ಬದುಕು ಅನುಭವದ ಪ್ರಯೋಗಾಲಯ

Team Udayavani, Sep 23, 2019, 5:58 AM IST

ಸುಮ್ಮನೆ ಕುಳಿತರೆ ಸಾಕು. ಹಲವಾರು ಯೋಚನೆಗಳು ಮನಸ್ಸಿನೊಳಗೆ ಬಂದು ಹೋಗುವುದು ಸರ್ವೇ ಸಾಮಾನ್ಯ. “ಎಂಪ್ಟೀ ಮೈಂಡ್‌ ಈಸ್‌ ಡೆವಿಲ್ಸ್‌ ವರ್ಕ್‌ ಶಾಪ್‌’ ಅನ್ನುವ ಮಾತಿನಂತೆ ಸುಮ್ಮನಿದ್ದಾಗ ಒಳ್ಳೆಯ ಯೋಚನೆಗಳ ಬಗ್ಗೆ ನಾವು ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಕೆಟ್ಟ ಯೋಚನೆಗಳೇ ನಮ್ಮನ್ನು ಆವರಿಸಿ ಬಿಡುತ್ತವೆ. ಇದು ಒಬ್ಬಿಬ್ಬರ ಪ್ರಶ್ನೆಯಲ್ಲ. ಎಲ್ಲರೂ ಇಂತಹ ಸನ್ನಿವೇಶಗಳ ಮಿತ್ರರೇ ಸರಿ. ಇದಕ್ಕೆ ಅವನು ಬಡವ, ಅವನು ಶ್ರೀಮಂತ ಎನ್ನುವ ಭೇದ ಭಾವದ ಹಂಗು ಇಲ್ಲ. ಇದ್ದವನಿಗೆ ಅದನ್ನು ಕಾಪಾಡುವ ಚಿಂತೆಯಾದರೆ, ಇಲ್ಲದವನಿಗೆ ಗಳಿಸುವುದು ಹೇಗೆ ಎನ್ನುವ ಚಿಂತೆ. ಈ ನಡುವೆ ನೆಮ್ಮದಿ ಬೇಕು ಎಂದು ಹುಡುಕುವ ನಾವು, ಸಿಕ್ಕಾಗ ಮಾತ್ರ ಅದನ್ನು ಆನಂದಿಸುವ ಬಗೆ ಹೇಗೆ ಎಂಬುದನ್ನು ಅರಿಯುವ ಯತ್ನದಲ್ಲಿ ಸದಾ ಸೋಲುತ್ತೇವೆ. ಇದಕ್ಕೆ ಕಾರಣ ನಮ್ಮ ಯೋಚನಾ ಲಹರಿಯೆ ಹೊರತು ಬೇರೇನಲ್ಲ.

