ಸೂರ್ಯ ಉದಿಸಿದರೆ ಮಾತ್ರ ಈ ಮನೆಗೆ ಬೆಳಕು!

ಮೂಲಸೌಕರ್ಯವಿಲ್ಲದ ಕೊಲ್ಲಮೊಗ್ರುವಿನ ಬಡ ಕುಟುಂಬದ ಕರುಣಾಜನಕ ಕಥೆಯಿದು

Team Udayavani, May 15, 2019, 3:44 PM IST

ಸುಬ್ರಹ್ಮಣ್ಯ: ಕೃಷಿ ಮಾಡುವ ಆಸೆಯಿದೆ. ಜೀವನೋಪಾಯಕ್ಕೆ ತಕ್ಕಂತೆ ಜಾಗ, ಮನೆ ಎಲ್ಲವೂ ಇದೆ. ಆದರೆ ಮನೆ ತಲುಪಲು ದಾರಿಯೇ ಇಲ್ಲ. ದಾರಿ ಇಲ್ಲದ ಕಾರಣ ವಿದ್ಯುತ್‌, ನೀರಿನ ಸೌಕರ್ಯವೂ ಇಲ್ಲ. ಮೂಲ ಸೌಕರ್ಯದ ಕೊರತೆಗಳ ಜತೆ ಮತ್ತಷ್ಟೂ ಸಮಸ್ಯೆಗಳು ಸೇರಿ ಸಂಕಷ್ಟದ ಸರಮಾಲೆ ಹೊತ್ತು ಬಡ ಕುಟಂಬವೊಂದು ದಿನ ದೂಡುತ್ತಿದೆ.

1964ರಲ್ಲಿ ವಿದ್ಯುತ್‌ಗಾಗಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭ ಭೂಮಿ ನೀಡಿ ನಿರಾಶ್ರಿತರಾಗಿ ಉದ್ಯೋಗ ಅರಸಿ ಬಂದ ಸಾಗರ ಮೂಲದ ಮಂಜುನಾಥ ಭಟ್ ಅವರ ಕುಟುಂಬ ಕೊಲ್ಲಮೊಗ್ರುವಿನ ಚಾಂತಾಳಕ್ಕೆ ಬಂದು ನೆಲೆಸಿತ್ತು. 90ರ ಇಳಿ ವಯಸ್ಸಿನ ತಾಯಿ ಶಾರದಮ್ಮ ಹಾಗೂ ಸಹೋದರಿ ಜಾನಕಿ ಸಹಿತ ಮೂರು ಮಂದಿಯಿರುವ ಕುಟುಂಬ ಇವರದು.

ಸುಮಾರು 2 ಎಕರೆಯಷ್ಟು ಭೂಮಿ ಇವರಿಗಿದೆ. ಜಾಗದಲ್ಲಿ ಅಡಿಕೆ, ತೆಂಗು ಬೆಳೆದಿದ್ದಾರೆ. ಜತೆಗೆ ಭತ್ತವನ್ನು ಬೆಳೆಯುತ್ತಿದ್ದಾರೆ. ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಈ ಎಲ್ಲ ಆದಾಯದಲ್ಲಿ ಜೀವನವೇನೋ ಸಾಗುತ್ತಿದೆ. ಮುಖ್ಯವಾಗಿ ಇವರ ಜಾಗಕ್ಕೆ ತೆರಳಲು ದಾರಿಯೇ ಇಲ್ಲ. ಜತೆಗೆ ವಿದ್ಯುತ್‌ ಸಂಪರ್ಕವಿಲ್ಲ. ದಾರಿ ನಿರ್ಮಾಣಕ್ಕೆ ಪಕ್ಕದಲ್ಲಿರುವ ಜಾಗದವರ‌ ತಕರಾರೇ ಅಡ್ಡಿಯಾಗಿದೆ.

50 ಮೀ. ಅಂತರದಲ್ಲೇ ಇದೆ ರಸ್ತೆ
ಮನೆ ತಲುಪಲು ಬೇಕಿರುವುದು ಕೇವಲ 50 ಮೀ.ನಷ್ಟು ಉದ್ದದ ದಾರಿ. ದಾರಿ ಇಲ್ಲದ ಕಾರಣ ಮನೆಯನ್ನು ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಹೊಸಮನೆ ಕಟ್ಟಲೆಂದು ಕೆಂಪು ಕಲ್ಲು ಖರೀದಿಸಿದ್ದರು. ಮನೆಯಿರುವ ಸ್ಥಳಕ್ಕೆ ಕೊಂಡೊಯ್ಯಲಾಗದೆ ಮಾರಾಟ ಮಾಡಿದ್ದರು. ಬೋರ್‌ವೆಲ್ ಕೊರೆಯಲು ಪರವಾನಿಗೆ ಮಾಡಿಸಿದ್ದರು. ಯಂತ್ರ ಬರಲು ದಾರಿ ಇಲ್ಲದೆ ಅದೂ ಸಾಧ್ಯವಾಗಿಲ್ಲ. ಮನೆಯನ್ನೂ ಕಟ್ಟಲಾಗುತ್ತಿಲ್ಲ. ಶೌಚಾಲಯ, ನೀರು ಹಾಗೂ ವಿದ್ಯುತ್‌ ಇಲ್ಲದೆ ಧರೆಗುರುಳಲು ಸಿದ್ಧವಾದ ಹಳೆಯ ಹೆಂಚಿನ ಮನೆಯಲ್ಲಿ ವೃದ್ಧೆ ಸಹಿತ ಮೂರು ಮಂದಿ ವಾಸಿಸುತ್ತಿದ್ದಾರೆ.

