ಸಾಲು ಸಾಲು ಹಬ್ಬಗಳು ಖರೀದಿ ಭರಾಟೆ ಜೋರು

Team Udayavani, Aug 9, 2019, 5:34 AM IST

ಹಬ್ಬಗಳ ಸೀಸನ್‌ ಬಂದಾಯ್ತು. ಸದ್ಯ ಮಾರುಕಟ್ಟೆಯಲ್ಲಿ ವಿನೂತನ, ವಿಶಿಷ್ಟ, ಆಕರ್ಷಣೀಯ ವಸ್ತುಗಳ ಕಾರುಬಾರು. ಮನೆಯಿಂದ ಹೊರ ಕಾಲಿಟ್ಟರೆ ರಸ್ತೆಯ ಅಕ್ಕಪಕ್ಕದಲ್ಲಿ ಕಾಣಸಿಗುವ ಅಂಗಡಿಗಳಲ್ಲಿ ಕಲರ್‌ಫ‌ುಲ್ ರಾಕಿ, ಹೆಮ್ಮೆ ಹುಟ್ಟಿಸುವ ದೇಶದ ಬಾವುಟ, ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಜಾಗ ಪಡೆದುಕೊಂಡಿವೆ. ಸದ್ಯ ನಗರದಲ್ಲಿ ಹಬ್ಬದ ವಾತಾವರಣ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಈಗೇನಿದ್ದರೂ ಹಬ್ಬಗಳ ಸೀಸನ್‌. ನಾಗರ ಪಂಚಮಿಯಿಂದ ಶುರುವಾಗಿ ಸಾಲು ಸಾಲು ಹಬ್ಬಗಳೇ ನಮ್ಮ ಮುಂದಿವೆ. ವರಮಹಾಲಕ್ಷ್ಮಿ ಹಬ್ಬ, ಬಕ್ರೀದ್‌, ಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳು ಒಂದೇ ತಿಂಗಳ ಅಂತರದಲ್ಲಿದ್ದು, ಹಬ್ಬ ಆಚರಣೆಯ ಸಂಭ್ರಮವನ್ನೂ ಹೆಚ್ಚಿಸಿವೆ.

ಹಬ್ಬವನ್ನು ಕೇವಲ ಆಚರಣೆ ಮಾಡಿದರೆ ಆಯಿತಾ ? ದೇವಸ್ಥಾನಗಳಿಗೆ ತೆರಳುವುದು, ದೇವರಿಗೆ ನಮಸ್ಕರಿಸಿ ಬರುವುದು, ಆಪ್ತೇಷ್ಟರ ಮನೆಗೆ ಹೋಗಿ ಹಬ್ಬದೂಟ ಮಾಡುವುದು ಇಷ್ಟೇ ಆದರೆ ಹಬ್ಬಕ್ಕೆ ಮೆರುಗಿಲ್ಲ. ಹಬ್ಬಕ್ಕೆಂದೇ ಒಂದಷ್ಟು ಖರೀದಿ ಮಾಡಿದರೆ, ಹಬ್ಬದ ವಾತಾವರಣದೊಂದಿಗೆ ಮನಸ್ಸಿನ ಆನಂದವೂ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ. ಹೌದು. ಹಬ್ಬಗಳು ಬಂತೆಂದರೆ ಹೊಸ ಬಟ್ಟೆ, ಹೊಸ ಆಲಂಕಾರಿಕ ವಸ್ತುಗಳ ಖರೀದಿ, ಚಿನ್ನ ಖರೀದಿಯಲ್ಲಿ ಜನ ತೊಡಗಿದ್ದರೆ, ವಾಣಿಜ್ಯ ಸಂಸ್ಥೆಗಳಲ್ಲಿ ರಶೊ ರಶು.

ಈ ಬಾರಿಯ ಸಾಲು ಹಬ್ಬಗಳಿಗಾಗಿ ಜನರ ಸಂಭ್ರಮ ಹೇಗಿದೆ, ಜನ ಏನೇನು ಖರೀದಿಯಲ್ಲಿ ತೊಡಗಿದ್ದಾರೆಂಬ ಕುತೂಹಲ. ಮಂಗಳೂರಿನಲ್ಲಿ ವಸ್ತ್ರ ಖರೀದಿ, ಹಬ್ಬಕ್ಕಾಗಿ ಇತರ ವಸ್ತುಗಳ ಖರೀದಿಯೂ ಬಿರುಸಾಗಿದೆ. ಆದರೆ, ವಿಪರೀತ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಂಗಾರ ಖರೀದಿಗೆ ಅಷ್ಟೊಂದು ಒಲವು ತೋರಿಸುತ್ತಿಲ್ಲ ಎಂಬುದು ಚಿನ್ನದಂಗಡಿಗಳ ಮಾಲಕರ ನೋವು.

