ನಿರ್ಣಾಯಕ ಹಂತದಲ್ಲಿ ತಂಡಗಳು ಕುಸಿಯುವುದೇಕೆ?

Team Udayavani, Jul 18, 2019, 5:00 AM IST

ಅದೇನು ಹಣೆಬರಹವೋ ಗೊತ್ತಿಲ್ಲ. ವಿಶ್ವವಿಖ್ಯಾತ ಬ್ಯಾಟಿಂಗ್‌ ಪಡೆ ಹೊಂದಿರುವ ಭಾರತ ಕ್ರಿಕೆಟ್ ತಂಡ ಮಹತ್ವದ ಸಂದರ್ಭದಲ್ಲಿ ಕುಸಿದು ಹೋಗುತ್ತದೆ. ಒಂದು ರೀತಿ ಈ ತಂಡ ದಕ್ಷಿಣ ಆಫ್ರಿಕಾವನ್ನು ನೆನಪಿಸುತ್ತದೆ. ದ.ಆಫ್ರಿಕನ್ನರು ಒತ್ತಡದ ಪಂದ್ಯಗಳಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಒತ್ತಡಕ್ಕೆ ಸಿಲುಕಿ ಸೋಲುತ್ತಿದ್ದರು. ಆ ತಂಡವನ್ನು ಸೋಲಿಸಬೇಕೆಂದರೆ ಒತ್ತಡ ಹೇರಬೇಕು ಎಂಬ ವಿಷಯ ಎಲ್ಲರಿಗೂ ಗೊತ್ತಾಗಿತ್ತು.

ಈಗ ಮತ್ತೂಂದು ರೂಪದಲ್ಲಿ ಈ ಸ್ವಭಾವ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಪಡೆಯಲ್ಲಿ ಕಾಣಿಸಿಕೊಂಡಿದೆ. ಈ ಆಟಗಾರರು ಒತ್ತಡಕ್ಕೆ ಮಣಿಯುವವರಲ್ಲ. ಆದರೆ ಮಹತ್ವದ ಪಂದ್ಯಗಳಲ್ಲಿ ದಿಢೀರ್‌ ಕುಸಿತಕ್ಕೆ ಒಳಗಾಗುತ್ತಾರೆ. ಜಗತ್ತಿನ ಎಂತಹ ಬೌಲಿಂಗ್‌ ಪಡೆಯನ್ನೂ ಮಣಿಸುವ ತಾಕತ್ತು ಹೊಂದಿರುವ ಈ ಬ್ಯಾಟ್ಸ್‌ಮನ್‌ಗಳು ಯಾಕೆ ಮುಖ್ಯ ಸಂದರ್ಭದಲ್ಲೇ ಕೈಕೊಡುತ್ತಾರೆನ್ನುವುದು ಬಹಳ ಕುತೂಹಲಕಾರಿ ಸಂಗತಿ.

ಇದಕ್ಕೆ ಮೊದಲ ನಿದರ್ಶನ ಸಿಕ್ಕಿದ್ದು 2003ರಲ್ಲಿ ದ.ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್ನಲ್ಲಿ. ಫೈನಲ್ವರೆಗೆ ಎಂತೆಂತಹ ಬೌಲಿಂಗ್‌ ಪಡೆಯನ್ನು ಧೂಳೀಪಟವೆಬ್ಬಿಸಿದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳು ಅಂತಿಮ ಪಂದ್ಯದಲ್ಲಿ ಪೈಪೋಟಿಯನ್ನೂ ನೀಡದೆ ಕೈಚೆಲ್ಲಿದರು. ಆಸ್ಟ್ರೇಲಿಯ ನೀಡಿದ್ದು 360 ರನ್‌ ಗುರಿ. ಸರಿ ಇದನ್ನು ಬೆನ್ನಟ್ಟುವುದು, ಅದರಲ್ಲೂ ಆಸ್ಟ್ರೇಲಿಯದಂತಹ ಬೌಲಿಂಗ್‌ ಪಡೆಯೆದುರು ಕಷ್ಟವೆಂದು ಎಲ್ಲರಿಗೂ ಗೊತ್ತು. 300 ರನ್‌ ಗಳಿಸುವ ಶಕ್ತಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿತ್ತು. ಆದರೆ ಭಾರತ ಅಲೌಟ್ ಆಗಿದ್ದು 234 ರನ್‌ಗೆ. ಇದನ್ನು ಸ್ವತಃ ಆಸ್ಟ್ರೇಲಿಯ ತಂಡ ಕೂಡ ನಿರೀಕ್ಷಿಸಿರಲಿಲ್ಲ. ಭಾರತದ ಈ ಕಳಪೆಯಾಟವನ್ನು ಕಂಡು ಅದು ಅಚ್ಚರಿಗೊಳಗಾಗಿತ್ತು.

