ತುಂಬಾ ಒಳ್ಳೆಯವರಾಗುವುದು ಒಳ್ಳೆಯದಲ್ಲ…

Team Udayavani, Sep 9, 2019, 5:26 AM IST

ತುಂಬಾ ಒಳ್ಳೆಯವರಾಗಿರುವುದೆಂದರೆ ಇರುವೆಗಳಿಗೆಒಡ್ಡಿಕೊಂಡ ಸಕ್ಕರೆಯಂತೆ. ಸಕ್ಕರೆ ಸಿಹಿಯೆಂದೇ ಇರುವೆಗಳು ಅದನ್ನು ತಿಂದು ಮುಗಿಸುತ್ತವೆ. ಜನರು ಹೀಗೆ ಸಕ್ಕರೆಯಂತೆ ಒಳ್ಳೆಯವರಾಗಲು ಹೋಗಿ ನಾಶವಾಗುತ್ತಾರೆ. ಅವರಿಗೆ ಒಳ್ಳೆಯವರಾಗುವ ಚಟದಿಂದ ಮುಕ್ತಿ ಹೊಂದಲು ಸಾಧ್ಯವಾಗುವುದಿಲ್ಲ.

ತುಂಬಾ ಒಳ್ಳೆಯವರಾಗಿರುವುದು ಒಳ್ಳೆಯದಲ್ಲ. ಇದನ್ನು ಕೇಳಿದಾಗ ಸ್ವಲ್ಪ ವಿಚಿತ್ರ ಎಂದು ಅನ್ನಿಸಬಹುದು. ಆದರೆ ಇದು ನಿಜ. ಒಳ್ಳೆಯವರಾಗಿರುವುದು ಒಳ್ಳೆಯದು ನಿಜ. ನಮಗೆ ಒಳ್ಳೆಯವರು ಬೇಕು, ಏಕೆಂದರೆ ಸಮಾಜಕ್ಕೆ ಇಂಥ ವ್ಯಕ್ತಿಗಳ ಅಗತ್ಯವಿದೆ. ಆದರೆ ಕೆಲವರಿಗೆ ತುಂಬಾ ಒಳ್ಳೆಯವರಾಗಿರಬೇಕೆಂಬ ಮೋಹ ಇರುತ್ತದೆ. ಇದು ಒಂದು ರೀತಿಯ ಚಟ. ಅವರು ಯಾವಾಗಲೂ ತಮ್ಮನ್ನು ಇನ್ನೊಬ್ಬರ ದೃಷ್ಟಿಕೋನದಿಂದ ನೋಡುತ್ತಿರುತ್ತಾರೆ. ಹೀಗೆ ತುಂಬಾ ಒಳ್ಳೆಯವರಾಗಿರುವುದು ಕೆಲವೊಮ್ಮೆ ತಿರುಗುಬಾಣವಾಗಿ ಪರಿಣಮಿಸುತ್ತದೆ. ತುಂಬಾ ಒಳ್ಳೆಯವರಾಗಿರುವುದೆಂದರೆ ಇರುವೆಗಳಿಗೆ ಒಡ್ಡಿಕೊಂಡ ಸಕ್ಕರೆಯಂತೆ. ಸಕ್ಕರೆ ಚೆನ್ನಾಗಿರುವುದರಿಂದಲೇ ಇರುವೆಗಳು ಅದನ್ನು ತಿಂದು ಮುಗಿಸುತ್ತವೆ. ಅನೇಕ ಜನರು ಹೀಗೆ ಸಕ್ಕರೆ ರೀತಿ ಒಳ್ಳೆಯವರಾಗಲು ಹೋಗಿ ನಾಶವಾಗುತ್ತಾರೆ. ಆದರೂ ಅವರಿಗೆ ಒಳ್ಳೆಯವರಾಗುವ ಚಟದಿಂದ ಮುಕ್ತಿ ಹೊಂದಲು ಸಾಧ್ಯವಾಗುವುದಿಲ್ಲ.

