ಮಳೆಗಾಲದ ಆಪ್ತಮಿತ್ರ ಇನ್ವರ್ಟರ್‌

Team Udayavani, Jun 14, 2019, 5:00 AM IST

ಮಳೆಗಾಲದ ಬಹುದೊಡ್ಡ ಸಮಸ್ಯೆಯೆಂದರೇ ವಿದ್ಯುತ್‌ ಕಡಿತ. ವಿದ್ಯುತ್‌ ಇಲ್ಲದೇ ಜೀವನವೇ ಸಾಗುವುದಿಲ್ಲ ಎಂಬ ಈ ಕಾಲದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದ ವಿದ್ಯುತ್‌ಗೆ ಪರ್ಯಾಯ ಮಾರ್ಗಗಳು ಕೂಡ ಸೃಷ್ಟಿಯಾಗಿವೆ. ಮಳೆಗಾಲದ ವಿದ್ಯುತ್‌ ಸಮಸ್ಯೆಗೆ ಪರಿಹಾರವಾಗಿ ಇನ್ವರ್ಟರ್‌ಗಳು ಮಾರುಕಟ್ಟೆಗೆ ಬಂದಿವೆ. ಈ ಬಾರಿ ಕೂಡ ಮಂಗಳೂರು ನಗರದಲ್ಲಿ ಇನ್ವರ್ಟರ್‌ಗಳ ಖರೀದಿ ಜೋರಾಗಿದೆ.

ಮಳೆಗಾಲ ಶುರುವಾಗಿದೆ. ಇನ್ನು ಅಲ್ಲಲ್ಲಿ ಮರ ಬಿಧ್ದೋ, ಗಾಳಿಗೆ ಕಂಬಗಳು ಉರುಳಿಯೋ ವಿದ್ಯುತ್‌ ಕೈ ಕೊಡುವುದು ಸರ್ವೇ ಸಾಮಾನ್ಯ. ನಗರ ಪ್ರದೇಶಗಳಲ್ಲಿ ಒಂದು ದಿನದ ಮಟ್ಟಿಗೆ ವಿದ್ಯುತ್‌ ಇಲ್ಲವಾದರೆ, ಗ್ರಾಮೀಣ ಭಾಗಗಳಲ್ಲಿ ವಾರಗಟ್ಟಲೆ ಕತ್ತಲೆಯಲ್ಲೇ ದಿನಗಳೆಯಬೇಕಾದ ಪರಿಸ್ಥಿತಿ ಈಗಲೂ ಇದೆ.

ವಿದ್ಯುತ್‌ ಇಲ್ಲವಾದಾಗ ಗ್ರಾಮ್ಯ ಭಾಗಗಳಲ್ಲಿ ಇಂದಿಗೂ ಸೀಮೆ ಎಣ್ಣೆ ದೀಪಗಳೇ ಆಸರೆ. ನಗರದಲ್ಲಾದರೆ ಮೊಬೈಲ್‌ ಮಂದ ಬೆಳಕಿನಲ್ಲೋ, ಟಾರ್ಚ್‌ ಬೆಳಕಿನಲ್ಲೋ ಕತ್ತಲೆಯನ್ನು ದೂಡಬಹುದು. ಆದರೆ, ತತ್‌ಕ್ಷಣಕ್ಕೆ ಅಡುಗೆ ಮಾಡಲು ಗ್ರಾಮೀಣ ಮನೆಗಳಲ್ಲಿರುವಂತೆ ಕಡಿಯುವ ಕಲ್ಲು ನಗರಗಳಲ್ಲಿ ಇರುವುದಿಲ್ಲ. ಆದರೆ, ಮಳೆಗಾಲದಲ್ಲಿ ಈ ಚಿಂತೆಯನ್ನೇ ದೂರ ಮಾಡಲು ವಿದ್ಯುತ್‌ ಶೇಖರಿಸಿಡುವ ಸಾಧನಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟವು ಜತೆಗೆ ಬೇಡಿಕೆಯೂ ಹೆಚ್ಚಾಯಿತು. ಈ ಮಳೆಗಾಲಕ್ಕೂ ಅದೇ ಸಾಧನಗಳ ಕಾರುಬಾರು. ಅದೆಂದರೆ ಮಳೆಗಾಲದ ಆಪ್ತಮಿತ್ರ ಇನ್ವರ್ಟರ್‌.

