ಭಕ್ತರ ಸೆಳೆಯುವ ಭೂಕೈಲಾಸ ಶ್ರೀಕಾಳಹಸ್ತೀಶ್ವರ ದೇಗುಲ

Team Udayavani, Oct 3, 2019, 5:00 AM IST

ಸ್ವರ್ಣಮುಖಿನದಿಯ ದಡದಲ್ಲಿ ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುವುದು ಈ ಶ್ರೀ ಕಾಳಹಸ್ತೀಶ್ವರ ದೇಗುಲ. ಸಹೋದ್ಯೋಗಿಗಳು ಹಾಗೂ ಬಂಧು ಮಿತ್ರರೊಡನೆ ತಿರುಪತಿ ದೇವಸ್ಥಾನಕ್ಕೆ ತೆರಳಿದ ವೇಳೆ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶವು ನಮಗೆ ದೊರಕಿತು. ಅಲ್ಲಿನ ವೈಶಿಷ್ಟ್ಯ, ಇತಿಹಾಸ ಎಲ್ಲವೂ ನಮ್ಮನ್ನು ಅಚ್ಚರಿಗೊಳಿಸಿತ್ತು. ತಿರುಪತಿಯಿಂದ 40 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ಒಂದು ಬಾರಿ ಭೇಟಿ ನೀಡಿ.

ದಕ್ಷಿಣ ಭಾರತದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಆಂಧ್ರಪ್ರದೇಶದಲ್ಲಿರುವ ಶ್ರೀಕಾಳಹಸ್ತೀಶ್ವರ ದೇಗುಲವು ಮುಂಚೂಣಿಯಲ್ಲಿದೆ. ದಕ್ಷಿಣದ ಕಾಶಿ, ಭೂಕೈಲಾಸ ಎಂದೇ ಕರೆಸಿಕೊಳ್ಳುವ ಈ ಪುರಾಣ ಪ್ರಸಿದ್ಧ ಕ್ಷೇತ್ರ ತಿರುಪತಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಇತ್ತೀಚೆಗೆ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಸಹೋದ್ಯೋಗಿಗಳು ಹಾಗೂ ಬಂಧು-ಮಿತ್ರರನ್ನೊಳಗೊಂಡು ನಾವು 17 ಜನರು ತಿರುಪತಿ ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಶ್ರೀಕಾಳಹಸ್ತೀಶ್ವರ ದೇವಸ್ಥಾನ ವೀಕ್ಷಿಸಿ ಪುನೀತರಾದೆವು.

ಭೂಲೋಕದ ಕೈಲಾಸ!
ತಿರುಪತಿಯಿಂದ ಕೇವಲ 70 ನಿಮಿಷಗಳ ರಸ್ತೆ ಪ್ರಯಾಣದ ದೂರದಲ್ಲಿ ಸ್ವರ್ಣಮುಖಿ ನದಿಯ ದಡದಲ್ಲಿ ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುತ್ತಿದೆ- ಶ್ರೀ ಕಾಳಹಸ್ತೀಶ್ವರ ದೇಗುಲ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ಪವಿತ್ರ ಆಧ್ಯಾತ್ಮಿಕ ಕ್ಷೇತ್ರವು ತನ್ನ ಅನನ್ಯ ಪೌರಾಣಿಕ ಹಿನ್ನೆಲೆ, ಅಪೂರ್ವ ಕಲ್ಲಿನ ಕೆತ್ತನೆ, ಅನುಪಮ ಸೌಂದರ್ಯದಿಂದ ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ.

ದೇಶದ ಅತ್ಯಂತ ಪುರಾತನ ಶಿವ ದೇವಸ್ಥಾನಗಳಲ್ಲಿ ಒಂದಾದ ಕಾಳಹಸ್ತಿ ಪಲ್ಲವ, ಚೋಳ ಹಾಗೂ ಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿತು. ಈ ದೇವಸ್ಥಾನದ 4 ದಿಕ್ಕುಗಳಲ್ಲಿ ಅನುಕ್ರಮವಾಗಿ ಪಾತಾಳ ನಾಯಕ, ಜ್ಞಾನಾಂಬ, ಶ್ರೀ ಕಾಳಹಸ್ತೀಶ್ವರ ಹಾಗೂ ದಕ್ಷಿಣಾಮೂರ್ತಿಯ ವಿಗ್ರಹಗಳು ಪ್ರತಿಷ್ಠಾಪನೆಗೊಂಡಿವೆ. ಈ 4 ಮೂರ್ತಿಗಳು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಎಂಬ 4 ಪುರುಷಾರ್ಥಗಳನ್ನು ಪ್ರತಿಪಾದಿಸುತ್ತವೆ ಎಂಬ ಪ್ರತೀತಿ ಇದೆ. ಪಶ್ಚಿಮಾಭಿಮುಖವಾಗಿರುವ ಶ್ರೀ ಕಾಳಹಸ್ತೀಶ್ವರ ಇಲ್ಲಿ ಸ್ವಯಂಭೂ ಆಗಿ ಹಾಗೂ ವಾಯು ಸ್ವರೂಪಿಯಾಗಿ ಭಕ್ತರಿಂದ ಆರಾಧನೆ ಪಡೆಯುತ್ತಾರೆ.

