ಕಾನನದ ನಡುವೆ ಸೀತೆಯ ಝರಿ ಕೂಡ್ಲುತೀರ್ಥ…

Team Udayavani, Jan 9, 2020, 4:37 AM IST

ಸುತ್ತಲೂ ದಟ್ಟವಾದ ಹಚ್ಚ ಹಸುರಿನಿಂದ ಕೂಡಿದ ಸೌಂದರ್ಯ ಲಹರಿ. ಕಾಡಿನ ನಡುವೆ ಜುಳು ಜುಳು ಹರಿವ ನೀರಿನ ನಿನಾದ. ಬೃಹದಾಕಾರದ ಮರಗಳ ಮೇಲೆ ಚಿಲಿಪಿಲಿ ಹಕ್ಕಿಗಳ ಕಲರವ. ಅಲ್ಲಲ್ಲಿ ಕಂಡು ಕಾಣದಂತೆ ಸರಸರ ಸದ್ದು ಮಾಡುತ್ತಾ ಹರಿದಾಡುವ ಸರೀಸೃಪಗಳು, ಕಾಡು ಪ್ರಾಣಿಗಳ ಕೂಗು.

ಮುಂದಿನ ಹಾದಿಯೇ ಕಾಣದಂತೆ ಒತ್ತೂತ್ತಾಗಿ ಬೆಳೆದು ನಿಂತ ವೃಕ್ಷರಾಶಿ. ಹೆಬ್ಬಂಡೆಗಳ ನಡುವೆ ಪುಟ್ಟದೊಂದು ಕಾಲುದಾರಿ. ನಡೆದಷ್ಟು ಮನಸ್ಸಿಗೆ ಮತ್ತಷ್ಟು ಉಲ್ಲಾಸ,ಉತ್ಸಾಹ ನೀಡುವ ತಣ್ಣನೆಯ ವಾತಾವರಣ. ಇಂಥಹ ಸೌಂದರ್ಯದ ನಡುವೆ ಧುತ್ತೆಂದು ಗಗನದೆತ್ತರದಿಂದ ತಿಳಿ ಹಾಲಿನಂತೆ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದೇ ಕೂಡ್ಲು ತೀರ್ಥ ಜಲಪಾತ. ಇದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿದೆ. ಇದಕ್ಕೆ ಸೀತಾ ಫಾಲ್ಸ್‌ ಎಂದೂ ಕರೆಯುತ್ತಾರೆ.

ಸಾಹಸ ಪ್ರವೃತ್ತಿ
ನಗರ ಜೀವನದ ಜಂಜಾಟಗಳಿಂದ ದೂರವಾಗುವುದಕ್ಕೆ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದು ಸಾಮಾನ್ಯ. ಆದರೆ ಚಾರಣವೆಂಬುದು ಸಾಹಸಿ ಪ್ರವೃತ್ತಿ. ಇದು ಯುವಕರನ್ನು ಅತಿಯಾಗಿ ಆಕರ್ಷಿಸುವಂತಹದ್ದು. ಚಾರಣ ಮುಗಿದ ಮೇಲೆ ಸಿಗುವ ಸಂತೋಷ, ಏನೋ ಸಾಧನೆ ಮಾಡಿದ ಅನುಭವ, ಮನಸ್ಸಿಗೆ ಮುದ ನೀಡುವ ಸಿಹಿ ನೆನಪುಗಳು ನಮ್ಮನ್ನು ಮತ್ತೆ ಮತ್ತೆ ಚಾರಣಕ್ಕೆ ಪ್ರೇರೇಪಿಸುತ್ತದೆ. ಚಾರಣದ ವೇಳೆ ಆಗುವ ಅನುಭವ ಹೇಳತೀರದು. ಅನನ್ಯ ಸಂತೋಷ, ಉಲ್ಲಾಸ ನೀಡುತ್ತದೆ.