ಮಂಗಳೂರಿನ ವಿವಿಧ ವಸ್ತ್ರ ಅಂಗಡಿಗಳಲ್ಲಿ ವರ ಮಹಾಲಕ್ಷ್ಮಿಹಬ್ಬದ ಖರೀದಿ ಈಗಾಗಲೇ ಮುಗಿದಿದೆ. ಬಕ್ರಿದ್‌, ಅಷ್ಟಮಿ, ಚೌತಿ ಹಿನ್ನೆಲೆಯಲ್ಲಿ ಜನ ಹೊಸ ಬಟ್ಟೆ ಖರೀದಿಸುತ್ತಿದ್ದಾರೆ. ಸೀರೆ, ಚೂಡಿದಾರ್‌, ಬಿಳಿ ಪಂಚೆ, ಫಾರ್ಮಲ್ ಶರ್ಟ್‌ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ನಗರದ ವಸ್ತ್ರ ಮಳಿಗೆಯೊಂದರ ಸಿಬಂದಿ ಸುಶ್ಮಿತಾ.

ಹಬ್ಬಕ್ಕೆ ದೇವಸ್ಥಾನಗಳಿಗೆ ಹೋಗುವಾಗ ಅಥವಾ ಮನೆಯಲ್ಲೇ ಹಬ್ಬ ಆಚರಿಸುವಾಗ ಹೊಸ ವಸ್ತ್ರಕ್ಕೆ ಮ್ಯಾಚಿಂಗ್‌ ಕಿವಿಯೋಲೆ, ಮಾಲೆ, ರಿಂಗ್‌ಗಳು ಮಾರಾಟವಾಗುತ್ತಿದೆ. ವರ ಮಹಾಲಕ್ಷ್ಮಿಹಬ್ಬದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಗಾಜಿನ ಬಳೆ ಹೆಚ್ಚು ಮಾರಾಟವಾಗುತ್ತಿದೆ ಎಂಬುದು ಫ್ಯಾನ್ಸಿ ಮಾಲಕರ ಅಭಿಪ್ರಾಯ.

ಚಿನ್ನಕ್ಕಿಲ್ಲ ಬೇಡಿಕೆ
ಪ್ರತಿ ವರ್ಷ ವರ ಮಹಾಲಕ್ಷ್ಮಿ ಹಬ್ಬದ ವೇಳೆ ಹೆಂಗಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯಾದಂತೆ ಈ ಹಬ್ಬದಂದು ಚಿನ್ನ ಖರೀದಿಸಿದರೆ ಶುಭವಾಗುತ್ತದೆ, ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯೂ ಜನರಲ್ಲಿದೆ. ಅದಕ್ಕಾಗಿಯೇ ಚಿನ್ನದ ಅಂಗಡಿ ತುಂಬಿ ತುಳುಕುತ್ತಿರುತ್ತದೆ. ಆದರೆ ಈ ವರ್ಷದ ವರ ಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನದಾಸೆಗೆ ಬೆಲೆ ಏರಿಕೆ ತಡೆಯೊಡ್ಡಿದೆ. ಒಂದೇ ಸಮನೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಹಬ್ಬದ ಸಡಗರವನ್ನು ಸ್ವಲ್ಪ ಮಟ್ಟಿಗೆ ಕಸಿದಿದೆ. ಮಂಗಳೂರಿನ ಬಹುತೇಕ ಚಿನ್ನದ ಅಂಗಡಿಗಳಲ್ಲಿ ಖರೀದಿಗೆ ಜನರ ಸಂಖ್ಯೆ ಕಡಿಮೆ ಇದ್ದಾರೆ.

ಡಿಸ್ಕೌಂಟ್ ಭರಾಟೆ
ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು, ಚಿನ್ನದಂಗಡಿಗಳೆಲ್ಲ ವಿಶೇಷ ದರ ಕಡಿತ ಮಾರಾಟವನ್ನೂ ಹಮ್ಮಿಕೊಂಡಿದ್ದು, ಖರೀದಿದಾರರಿಗೆ ವರವಾಗಿ ಪರಿಣಮಿಸಿದೆ. ಕೆಲವು ಬಟ್ಟೆ ಅಂಗಡಿಗಳಲ್ಲಿ ಶೇ. 20-50 ತನಕವೂ ರಿಯಾಯಿತಿ ದರ ಪ್ರಕಟಿಸಲಾಗಿದ್ದು, ಚಿನ್ನ ಕೊಳ್ಳುವವರಿಗೆ ಗ್ರಾಂಗೆ 100 ರೂ.ಗಳಷ್ಟು ಕಡಿತ ಆಫರ್‌ಗಳನ್ನು ನೀಡಿವೆ. ಆಫರ್‌ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿಯೂ ಜನಜಂಗುಳಿ ಇದೆ.

