ಕುಂದಾದ್ರಿಯಿಂದ ಅಜಂತಾವರೆಗೆ; ಇವು ಓದುಗರ ನೆಚ್ಚಿನ ತಾಣಗಳು

Team Udayavani, Sep 27, 2019, 1:37 PM IST

ಪ್ರವಾಸ ಹೋಗುವ ಆಸೆ, ಕನಸು ಯಾರಲ್ಲಿ ಇಲ್ಲ ಹೇಳಿ. ಕೆಲವೊಂದು ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ನೆಲೆಯಲ್ಲಿ ನಿಮ್ಮ ‘ಉದಯವಾಣಿ ಡಾಟ್ ಕಾಮ್’ ನಿಮ್ಮ ನೆಚ್ಚಿನ ಪ್ರವಾಸಿ ತಾಣಗಳ ಬಗ್ಗೆ ಬರೆದು ಕಳುಹಿಸಿ ಎಂದು ಓದುಗರಿಗೆ ಆಹ್ವಾನ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಆಯ್ದ ಕೆಲವು ಇಲ್ಲಿವೆ.

ಕೂಡ್ಲೂ ಜಲಪಾತ (ಸೀತಾನದಿ ಜಲಪಾತ) :- ಹೆಬ್ರಿಯಿಂದ ಸೋಮೇಶ್ವರ ಮಾರ್ಗವಾಗಿ ಹೋಗುವಾಗ ಹೆಬ್ರಿಯಿಂದ 5 ಕಿ.ಮೀ ದೂರದಲ್ಲಿ ಬಲಕ್ಕೆ ತಿರುಗಿ ಅಲ್ಲಿಂದ 15 ಕಿ.ಮೀ  ದುಸ್ತರವಾದ ಹಾದಿಯಲ್ಲಿ ಸಾಗಿದರೆ ಕೂಡ್ಲು ಜಲಪಾತದ ಚೆಕ್ ಪೋಸ್ಟ್ ಸಿಗುತ್ತದೆ. ಅಲ್ಲಿಂದ ಕಾಲ್ನಡಿಗೆ ಮೂಲಕ 3-4 ಕಿ.ಮೀ ಕಾಡಿನ ದಾರಿಯಲ್ಲಿ ಸಾಗಿದರೆ ಸುಂದರವಾದ, ಮನೋಹರವಾದ, ರುದ್ರರಮಣೀಯವಾದ ಕೂಡ್ಲು ಜಲಪಾತ ಎದುರಾಗುತ್ತದೆ. ಕಾಡಿನ ದಾರಿಯಲ್ಲಿ ಸಾಗುವಾಗಲೇ ಜಲಪಾತದ ಭೋರ್ಗರೆತ ಕೇಳಿಸುತ್ತದೆ. ನೀರಿನ ಮಟ್ಟವು ಯಾವುದೇ ಅಪಾಯಕಾರಿ ಮಟ್ಟದಲ್ಲಿರದೆ ತಂಪಾಗಿ, ನಡೆದು ಬಂದ ದಣಿವನ್ನು ಕ್ಷಣಾರ್ಧದಲ್ಲಿ ಇಲ್ಲವಾಗಿಸುತ್ತದೆ. ಬಂಡೆಯ ಮೂಲಕ ಜಾಗರೂಕರಾಗಿ ನಡೆದರೆ ಜಲಪಾತದ ಅಡಿಯಲ್ಲಿ ನಿಲ್ಲಬಹುದು.  ನೀರಿನಲ್ಲಿ ಆಟವಾಡುತ್ತಾ ಸಮಯ ಕಳೆದದ್ದೆ ತಿಳಿಯುವುದಿಲ್ಲ. ಮುಖ್ಯವಾಗಿ ಇಲ್ಲಿಗೆ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಸ್ಥಳ – ಕುಂದಾದ್ರಿ (ಆಗುಂಬೆ)  ಆಗುಂಬೆ ಯಾರಿಗೆ ಗೊತ್ತಿಲ್ಲ ಹೇಳಿ. ಆಗುಂಬೆಯಿಂದ ಸುಮಾರು 18 ಕಿ.ಮೀ ಸಾಗಿದರೆ ಸಿಗುವುದೇ ಕುಂದಾದ್ರಿ ಬೆಟ್ಟ.  ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳಿನವರೆಗೆ  ಇಲ್ಲಿ ಮಂಜು ಕವಿದ ವಾತಾವರಣ ಇರುತ್ತದೆ.  ಇಲ್ಲಿನ ತಂಪಾದ  ವಾತವರಣದಲ್ಲಿ ಸಮಯ ಕಳೆದದ್ದೆ ತಿಳಿಯುವುದಿಲ್ಲ. ಮೋಡದ ನಡುವೆ ಇರುವಂತಹ ಅನುಭವ. ಆ ಖುಷಿಯನ್ನು ಅನುಭವಿಸಿಯೇ  ತೀರಬೇಕು. ಮಧ್ಯಾಹ್ನ ಸುಮಾರು 10.30 ವರೆಗೂ ಮಂಜು ಹಾಗೇಯೆ ಇರುತ್ತದೆ. ಇಲ್ಲಿಗೆ ಹೊಗುವ ರಸ್ಥೆಯೂ ತುಂಬ  ಕಡಿದಾಗಿ ರೋಮಾಂಚನಕಾರಿಯಾಗಿ ಇದೆ.

