ಮೇರುತಿ ಪರ್ವತನ್ನೇರಿ ಬಾನೆತ್ತರಕ್ಕೆ ಕೈಚಾಚಿ ಮೋಡಗಳನ್ನು ಸ್ಪರ್ಶಿಸುವ ಖುಷಿ ಅವರ್ಣನೀಯ

Team Udayavani, Sep 27, 2019, 5:36 AM IST

ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದಾದ ಚಿಕ್ಕಮಗಳೂರುಜಿಲ್ಲೆ ಹಲವಾರು ಪ್ರವಾಸಿತಾಣಗಳನ್ನು ಹೊಂದಿರುವ ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ, ಚಿಕ್ಕಮಗಳೂರು ಎಂದಾಕ್ಷಣನಮ್ಮ ಮನಸಿನಲ್ಲಿ ಬರುವಂತಹ ಪ್ರಮುಖ ಹೆಸರು ಕೆಮ್ಮಣ್ಣು ಗುಂಡಿ, ಬಾಬಬುಡನಗಿರಿ, ಮುಳ್ಳಯ್ಯನಗಿರಿಬೆಟ್ಟ, ಇವಿಷ್ಟು ತಾಣಗಳನ್ನು ಹೆಚ್ಚಿನ ಪ್ರವಾಸಿಗರು ಸಂದರ್ಶಿಸುವ ಸ್ಥಳಗಳು. ಆದರೆ ಈ ಜಿಲ್ಲೆಯಲ್ಲಿ ಇದೆ ರೀತಿಯ ಹತ್ತುಹಲವು ಪ್ರವಾಸಿತಾಣಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದೆ ಅಂತಹ ಪ್ರಮುಖತಾಣಗಳ ಸಣ್ಣ ಪರಿಚಯವನ್ನು ನಾವು ಪರಿಚಯಿಸುತ್ತಿದ್ದೇವೆ, ಅಂದ ಹಾಗೆ ಇಂದು ನಾನು ಹೇಳಲು ಹೊರಟಿರುವ ಸುಂದರತಾಣದ ಹೆಸರು ಮುಳ್ಳಯ್ಯನಗಿರಿಬೆಟ್ಟದಷ್ಟೇ ಸೌಂದರ್ಯವನ್ನು ಮೈಗೆತ್ತಿಕೊಂಡಿರುವ ಇದೆ ಜಿಲ್ಲೆಯಲ್ಲಿ ಆಕಾಶದೆತ್ತರಕ್ಕೆ ತಲೆಯೆತ್ತಿ ನಿಂತಿರುವ ಗಿರಿಶಿಖರ ಮೇರುತಿಪರ್ವತ,

ಚಾರಣಿಗರ ಸ್ವರ್ಗ:

ಮೇರುತಿ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5451 ಅಡಿಗಳಷ್ಟು ಎತ್ತರದಲ್ಲಿದೆ ಈಗಿರಿಶಿಖರವು ಶೃಂಗೇರಿ ಕಳಸ, ಹೊರನಾಡು ಪವಿತ್ರ ಯಾತ್ರಾ ಸ್ಥಳದ ಕೇಂದ್ರಭಾಗವಾದಲ್ಲಿ ಮೈದಳೆದು ನಿಂತಿದೆ.

ಬೆಟ್ಟದ ಮೇಲೆ ಹತ್ತಿನೋಡಿದರೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿ, ಅಡಿಕೆತೋಟಗಳು, ಅಂದ ಹಾಗೆ ಮಾಗಿಯ ಕಾಲದಲ್ಲಿ ಈ ಬೆಟ್ಟಕ್ಕೆ ಹತ್ತಿದರೆ ನಮ್ಮ ಜೊತೆಗಿರುವವರು ಮುಸುಕು ಮಂಜಿನಲ್ಲಿ ಅವಿತು ಕುಳಿತಂತೆ ಭಾಸವಾಗುತ್ತದೆ ಒಮ್ಮಿಂದೊಮ್ಮೆಗೆ ನಾವು ಕಾಶ್ಮೀರದಲ್ಲಿದ್ದೇವೇನೋ ಎನ್ನುವ ಅನುಮಾನನೂ ಹುಟ್ಟುತ್ತದೆ ಇಲ್ಲಿನ ಮತ್ತೂಂದು ವಿಶೇಷತೆ ಏನೆಂದರೆ ತಪಸಾಣೆ ಇಲ್ಲಿ ಬದರಿಮುನಿಗಳು ತಪಸ್ಸು ಮಾಡಿದ್ದಾರೆಂಬ ಕುರುಹುಗಳಿವೆ ಜೊತೆಗೆ ಇಲ್ಲಿ ಬಂಡೆಕಲ್ಲುಗಳನ್ನು ಕೊರೆದು ಬರುವಂತಹ ತೀರ್ಥ ಈ ಪ್ರದೇಶದ ಜನರ ಜೀವನಾಡಿಯಾಗಿದೆ.

