ಕಣ್ಮನ ಸೆಳೆಯುವ ಪ್ರಾಕೃತಿಕ ಕೌತುಕ “ಬಾಂಡೀಲು”

Team Udayavani, Aug 29, 2019, 5:00 AM IST

ಮಾನವ ನಿರ್ಮಿತ ಸೋಜಿಗಕ್ಕಿಂತ ಹಲವು ಶತಮಾನಗಳ ಹಿಂದಿನಿಂದಲೂ ಯಾವುದೇ ಪ್ರಾಕೃತಿಕ ವಿಕೋಪಕ್ಕೆ ನಾಶವಾಗದೇ ಉಳಿದಿರುವ ಹಲವು ಅಚ್ಚರಿಯ ರಚನೆಗಳು ಕೆಲವು ಊರುಗಳಲ್ಲಿ ಕಾಣಸಿಗುತ್ತವೆ. ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸುಂದರ ಪ್ರಕೃತಿ ತಾಣ ಬಾಂಡೀಲು.

ಚಾರಣಿಗರು, ಪ್ರಕೃತಿಪ್ರಿಯರೂ ಮೈ ಮರೆಯುವ ಮತ್ತು ಅಚ್ಚರಿಯಿಂದ ಕಣ್ಣರಳಿಸುವ, ಅಧ್ಯಯನಕ್ಕೂ ಆಹಾರವಾಗಬಲ್ಲ ಸುಂದರ ಪ್ರಕೃತಿ ತಾಣ ಬಾಂಡೀಲು.
ಸಾರಡ್ಕ ದಾಟಿ ಬಂದರೆ ಪೆರ್ಲ, ಅಲ್ಲಿಂದ ಪುತ್ತಿಗೆ, ಬಾಡೂರು ದಾರಿಯಾಗಿ ಕುಂಬಳೆಗೆ ಸಾಗುವ ಹಾದಿಯಲ್ಲಿ 4 ಕಿ.ಮೀ. ದೂರ ಕ್ರಮಿಸಿದರೆ ಬೆದ್ರಂಪಳ್ಳ, ತುಸು ದೂರದಲ್ಲಿ ಬಾಂಡೀಲು ಎಂಬ ಸಣ್ಣ ಬಸ್‌ ತಂಗುದಾಣ ಸಿಗುತ್ತದೆ.

ಇಲ್ಲಿಂದ ಕೂಗಳತೆಯ ದೂರದಲ್ಲಿ ಗೇರು ತೋಟ ಹಾಗೂ ಇತರ ಮರ, ಗಿಡ, ಬಳ್ಳಿಗಳಿಂದ ಆವೃತವಾದ ಪ್ರದೇಶವೊಂದಿದೆ. ಅಲ್ಲಿ ಸುಮಾರು 100 ಜನ ಕುಳಿತುಕೊಳ್ಳುವಷ್ಟು ವಿಸ್ತಾರಕ್ಕೆ ಆಳೆತ್ತರಕ್ಕೆ ನೆಲದಿಂದ ಉಬ್ಬಿ, ಪಾರೆ (ಹಾಸುಗಲ್ಲು)ಚಾವಣಿಯ ರೀತಿ ಹಾಸಿಕೊಂಡಿದೆ. ನಡುವೆ ಮರ ಅಥವಾ ಮಣ್ಣಿನ ಆಧಾರವಿಲ್ಲ. ಈ ಪಾರೆಯ ಮೇಲೆ ಆತಂಕವಿಲ್ಲದೆ ನಡೆದಾಡಬಹುದು. ಅದರ ಎರಡೂ ತುದಿಗಳಲ್ಲಿ ಗುಹೆಗಳಿವೆ. ಇವುಗಳಲ್ಲಿ ಮುಳ್ಳು ಹಂದಿ, ಕಾಡು ಹಂದಿ ಮೊದಲಾದ ಪ್ರಾಣಿಗಳು ಅವಿತಿರುತ್ತವೆ. ಹಿಂದೆ ಊರಿನ ಬೇಟೆಗಾರರು ಬಾಂಡಿಲಿನ ಮೇಲೆ ಕುಳಿತು ಗುಹೆಯಿಂದ ಹೊರಡುವ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರಂತೆ.