ವಿದ್ಯುತ್‌ ಶೇಖರಣೆಗೆ ಇನ್ವರ್ಟರ್‌ಗಳು ಉತ್ತಮ ಮಾರ್ಗ. ನಗರ ಪ್ರದೇಶಗಳಲ್ಲಿ ಬಹುತೇಕರ ಮನೆಗಳಲ್ಲಿ ಪ್ರಸ್ತುತ ಇನ್ವರ್ಟರ್‌ ಖರೀದಿಸಿ ತಂದಿದ್ದರೆ, ಗ್ರಾಮೀಣ ಭಾಗಗಳಲ್ಲಿಯೂ ಇನ್ವರ್ಟರ್‌ ಖರೀದಿ ಭರಾಟೆ ಜೋರಾಗಿಯೇ ಇದೆ. ಮಳೆಗಾಲದಲ್ಲಿ ಆಗಾಗ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ತಪ್ಪಿಸಿಕೊಳ್ಳಲು ಇನ್ವರ್ಟರ್‌ಗಳು ಸಹಕಾರಿ.

20 ಸಾವಿರ ರೂ.ಗಳಿಂದ ಆರಂಭ
ಕಡಿಮೆ ಬಳಕೆ ಮಾಡಿದಷ್ಟೂ ಹೆಚ್ಚು ಹೊತ್ತು ಬೆಳಕು ನೀಡುವ ಇನ್ವರ್ಟರ್‌ಗಳಿಗೆ ಬೆಲೆಯೂ ಹೆಚ್ಚೇನಿಲ್ಲ. ಸುಮಾರು 20 ಸಾವಿರ ರೂ.ಗಳಿಂದ 30 ಸಾವಿರ ರೂ. ಬೆಲೆ ಬಾಳುವ ಇನ್ವರ್ಟರ್‌ಗಳು ಮಾರುಕಟ್ಟೆಯಲ್ಲಿವೆ. 23 ಸಾವಿರ ರೂ.ಗಳಿಂದ 26 ಸಾವಿರ ರೂ. ಬೆಲೆ ಬಾಳುವ ಇನ್ವರ್ಟರ್‌ಗಳನ್ನು ಜನ ಹೆಚ್ಚು ಖರೀದಿಸುತ್ತಾರೆ ಎನ್ನುತ್ತಾರೆ ಶೋರೂಂ ಮಂದಿ. ಇದರಲ್ಲಿ ವಿದ್ಯುತ್‌ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಹೆಚ್ಚಿದ್ದು, ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

ಮಂಗಳೂರು: ಕುದುರಿದ ಬೇಡಿಕೆ
ಮಂಗಳೂರಿನ ಮಾರುಕಟ್ಟೆಯಲ್ಲಿ ಸದ್ಯ ಇನ್ವರ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಳೆಗಾಲವಾದ್ದರಿಂದ ಸಹಜವಾಗಿಯೇ ವಿದ್ಯುತ್‌ ಅಭಾವದಿಂದ ತಪ್ಪಿಸಿಕೊಳ್ಳಲು ಜನ ಖರೀದಿ ಮಾಡುತ್ತಾರೆ. ಮಳೆಗಾಲಾರಂಭದಲ್ಲಿಯೇ ಶೇ. 20ರಷ್ಟು ಇನ್ವರ್ಟರ್‌ ಖರೀದಿ ಹೆಚ್ಚಿದೆ ಎಂದು ವಿ.ಕೆ. ಫನೀìಚರ್‌ ಮತ್ತು ಎಲೆಕ್ಟ್ರಾನಿಕ್ಸ್‌ ಮಳಿಗೆ ಸಿಬಂದಿ ಹೇಳುತ್ತಾರೆ. ಹರ್ಷ ಎಲೆಕ್ಟ್ರಾನಿಕ್ಸ್‌ ಮಳಿಗೆಯ ಸಿಬಂದಿ ಲಿತೇಶ್‌ ಹೇಳುವ ಪ್ರಕಾರ, ಇನ್ವರ್ಟರ್‌ಗಳಿಗೆ ಬೇಸಗೆಗಿಂತ ಮಳೆಗಾಲದಲ್ಲಿ ಬೇಡಿಕೆ ಜಾಸ್ತಿಯಾಗಿದೆ.