ಮೇರುತಿ ಪರ್ವತಕ್ಕೆ ಭೇಟಿ ನೀಡುವವರು ಬಸರಿಕಟ್ಟೆಯಲ್ಲಿರುವ ಮೇತಿಕಾನ್‌ ಟೀ ಎಸ್ಟೇಟಿನಿಂದ ಅನುಮತಿಯನ್ನು ಪಡೆದು ಚಾರಣ ಪ್ರಾರಂಭಿಸಬೇಕು ಸುತ್ತಲೂ ಹಚ್ಚಹಸುರಿನ ಸ್ವತ್ಛಂದ ಕಾಫೀ ತೋಟದ ನಡುವೆ ಹೆಜ್ಜೆಹಾಕುತ್ತಾ ಸಾಗಿದರೆ ನಿಮ್ಮ ಉತ್ಸಾಹ ಇಮ್ಮಡಿಗೊಳ್ಳುವುದಂತೂ ಸತ್ಯ, ಮುಂದೆ ಸಾಗಿದರೆ ನಮಗೆ ನೆರಳು ನೀಡಲು ಮಾರೆತ್ತರಕ್ಕೆ ಬೆಳೆದು ನಿಂತಿರುವ ಮರಗಳು, ಮರಗಳಲ್ಲಿ ಚಿಲಿಪಿಲಿ ಹಕ್ಕಿಗಳ ನಾದ ನಮ್ಮ ಚಾರಣದ ಹುಮ್ಮಸ್ಸನ್ನು ಹೆಚ್ಚಿಸಿದಂತಹ ಅನುಭವ. ಹೀಗೆ ಸಾಗುತ್ತ ಮುಂದೆ ಎದುರುಗೊಳ್ಳುವುದೇ ಹಸಿರು ಹುಲ್ಲುಗಳಿಂದ ಶೃಂಗಾರಗೊಂಡಿರುವ ಮೇರುತಿಪರ್ವತ.

ಬೆಟ್ಟದ ತುದಿಯಲ್ಲಿದೆ ಗಣಪತಿ ಮಂದಿರ:
ಮೇರುತಿ ಪರ್ವತದ ತುತ್ತತುದಿಯನ್ನು ತಲುಪಿದರೆ ಚಾರಣಿಗರಿಗೆ ಪ್ರಕೃತಿ ಸೌಂದರ್ಯದ ಜೊತೆ ದೇವರ ದರುಶನದ ಭಾಗ್ಯ ಕೂಡ ಇಲ್ಲಿ ಸಿಗುತ್ತದೆ, ಬೆಟ್ಟದ ತುದಿಯಲ್ಲಿ ಗಣಪತಿ ದೇವರ ಗುಡಿಯೊಂದಿದ್ದು ಇಲ್ಲಿ ಮಾರ್ಚ್‌ ತಿಂಗಳಿನಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಊರಿನಜನರೆಲ್ಲರೂ ಸೇರಿ ನಡೆಸುತ್ತಾರೆ, ಅಂತೆಯೇ ತಪಸಾಣೆಯಲ್ಲಿ ಹೋಮ ಹವನಗಳನ್ನು ನಡೆಸಿಕೊಂಡುಬರುವುದು ಹಿಂದಿನಿಂದಲೂ ವಾಡಿಕೆಯಲ್ಲಿತ್ತು.

