ಅಮರನಾಥ ಯಾತ್ರೆ ಎಂದೆಂದೂ ಅಮರ

Team Udayavani, Oct 24, 2019, 4:35 AM IST

ದಕ್ಷಿಣ ಕಾಶ್ಮೀರದ ಹಿಮಾಲಯ ಶ್ರೇಣಿ ವ್ಯಾಪ್ತಿಯಲ್ಲಿ 3,888 ಮೀ. ಎತ್ತರದಲ್ಲಿರುವ ನೈಸರ್ಗಿಕ ಹಿಮಲಿಂಗದ ದರ್ಶನವನ್ನು ಪಡೆಯಲು ಈ ಬಾರಿ ನಾವೂ ಸಹ ಉತ್ಸಾಹದಿಂದ ತೆರಳಿದೆವು. ಭೂಲೋಕದ ಸ್ವರ್ಗವನ್ನು ನೋಡಲು ಕಾತುರರಾಗಿ ಅಕ್ಕ, ಭಾವ ಕೇಳಿದ ತಕ್ಷಣ ಯಾತ್ರೆಗೆ ನಾನು ಮತ್ತು ಪತಿ ಇಬ್ಬರೂ ಜೈ ಎಂದೆವು. ನಾವು ಮೊದಲಿನಿಂದಲೂ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡುತ್ತಿದುದ್ದರಿಂದ ಧೈರ್ಯವೂ ಹೆಚ್ಚಾಯಿತು. ನಡಿಗೆಯ ಅಭ್ಯಾಸವನ್ನು ಎರಡು ತಿಂಗಳ ಮೊದಲಿನಿಂದಲೇ ಅಭ್ಯಾಸಿಸಿದ್ದರಿಂದ ಆತ್ಮವಿಶ್ವಾಸವೂ ದೃಢವಾಯಿತು. ಅಂತೆಯೇ ಹಿಮಲಿಂಗ ರೂಪದ ಶಿವನ ದರ್ಶನವನ್ನು ಪಡೆಯುವುದು ನಮ್ಮ ಯೋಗವಾಗಿತ್ತು. ಬೆಂಗಳೂರಿನಿಂದ ವಿಮಾನದಲ್ಲಿ ಹೊಸದಿಲ್ಲಿಗೆ ಬಂದು ಅಲ್ಲಿಂದ ಜಮ್ಮುವಿನ ಕತ್ರ ನಗರಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿ ಕಾಲ್ನಡಿಗೆಯ ಮೂಲಕ ವೈಷ್ಣೋದೇವಿಯ ದರ್ಶನದ ಅನಂತರ ಅಮರನಾಥದತ್ತ ಮುಖ ಮಾಡಿದೆವು.

ಅಮರನಾಥಯಾತ್ರೆ ಆರಂಭವಾಗುವುದು ಪಹಲ್ಗಾಂವ್‌ ಬೇಸ್‌ ಕ್ಯಾಂಪಿನಿಂದ 16 ಕಿ.ಮೀ ದೂರದಲ್ಲಿರುವ ಚಂದನ್ವಾರಿಯಿಂದ. ಕ್ಯಾಂಪ್‌ನಿಂದ ಯಾತ್ರಿಗಳನ್ನು ಬೆಳಗ್ಗೆ 6 ಗಂಟೆಗೆ ಸರಿಯಾಗಿ ಹೊರಬಿಡುತ್ತಾರೆ. ನಾವು ಕಾರು ಮಾಡಿಕೊಂಡು ಬೇತಾಬ್‌ ವ್ಯಾಲಿ ಮೂಲಕ ಚಂದನ್‌ ವಾರಿಗೆ ಬಂದು ಅಲ್ಲಿ ನಮ್ಮ ಯಾತ್ರಾ ಟಿಕೆಟ್‌ ತೋರಿಸಿ ಅನುಮತಿ ಮೇರೆಗೆ ಬೆಳಗ್ಗೆ ಸುಮಾರು 7.30 ಕ್ಕೆ ಯಾತ್ರೆಯನ್ನು ಆರಂಭಿಸಿದೆವು.