ಜೇಡ-ಸರ್ಪ-ಹಸ್ತಿಗೆ ಮೋಕ್ಷ!
ಕೃತಯುಗ, ತ್ರೇತಾಯುಗ ಹಾಗೂ ದ್ವಾಪರ ಯುಗಗಳಲ್ಲಿ ಈಶ್ವರನ ಅನನ್ಯ ಭಕ್ತರಾಗಿದ್ದ ಶ್ರೀ ಎಂಬ ಜೇಡ, ಕಾಳ ಎಂಬ ಸರ್ಪ ಹಾಗೂ ಹಸ್ತಿ ಎಂಬ ಆನೆ ಇಲ್ಲಿ ಶಿವ ಸೇವೆ ಗೈಯ್ಯುತ್ತಾ ಮೋಕ್ಷ ಹೊಂದಿದ ಕಾರಣ ಈ ಕ್ಷೇತ್ರಕ್ಕೆ ಶ್ರೀ ಕಾಳಹಸ್ತೀಶ್ವರ ಎಂಬ ಹೆಸರು ಬಂತು ಎಂಬ ಐತಿಹ್ಯವೂ ಈ ಶೈವ ಕ್ಷೇತ್ರಕ್ಕಿದೆ.

ರಾಹು-ಕೇತು ದೋಷ ನಿವಾರಣೆ
ಶ್ರೀ ಕಾಳಹಸ್ತಿಯಲ್ಲಿ ರಾಹು-ಕೇತು ಹಾಗೂ ಸರ್ಪದೋಷ ನಿವಾರಣೆಗೆ ವಿಶೇಷ ಪೂಜೆ ನಿರಂತರವಾಗಿ ನಡೆಯುತ್ತದೆ. ದೇಶದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಈ ವಿಶೇಷ ಸೇವೆ ಸಲ್ಲಿಸಲೆಂದೇ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು ಇಲ್ಲಿನ ವೈಶಿಷ್ಟ್ಯ. ಶ್ರೀ ಕ್ಷೇತ್ರದ ತೀರ್ಥಬಾಯ ಹೆಸರು ಸರಸ್ವತೀ ತೀರ್ಥಂ. ನಟರಾಜ, ಬ್ರಹ್ಮಗುಡಿ, ಪಂಚಮುಖೇಶ್ವರ, ಶ್ರೀದುರ್ಗೆ, ಸುಬ್ರಹ್ಮಣ್ಯಗುಡಿಗಳನ್ನು ದೇವಸ್ಥಾನದ ಪ್ರಾಂಗಣದಲ್ಲಿ ಕಾಣಬಹುದು. ಭೃಗು ಮುನಿಯಿಂದ ಸ್ಥಾಪಿತವಾದ ಅರ್ಧನಾರೀಶ್ವರನ ವಿಗ್ರಹವೂ ಇಲ್ಲಿದೆ.

ಬೇಡರ ಕಣ್ಣಪ್ಪನಿಗೊಲಿದ ಶಿವ!
ಬೇಡರ ಕಣ್ಣಪ್ಪನಿಗೂ ಶ್ರೀ ಕಾಳಹಸ್ತಿಗೂ ಅವಿನಾಭಾವ ಸಂಬಂಧದ ಐತಿಹ್ಯಇರುವುದನ್ನು ಕಾಣಬಹುದು. ಶ್ರೀ ಪರಮೇಶ್ವರನು ಬೇಡರ ಕಣ್ಣಪ್ಪನ ಅನನ್ಯ ಭಕ್ತಿಗೆ ಒಲಿದ ಕ್ಷೇತ್ರವಾಗಿ ಈ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ದೇಗುಲದಲ್ಲಿರುವ ಬೃಹತ್‌ ಗೋಪುರವನ್ನು ವಿಜಯನಗರದ ದೊರೆ ಶ್ರೀಕೃಷ್ಣದೇವರಾಯ ನಿರ್ಮಿಸಿದ್ದಾನೆ ಎಂಬ ಇತಿಹಾಸ ಇದೆ.

