‌, ಆಸ್ಟ್ರೇಲಿಯ ಸೇರಿದಂತೆ ಯುರೋಪ್‌ನ ರಾಯಭಾರಿಗಳು ಇಲ್ಲಿಗೆ ಭೇಟಿ ನೀಡಿದ್ದರಂತೆ.

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ಭಾಗಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು 1960ರಲ್ಲಿ ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ನಿರ್ಮಾಣ ಪ್ರಾರಂಭವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಗ್ರಾಮಗಳು ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ಪೈಕಿ ಶತಮಾನದ ಕವಿತೆಯಂತಿದ್ದ ಚರ್ಚ್‌ ಕೂಡ ಹೇಮಾವತಿಯ ಅಣೆಕಟ್ಟೆಯೊಡಲು ಸೇರಿತು!

1960ರಲ್ಲಿ ಈ ಕಟ್ಟಡದಲ್ಲಿ ಧರ್ಮಗುರು ದೇಶಾಂತ್‌ ಅವರು ಆಸ್ಪತ್ರೆ ಆರಂಭಿಸಿದ್ದರು. ಅನಂತರ ಮುಳುಗಡೆ ಆಗುವವರೆಗೂ ಇಲ್ಲಿನ ಸಹಸ್ರಾರು ಮಂದಿಯ ಆರೋಗ್ಯ ಕಾಪಾಡಿತ್ತು. ಸಿಡುಬು, ಪ್ಲೇಗ್‌, ಕಾಲರಾ ರೋಗಕ್ಕೆ ಚರ್ಚ್‌ ನ ವೈದ್ಯರು ಲಸಿಕೆ ಹಾಕಿ, ಜನರ ಸಂಕಷ್ಟ ನಿವಾರಿಸಿದ್ದರು. 1823ರ ಭೀಕರ ಬರಗಾಲದಲ್ಲಿ ಇದು ನಿರ್ಗತಿಕರಿಗೆ ಆಶ್ರಯ ತಾಣವಾಗಿಯೂ, ಮಾನವೀಯತೆ ಮೆರೆದಿತ್ತು.

ಚರ್ಚ್‌ ಸುಂದರ ಕಮಾನುಗಳು, ಗೋಪುರ, ಎತ್ತರದ ಬಾಗಿಲುಗಳು, ಮಿನಾರುಗಳು ನೋಡುಗರ ಕಣ್ಣಿಗೆ ಈಗಲೂ ಹಬ್ಬವನ್ನುಂಟು ಮಾಡುತ್ತವೆ. ಹಲವು ದಶಕಗಳಿಂದ ನೀರಿನಲ್ಲಿ ಮುಳುಗೇಳುತ್ತಿರುವ ಚರ್ಚ್‌ ಮೂಲ ಹಾಗೂ ಸದ್ಯದ ಸ್ವರೂಪಕ್ಕೂ ಅಜಗಜಾಂತರವಿದೆ. ಏಕೆಂದರೆ ವರ್ಷದಿಂದ ವರ್ಷಕ್ಕೆ ಚರ್ಚ್‌ನ ಗೋಡೆ ಕಮಾನು ಹಾಗೂ ಗೋಪುರಗಳು ಕುಸಿಯುತ್ತಾ, ಹಿನ್ನೀರಿನ ಒಡಲಲ್ಲಿ ಮಣ್ಣಾಗುತ್ತಿವೆ.

ಕಟ್ಟಡದ ವಿಶ್ವ ಸೌಂದರ್ಯ
ಅಂದಚೆಂದದ ವಿನ್ಯಾಸದ ಹಿಂದೆ ಜಗತ್ತಿನ ಪ್ರತಿಭಾವಂತ ವಾಸ್ತುಶಿಲ್ಪಿಗಳ ಕೈಚಳಕವಿದೆ. ಅದು ಧರ್ಮಗುರು ಬೊಯೆ ಅವರ ವಿನ್ಯಾಸದ ಪರಿಕಲ್ಪನೆ. ಒಂದು ಮಹಡಿ ಕಟ್ಟಡದಲ್ಲಿ ಎರಡು ಗಂಟೆಗಳ ಗೋಪುರವಿದೆ. ಜರ್ಮನ್‌ ವಿನ್ಯಾಸ, ಫ್ರೆಂಚ್ ಶೈಲಿ, ಹಿಂದೂ ಶೈಲಿಯ ಒಳಾಂಗಣದಿಂದ ಇದು ಕಳೆಗಟ್ಟಿತ್ತು. ಈಜಿಪ್ಟ್ ಜಿಪ್ಸಮ್, ಬೆಲ್ಜಿಯಂನ ಗಾಜು, ಸ್ಕಾಟ್ಲೆಂಡ್‌ನ‌ ಚಿತ್ರಗಳು, ಇಟಲಿ ಬ್ರೆಜಿಲ್ನ ಅಲಂಕಾರಿಕ ವಸ್ತುಗಳು, ಮಲೇಶ್ಯದ ತಾಳೆ ಮರಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿತ್ತು.