ಕಾರ್ತಿಕ್ ಕೆದಿಲಾಯ

ಮೈಂದರ್ಗಿ ಮಹಾದೇವ ದೇವಾಲಯ

ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನಿಂದ 13 ಕಿ.ಮೀ ಅಂತರದಲ್ಲಿ ಮೈಂದರ್ಗಿ ನಗರವಾಗಿದೆ. ದೇವಗಿರಿ ಯಾದವರು ನಿರ್ಮಿಸಿದ ಮಹಾದೇವ ದೇವಾಲಯವಿದೆ. ಸಭಾಮಂಟಪ, ಅಂತರಾಳ ಹಾಗೂ ಗರ್ಭಗೃಹವಿದೆ. ಗಗರ್ಭಗೃಹದ ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಈಶಾನ್ಯ ದಿಕ್ಕಿನಲ್ಲಿ ಶಿವಲಿಂಗವಿದೆ. ದ್ವಾರಬಾಗಿಲಿನ ಎಡಬದಿಯಲ್ಲಿ ವೀರಗಲ್ಲು ಇದೆ. ಮಹಾಮಂತ್ರಿ ಹೇಮಾಡಪಂಥ ನಿಮಿ೯ಸಿದರಿಂದ ಇದಕ್ಕೆ ಹೇಮಾಡಪಂಥ ಶೈಲಿಯ ದೇವಾಲಯಗಳು ಎಂದು ಕರೆಯುತ್ತಾರೆ. ಬಸವರಾಜ ಮಸೂತಿ ಅವರು ಸಂಶೋಧನೆ ಮಾಡಿದ್ದಾರೆ. ಪ್ರಾಚೀನ ದೇವಾಲಯಗಳಲ್ಲಿ ಈ ದೇವಾಲಯ ಒಂದಾಗಿದೆ.

ಬಸವರಾಜ ಮಸೊತಿ

ಭೂಲೋಕದ ಸ್ವರ್ಗ ಕವಲೇದುರ್ಗ

ಬೆಳಗಿನ ಚುಮುಚುಮು ಚಳಿ ಜೊತೆಗೆ ತುಂತುರು ಮಳೆಹನಿ. ಇಂತಹ ಸುಂದರ ವಾತಾವರಣದಲ್ಲಿ ನಾವು ಪಯಣಿಸಿದ್ದು ಒಂಭತ್ತನೇ ಶತಮಾನದಲ್ಲಿ ಕಟ್ಟಿದ ಶಿವಮೊಗ್ಗ ಜಿಲ್ಲೆಯ ಕವಲೇದುರ್ಗ ಕೋಟೆಗೆ. ಮೊದಲು ಕೋಟೆಯೊಳಗಿರುವ ವಿಶ್ವನಾಥ ದೇವಸ್ಥಾನ ಹೊಕ್ಕು ನಂತರ ಕಡಿದಾಗಿ ಕೂಡಿರುವ ಮೆಟ್ಟಿಲುಗಳನ್ನು ಹತ್ತಿ ತುತ್ತತುದಿಯನ್ನು ತಲುಪಿದಾಗ ಅಲ್ಲಿನ ನಯನ ಮನೋಹರ ದೃಶ್ಯವನ್ನು ನೋಡಿ ಹತ್ತುವಾಗಿನ ಆಯಾಸವೆಲ್ಲಾ ಮಾಯವಾಯಿತು. ದೂರದಲ್ಲಿ ಕಾಣುವ ವಾರಾಹಿ ಹಿನ್ನೀರ ಡ್ಯಾಮ್ ನೋಟ, ಮೋಡಗಳ ಚೆಲ್ಲಾಟ, ಆಗಾಗ ಸುರಿಯುವ ಮಳೆ, ಜೋರಾಗಿ ಬೀಸುವ ಗಾಳಿ. ಒಟ್ಟಿನಲ್ಲಿ ಭೂಲೋಕದ ಸ್ವರ್ಗದ ಹಾಗಿದೆ ಈ ಕವಲೇದುರ್ಗ ಕೋಟೆ. ಇಲ್ಲಿ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

