“ಎಂಚ ಉಂಡು ಜೋಗ?’

Team Udayavani, Oct 17, 2019, 5:18 AM IST

ಜೋಗ ಜಲಪಾತವನ್ನು ಗೆಸ್ಟ್‌ ಹೌಸ್‌ ಭಾಗದಿಂದ ವೀಕ್ಷಿಸುವುದು ಇನ್ನೊಂದು ಅಪೂರ್ವ ಅನುಭವ. ಸೂರ್ಯ ಮೋಡಗಳ ಮರೆಯಲ್ಲೇ ಕಡಲಿನೆಡೆಗೆ ಸರಿಯುತ್ತ ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಬಿಡಿಸುತ್ತಿದ್ದ.

ವರ್ಷಕ್ಕೆ ಇರುವುದೇ ನಾಲ್ಕು ರಜೆ. ಆಯುಧ ಪೂಜೆ ಅದರಲ್ಲಿ ಒಂದು. ಮಹಾನವಮಿಯ ದಿನ ಜೋಗ ಪ್ರವಾಸ ತೆರಳಿದರೆ ಹೇಗೆ ಎಂಬ ಗೆಳೆಯರ ಸಲಹೆಯೇ ರೋಮಾಂಚನ ಮೂಡಿಸಿತು. ರಾಜ್ಯಕ್ಕೆ ಬೆಳಕು ಕೊಡುವ ಲಿಂಗನಮಕ್ಕಿ ಜಲಾಶಯ, ನಾಲ್ಕು ಕವಲುಗಳಾಗಿ ಜಿಗಿದು ಭುವಿಯ ಮೇಲೆ ಸ್ವರ್ಗವನ್ನೇ ಸೃಷ್ಟಿಸುವ ರುದ್ರ ರಮಣೀಯ ಜಲಪಾತದ ದೃಶ್ಯ ಕಣ್ಣ ಮುಂದೆ ತೇಲಿ ಬಂತು. ಇನ್ನೂ ಮಳೆಗಾಲ ಕಳೆದಿಲ್ಲ. ಪೂರ್ತಿಯಾಗಿ ಅಲ್ಲದಿದ್ದರೂ ಸಾಕಷ್ಟು ಮೈದುಂಬಿಕೊಂಡೇ ಇರುವ ಜೋಗವನ್ನು ಕಣ್ತುಂಬಿಕೊಳ್ಳಲು ಸಹೋದ್ಯೋಗಿಗಳ ಕುಟುಂಬಗಳೂ ಜತೆಯಾಗಿ, ಒಟ್ಟು 26 ಜನ ಸಿದ್ಧರಾದೆವು.

ಬೆಳಗ್ಗೆ 6.30ಕ್ಕೆ ಸಹೋದ್ಯೋಗಿಗಳಿಬ್ಬರು ತಂದ ಇಡ್ಲಿ, ಚಹಾ ಸೇವಿಸಿ ಮಿನಿ ಬಸ್‌ನಲ್ಲಿ ಆಗುಂಬೆ ಘಟ್ಟವೇರಿದೆವು. ಸೂರ್ಯಾಸ್ತ ಮಾತ್ರವಲ್ಲ, ಇಬ್ಬನಿ ತಬ್ಬಿದ ಮುಂಜಾನೆಯನ್ನೂ ಆಸ್ವಾದಿಸಲು ಆಗುಂಬೆ ಅದ್ಭುತವಾದ ತಾಣ. ಅಲ್ಲೊಂದಿಷ್ಟು ವಿಹರಿಸಿದೆವು. ಕೋತಿಗಳ ಸೈನ್ಯವನ್ನು ಮಾತನಾಡಿಸಿ, ತೀರ್ಥಹಳ್ಳಿ ಸೇರಿದೆವು. ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ತಣ್ಣಗಾಗಿಸಿ ಸಾಗರಕ್ಕೆ ಹೋದೆವು. ಶಿಲ್ಪ ವೈಭವದ ಕೆಳದಿ, ಇಕ್ಕೇರಿ ದೇಗುಲಗಳನ್ನು ವೀಕ್ಷಿಸಿದ ಮೇಲೆ ಊಟ ಮುಗಿಸಿ ಜೋಗದತ್ತ ಪಯಣ ಮುಂದುವರಿಸಿದೆವು.

ಆಗಿನ್ನೂ ಜೋರು ಬಿಸಿಲು. ಹೀಗಾಗಿ, ನೇರವಾಗಿ ಜೋಗ ಜಲಪಾತಕ್ಕೆ ತೆರಳದೆ ಜಲಾಶಯದ ದಾರಿ ಹಿಡಿದು, ಕಾರ್ಗಲ್‌ ಸಮೀಪ ಶರಾವತಿ ಹಿನ್ನೀರಿನ ಅಂದವನ್ನು ಸವಿಯುತ್ತ ಒಂದಿಷ್ಟು ವಿರಮಿಸಿದೆವು. ಸಿಮೆಂಟ್‌ ಕಟ್ಟೆಯ ಮೇಲಿನಿಂದ ಎಳೆಯ ಗೆಳೆಯರು ಜಿಗಿಯುವ ದೃಶ್ಯಗಳು ಮುದ ನೀಡಿದವು. ಕಾಡು, ತೋಟ, ಗದ್ದೆಗಳ ಸಾಲಿನಲ್ಲಿ ಸಾಗಿ ಜೋಗದಲ್ಲಿಳಿದಾಗ ನಮ್ಮ ನಿರೀಕ್ಷೆಗೂ ಮೀರಿದ ಜನಸಾಗರವೇ ಇತ್ತು.