ಕಠಿನವಾದ ದಾರಿ
ಮೊದಲ 3 ಕಿ.ಮೀ. ಅತಿ ಕಠಿನವಾದ ಕಲ್ಲುಬಂಡೆಗಳನ್ನೊಳಗೊಂಡ ಏರು ಮಾರ್ಗವಾಗಿದ್ದರಿಂದ ನಾವು ಕುದುರೆಯನ್ನೇರಿ ಆ ದಾರಿಯನ್ನು ಸಾಗಬೇಕಾಯಿತು. “ಪಿಸ್ಸೂ ಟಾಪ್‌’ ಇದು ಕಠಿನ, ದುರ್ಗಮವಾದ ಮಾರ್ಗ ಇದಾಗಿದ್ದು ಅಲ್ಲಲ್ಲಿ ನಿಂತು ವಿರಮಿಸಿ ನಡೆದರೆ ಮಾತ್ರ ಏರಲು ಸಾಧ್ಯ. ಏಕೆಂದರೆ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿರುವುದರಿಂದ ಆಮ್ಲಜನಕದ ಕೊರತೆಯೂ ಕಾಣಿಸುತ್ತದೆ. ಅಲ್ಲಿ ದಟ್ಟಣೆ ಮಂಜು ಆವರಿಸಿತ್ತು. ಅಲ್ಲದೇ ಕ್ಷಣಕ್ಷಣಕ್ಕೂ ಹವಾಮಾನ ಬದಲಾವಣೆ ಆಗುವುದರಿಂದ ನಾವು ಎಲ್ಲದಕ್ಕೂ ಸಿದ್ಧರಿರಬೇಕು. ಅದರ ಅನಂತರದ ಸ್ಥಳ “ಜೋಜಿ ಬಾಲ್‌’.

ಈ ಸ್ಥಳವು ಅತ್ಯಂತ ಕಿರಿದಾದ ದಾರಿ, ಜಲಪಾತ ಹಾಗೂ ಸೇತುವೆ ಹೊಂದಿರುವುದರಿಂದ ಕುದುರೆ ಏರಿದವರು ಕೂಡ ಇಳಿದು 1 ಕಿ.ಮೀ. ನಷ್ಟು ನಡೆದೇ ಬರಬೇಕಾಗುತ್ತದೆ. ಪ್ರತಿ ಸ್ಥಳದಲ್ಲಿಯೂ ಉಚಿತ ಉಪಾಹಾರ, ಸಿಹಿ, ತಿನಿಸುಗಳ ಹಲವಾರು ಲಂಗರ್‌ಗಳು ಹಾಗೂ ಶೌಚಾಲಯಗಳ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ.

ಮನಮೋಹಕ ತಾಣ
ಚಾರಣದಲ್ಲಿ ಎಡಭಾಗದ ಬೃಹತ್‌ ಪರ್ವತಗಳಿಂದ ಹರಿಯುವ ಝರಿಗಳು, ಬಲ ಭಾಗದ ಪ್ರಪಾತದಲ್ಲಿ ಹರಿಯುವ ನದಿ ಇವೆಲ್ಲವನ್ನೂ ನೋಡಿದರೆ ಮೈ ಜುಂ ಎಂದೆನಿಸದೇ ಇರಲಾರದು. ಮುಂದೆ ನಾವು ಕಂಡದ್ದು ಅತ್ಯಂತ ಮನಮೋಹಕ ತಾಣ ಅದುವೇ “ಶೇಷ ನಾಗ್‌’. ಜೋಜಿಬಾಲ್‌ನಿಂದ 5 ಕಿ.ಮೀ. ದೂರದ ಅತ್ಯಂತ ಸುಂದರವಾದ ಬೃಹದಾಕಾರದ ಆ ಶಾಂತ ಸರೋವರ ತಿಳಿ ಹಸುರಿನ ಬಣ್ಣದಿಂದ ಕಣ್‌ ಸೆಳೆಯುತ್ತಿತ್ತು. ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಈ ಸರೋವರಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯವಾಗಿದ್ದು ಅನಂತರ ಇಲ್ಲಿ ಭಾರೀ ಹಿಮಪಾತವಾಗಿ ಸರೋವರವೇ ಹಿಮಗಟ್ಟುತ್ತದೆಯಂತೇ.

ಶೇಷ್‌ನಾಗ್‌ನ ಪರಿಸರದಲ್ಲಿ ಸ್ವಲ್ಪ ಸಮಯ ಕಳೆದು ಅನಂತರ 4 ಕಿ.ಮೀ. ಗಣೇಶ್‌ ಟಾಪ್‌ (ಮಹಾಗುಣ ಟಾಪ್‌) ಏರಬೇಕು. ಅಲ್ಲಿ ಆಮ್ಲಜನಕದ ಕೊರತೆ ಇರುವುದರಿಂದ ಆರೋಗ್ಯವಂತ ವ್ಯಕ್ತಿಗೂ ತುಸು ಕಷ್ಟವೆನಿಸಬಹುದು. ನಾವು ಮೇಲೇರಿ ನಿಂತಾಗ ವಿಪರೀತ ಚಳಿ ಹಾಗೂ ಮಳೆಯೂ ಹನಿಯಲಾರಂಭಿಸಿತು. ಅಲ್ಲಿ ನಿಂತು ರೈನ್‌ ಕೋಟ್‌ ಹಾಕಿಕೊಂಡು ಕೊಡೆ ಹಿಡಿದು ನಡೆಯಲು ಶುರು ಮಾಡಿದೆವು. ರಾತ್ರಿ ಸುಮಾರು ಎಂಟರ ಹೊತ್ತಿಗೆ “ಪೋಷ್‌ ಪತ್ರಿ’ ತಲುಪಿದೆವು. ಮರುದಿನ ಬೆಳಗ್ಗೆ 7 ರ ಸಮಯದಲ್ಲಿ ಪೋಷ್‌ ಪತ್ರಿಯಿಂದ ಹೊರಟು ಸುಮಾರು 8 ಕಿ.ಮೀ. ದೂರದ ಪಂಚ್‌ ತರಣಿ ಯನ್ನು ತಲುಪಿದೆವು.