ಹಾಳಾದ ಸೌಂದರ್ಯ
1 ಕೆ.ಆರ್‌.ಎಸ್‌. ಜಲಾಶಯದಿಂದ ಹೊಯ್ಸಳರ ನಿರ್ಮಾಣದ ವೇಣುಗೋಪಾಲ ಸ್ವಾಮಿ, ಕನ್ನೇಶ್ವರ ಮತ್ತು ಕಾಳಮ್ಮ ದೇಗುಲಗಳು.
2 ಕಬಿನಿ ಹಿನ್ನೀರಿನಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇಗುಲಗಳು.
3 ಲಿಂಗನಮಕ್ಕಿ ಜಲಾಶಯದಲ್ಲಿ ಹಳೆಯ ಮುಡೆನೋರ ಅಣೆಕಟ್ಟು ನೀರಿನಲ್ಲಿ ಮುಳುಗಿ, ನೀರು ಕಡಿಮೆಯಾದಾಗ ಗೋಚರವಾಗುತ್ತದೆ.

ರೂಟ್ ಮ್ಯಾಪ್‌

·ಮಂಗಳೂರಿನಿಂದ ಹಾಸನ- 172 ಕಿಲೋಮೀಟರ್‌

·ಹಾಸನಕ್ಕೆ ರೈಲು, ಬಸ್‌ನಲ್ಲಿ ತೆರಳಬಹುದು

·ಹಾಸನದಿಂದ ಶೆಟ್ಟಿ ಹಳ್ಳಿ ರೋಸರಿ ಚರ್ಚ್‌-39 ಕಿಲೋ ಮೀಟರ್‌

·ಸ್ವಂತ ವಾಹನವಿದ್ದರೇ ಇಲ್ಲಿಗೆ ಭೇಟಿ ನೀಡುವುದು ಸುಲಭ

·ಬೇಲೂರು, ಹಳೇಬಿಡು ಪ್ರವಾಸ ಕೈಗೊಂಡ ಇಲ್ಲಿಗೆ ತೆರಳಬಹುದು.

·ಸುತ್ತಮುತ್ತ ಯಾವುದೇ ಊಟ, ತಿಂಡಿಯ ವ್ಯವಸ್ಥೆಗಳಿಲ್ಲ.

•ಟಿ. ಶಿವಕುಮಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸೂರಜ್‌ ಶೆಟ್ಟಿ ನಿರ್ದೇಶನ ಮತ್ತು ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ 'ಇಂಗ್ಲಿಷ್‌' ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ...

  • ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸ ಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ ಇಂತಹ...

  • ಬ್ರಹ್ಮಾವರ ಮೂವೀಸ್‌ ಸಂಸ್ಥೆ ನಿರ್ಮಾಣದ ತುಳು ಚಿತ್ರ 'ಕಟಪಾಡಿ ಕಟ್ಟಪ್ಪ' ಕೋಸ್ಟಲ್ವುಡ್‌ನ‌ಲ್ಲಿ ಈ ಬಾರಿ ಹೊಸ ದಾಖಲೆ ಮಾಡಿದೆ. ಮಾ.29 ರಂದು ದೇಶದಾದ್ಯಂತ 200 ಚಿತ್ರಮಂದಿರಗಳಲ್ಲಿ...

  • ಕೊಲೆ, ಅತ್ಯಾಚಾರದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ಆರೋಪಿ, ಅಪರಾಧಿಗಳಾಗಿ ಬಂಧಿತರಾಗುವವರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಅಪರಾಧ ಕೃತ್ಯಗಳಲ್ಲಿ...

  • ಬೆಂಗಳೂರಿನಲ್ಲಿ ನೆಲೆಸಿರುವ ಮಿತ್ರರು ದೇವರಗುಂಡಿ ಜಲಪಾತದ ಸೊಬಗನ್ನು ಸವಿಯಲು ಹೋಗೋಣ ಎಂದು ನನ್ನನ್ನು ಒತ್ತಾಯಿಸುತ್ತಲೇ ಇದ್ದರು. ನಾನು ಮಾತ್ರ, ಬೇಸಗೆಯಲ್ಲಿ...

ಹೊಸ ಸೇರ್ಪಡೆ