ಹೊಂಬಿಸಿಲು – ಕಾಮನಬಿಲ್ಲು
ಇಳಿ ಬಿಸಿಲಿನಲ್ಲಿ ಜೋಗ ಜಲಪಾತ ಹೊಂಬಣ್ಣದಲ್ಲಿ ಮಿನುಗುತ್ತಿತ್ತು. ಜಲಪಾತದ ಹಿನ್ನೆಲೆ ಇಟ್ಟುಕೊಂಡು ನನ್ನ ಗೆಳೆಯರು, ಮಕ್ಕಳ ಫೋಟೋಗಳನ್ನು ಕೆಮರಾದಲ್ಲಿ ಸೆರೆಹಿಡಿದೆ. ಈ ಕಡೆಯಿಂದ ಜೋಗದಲ್ಲಿ ಧುಮುಕುವ ನೀರು ಗಾಳಿಯ ರಭಸಕ್ಕೆ ಹುಡಿ ಹಿಟ್ಟು ಉದುರಿಸಿದಂತೆ ಕಾಣಿಸಿತು. ಈ ಮಧ್ಯೆ ನಮ್ಮ ಪೈಕಿ ಐದಾರು ಜನ ನಮಗೆ ಹೇಳದೆಯೇ ಜೋಗದ ಗುಂಡಿ ನೋಡಲು ಇಳಿದಿದ್ದರು. ನಾವೂ ಹೋಗಬೇಕೆಂದು ಅನುವಾಗುವಷ್ಟರಲ್ಲಿ ನಾಲ್ಕು ಗಂಟೆ ಕಳೆದಿದ್ದರಿಂದ ಅಲ್ಲಿನ ಭದ್ರತಾ ಸಿಬಂದಿ ನಯವಾಗಿಯೇ ಅವಕಾಶ ನಿರಾಕರಿಸಿದರು. ನೂರಾರು ಅಡಿ ಎತ್ತರದಿಂದ ಸಂಜೆಯ ಬಿಸಿಲಿಗೆ ಅಭಿಮುಖವಾಗಿ ಬೀಳುತ್ತಿದ್ದ ನೀರು ಕಾಮನಬಿಲ್ಲನ್ನು ಸೃಷ್ಟಿಸಿತ್ತು. ಗುಂಡಿಯ ದಾರಿಯಲ್ಲಿ ಅರ್ಧದಷ್ಟು ಮೆಟ್ಟಿಲುಗಳನ್ನಿಳಿದು ರಾಜಾ, ರಾಣಿ, ರೋರರ್‌, ರಾಕೆಟ್‌ – ಈ ನಾಲ್ಕು ಕವಲುಗಳನ್ನು ನೋಡುತ್ತ ಮೈಮರೆತೆವು. ಕೆಲವು ದಿನಗಳ ಹಿಂದೆ ಭಾರೀ ಮಳೆಯಾದ ಸಂದರ್ಭದಲ್ಲಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಂತೆ. ಆಗ ಈ ನಾಲ್ವರ ಮಕ್ಕಳು, ಮರಿಮಕ್ಕಳು ಎಲ್ಲರೂ ಬಂದಿದ್ದರಂತೆ ಎಂದು ಅಲ್ಲಿದ್ದವರು ಯಾರೋ ವಾಟ್ಸ್‌ಆ್ಯಪ್‌ ಜೋಕ್‌ ಹೇಳಿ ನಗುತ್ತಿದ್ದರು!