ಇದೇ ರೀತಿಯ ಇನ್ನೊಂದು ಪ್ರಕರಣ ನಡೆದಿದ್ದು ಕೊಹ್ಲಿ ನಾಯಕತ್ವದಲ್ಲಿ. 2017ರಲ್ಲಿ ಭಾರತ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಫಿ ಫೈನಲ್ಗೇರಿತ್ತು. ಅಲ್ಲಿಯವರೆಗೆ ತನ್ನನ್ನು ಎದುರಿಸುವವರೇ ಇಲ್ಲವೆಂಬಂತೆ ಅದ್ಭುತವಾಗಿ ಆಡಿತ್ತು. ಫೈನಲ್ನಲ್ಲಿ ಎದುರಾಗಿದ್ದ ಪಾಕಿಸ್ಥಾನವನ್ನು ಲೀಗ್‌ ಹಂತದಲ್ಲಿ ಹೀನಾಯವಾಗಿ ಸೋಲಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ತಮಗೆ ಬ್ಯಾಟಿಂಗ್‌ ಬರುವುದೇ ಇಲ್ಲವೆಂಬಷ್ಟು ಕೆಟ್ಟದಾಗಿ ಆಡಿ ಭಾರತೀಯರು ಆಲೌಟಾದರು. ಆ ಪಂದ್ಯದಲ್ಲಿ ಪಾಕಿಸ್ಥಾನ ಭಾರತಕ್ಕೆ ನೀಡಿದ್ದ ಗುರಿ 339 ರನ್‌. ಭಾರತ ಅತ್ಯಂತ ಕಳಪೆ ಬ್ಯಾಟಿಂಗ್‌ ಮಾಡಿ 158 ರನ್‌ಗೆ ಆಲೌಟಾಯಿತು. ಹಾಗೆ ನೋಡಿದರೆ, ಭಾರತಕ್ಕೂ, ಪಾಕಿಸ್ಥಾನಕ್ಕೂ ಬ್ಯಾಟಿಂಗ್‌ ಶಕ್ತಿಯಲ್ಲಿ ತಾಳೆಯೇ ಇಲ್ಲ. ಅಂತಹ ಪ್ರಬಲ ಬ್ಯಾಟ್ಸ್‌ಮನ್‌ಗಳಿದ್ದರೂ ಭಾರತೀಯರು 158 ರನ್‌ಗಳಿಗೆ ಕುಸಿದರು. ಇಂತಹ ಕುಸಿತ ಆಗಾಗ ಭಾರತೀಯ ತಂಡದಲ್ಲಿ ಸಂಭವಿಸುತ್ತಲೇ ಇರುತ್ತದೆ. ಒಂದು ಹಂತದಲ್ಲಿ ಈ ಕುಸಿತ ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ ಭಾರತೀಯರಿಗೆ ಬ್ಯಾಟಿಂಗ್‌ ಬರುವುದಿಲ್ಲವೋ ಎನ್ನುವಂತಾಗಿತ್ತು. ಇವೆಲ್ಲ ನಿರ್ಣಾಯಕ ಸಂದರ್ಭದಲ್ಲಿ ಎನ್ನುವುದು ಅಚ್ಚರಿ. ಈ ಕುಸಿತಕ್ಕೆ ಕಾರಣ ಏನು ಎಂಬ ಪ್ರಶ್ನೆಗೂ ಉತ್ತರವಿಲ್ಲವಾಗಿದೆ.

