ಹೆಚ್ಚುತ್ತಿದೆ ಜಾನಪದ ಕ್ರೀಡೆಗಳತ್ತ ಒಲವು

Team Udayavani, Sep 12, 2019, 5:00 AM IST

ಜಾನಪದ ಆಟೋಟ ಈ ನೆಲದ ಸಂಸ್ಕೃತಿಯ ಪ್ರತೀಕ. ಒಂದು ಕಾಲದಲ್ಲಿ ಮನೆಯ ಅಂಗಳ, ವಠಾರ, ಗದ್ದೆ ಮೊದಲಾದೆಡೆ ಬಹುವಾಗಿ ಸದ್ದು ಮಾಡಿದ್ದ ಜಾನಪದ ಆಟಗಳು ಕಾಲ ಕ್ರಮೇಣ ಆಧುನಿಕತೆಯ ಆರ್ಭಟಕ್ಕೆ ತೆರೆಮರೆಗೆ ಸರಿದವು ಈಗ ಮತ್ತೆ ಗ್ರಾಮ್ಯ ಪ್ರದೇಶದಲ್ಲಿ ತನ್ನ ಛಾಪು ಮೂಡಿ ಸುತ್ತಿರುವುದು ಗಮನಾರ್ಹ ಸಂಗತಿ.

ಆಟಿಕೂಟ, ಕೆಸರ್‌ಡೊಂಜಿ ದಿನ ಎಂಬಿತ್ಯಾದಿ ಕೂಟಗಳ ಮೂಲಕ ಮಣ್ಣಿನಾಟವನ್ನು ಮತ್ತೆ ನೆನಪಿಸುವ ಪ್ರಯತ್ನಗಳು ನಡೆಯುತ್ತಿವೆೆ. ವರ್ಷಂಪ್ರತಿ ಗ್ರಾಮಗಳಲ್ಲಿ ಸಂಘ ಸಂಸ್ಥೆಗಳು ಜಾನಪದ ಆಟಗಳನ್ನು ಆಯೋಜಿಸಿ ಬಹುಮಾನ ವಿತರಿಸಿ ಸಂಭ್ರಮ ಸಡಗರ ಹಂಚಿಕೊಳ್ಳಲಾಗುತ್ತಿದೆ.

ವೈವಿಧ್ಯಮಯ ಜಾನಪದ ಕ್ರೀಡೆಗಳು
ಎಲ್ಲ ಜನಾಂಗಳಲ್ಲೂ, ಪ್ರದೇಶ ಗಳಲ್ಲೂ ಹಿಂದಿನ ದಿನಗಳಿಂದಲೇ ಪ್ರಚಲಿತವಾಗಿರುವ ಅನೇಕ ಜಾನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ ಆಗಿದೆ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಟೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್‌ ಆಟ, ಪಲ್ಲಿಪತ್‌, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ, ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆ ಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾ ಮುಚ್ಚಾಲೆ, ಗಾಡಿ ಯಾಟ, ಮೊದಲಾದ ಹೊರಾಂಗಣ ಆಟಗಳಿವೆ.

ಚೆನ್ನ ಮಣೆ, ಪಗಡೆ, ಕಲ್ಲಾಟ, ಕವಡೆ ಆಟ, ಹೊಂಗಾರನ ಕಾಯಿ, ಗಜ್ಜುಗ, ಮಂಜೊಟ್ಟಿ, ಹುಣಸೇ ಬೀಜ ಗಳಿಂದ ಆಡುವ ಆಟ ಮುಂತಾದ ಒಳಾಂಗಣ ಆಟ ಆಡುತ್ತಿದ್ದರು. ಇವು ಎಳೆಯರ ಸಣ್ತೀ ಪೂರ್ಣ ಬೆಳವಣಿ ಗೆಗೆ ಸಹಕಾರಿಯಾಗಬಲ್ಲುವು. ತುಳುನಾಡಿ ನಲ್ಲಿ ಕಂಬಳ, ಕೆಸರುಗದ್ದೆ ಕ್ರೀಡೆ ಹೀಗೆ ಹತ್ತಾರು ಬಗೆಯ ಜಾನಪದೀಯ ಸ್ಪರ್ಧೆ ಗಳಿವೆ. ಎಲ್ಲ ಆಟಗಳು ನಿಯಮಗಳ ಚೌಕಟ್ಟಿನಲ್ಲಿ ಸಾಗುವ ಕಾರಣ ಜೀವನದಲ್ಲಿ ಒಂದು ಬಗೆಯ ಶಿಸ್ತು ಮೂಡಿಸಲು ಅನುಕೂಲಕರ ಎನ್ನಬಹುದು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಗ್ರಾಮ್ಯದ ಆಟಗಳಿಗೆ ಯುವ ಸಮುದಾಯ ಕೂಡ ಹೆಚ್ಚು ಆಸ್ಥೆ ವಹಿಸುತ್ತಿದೆ. ಅಲ್ಲಲ್ಲಿ ಸ್ಪರ್ಧೆ ಆಯೋಜಿಸಿ ಊರ-ಪರವೂರಿನ ಜನರನ್ನು ಭಾಗವಹಿಸಲು ಪ್ರೇರೆಪಿಸುತ್ತದೆ.

ಸರಕಾರ ಯುವಜನ ಇಲಾಖೆ ಮೂಲಕ ವರ್ಷಂಪ್ರತಿ ಯುವಜನ ಮೇಳ ಹಮ್ಮಿಕೊಂಡು ಉತ್ತೇಜನ ನೀಡುತ್ತಿದೆ. ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸಿ ರಾಜ್ಯದ ವಿವಿಧ ಭಾಗದ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಅವಕಾಶ ನೀಡಲಾಗಿದೆ. ಇದು ಯುವ ಸಮು ದಾಯ ಪಾಲ್ಗೊಳ್ಳಲು ಇರುವ ವೇದಿಕೆ. ಹಾಗಾಗಿ ಇಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಪರಿಚಿಸುವ ಅವಕಾಶ ದೊರೆಯುತ್ತದೆ. ಇದರ ಜತೆಗೆ ಶಾಲಾ ಕಾಲೇಜುಗಳಲ್ಲಿ ವಿವಿಧ ಘಟಕಗಳ ಮೂಲಕ ಜಾನಪದ ಆಟೋಟ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

-  ಕಿರಣ್‌ ಕುಂಡಡ್ಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