ಅನುಭವವೇ ಅದ್ಭುತ
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸೀತಾ ನದಿ ಹರಿದು, ಎತ್ತರದಿಂದ ಧುಮ್ಮಿಕ್ಕಿ ಕೂಡ್ಲು ಜಲಪಾತವಾಗಿದೆ. ಹಾಗೆಯೇ ಧುಮ್ಮಿಕ್ಕುವ ಕೂಡ್ಲು, ಆಗುಂಬೆ ಕಾಡಿನತ್ತ ಇನ್ನಷ್ಟು ಜಲಧಾರೆಯಾಗಿ ಚಿಮ್ಮುತ್ತದೆ. ಸುಮಾರು 180 ಅಡಿ ಎತ್ತರದಿಂದ ಸುರಿದು ನೀಳವಾಗಿ ಇಳೆಗೆ ಉದುರಿ ಸ್ವರ್ಗವಾಗುವ ಕೂಡ್ಲುವಿನ ನೋಟ ಹಬ್ಬದೂಟ. ಜಲಪಾತದ ಸೌಂದರ್ಯದಷ್ಟೇ. ಅದನ್ನು ಕಾಣಲು ಹೋಗುವ ಚಾರಣದ ದಾರಿ ಸುಂದರವಾಗಿದೆ. ಮುಗಿಲೆತ್ತರದ ಮರಗಳ ಸಮೂಹದ ನಡುವೆ ಹೆಜ್ಜೆ ಹಾಕುವಾಗ ಸಿಗುವ ಅನುಭವವೇ ಅದ್ಭುತ.

ನೈಸರ್ಗಿಕ ಕೊಳ
ನೀರು ಧುಮ್ಮಿಕ್ಕುವ ಶಬ್ಧ ಅನುಸರಿಸುತ್ತಾ ಹೆಜ್ಜೆ ಹಾಕಿದರೆ, ತುದಿಯಲ್ಲಿ ವಿಶಾಲವಾದ ನೈಸರ್ಗಿಕ ಕೊಳವೊಂದು ಕಾಣುತ್ತದೆ. ಆ ಕೊಳಕ್ಕೆ ಮೇಲಿನಿಂದ ಹಾಲು ಸುರಿದಂತೆ ನೀರು ಧುಮ್ಮಿಕ್ಕುತ್ತಿರುತ್ತದೆ. ಅಲ್ಲಿಗೆ ನಾವು ಕೂಡ್ಲುತೀರ್ಥ ಜಲಪಾತದ ಎದುರು ನಿಂತಿರುತ್ತೇವೆ. ಆ ಜಲಧಾರೆಯನ್ನು ಕಂಡಾಕ್ಷಣ ಮೈ-ಮನದ ದಣಿವೆಲ್ಲ ಮಂಗಮಾಯ. ದಬ ದಬನೆ ಸುರಿಯುವ ಜಲ ರಾಶಿ ಪ್ರವಾಸಿಗರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ.

ಅಪಾಯವೂ ಇದೆ
ಮನಸ್ಸಿಗೆ ಮಂದಹಾಸವನ್ನು ನೀಡುವ ಸೀತಾ ಫಾಲ್ಸ್‌ಗೆ ಚಾರಣಪ್ರಿಯರಷ್ಟೇ ಅಲ್ಲ, ಸಾಹಸ ಪಟ್ಟು ಕಾಡಿನೊಳಗೆ ಹೆಜ್ಜೆ ಹಾಕುತ್ತೇನೆ ಎನ್ನುವ ಆಸಕ್ತಿ ಇದ್ದವರೆಲ್ಲರೂ ಕುಟುಂಬ ಸಹಿತ ಹೋಗಬಹುದು. ಆದರೆ ಕಡಿದಾದ ದಾರಿಯಲ್ಲಿ ಚಾರಣ ಮಾಡಬೇಕಿರುವುದರಿಂದ ಸ್ವಲ್ಪ ಎಚ್ಚರ ವಹಿಸಬೇಕು. ತುಸು ಆಯ ತಪ್ಪಿದರೂ ಅಪಾಯ.

ರೂಟ್‌ ಮ್ಯಾಪ್‌
ಉಡುಪಿಯಿಂದ ಹೆಬ್ರಿ ಮಾರ್ಗವಾಗಿ ಸಾಗಬೇಕು.
ಸೀತಾನದಿಯ ದಾರಿಯಲ್ಲಿ ಹೆಬ್ಬಂಡೆಗಳ ಮಧ್ಯೆ ನಡೆದು ಹೋಗಬೇಕು.

– ಸುಶಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