ಹಿಂದೆ ಮದುಮಗ ಹಾಗೂ ಮದುಮಗಳಿದ್ದ ಪಲ್ಲಕ್ಕಿಯನ್ನು ಹೊತ್ತವರು ದಣಿವಾರಿಸಲೆಂದು ಇಲ್ಲಿ ಇಳಿಸಿದ್ದರಂತೆ. ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಮದುಮಗ, ಮದುಮಗಳು ನಾಪತ್ತೆ! ಹಾಗಾಗಿ ಈ ಪ್ರದೇಶಕ್ಕೆ ಪಲ್ಲೆಂಕಿ ಪಾರೆ ಎನ್ನುವ ಹೆಸರೂ ಇತ್ತಂತೆ. ಎರಡೂ ಬಾಂಡೀಲುಗಳು ಪಲ್ಲಕ್ಕಿಯ ಆಕೃತಿಯನ್ನೇ ನೆನಪಿಸುವಂತಿವೆ.

ಸ್ವಲ್ಪ ಮುಂದೆ ಸಾಗಿದರೆ ಎಣ್ಮಕಜೆ ತರವಾಡು ಮನೆ ಎದುರಾಗುತ್ತದೆ. ಒಂದೊಮ್ಮೆ ಬಲ್ಲಾಳರ ಬೂಡು ಆಗಿದ್ದ ಇದು ಸದ್ಯ ಬಂಟರ ಸುಪರ್ದಿಯಲ್ಲಿದೆ. ನಾಗ, ಕೊರತ್ತಿ, ರಕ್ತೇಶ್ವರಿ ಬನಗಳನ್ನು ಹೊಂದಿರುವ ಇಲ್ಲಿ ಪಿಲಿಭೂತದ ಬಂಡಿಯಿರುವ ಮನೆತನವಿದೆ. ವಿಶಾಲವಾದ ಬಾಕಿತ್ತಿಮಾರ್‌ ಗದ್ದೆಯಲ್ಲಿ ಪಿಲಿ ಭೂತದ ಮರದ ಹುಲಿಯಿರುವ (ಸೇಜಿ) ಗುಡಿಯಿದೆ. ಅಡ್ಯತ್ತಿಮಾರ್‌ ಗದ್ದೆ ಈಗ ಅಡಿಕೆ ತೋಟವಾಗಿದ್ದರೂ ಅದರ ಬದಿಯಲ್ಲಿ ಒಂದೆಡೆ ಬಿಸಿ ನೀರು ಚಿಮ್ಮವ ಸುರಂಗ (ಮುಗುಳಿ) ಕಾಣಬಹುದು. ಅದರ ವಿಸ್ತಾರವನ್ನು ಅಳೆದವರಿಲ್ಲ.

ಮುಂದೆ ಕಾಲು ಸಂಕ ದಾಟಿ ಸಾಗಿದರೆ ಪ್ರಕೃತಿ ಸೌಂದರ್ಯದ ಖಜಾನೆಯೇ ತೆರೆದುಕೊಳ್ಳುತ್ತದೆ. ವಿಶಾಲವಾಗಿ ಹರಡಿರುವ ಹಾಸುಪಾರೆಯ ದೊಡ್ಡ ಹಸುರಿನ ಬಯಲು (ಮಲ್ಲ ಒಡಾಲ್‌). ಇದು ಗೇರು ನಿಗಮದ ಅಧೀನಕ್ಕೆ ಒಳಪಟ್ಟಿದ್ದು, ಇಲ್ಲಿ ಮನೆಗಳು ಇಲ್ಲ. ಸಣ್ಣ ಕೆರೆಗಳಿದ್ದು, ಅದರಲ್ಲಿ ಕಪ್ಪೆ, ಕೇರೆ, ನೀರು ಹಾವುಗಳು ನಿರ್ಭಯವಾಗಿ ಜೀವಿಸುತ್ತಿವೆ. ನವಿಲು, ಹಕ್ಕಿಗಳನ್ನು ನೋಡುತ್ತ ಸಾಗಿದರೆ ದೂರದಿಂದ ಕಾಣುವ ಗುಂಪೆ ಗುಡ್ಡೆಯ ನೋಟ ರಮಣೀಯವಾಗಿರುತ್ತದೆ.