ಪಂಚ್‌ ತರಣಿಯಿಂದ 3 ಕಿ.ಮೀ. ದೂರದಲ್ಲಿ “ಸಂಗಮ್‌ ಟಾಪ್‌’. ಮುಂದಿನ 3 ಕಿ.ಮೀ ದೂರದಲ್ಲಿ ಪವಿತ್ರ ಗುಹೆ ದೂರದಿಂದಲೇ ಕಾಣಸಿಗುತ್ತದೆ. ದೇವಾಲಯಕ್ಕೆ 100 ಮೆಟ್ಟಿಲುಗಳಿದ್ದು ಹತ್ತುವಾಗ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಉಚ್ಚರಣೆಯೊಂದಿಗೆ ಹತ್ತಿ ಗುಹಾ ದೇಗುಲದಲ್ಲಿ ಹಿಮಲಿಂಗ ರೂಪದ ಶಿವನ ದರ್ಶನ ಮಾಡಿದಾಗ ಅಮೋಘವಾದ ಭಕ್ತಿ ಪರವಶವಾಗುವುದು ಖಂಡಿತ. ಚಿಕ್ಕ ಲಿಂಗಗಳಾದ ಗಣೇಶ ಕಾರ್ತಿಕೇಯ, ಪಾರ್ವತಿಯ ಲಿಂಗದ ದರ್ಶನವನ್ನು ಮಾಡಿ ಧನ್ಯರಾದೆವು. ಜತೆಗೆ ಎರಡು ಬಿಳಿ ಪಾರಿವಾಳಗಳು ದೇವಾಲಯದ ಆಸುಪಾಸಿನಲ್ಲಿ ಹಾರಾಡುತ್ತಾ ಭಕ್ತಾದಿ ಯಾತ್ರಿಗಳಿಗೆ ಆಶೀರ್ವದಿಸುವಂತಿದ್ದವು.

ಜೀವನದಲ್ಲಿ ಒಮ್ಮೆ ನೋಡಬೇಕಾದ ಸ್ಥಳಗಳಲ್ಲಿ ದಕ್ಷಿಣ ಕಾಶ್ಮೀರದ ಅಮರನಾಥ ಯಾತ್ರೆಯೂ ಒಂದು. ಪ್ರಾಕೃತಿಕ ಸೌಂದರ್ಯದ ಜತೆಗೆ ಹಿಮದಿಂದ ಆವೃತವಾದ ಕಣಿವೆಗಳು ನೋಡಲು ದಿವ್ಯ ಅನುಭೂತಿ ನೀಡುವುದು. ಅಮರನಾಥ ಯಾತ್ರೆಯೂ ಭಕ್ತಿ, ಭಾವದ ಯಾತ್ರೆಯ ಜತೆಗೆ ಜೀವನ ಸಾರ್ಥಕವಾಗುವುದು.

ರೂಟ್‌ ಮ್ಯಾಪ್‌
· ಬೆಂಗಳೂರಿನಿಂದ ಹೊಸದಿಲ್ಲಿಗೆ ಪ್ರಯಾಣಿಸಿ ಅನಂತರ ಜಮ್ಮುವಿನ ಕತ್ರ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸಬಹುದು.
·ಕತ್ರದ ಪಹಲ್ಗಾಂವ್‌ ಬೇಸ್‌ ಕ್ಯಾಂಪಿನಿಂದ 16 ಕಿ.ಮೀ. ದೂರದಲ್ಲಿರುವ ಚಂದನ್ವಾರಿಯಿಂದ ಯಾತ್ರೆಯು ಆರಂಭವಾಗುವುದು.
· ಕುದುರೆಯನ್ನೇರಿ ಪ್ರಯಾಣಿಸಬೇಕು. ಪ್ರಯಾಣದ ವೇಳೆ ದಾರಿ ಮಧ್ಯದಲ್ಲಿ ಊಟದ ವ್ಯವಸ್ಥೆ ಇರಲಿದೆ.
· ಆರೋಗ್ಯದ ದೃಷ್ಟಿಯಿಂದಾಗಿ ಯಾತ್ರೆಗೆ ಹೊರಡುವವರು ಫಿಟ್‌ನೆಸ್‌ನಿಂದಿರಬೇಕು.

– ಡಾ| ಶ್ರೀಲತಾ ಪದ್ಯಾಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