ದೇವಸ್ಥಾನದಲ್ಲಿರುವ 4 ಗೋಪುರಗಳು ಅತ್ಯಾಕರ್ಷಕ ಶೈಲಿಯಿಂದ ಭಕ್ತರ ಮನಸೂರೆಗೊಳ್ಳುತ್ತವೆ. ಈ ಭವ್ಯ ದೇಗುಲದ ದರ್ಶನ ಪಡೆದು ಹೊರಬಂದಾಗ ನಮ್ಮೆಲ್ಲರಲ್ಲೂ  ವಿಶಿಷ್ಟ ಆಧ್ಯಾತ್ಮಿಕ ಅನುಭೂತಿ! ದೇವಸ್ಥಾನದ ಪ್ರವೇಶದ್ವಾರದ ಮುಂಭಾಗದಲ್ಲಿ ನಿಂತು ನಾವೆಲ್ಲ ಫೊಟೋ ಕ್ಲಿಕ್ಕಿಸಿಕೊಂಡೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸಿ ಕಾಟ್ಪಾಡಿ ಜಂಕ್ಷನ್‌ ನಿಲ್ದಾಣದಲ್ಲಿ ಇಳಿಯಬೇಕು. ರೈಲಿನಲ್ಲಿ ಸುಮಾರು 13 ಗಂಟೆಗಳ ಪ್ರಯಾಣ.
·ಕಾಟ್ಪಾಡಿ ರೈಲು ನಿಲ್ದಾಣದಿಂದ 140 ಕಿ.ಮೀ. ದೂರದಲ್ಲಿದೆ ಶ್ರೀ ಕಾಳಹಸ್ತಿ. ತಿರುಪತಿಯಿಂದ ಶ್ರೀ ಕ್ಷೇತ್ರಕ್ಕೆ ಕೇವಲ 40 ಕಿ.ಮೀ. ಕಾಟ್ಪಾಡಿಯಿಂದ ತಿರುಪತಿಗೆ ಬಸ್ಸು ಹಾಗೂ ರೈಲಿನ ಸಂಪರ್ಕ ಇದೆ. ಮಂಗಳೂರಿನಿಂದ ತಿರುಪತಿ/ರೇನಿಗುಂಟಕ್ಕೆ ನೇರ ರೈಲು ಹಾಗೂ ಬಸ್ಸು ಸೌಕರ್ಯವೂ ಇದೆ.
·ತಿರುಪತಿಯಲ್ಲಿ ತಂಗಲು ಸಾಕಷ್ಟು ವಸತಿಗೃಹಗಳಿವೆ.

-  ಸತೀಶ್‌ ಶೆಟ್ಟಿ , ಕೊಡಿಯಾಲ್‌ಬೈಲ್‌

ನೀವು ಇತ್ತೀಚೆಗೆ ಸ್ನೇಹಿತರು ಬಂಧುಗಳೊಂದಿಗೆ ತೆರಳಿರುವ ಪ್ರವಾಸಿ
ತಾಣಗಳಲ್ಲಿ ಕಂಡು ಬಂದ ಅದ್ಭುತ ವಿಚಾರಗಳ ಜತೆಗೆ ಅಲ್ಲಿ ನಿಮಗೇನು
ಖುಷಿ ಕೊಟ್ಟಿತು ಎಂಬುದನ್ನು ಸೇರಿಸಿ ಇಲ್ಲಿ ನಿಮ್ಮ ಪ್ರವಾಸ ಕಥನಗಳನ್ನು
ಬರೆಯಬಹುದು.  ನಿಮ್ಮ ಅನುಭವ ಮತ್ತು ನೀವು ದಾಖಲಿಸಿದ ಮಾಹಿತಿಯೊಂದಿಗೆ ಒಳ್ಳೆಯ ಫೋಟೊ ಕೊಡಿ ಪ್ರಕಟಿಸುತ್ತೇವೆ. ನಮ್ಮ
ಇ-ಮೇಲ್‌ ವಿಳಾಸ: mlr.sudina@udayavani.comವಾಟ್ಸಾಪ್‌ ನಂ.7618774529

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