ಅಲ್ಲಿಂದ ತುಸು ದೂರದಲ್ಲಿ ಮರಗಳಿಂದ ಆವೃತವಾದ ಮತ್ತೂಂದು ಬಾಂಡೀಲು (ಪಿಲಿ ಬಾಂಡೀಲು) ದೊರೆಯುತ್ತದೆ. ಬೃಹದಾಕಾರದ ಗುಹೆಯೂ ಇದೆ. ಇದು ಹುಲಿಗಳ ಅಡಗುದಾಣವಾಗಿತ್ತೆಂದು ಗ್ರಾಮದ ಹಿರಿಯರಾದ ಅರೆಮಂಗಿಲ ನಾರಾಯಣ ರೈಗಳು ಹೇಳುತ್ತಾರೆ. ಈ ಗುಹೆಯೊಳಗೆ ಟಾರ್ಚ್‌ ಬೆಳಗಿಸುತ್ತ ಬಹಳ ದೂರ ಸಾಗಿದರೂ ಕೊನೆ ಮುಟ್ಟುತ್ತಿರಲಿಲ್ಲ. ದನಕರುಗಳು ಒಳಹೊಕ್ಕು ದಾರಿ ತಪ್ಪಬಾರದೆಂದು ಗುಹೆಯ ಬಾಗಿಲಿಗೆ ಕಲ್ಲುಗಳನ್ನು ಅಡ್ಡ ಇರಿಸಲಾಗಿದೆ. ಹಿಂದೊಮ್ಮೆ ಆ ಗ್ರಾಮವನ್ನು ನಡುಗಿಸಿದ ಕುಂಞಿರಾಮ ಎನ್ನುವ ಕಳ್ಳ ಹಗಲು ಹೊತ್ತಿನಲ್ಲಿ ಮುಖಕ್ಕೆ ಬೂದಿ ಸವರಿಕೊಂಡು ಇಲ್ಲಿ ಅಡಗಿರುತ್ತಿದ್ದನಂತೆ.

ಮುಂದೆ ಬಯಲಲ್ಲಿ ವಿಶಾಲವಾದ ಎಟ್ಟಿ (ಸಿಗಡಿ) ಪಳ್ಳವಿದೆ. ಬೇಸಗೆಯಲ್ಲೂ ಇದರಲ್ಲಿ ನೀರು ಬತ್ತುವುದಿಲ್ಲ. ತಗ್ಗಿನ ಪ್ರದೇಶ ಬೇಂಗಪದವು ಕೃಷಿಕರು ನೀರು ಹರಿಸಿಕೊಂಡು ತರಕಾರಿ ಬೆಳೆಯುತ್ತಾರೆ. ಈ ಕೆರೆಯಲ್ಲಿ ನೈದಿಲೆಯ ಗಿಡಗಳನ್ನು ಕಾಣಬಹುದು.

ಈ ಕೆರೆಗೆ ವನವಾಸದ ಸಂದರ್ಭದಲ್ಲಿ ಪಾಂಡವರು ಬಂದಿದ್ದರಂತೆ. ರಾತ್ರಿ ಬೆಳಗಾಗುವಷ್ಟರಲ್ಲಿ ಅರಮನೆ ನಿರ್ಮಿಸಬೇಕು ಎಂದು ನಿರ್ಧರಿಸಿದ್ದರಂತೆ. ಕೃಷ್ಣನಿಗೆ ಮನಸ್ಸಿರಲಿಲ್ಲ. ಹಾಗಾಗಿ, ಕೃಷ್ಣ ಹುಂಜದ ರೂಪ ತಾಳಿ ಕೂಗಿದಾಗ ಬೆಳಗಾಯಿತೆಂದು ಪಾಂಡವರು ಅಲ್ಲಿಂದ ಹೊರಟು ವಿಟ್ಲದಲ್ಲಿ ಅರಮನೆ ನಿರ್ಮಿಸಿದರು ಎಂದು ಕಥೆ ಇದೆ.