ಇಂಥ ತುಂಬಾ ಒಳ್ಳೆಯ ವ್ಯಕ್ತಿಗಳು ನಮಗೆ ಎಲ್ಲೆಡೆ ಕಾಣ ಸಿಗುತ್ತಾರೆ. ಕಚೇರಿಯಲ್ಲಿ, ಸಮಾಜದಲ್ಲಿ, ಕೊನೆಗೆ ನಮ್ಮ ಮನೆಯಲ್ಲೂ ಅವರು ಇರಬಹುದು. ನಾವು ಅವರನ್ನು ಸಜ್ಜನರು, ಪರೋಪಕಾರಿ, ನಿರುಪದ್ರವಿ…ಹೀಗೆ ನಾನಾ ರೀತಿಯ ಹೆಸರುಗಳಿಂದ ಗುರುತಿಸುತ್ತೇವೆ. ಹೀಗೆ ಸಜ್ಜನರಾಗಿರುವುದು, ಪರೋಪಕಾರಿಗಳಾಗಿರುವುದು ಅಥವಾ ನಿರುಪದ್ರವಿಗಳಾಗಿರುವುದು ಬೇಡ ಎಂದಲ್ಲ. ಆದರೆ ಇದನ್ನೇ ಅತಿಯಾಗಿ ಮಾಡಿದರೆ ಕೊನೆಗೆ ನಾವೇ ಅದರ ಬಲಿಪಶುಗಳಾಗಬೇಕಾಗುತ್ತದೆ.

ಕಚೇರಿಯಲ್ಲಿ ಇಂಥ ಒಬ್ಬ ತುಂಬಾ ಒಳ್ಳೆಯ ವ್ಯಕ್ತಿ ಇದ್ದ. ತನ್ನಿಂದಾಗಿ ಯಾರಿಗೂ ನೋವಾಗಬಾರದು, ಸಾಧ್ಯವಾದಷ್ಟು ಇನ್ನೊಬ್ಬರಿಗೆ ನೆರವಾಗಬೇಕು ಎನ್ನುವುದು ಅವನ ಧೋರಣೆ. ಸಹೋದ್ಯೋಗಿಗಳೆಲ್ಲ ಅವನ ಒಳ್ಳೆಯತನವನ್ನು ಧಾರಾಳವಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಕೆಲವರಂತೂ ತಮಗೆ ವಹಿಸಿದ ಕೆಲಸವನ್ನೇ ಅವನ ಹೆಗಲಿಗೆ ವರ್ಗಾಯಿಸಿ ನಿರುಮ್ಮಳವಾಗಿ ಕಾಫಿ ಕುಡಿಯುತ್ತಲೋ ಹರಟೆ ಹೊಡೆಯುತ್ತಲೋ ಕಾಲಕ್ಷೇಪ ಮಾಡುತ್ತಿದ್ದರು. ಈ ನಮ್ಮ ಒಳ್ಳೆಯ ವ್ಯಕ್ತಿ ತನ್ನ ಕೆಲಸದ ಜತೆಗೆ ಅವರ ಕೆಲಸವನ್ನೂ ನಿಭಾಯಿಸಿಕೊಂಡು ಪಡಬಾರದ ಕಷ್ಟ ಪಡುತ್ತಿದ್ದ. ಆದರೂ ಆಗುವುದಿಲ್ಲ ಎಂದು ಹೇಳಲು ಅವನ ಒಳ್ಳೆಯತನ ಅಡ್ಡಿ ಬರುತ್ತಿತ್ತು. ಅತಿಯಾದ ಒಳ್ಳೆಯತನದಿಂದಾಗಿ ಅವನಿಗೆ ಯಾವ ಕೆಲಸವನ್ನೂ ಪರಿಪೂರ್ಣವಾಗಿ ಮಾಡಿ ಮುಗಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಕಂಪೆನಿ ಅವನನ್ನು ಕೆಲಸದಿಂದ ಕಿತ್ತು ಹಾಕಿತು. ಕಂಪೆನಿಗಾಗಿ ನಾನು ಅಷ್ಟು ಕಷ್ಟಪಟ್ಟೆ. ಯಾರು ಏನು ಹೇಳಿದರೂ ಇಲ್ಲ ಎಂದು ಹೇಳದೆ ಮಾಡಿಕೊಟ್ಟೆ. ಆದರೂ ಕಂಪೆನಿಗೆ ನನ್ನ ಮೇಲೆ ದಯೆ ಇರಲಿಲ್ಲ. ಈಗ ನನ್ನ ಬದಲಿಗೆ ಮೂವರನ್ನು ನೇಮಿಸಿಕೊಂಡಿದ್ದಾರೆ. ನನಗೆ ಒಬ್ಬನಿಗೆ ಕೊಡುವ ಸಂಬಳ ಹೆಚ್ಚೋ ಅಥವಾ ಮೂವರಿಗೆ ಕೊಡುವ ಸಂಬಳ ಹೆಚ್ಚೋ ಎಂದು ಗೋಳಾಡಿಕೊಂಡ.