ಭಾರತೀಯರ ಇಂತಹ ಕುಸಿತ ಮಗದೊಮ್ಮೆ ಕಂಡು ಬಂದಿದ್ದು 2019ರ ಏಕದಿನ ವಿಶ್ವಕಪ್‌ನಲ್ಲಿ. ಸಾಮಾನ್ಯ ಬೌಲಿಂಗ್‌ ಹೊಂದಿರುವ ಅಫ್ಘಾನಿಸ್ಥಾನದಂತಹ ತಂಡದೆದುರು ಭಾರತೀಯರು ತೀರಾ ಅಲ್ಪ ಮೊತ್ತಕ್ಕೆ ಕುಸಿದಿದ್ದರು. ಕಡೆಗೆ ಮೊಹಮ್ಮದ್‌ ಶಮಿ ಬೌಲಿಂಗ್‌ನಿಂದಾಗಿ ಗೆದ್ದು ಮರ್ಯಾದೆ ಉಳಿಸಿಕೊಂಡಿದ್ದರು. ಇಂತಹ ಇನ್ನೊಂದು ಸನ್ನಿವೇಶ ನಿರ್ಮಾಣವಾಗಿದ್ದು ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ. ಮೊದಲು ಬ್ಯಾಟಿಂಗ್‌ ಮಾಡಿದ್ದ ನ್ಯೂಜಿಲ್ಯಾಂಡ್‌ ತಿಣುಕಾಡಿ 239 ರನ್‌ ಮಾಡಿತ್ತು. ಇದನ್ನು ಬೆನ್ನತ್ತಿ ಹೊರಟ ಭಾರತ, ಕೇವಲ 92 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಅಂತಹ ದೈತ್ಯ ಬ್ಯಾಟಿಂಗ್‌ ಪಡೆ ಹೀಗೆ ಕುಸಿದಿದ್ದು ಅಭಿಮಾನಿಗಳಿಗೆ ಪ್ರಶ್ನಾರ್ಹವೆನಿಸಿತು.

ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ತಂಡದಲ್ಲೂ ಸಮಸ್ಯೆ
ಒಂದೊಂದು ತಂಡ ಒಂದೊಂದು ರೀತಿಯಲ್ಲಿ ವಿಫ‌ಲವಾಗುತ್ತವೆ. ದ.ಆಫ್ರಿಕಾ ಪಂದ್ಯದಲ್ಲಿ ಒತ್ತಡದ ಸನ್ನಿವೇಶ ಸೃಷ್ಟಿಯಾದರೆ ಸೋಲುವುದು ಮಾಮೂಲು. ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ತಂಡಗಳದ್ದು ಇನ್ನೊಂದು ಸಮಸ್ಯೆ. ಇಂಗ್ಲೆಂಡ್‌ 2019ರ ಏಕದಿನ ವಿಶ್ವಕಪ್‌ಗ್ೂ ಮುನ್ನ ಹಲವು ಬಾರಿ ಕೂಟದ ಫೈನಲ್ ಪ್ರವೇಶಿಸಿದೆ. ಅಲ್ಲೆಲ್ಲ ಸೋಲನುಭವಿಸಿದೆ. ನ್ಯೂಜಿಲ್ಯಾಂಡ್‌ ಕೂಡ 2019ರ ವಿಶ್ವಕಪ್‌ಗ್ೂ ಮೊದಲು 6 ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು. ಒಮ್ಮೆಯೂ ಗೆದ್ದಿಲ್ಲ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