ಬೆಟ್ಟದ ತುದಿಯಲ್ಲಿ ನಿಂತುಕಣ್ಣು ಹಾಯಿಸಿದರೆ ಒಂದುಕಡೆ ಕಳಸ ಹೊರನಾಡು ದೇವಸ್ಥಾನ ಕಾಣಸಿಗುತ್ತದೆ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗಿರಿಶಿಖರಗಳನ್ನು ಕಣ್ತುಂಬಿಕೊಳ್ಳಬಹುದು, ಬೆಟ್ಟದ ಬುಡದಲ್ಲಿ ನಿಂತು ಪರ್ವತದ ತುದಿಯನ್ನು ನೋಡಿದಾಗ ಬಾನುಭುವಿ ಸಂಗಮಿಸಿದಂತೆ ಗೋಚರಿಸುತ್ತದೆ.

ತಿಂಡಿ ತಿನಿಸು ನೀವೇ ಜವಾಬ್ದಾರರು:
ಚಾರಣಿಗರು ಇಲ್ಲಿಗೆ ಬರುವಾಗ ತಮಿಗೆ ಬೇಕಾಗಿರುವ ತಿಂಡಿ ತಿನಿಸುಗಳನ್ನು ತಾವೇ ತರಬೇಕು ಇಲ್ಲಿ ಯಾವುದೇ ರೀತಿಯ ತಿಂಡಿ ತಿನಿಸುಗಳು ಸಿಗುವುದಿಲ್ಲ, ಬಸರಿಕಟ್ಟೆಯಲ್ಲಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳಬಹುದು.

ಜನಾಕರ್ಷಣೆ ಕಡಿಮೆ :
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ, ಬಾಬಾ ಬುಡನಗಿರಿ, ಕೆಮ್ಮಣ್ಣುಗುಂಡಿ ಹೀಗೆ ಹಲವಾರು ಗಿರಿಧಾಮಗಳು ಹೆಚ್ಚು ಪ್ರಚಲಿತದಲ್ಲಿ ಇದೆ ಆದರೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಮೇರುತಿ ಪರ್ವತ ಹೆಚ್ಚಿನ ಜನಾಕರ್ಷಣೆಯನ್ನು ಪಡೆಯದಿರುವುದು ಬೇಸರದ ಸಂಗತಿ. ಈ ಬೆಟ್ಟ ಇನ್ನಷ್ಟು ಜನಾಕರ್ಷಣೆಯನ್ನು ಪಡೆಯಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಭೇಟಿಹೇಗೆ :
ಮೇರುತಿ ಪರ್ವತ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹತ್ತಿರದ ಪ್ರದೇಶ, ಕಳಸದಿಂದ ಬಸ್ರಿಕಟ್ಟೆ ಮಾರ್ಗದಲ್ಲಿ ಪ್ರಯಾಣಿಸಿದರೆ ಮೇಥಿಖಾನ್‌ ಎಸ್ಟೇಟ್‌ ಎದುರುಗೊಳ್ಳುತ್ತದೆ ಇಲ್ಲಿಂದ ಅನುಮತಿಯನ್ನು ಪಡೆದು ಚಾರಣ ಮುಂದುವರಿಸಬೇಕು.

ಸ್ವತ್ಛತೆಯನ್ನುಕಾಪಾಡಿ :
ಇಲ್ಲಿಗೆ ಬರುವ ಚಾರಣಿಗರು ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸುರಕ್ಷತೆ ವಹಿಸಬೇಕು, ತಾವು ತಂದಂತಹ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳುಮಾಡದೆ ಪರ್ವತದ ಸೌಂದರ್ಯ ಇಮ್ಮಡಿಗೊಳಿಸಲು ಸಹಕರಿಸಿ ಜೊತೆಗೆ ಮೇರುತಿ ಪರ್ವತದ ಪ್ರಚಾರ ಹೊರ ಜಗತ್ತಿಗೂ ಹಬ್ಬಲು ಸಹಕರಿಸಿ ಎಂಬುದು ನಮ್ಮ ಆಶಯ…

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