ಆದರೆ ಕಡೆಗೂ ಅವನಿಗೆ ತನ್ನ ಈ ತುಂಬಾ ಒಳ್ಳೆಯತನವೇ ಮುಳುವಾಯಿತು ಎನ್ನುವುದು ಅರ್ಥವಾಗಲೇ ಇಲ್ಲ. ಎಲ್ಲ ಜವಾಬ್ದಾರಿಯನ್ನೂ ವಹಿಸಿಕೊಳ್ಳುವ ಆದರೆ ಯಾವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸಲಾಗದ ಇವನಿಂದ ಕಂಪೆನಿಗೆ ಯಾವ ಪ್ರಯೋಜನವೂ ಇರಲಿಲ್ಲ. ಅವರಿವರ ಬಿಟ್ಟಿ ಚಾಕರಿ ಮಾಡುವುದಕ್ಕಷ್ಟೇ ಇವನು ಲಾಯಕ್ಕು ಎಂದು ಕಂಪೆನಿ ತೀರ್ಮಾನಿಸಿತ್ತು. ಹೀಗೆ ತುಂಬಾ ಒಳ್ಳೆಯವರಾಗಿರುವುದರಿಂದ ಹಾನಿ ಹಲವು.

ಹೀಗೆ ಅನೇಕರು ತುಂಬಾ ಒಳ್ಳೆಯವರಂತೆ ಕಾಣಲು ಪ್ರಯತ್ನಿಸುವುದು ಅಥವಾ ಒಳ್ಳೆಯವರಾಗುವುದು ಅವರಿಗಾಗಿ ಅಲ್ಲ , ಬದಲಾಗಿ ಇತರರಿಗಾಗಿ. ಅವರು ಏನಂದು ಕೊಳ್ಳುತ್ತಾರೋ… ಎಂಬ ಭಾವನೆ ಅವರನ್ನು ಭಾರೀ ಒಳ್ಳೆಯ ವರನ್ನಾಗಿ ಮಾಡು ತ್ತದೆ. ಓಶೋ ಗುರು ಹೇಳುತ್ತಾರೆ, ಯಾರೂ ನಿನ್ನ ಬಗ್ಗೆ ಏನೂ ಹೇಳುವುದಿಲ್ಲ. ಅವರು ಏನಾದರೂ ಹೇಳಿದರೆ ಅದು ಅವರ ಬಗ್ಗೆಯೇ. ಆದರೆ ಅವರ ಅಭಿಪ್ರಾಯ ನಿನ್ನನ್ನು ವಿಚಲಿತನನ್ನಾಗಿಸುತ್ತದೆ ಏಕೆಂದರೆ ನೀನು ಸದಾ ಅವರ ದೃಷ್ಟಿಯಲ್ಲಿ ನಿನ್ನನ್ನು ನೋಡುತ್ತಿರುವೆ. ನಾನು ಒಳ್ಳೆಯವ ಎಂಬ ಹುಸಿ ಭ್ರಮಾ ವಲಯ ನಿನ್ನನ್ನು ಆವರಿಸಿದೆ. ಈ ಭ್ರಮಾ ವಲಯ ನಿನ್ನ ಸುತ್ತಮುತ್ತ ಇರುವ ಅನ್ಯರ ಅಭಿಪ್ರಾಯವನ್ನು ಅವಲಂಬಿಸಿದೆ. ಹೀಗಾಗಿ ನೀನು ಸದಾ ಉಳಿದವರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂದೇ ಚಿಂತಿಸುತ್ತಿರುವೆ ಮತ್ತು ಸದಾ ನೀನು ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿರುವೆ ಮತ್ತು ಅವರನ್ನು ತೃಪ್ತಿ ಪಡಿಸುತ್ತಿರುವೆ. ನೀನು ಸದಾ ಗೌರವಾನ್ವಿತನಾಗಿರಲು ಬಯಸುವೆ. ಈ ಮೂಲಕ ನಿನ್ನ ಅಹಂ ಅನ್ನು ನೀನು ತೃಪ್ತಿಪಡಿಸುತ್ತಿರುವೆ. ಇದು ಆತ್ಮಹತ್ಯಾಕಾರಕ. ಉಳಿದವರು ಏನು ಹೇಳುತ್ತಾರೆ ಎಂದು ಚಿಂತಿಸುವ ಬದಲು ನಿನ್ನ ಬಗ್ಗೆ ಚಿಂತಿಸಲು ತೊಡಗು. ಈ ಪ್ರಜ್ಞೆ ನಿನ್ನಲ್ಲಿ ಉಂಟಾದರೆ ಉಳಿದವರು ಏನಂದುಕೊಳ್ಳುತ್ತಾರೆ ಎಂಬುದರ ಗೊಡವೆ ನಿನಗಿರುವುದಿಲ್ಲ. ನಿನಗೆ ನೀನು ಯಾರೆಂದು ತಿಳಿಯದಿರುವುದೇ ನಿನ್ನ ಸಮಸ್ಯೆ. ಇದು ತಿಳಿದಿದ್ದರೆ ನಿನಗೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಉಳಿದವರು ಏನು ಹೇಳುತ್ತಾರೆ ಎನ್ನುವುದು ನಿನಗೆ ಅಪ್ರಸ್ತುತವಾಗುತ್ತಿತ್ತು.

ಇನ್ನೊಬ್ಬರಂತಾಗಬೇಕು ಎಂಬ ಚಿಂತನೆಯನ್ನು ಬಿಟ್ಟು ಬಿಡಿ. ಏಕೆಂದರೆ ಈ ಸೃಷ್ಟಿಯಲ್ಲಿ ನೀವೇ ಒಂದು ಮಾಸ್ಟರ್‌ಪೀಸ್‌. ಇಲ್ಲಿ ನಿಮಗೆ ನೀವೇ ಸಾಟಿ. ನೀವಿಲ್ಲಿಗೆ ಬಂದಿದ್ದೀರಿ ಎನ್ನುವುದು ವಾಸ್ತವ. ಇಲ್ಲಿರುವುದನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿ. ನೀವು ಇನ್ನೊಬ್ಬರಾಗದೆ ನೀವಾಗಿ ಬದುಕಿ. ಇದರಿಂದಲೇ ಬದುಕು ಬಂಗಾರ.

 -ಉಮೇಶ್‌ ಬಿ. ಕೋಟ್ಯಾನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

  • "ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ' ಎಂಬ ಮಾತಿದೆ. ಸಂತೋಷದ ಹಾಡುಗಳೂ...

  • ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...