ಸೌಕರ್ಯವಿಲ್ಲದಿದ್ದರೂ ಎಪಿಎಲ್ ಕಾರ್ಡ್‌
ಎಪಿಎಲ್ ಪಡಿತರ ಚೀಟಿ ಹೊಂದಿರುವ ಕಾರಣ ಸೀಮೆಎಣ್ಣೆ ದೊರಕುತ್ತಿಲ್ಲ. 50 ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲ. ಬಾವಿಯಲ್ಲಿ ನೀರು ಬತ್ತಿ ಹೋಗಿದೆ. ಭಟ್ಟರ ಮನೆಗೆ ರಸ್ತೆ ಸಂಪರ್ಕ ಸಮಸ್ಯೆ ಪರಿಹಾರ ಕಂಡರೆ ಬಹುತೇಕ ಕಷ್ಟಗಳು ನಿವಾರಣೆಯಾಗುತ್ತವೆ. ಈ ಹಿಂದೆ ಅರುಣಪ್ರಭಾ ಅವರು ತಹಶೀಲ್ದಾರ್‌ ಆಗಿದ್ದ ವೇಳೆ ಈ ಮನೆಗೆ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸುವಂತೆ ಗ್ರಾ.ಪಂ.ಗೆ ನಿರ್ದೇಶನ ನೀಡಿದ್ದರು. ಅವರು ವರ್ಗಾವಣೆಯಾದ ಬಳಿಕ ಈ ವಿಚಾರವು ನನೆಗುದಿಗೆ ಬಿದ್ದಿದೆ. ಬಳಿಕ ಪ್ರಯತ್ನ ನಡೆಯಲಿಲ್ಲ. ನೊಂದ ಮೂರು ಜೀವಗಳು ಬದುಕಿನ ಭರವಸೆಯನ್ನು ಕಳೆದುಕೊಂಡಿವೆ. ಜೀವನದಲ್ಲಿ ಎಲ್ಲ ಆಸೆ ಆಕಾಂಕ್ಷೆಗಳನ್ನು ನಂಬಿ ಸೋತಿರುವ ಕುಟುಂಬದ ಸದಸ್ಯರು ಮಾನಸಿಕ ಯಾತನೆಯಿಂದ ಬಳಲುತ್ತಿದ್ದಾರೆ. ಮನೆಗೆ ತೆರಳಿದವರೆಲ್ಲರ ಮುಂದೆ ಕಷ್ಟವನ್ನು ಹೇಳಿಕೊಂಡು ಮರುಗುತ್ತಿದ್ದಾರೆ.

ನಕ್ಸಲ್ ಬಾಧಿತ ಗ್ರಾಮ
ನಕ್ಸಲ್ ಬಾಧಿತ ಗ್ರಾಮದ ವ್ಯಾಪ್ತಿಯಲ್ಲಿ ಈ ಮನೆ ಇದೆ. ಪುಷ್ಪಗಿರಿ ವನ್ಯಧಾಮದ ತಳಭಾಗದಲ್ಲಿ ಇದ್ದರೂ ಈ ಕುಟುಂಬದ ಯಾತನೆಗೆ ಸ್ಥಳೀಯಾಡಳಿತ, ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಜನತೆ ಕೂಡ ಮಾನವೀಯತೆ ತೋರಿಸದೆ ಇರುವುದು ನೋವಿನ ಸಂಗತಿಯಾಗಿದೆ.

ಬೆಳಕು ಹರಿಸಬೇಕಿದೆ
ದೂರದಿಂದ ವಲಸೆ ಬಂದ ಕಾರಣ ಕುಟುಂಬಕ್ಕೆ ಬಂಧುಗಳ ಒಡನಾಟವೂ ಕಡಿಮೆ. ಕತ್ತಲಾವರಿಸುವ ಮುನ್ನವೇ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಾರೆ. ಸೂರ್ಯ ಬೆಳಗಿದರಷ್ಟೆ ಬೆಳಕು, ಸೂರ್ಯ ಮುಳುಗಿದರೆ ಕತ್ತಲು. ಇವಿಷ್ಟೆ ಇವರ ನಿತ್ಯದ ಬದುಕಿನಾಟ. ಶೋಚನೀಯ ಸ್ಥಿತಿಯಲ್ಲಿ ದಶಕಗಳಿಂದ ಬದುಕು ಸವೆಸುತ್ತಿರುವ ಈ ಕುಟುಂಬಕ್ಕೆ ಮಾನವೀಯತೆಯ ಮೂಲಕ ಬೆಳಕು ಹರಿಸುವ ಕಾರ್ಯ ಆಗಬೇಕಿದೆ.

ಸಾಯುವ ಮುನ್ನ ದಾರಿ ಕಾಣುವಾಸೆ
ನನ್ನ ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಸಾಯುವ ಮೊದಲು ನನ್ನ ಮನೆಗೆ ದಾರಿ ಸಂಪರ್ಕ ಕಾಣುವ ಒಂದೇ ಆಸೆ ಇದೆ ಎಂದು 90ರ ಹರೆಯದ ಶಾರದಮ್ಮ ಗೋಗರೆಯುತ್ತಾರೆ. ತಾವು ಈವರೆಗೆ ಅನುಭವಿಸಿದ ನೋವಿನ ಕಥನವನ್ನು ವಿವರಿಸುವಾಗ ಅವರ ಕಣ್ಣಿನಿಂದ ಅವರಿಗರಿವಿಲ್ಲದಂತೆ ಕಣ್ಣೀರು ಬರುತ್ತದೆ. ಅವರ ಆಂತರಿಕ ನೋವು ಅಲ್ಲಿ ಕಾಣುತ್ತದೆ.

ವರದಿ ಸಲ್ಲಿಸುತ್ತೇವೆ
ಕುಟುಂಬಕ್ಕೆ ಮೂಲ ಸೌಕರ್ಯ ಒದಗಿಸಲು ಖಾಸಗಿ ಜಮೀನಿನವರ ತಕರಾರು ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ತಹಶೀಲ್ದಾರ್‌, ಸಹಾಯಕ ಆಯುಕ್ತರು ಹಾಗೂ ಆಯುಕ್ತ‌ರಿಗೆ ಮತ್ತೂಮ್ಮೆ ವರದಿ ನೀಡುತ್ತೇವೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತೇವೆ.
ರವಿಚಂದ್ರ ಪಿಡಿಒ,
ಕೊಲ್ಲಮೊಗ್ರು ಗ್ರಾ.ಪಂ.

ಬಾಲಕೃಷ್ಣ ಭೀಮಗುಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಧುನಿಕ ತಂತ್ರಜ್ಞಾನಕ್ಕೆ ನಾವು ಬಹುಬೇಗ ಮಾರು ಹೋಗುತ್ತೇವೆ. ಬದಲಾದ ಜೀವನ ಶೈಲಿಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ. ಸಂಕೀರ್ಣ ಜೀವನ ರೀತಿಯನ್ನು ಆಧುನಿಕತೆ...

  • ಅನೇಕ ಆರೋಗ್ಯ ಅಂಶಗಳನ್ನು ಹೊಂದಿರುವ ಆಲಿವ್‌ ಎಣ್ಣೆಯನ್ನು ಮನೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಬಹುದು ಎಂದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಕಲೆ,...

  • ದಿನದ ಅಂತ್ಯದಲ್ಲಿ ಒಂದಿಷ್ಟು ಸಮಾಧಾನ ಹಾಗೂ ಆರಾಮದಾಯಕ ಅನುಭವ ನೀಡುವ ಸ್ಥಳವೆಂದರೆ ಮನೆಯಲ್ಲಿರುವ ಮಲಗುವ ಕೋಣೆ. ಒಂದರ್ಥದಲ್ಲಿ ಹೇಳುವುದಾದರೆ ಮಲಗುವ ಕೋಣೆಯೇ...

  • ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆ ವರುಷಕ್ಕೆ ಬೇಕಾದಷ್ಟು ನೀರನ್ನು ನೀಡುತ್ತದೆ. ಆದರೆ ಬೇಸಗೆ ಬಂದಾಗ ಇಡೀ ವಿಶ್ವವೇ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗುತ್ತದೆ....

  • ಕೃಷಿ ಎಂದರೆ ಮಾರುದ್ದ ಹಾರುವ ಈ ಕಾಲದಲ್ಲಿ ಕೃಷಿಕರಾಗುವುದೆಂದರೆ ಎಲ್ಲರೂ ಹಿಂಜರಿಯುತ್ತಾರೆ. ಆದರೆ ಅದನ್ನು ಒಂದು ಆಸಕ್ತಿಯ ವಿಷಯವಾಗಿ ತೆಗೆದುಕೊಂಡರೆ ಅದರಲ್ಲೂ...

ಹೊಸ ಸೇರ್ಪಡೆ