ಸ್ವಾತಿ

ಅರ್ಪೂವ ಚಿತ್ರ ಶಿಲ್ಪಗಳ ಮಹಾನ್ ತಾಣ ಅಜಂತಾ

ಅಜಂತಾ- ಇದು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ,ಭಾರತದ ,ಅಷ್ಟೇ ಏಕೆ ವಿಶ್ವದ ಅತೀ ಹಳೆಯ ಬೌದ್ಧಗುಹೆಗಳಿರುವ ತಾಣ. ನನ್ನ ಜೀವನದಲ್ಲಿ ಶಾಲಾ ಮಕ್ಕಳ ಜೊತೆ ಇಲ್ಲಿಗೆ ಭೇಟಿ ಕೊಟ್ಟಿದ್ದು,ಜೀವನ ಸಾರ್ಥಕತೆಯ ತುತ್ತತುದಿ. ಅಲ್ಲಿ ಮೂವತ್ತೊಂದು ಗುಹೆಗಳು ಜಗದ ಮೆರುಗಿಗೆ ಸಿಂಚನವನ್ನು ನೀಡುತ್ತಿದ್ದೆ. ಪ್ರೇಮ, ಕರುಣೆ, ತ್ಯಾಗವನ್ನು ಕಣಕಣದಲ್ಲಿ ತುಂಬಿಕೊಂಡ ಭೂಮಿಯ ಮೇಲಿನ ಶ್ರೇಷ್ಠ ಮನುಷ್ಯ ಬುದ್ದ ಅಲ್ಲಿ ಚಿತ್ರವಾಗಿದ್ದ. ಮಧ್ಯಭಾರತದ ಮೂಲೆಯಲ್ಲಿ ಅರ್ಪೂವ ಚಿತ್ರ ಶಿಲ್ಪಗಳ ಮಹಾನ್ ತಾಣ ಅಲ್ಲಿ ಮೌನವಾಗಿ ಬುದ್ದನ ತಾರೆ ‘ನಿನ್ನ ಬೆಳಕು ನೀನೇ,ನಿನಗೆ ನೀನೇ ಬೆಳಕು’ ಎಂಬ ರೀತಿಯಲ್ಲಿ ಎಲ್ಲರನ್ನೂ ತಾನೇ ಕೈ ಬೀಸಿ ಕರೆಯುತ್ತಿದೆ. ವಿಶ್ವ ಪರಂಪರೆಯ ತಾಣವಾಗಿ 1983ರಲ್ಲಿ ಘೋಷಣೆಯಾದ ಸ್ಥಳ ,ಇನ್ನೂ ಕೆಲವು ವರ್ಷದ ನಂತರ ಅದರ ಹತ್ತಿರದಲ್ಲೇ ನಿರ್ಮಾಣವಾಗುತ್ತಿರುವ ನಕಲಿ ಅಜಂತಾವನ್ನು ನೋಡಿ ಹೋಗಬೇಕು ಎಂಬ ಸುದ್ದಿ ಮಾರ್ಗದರ್ಶಕನ ಬಾಯಿಂದ ಹೊರಬಿದ್ದಾಗ ಮನಸ್ಸು ಮೌನವಾಯಿತು. ನೀವು ಹೋಗಿ , ಜೀವನ ಸಾರ್ಥಕಗೊಳಿಸಿ. ಕೇಳಬೇಡಿ ಅಲ್ಲಿಯ ವಿಶೇಷ ಎಂತಾ?, ಅಲ್ಲಿಯ ವಿಶೇಷನೇ ಅಜಂತಾ.

ಜಗದೀಶ್ ಬಾರಿಕೆ, ಉಪ್ಪಿನಂಗಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