ಸ್ಮಾರ್ಟ್‌ ಫೋನ್‌ ಎಂಬ ಸೂಪರ್‌ ಮಾರ್ಕೆಟ್‌

Team Udayavani, Jun 13, 2019, 5:00 AM IST

ಈ ಶತಮಾನವನ್ನು ಸ್ಮಾರ್ಟ್‌ ಯುಗ ಅಂದರೂ ತಪ್ಪಿಲ್ಲ. ಬಯಸಿದೆಲ್ಲವೂ ಕ್ಷಣಾರ್ಧದಲ್ಲಿ ಸಿಗಬೇಕು, ಆಗಿಬಿಡಬೇಕು ಎನ್ನುವ ಮನಸ್ಥಿತಿ ಇರುವ ಕಾಲಘಟ್ಟದಲ್ಲಿ ತಂತ್ರಜ್ಞಾನಾಧಾರಿತ ಪರಿಕರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಹೆಚ್ಚು.

ಸಾವಧಾನದಿಂದ ಹೆಜ್ಜೆ ಇಡುತ್ತಿದ್ದ ಮನಸ್ಸನ್ನು ವೇಗದೂತವನ್ನಾಗಿ ಪರಿವರ್ತಿಸಿದ್ದು ಈ ಸ್ಮಾರ್ಟ್‌ ಯುಗ. ಒಂದಷ್ಟು ಅನನುಕೂಲತೆ, ಹೆಚ್ಚು ಅನುಕೂಲತೆ ಇರುವ ಈ ಯುಗವನ್ನು ನೆಚ್ಚಿಕೊಂಡವರೇ ಅಧಿಕ. ಶಿಕ್ಷಣ, ವ್ಯವಹಾರ, ಸಂಪರ್ಕ, ಸಂವಹನ ಹೀಗೆ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಸ್ಮಾರ್ಟ್‌ ತಂತ್ರಜ್ಞಾನ ಬಳಕೆಯಲ್ಲಿದೆ. ವ್ಯವಸ್ಥೆ ಹೇಗೆ ಬದಲಾಗುತ್ತಿದೆ ಅಂದರೆ ಸ್ಮಾರ್ಟ್‌ ತಂತ್ರಜ್ಞಾನದ ಅಬ್ಬರಕ್ಕೆ ಊರುಗಳೇ ಸ್ಮಾರ್ಟ್‌ ಸಿಟಿಗಳಾಗಿ ಬದಲಾಗುತ್ತಿವೆ.

ಕೆಲವು ವರ್ಷಗಳ ಹಿಂದಷ್ಟೇ ಕಾಲಿಟ್ಟ ಸ್ಮಾರ್ಟ್‌ ಆಧಾರಿತ ತಂತ್ರಜ್ಞಾನಗಳು ಸೃಷ್ಟಿಸಿದ ಅನಿವಾರ್ಯತೆ ಊಹಿಸಲು ಅಸಾಧ್ಯ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಒಂದು ಕಾಲದಲ್ಲಿ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸುವುದೇ ದೊಡ್ಡ ಸಂಗತಿ ಎನಿಸಿತ್ತು. ಈಗ ಆ ಜಾಗದಲ್ಲಿ ಇಮೇಲ್‌, ವಾಟ್ಸ್‌ ಆ್ಯಪ್‌, ಟೆಲಿಗ್ರಾಂ, ಫೇಸುಬುಕ್‌, ಟ್ವಿಟರ್‌ ಆಗಮಿಸಿ ಹೊಸ ಪ್ರಪ್ರಂಚವನ್ನೇ ಸೃಷ್ಟಿಸಿವೆ.

ಹೀಗೆ ಎಸ್‌ಎಂಎಸ್‌ ಮಾತ್ರ ಕಳೆದು ಹೋಗಿದ್ದಲ್ಲ. ಬದಲಿಗೆ ಆ ಸೌಲಭ್ಯ ಮಾತ್ರ ಇದ್ದ ಮೊಬೈಲ್‌ ಸೆಟ್‌ಗಳೂ ತೆರೆಮರೆಗೆ ಸರಿದಿವೆ. ಈಗ ಏನಿದ್ದರೂ ಸ್ಮಾರ್ಟ್‌ ಮೊಬೈಲ್‌. ಸ್ಮಾರ್ಟ್‌ ತಂತ್ರಾಂಶ ಬಳಸುವ ಸಂದರ್ಭ ಕಿರಿಕಿರಿ ಆಗಬಾರದು ಎನ್ನುವ ಕಾರಣದಿಂದ ಕರೆ ಮಾಡಲಷ್ಟೇ ಉಳಿದ ಫೋನ್‌ ಸೆಟ್‌ಗಳು ಸೀಮಿತ.