ಖರೀದಿ ಜೋರು
ವಿದ್ಯುತನ್ನು ದಿನದ ಮಟ್ಟಿಗೆ ಹಿಡಿದಿಟ್ಟುಕೊಂಡು ಮನೆಗೆ ಬೆಳಕು ಹಾಯಿಸಬಲ್ಲ ಇನ್ವರ್ಟರ್‌ಗಳಿಗೆ ಸದ್ಯ ಬೇಡಿಕೆ ಕುದುರಿದೆ. ಈ ಮಳೆಗಾಲ ಆರಂಭದಲ್ಲೇ ಮಂಗಳೂರಿನ ಮಾರುಕಟ್ಟೆಯಲ್ಲಿ ಬೇಸಗೆಗಿಂತ ಇನ್ವರ್ಟರ್‌ಗಳಿಗೆ ಶೇ. 20ರಷ್ಟು ಬೇಡಿಕೆ ಹೆಚ್ಚಾಗಿದೆ. ಮುಂದೆ ಇದು ಇನ್ನಷ್ಟು ಜಾಸ್ತಿಯಾಗಲಿದೆ ಎನ್ನುತ್ತಾರೆ ಮಾರಾಟಗಾರ ಸಂಸ್ಥೆಗಳ ಸಿಬಂದಿ.

ಬಹೂಪಯೋಗಿ
ಇನ್ವರ್ಟರ್‌ನಿಂದ ಕೇವಲ ವಿದ್ಯುದ್ದೀಪ ಗಳನ್ನು ಮಾತ್ರವಲ್ಲದೆ, ಇಸ್ತ್ರಿ ಪೆಟ್ಟಿಗೆ, ಮಿಕ್ಸಿ, ಗ್ರೈಂಡರ್‌, ಹೇರ್‌ ಡ್ರೈಯರ್‌ಗಳನ್ನೂ ಚಾಲೂ ಮಾಡಬಹುದು. ಇದ ರಿಂದ ಒಂದು ದಿನದ ವಿದ್ಯುತ್‌ನ ಪರ್ಯಾಯ ವಾಗಿ ಬಳಕೆ ಮಾಡಬಹುದು. ಆದರೆ, ಯಾವುದೇ ಇತರ ಬಳಕೆಗೆ ಉಪ ಯೋಗಿ ಸದೆ ಕೇವಲ ದೀಪಗಳನ್ನು ಉರಿಸಲು ಬಳಸಿಕೊಂಡರೆ, ಒಂದೆರಡು ದಿನದ ಮಟ್ಟಿಗೆ ತನಕ ಯಾವುದೇ ಸಮಸ್ಯೆ ಇಲ್ಲದೆ ದಿನಕಳೆಯಬಹುದು. ಅದಕ್ಕಾಗಿಯೇ ಇನ್ವರ್ಟರ್‌ ಬಹುತೇಕ ಮನೆಗಳ ನೆಚ್ಚಿನ ಸಂಗಾತಿ.

ಅತ್ಯುತ್ತಮ ಮಾರ್ಗ
ಇನ್ವರ್ಟರ್‌ನಲ್ಲಿ ವಿದ್ಯುತ್‌ನ್ನು ಹಲವು ದಿನಗಳವರೆಗೆ ಸಂಗ್ರಹಿಸಿಡಲು ಆಗುವುದಿಲ್ಲ. ಆದರೆ, ನಗರದಲ್ಲಿ ಹೆಚ್ಚೆಂದರೆ ಮೂರ್‍ನಾಲ್ಕು ಗಂಟೆ ವಿದ್ಯುತ್‌ ಇರುವುದಿಲ್ಲ. ಇಂತಹ ವೇಳೆ ಇನ್ವರ್ಟರ್‌ ಸಹಕಾರಿಯಾಗುತ್ತದೆ. ನಗರದ ಮಟ್ಟಿಗೆ ಇದೊಂದು ಅತ್ಯುತ್ತಮ ಮಾರ್ಗವಾಗಿದೆ.
– ಪ್ರಸಾದ್‌ ಆಚಾರ್ಯ, ಗ್ರಾಹಕರು

– ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