ಜೋಗ ಕಾಣುವ ಯೋಗ
ಜೋಗ ಜಲಪಾತವನ್ನು ಗೆಸ್ಟ್‌ ಹೌಸ್‌ ಭಾಗದಿಂದ ವೀಕ್ಷಿಸುವುದು ಇನ್ನೊಂದು ಅಪೂರ್ವ ಅನುಭವ. ಸೂರ್ಯ ಮೋಡಗಳ ಮರೆಯಲ್ಲೇ ಕಡಲಿನೆಡೆಗೆ ಸರಿಯುತ್ತ ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಬಿಡಿಸುತ್ತಿದ್ದ. ನಾವು ಜಲಪಾತದತ್ತ ಹೆಜ್ಜೆ ಹಾಕುತ್ತಿರುವಾಗ ಎದುರಿನಿಂದ ಒಂದು ಕುಟುಂಬ ವಾಪಸಾಗುತ್ತಿತ್ತು. ಅವರೊಂದಿಗೆ ಮುದ್ದಾದ ನಾಯಿಯೂ ಇತ್ತು. ನಾನು, “ನಾಯಿಯ ಯೋಗ ನೋಡಿ. ಅದೂ ಜೋಗ ನೋಡಲು ಬಂದಿದೆ’ ಎಂದೆ. ನಮ್ಮ ಜತೆಗಿದ್ದ ವಿಶ್ವಾಸ್‌ ತಟ್ಟನೆ “ಎಂಚ ಉಂಡು ಜೋಗ?’ ಎಂದು ಜೋರಾಗಿಯೇ ಕೇಳಿದ. ಎಲ್ಲರೂ ಬಿದ್ದು ಬಿದ್ದು ನಕ್ಕೆವು. ನಾಯಿಯ ಮಾಲಕರಿಗೆ ತುಳು ಬರುತ್ತಿರಲಿಲ್ಲವಾದರೂ ವಿಶ್ವಾಸ್‌ ಕೇಳಿದ ರೀತಿಯೇ ಅವರಲ್ಲೂ ಮುಗುಳ್ನಗು ಅರಳಿಸಿತು. ನಾಯಿಗೇನು ಅರ್ಥವಾಯಿತೋ, ತುಂಬ ಚೆನ್ನಾಗಿದೆ ಎನ್ನುವ ರೀತಿಯಲ್ಲಿ ತಲೆ ಅಲ್ಲಾಡಿಸಿ ಠೀವಿಯಿಂದ ಮುಂದೆ ಸಾಗಿತು. ಜೋಗದ ಒಂದು ಕವಲು ಒಂದು ಬದಿಯಿಂದ ನೋಡಿದಾಗ ಗುಡ್ಡದ ಅರ್ಧ ಭಾಗದಿಂದ ಚಿಮ್ಮುವಂತೆ ಕಾಣುತ್ತದೆ. ಗೆಸ್ಟ್‌ ಹೌಸ್‌ ಭಾಗದಿಂದ ನೋಡಿದರೆ ಅದು ಕೊರಕಲಿನಲ್ಲಿ ಜಿಗಿಯುತ್ತ ಮುನ್ನೆಲೆಗೆ ಬರುವುದು ಗೋಚರಿಸುತ್ತದೆ. ಅಲ್ಲಿ ಸೂರ್ಯಾಸ್ತಮಾನದ ಚಿತ್ರಗಳನ್ನು ಸೆರೆಹಿಡಿಯುವ ಆಸೆ ಇತ್ತು. ಆದರೆ, ದಟ್ಟ ಮೋಡಗಳು ಅಡ್ಡಿಯಾದವು.

ಏನು ಬೇಕು ಬೇಗ ಹೇಳಿ!
ಮರಳುವ ದಾರಿಯಲ್ಲಿ ಬಿಳಿಗಾರು ಎಂಬಲ್ಲಿ ಒಂದು ಕ್ಯಾಂಟೀನ್‌ ಮುಂದೆ ಬಸ್‌ ನಿಲ್ಲಿಸಿದೆವು. ಕ್ಯಾಂಟೀನ್‌ ಮಾಲಕ ಚಹಾ, ತಿಂಡಿಯ ಆರ್ಡರ್‌ ಪಡೆಯಲು ಅವಸರ ಮಾಡುತ್ತಿದ್ದ. “ಏನ್‌ ಬೇಕು ಬೇಗ ಹೇಳಿ’ ಎಂದು ಕನಿಷ್ಠ ಹತ್ತು ಬಾರಿಯಾದರೂ ಕೇಳಿದ್ದ.
ಒಂದು ಬೆಳಗ್ಗೆ ಹೊರಟವರು ಮಧ್ಯರಾತ್ರಿ ಮನೆ ಮುಟ್ಟಿದೆವು. ಮಿನಿ ಬಸ್‌ ಚಾಲಕ ಎಲ್ಲಿಯೂ ಅವಸರ ಮಾಡದೆ, ರೇಗದೆ ನಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಸಹಕರಿಸಿದ್ದರು.

ನಾಲ್ಕು ಕವಲುಗಳು ಸೊರಗುವ ಮೊದಲು ನೀವೂ ಒಮ್ಮೆ ಜೋಗದ ಗುಂಡಿ ನೋಡಿ ಬನ್ನಿ…

ರೂಟ್‌ ಮ್ಯಾಪ್‌
· ಮಂಗಳೂರಿನಿಂದ 210, ಉಡುಪಿಯಿಂದ 163 ಕಿ.ಮೀ.
·ಹೆಬ್ರಿ, ಆಗುಂಬೆ, ತೀರ್ಥಹಳ್ಳಿ, ಸಾಗರ ಮಾರ್ಗವಾಗಿ ಜೋಗಕ್ಕೆ ಒಳ್ಳೆಯ ರಸ್ತೆಯಿದೆ.
· ಆಗುಂಬೆ ಘಾಟಿ ಸಿಗುವುದರಿಂದ ಮಿನಿ ಬಸ್‌, ಕಾರು ಸೂಕ್ತ.
· ಹತ್ತಿರದ ಪ್ರೇಕ್ಷಣೀಯ ಸ್ಥಳಗಳು: ಸಾಗರ, ಶಿರಸಿ, ಬನವಾಸಿ

– ಅನಂತ ಹುದೆಂಗಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