ಇನ್ನೊಂದು ಮಗ್ಗುಲನ್ನು ಗಮನಿಸಿದರೆ, ಇಂಟರ್‌ನೆಟ್‌ ಮೊಬೈಲ್‌ನೊಳಗೆ ಜಾಗ ಪಡೆದು ಸರ್ವವ್ಯಾಪ್ತಿಯಾದ ಅನಂತರ ಕಂಪ್ಯೂಟರ್‌ ಅನ್ನು ಅನಿವಾರ್ಯ ಎಂಬ ನೆಲೆಯಲ್ಲಿ ಅವಲಂಬಿಸುವ ಪ್ರಮೇಯ ತಪ್ಪಿತ್ತು. ಸೈಬರ್‌ ಕೇಂದ್ರಗಳಿಗೆ ಹೊಕ್ಕಿ, ಅಲ್ಲಿ ಕಂಪ್ಯೂಟರ್‌ ಮುಂದೆ ಕುಳಿತ ಶೋಧಿಸುವ ಬದಲು ಸ್ಮಾರ್ಟ್‌ ಪೋನ್‌ ಕ್ಷಣಮಾತ್ರದಲ್ಲಿ ಈ ಕೆಲಸ ಮಾಡುವಷ್ಟು ವೇಗವಾಗಿ ಬೆಳೆದಿದೆ. ಕಂಪ್ಯೂಟರ್‌ ಮಾಡುವ ಕೆಲಸವನ್ನು, ಟಿ.ವಿ. ಎಂಬ ಪೆಟ್ಟಿಗೆ ತೋರಿಸುವ ಕ್ರಿಕೆಟ್‌ ಮ್ಯಾಚ್‌ ಅನ್ನು ಸ್ಮಾರ್ಟ್‌ಫೋನ್‌ ಎಂಬ ಸಣ್ಣ ಸಾಧನ ಬಳಕೆದಾರರಿಗೆ ಒದಗಿಸಬಲ್ಲುದು. ಹತ್ತಾರು ಪರಿಕರಗಳನ್ನು ಅವಲಂಬಿಸಬೇಕಿದ್ದ ಕಾಲ ಬದಲಾಗಿ ಎಲ್ಲವೂ ಏಕ ತಂತ್ರಜ್ಞಾನದಲ್ಲಿ ದೊರೆಯುತ್ತಿದೆ. ಎಲ್ಲವೂ ಒಂದೇ ಸೂರಿನಡಿ ಕೈಗೆಟುಕುವ ಸೂಪರ್‌ ಮಾರ್ಕೆಟ್‌ ತರಹ.

ಶೇ. 99ಕ್ಕಿಂತ ಮಿಕ್ಕಿ ಯುವ ಸಮುದಾಯ ಸ್ಮಾರ್ಟ್‌ ತಂತ್ರಜ್ಞಾನ ಒಪ್ಪಿಕೊಂಡಿದೆ. ಶೇ. 60ಕ್ಕಿಂತ ಅಧಿಕ ವಯಸ್ಕರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಓಡಾಡುತ್ತಿದೆ. ಇದು ಮೊಬೈಲ್‌ ಎಂಬ ಸಂಪರ್ಕ ಸಂವಹನ ಮಾಧ್ಯಮವೊಂದು ಎಸ್‌ಎಂಎಸ್‌ ಅನಿವಾರ್ಯತೆ ಕಳೆದುಕೊಂಡು ಸ್ಮಾರ್ಟ್‌ ಆಗಿ ಬದಲಾದ ಸಣ್ಣ ಕಥೆಯಷ್ಟೆ. ಇಂತಹ ಸಾವಿರಾರು ಕಥೆಗಳು ಇನ್ನುಳಿದ ಪರಿಕರಗಳಲ್ಲಿ ಇವೆ.

-   ಕಿರಣ್‌ ಪ್ರಸಾದ್‌ ಕುಂಡಡ್ಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