ಮೊಬೈಲ್ ಆಫರ್‌ಗಳು
ಹಬ್ಬಕ್ಕೆಂದೇ ಮೊಬೈಲ್ ಖರೀದಿಗಾರರಿಗೂ ಶುಭ ಸುದ್ದಿಗಳು ಸಾಲಾಗಿ ಲಭಿಸುತ್ತಿವೆ. ಮೊಬೈಲ್ಗಳ ನಿಗದಿತ ಬೆಲೆಗಿಂತ 1,000, 1,500 ರೂ.ಗಳಷ್ಟು ಆಫರ್‌ ನೀಡಲಾಗುತ್ತಿದೆ. ಆಫರ್‌ ದರದಲ್ಲಿ ಮೊಬೈಲ್ ನೀಡುವಿಕೆಯೊಂದಿಗೆ ಆಕರ್ಷಕ ಬಹುಮಾನಗಳನ್ನೂ ಕೆಲ ಸಂಸ್ಥೆಗಳು ನೀಡುತ್ತಿದ್ದು, ಜನಾಕರ್ಷಣೆಯಲ್ಲಿ ತೊಡಗಿವೆೆ. ಒಟ್ಟಿನಲ್ಲಿ ಸಾಲು ಹಬ್ಬಗಳನ್ನು ಸಾಲು ಸಂಭ್ರಮದೊಂದಿಗೆ ಆಚರಿಸಿಕೊಳ್ಳುವುದು, ಆಪ್ತರಿಗೆ ಉಡುಗೊರೆ ನೀಡಿ ಸಂಭ್ರಮಿಸು ವುದು, ಆ ಮೂಲಕ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸುವುದು ಈ ಹಬ್ಬದ ಸಮಯದಲ್ಲಿ ನಮ್ಮ ಮುಂದಿರುವ ಖುಷಿ ಕ್ಷಣಗಳು.

ಧನ್ಯಾ ಬಾಳೆಕಜೆ

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬದುಕು ಸುಂದರವಾದ ಅಧ್ಯಯನ. ನಾವು ವಿಧೇಯ ವಿದ್ಯಾರ್ಥಿಯಂತೆ ಬದುಕನ್ನು ಅಭ್ಯಸಿಸಿದರೆ, ಯಶಸ್ವಿಯಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಬರುವ ಆಂತರಿಕ, ಸೆಮಿಸ್ಟರ್‌,...

  • ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಮುಗಿಯಿತು. ಅನುದಿನವೂ ನಾವು ದೇವರಾಗಿ ಸ್ಮರಿಸುವ, ಪೂಜಿಸುವ, ಆರಾಧಿಸುವ, ಶರಣೆನ್ನುವ ದೇವರನ್ನು ನಮ್ಮದೇ ಮನೆಯ ಮುದ್ದುಕಂದನಾಗಿ...

  • ಆ ಅಜ್ಜಿಗೆ ಅದೆಷ್ಟು ಹಸಿವಾಗಿತ್ತೋ ಏನೋ, ಹೊಟೇಲ್‌ ಒಂದಕ್ಕೆ ಹೋಗಿ ಒಂದು ಚಪಾತಿ ಮತ್ತು ಒಂದು ಹಿಡಿಯಷ್ಟು ಅನ್ನ ಸೇವಿಸುತ್ತಾಳೆ. ಆಹಾರ ಸೇವಿಸಿದ ಆನಂತರ ತನ್ನ...

  • ನಾವು ಪರಿಪೂರ್ಣವಾದ ಜೀವನ ಸಾಗಿಸಬೇಕಾದರೆ ಮೊದಲು ಅನುಮಾನವನ್ನು ಜೀವನದಿಂದ ಬಲುದೂರ ಇರಿಸಬೇಕು. "ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು' ಎನ್ನುವ ಗಾದೆ ಮಾತಿನಂತೆ...

  • ಜೀವನ ಎನ್ನುವುದು ನಮ್ಮನ್ನು ನಾವು ಸಾಬೀತು ಪಡಿಸಿಕೊಳ್ಳಲಿರುವ ಉತ್ತಮ ಅವಕಾಶ. ಇಲ್ಲಿ ಸ್ವಲ್ಪ ಕಷ್ಟ ಪಟ್ಟರೆ, ಚಿಕ್ಕ-ಪುಟ್ಟ ತ್ಯಾಗ ಮಾಡಿಕೊಂಡರೆ ಅಂದುಕೊಂಡ...

ಹೊಸ ಸೇರ್ಪಡೆ