ಅಲ್ಲಿಂದ ಕೆಳಗಿಳಿದರೆ ಜಲಪಾತ ಮಾದರಿಯ ಗುರ್ಮೆಯನ್ನು ಮನದಣಿಯೆ ನೋಡಬಹುದು. ಅಲ್ಲಿ ಮಣ್ಣು ಕುಸಿಯುತ್ತಿರುವ ಕಾರಣ ಸುರಕ್ಷತೆಯ ದೃಷ್ಟಿಯಿಂದ ಗ್ರಾಮದ ಅನುಭವಿಕರನ್ನು ಕರೆದೊಯ್ಯುವುದು ಸೂಕ್ತ.

ಈ ಪ್ರದೇಶದಲ್ಲಿರುವುದು ಬಂಡೆಕಲ್ಲುಗಳ ಮಾದರಿಯ ಪಾರೆ ಅಲ್ಲ. ಹೊರಮೈ ಕಪ್ಪಾಗಿದ್ದು, ಒಳಗೆ ಕೆಂಪಗಿರುವ ಚಿಪ್ಪು ಪಾರೆ. ಮೇಲ್ಭಾಗದಲ್ಲಿ ಪೂರ್ತಿ ಸಣ್ಣಪುಟ್ಟ ಹೊಂಡಗಳಿವೆ. ಮಳೆಗಾಲದಲ್ಲಿ ಅವುಗಳಲ್ಲಿ ನೀರು ನಿಂತಿರುತ್ತದೆ. ನೀರಿಂಗುವಿಕೆ ಇಲ್ಲಿ ಪ್ರಾಕೃತಿಕವಾಗಿ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಎನ್ನಲಾಗುತ್ತಿದೆ. ಈ ಬಾಂಡೀಲುಗಳ ಆಸುಪಾಸು ಎಲ್ಲ ಕಡೆ ನೀರಿನ ಒರತೆಗಳಿವೆ. ಪೆರ್ಲ ಪೇಟೆಯಿಂದ ಸ್ವಲ್ಪ ಮೇಲೆ ಹೋದರೆ ಮಚ್ಯì ಮಸೀದಿಯ ಬಳಿಯೂ ಒಂದು ಬಾಂಡೀಲು ಇದೆ. ಈ ವಿಸ್ಮಯಗಳನ್ನು ನೀವೂ ಒಮ್ಮೆ ನೋಡಿ ಬನ್ನಿ.

ರೂಟ್‌ ಮ್ಯಾಪ್‌
·   ಪೆರ್ಲದಿಂದ ಪುತ್ತಿಗೆ ಬಾಡೂರು ದಾರಿಯಾಗಿ ಕುಂಬಳಗೆ ಹೋಗುವ ನಡುವೆ ಸಿಗುವ ಬೆದ್ರಂಪಳ್ಳ ಮತ್ತು ಮಣಿಯಂಪುರ ಬಸ್‌ ನಿಲ್ದಾಣಗಳ ನಡುವೆ ಸಿಗುವುದೇ ಬಾಂಡೀಲು.
·   ಸ್ವಲ್ಲ ಮುಂದೆ ಎಣ್ಮಕಜೆ ತರವಾಡು ಮನೆ ಎದುರಾಗುತ್ತದೆ. ಒಂದೊಮ್ಮೆ ಬಲ್ಲಾಳರ ಬೂಡು ಆಗಿದ್ದ ಇದು ಸದ್ಯ ಬಂಟರ ಸುಪರ್ದಿಯಲ್ಲಿದೆ. ಇದು ಕೂಡ ನೋಡಬಹುದಾದ ಸ್ಥಳ.

– ರಾಜಶ್ರೀ ಟಿ. ರೈ ಪೆರ್ಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