ವಿಷಯ ಯಾವುದೇ ಇರಲಿ ಅದು ನಾವದನ್ನು ಸಾಧಿಸುತ್ತೇವೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಕಾಣದ ಅಜ್ಞಾತ ಶಕ್ತಿಯ ಮೆಲೆ ಬಿಟ್ಟು ಬಿಡಬೇಕು. ಅದರ ಫ‌ಲಾಫ‌ಲಗಳ ಬಗ್ಗೆ ಯೋಚಿಸದೇ ನನ್ನಿಂದ ಎಲ್ಲವೂ ಸಾಧ್ಯ. ನಾನು ಅಂದುಕೊಂಡದ್ದನ್ನು ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ಛಲ ಒಂದಿದ್ದರೆ ಸಾಕು, ಒಮ್ಮೆ ಸೋತರೂ ಮತ್ತೆ ಗೆಲುವಿನ ಹೊಸ ಹಾದಿ ಹಿಡಿದು ನಮ್ಮ ಪಯಣವನ್ನು ಆರಂಭಿಸುವ ಹುಮ್ಮಸ್ಸು ನಮ್ಮೊಳಗೆ ಸೃಜಿಸಿಬಿಡುತ್ತದೆ. ಅದೇ ಆತ್ಮವಿಶ್ವಾಸ ಎಂಬುದೇ ನೀರ ಮೇಲಿನ ಗುಳ್ಳೆಯಾದರೆ ಮಾತ್ರ ಯಾವ ಜಯವೂ ನಮಗೆ ಬಂದೊದಗುವುದಿಲ್ಲ. ಬರೀ ನಿರಾಸೆಯ ಕಾರ್ಮೋಡವಷ್ಟೇ ನಮ್ಮ ಸುತ್ತ ಆವರಿಸಿ ಬಿಡುತ್ತದೆಯೇ ಹೊರತು, ಬೆಳಕು ನೀಡುವ ಸೂರ್ಯ ರಶ್ಮಿಯ ಮುಖ ನಾವು ನೋಡುವುದು ಸಾಧ್ಯವಿಲ್ಲ. ಹಾಗಾಗಿ ನಮ್ಮ ಮೇಲೆ ನಮಗೆ ಒಂದು ನಂಬಿಕೆ ಇದ್ದರೆ ಮಾತ್ರ ಈ ವಿಶಾಲ ವಿಶ್ವದಲ್ಲಿ ನಾವೇನೋ ಮಹತ್ತರವಾದುದನ್ನು ಮುತ್ತಿಕ್ಕುವುದು ಸಾಧ್ಯವಾಗುತ್ತದೆ.

ಜೀವನ ವಿಜ್ಞಾನದ ಪ್ರಯೋಗಶಾಲೆಯಂತೆ. ಇಲ್ಲಿ ಸೋಲು ಎಂಬುದಿಲ್ಲ. ಬದಲಾಗಿ ಪ್ರಯತ್ನ ಮತ್ತು ಅನುಭವಗಳೆನ್ನುವ ಕೇವಲ ಎರಡು ವಿಷಯಗಳಲ್ಲಿಯೇ ಬದುಕು ಬಂಧಿತವಾಗಿರುವುದು. ಈ ಅನುಭವದಿಂದ ನಾವು ಗಳಿಸುವ ಅಪರಿಮಿತ ಜೀವನ ಸಾರವೇ ನಮ್ಮ ಅನುಭವ. ಹಾಗಾಗಿ ಒಮ್ಮೆ ಕೈಲಾಗಲಿಲ್ಲ, ಯಾರೋ ನಮ್ಮನ್ನು ಆಡಿಕೊಂಡರು, ನಾವು ಮಾಡಿದ ಕೆಲಸಕ್ಕೆ ಸರಿಯಾದ ನ್ಯಾಯ ದೊರೆಯಲಿಲ್ಲ , ಅಯ್ಯೋ ಕೊಟ್ಟ ಕೆಲಸವನ್ನು ಸರಿಯಾಗಿ ನಿರ್ವಹಿಸದವರಿಗೆ ಎಲ್ಲರೂ ಬಹುಪರಾಕ್‌ ಹೇಳುತ್ತಾರಲ್ಲಾ ಎಂದು ಕೊರಗುತ್ತಾ ಕುಳಿತುಕೊಳ್ಳುವುದಲ್ಲ. ಬದಲಾಗಿ ಪ್ರಾಮಾಣಿಕತೆಯ ಜತೆಗೆ ನಮ್ಮ ಕೆಲಸಕ್ಕೆ ತೊಡಗಿಸಿಕೊಂಡರೆ ಕೊನೆಗೊಮ್ಮೆ ಜಯ ಎಂಬ ಅಮಿತಾನಂದ ನಮಗೆ ದೊರೆಯುವುದು ಸಾಧ್ಯವಾಗುತ್ತದೆ. ನಮ್ಮ ಮನೋಛಲವೇ ನಮ್ಮನ್ನು ಗುರಿಯತ್ತ ಸಾಗಿಸುವಲ್ಲಿ ಯಶಸ್ವಿಯಾಗುತ್ತದೆ. ಈ ನಿಯತ್ತೇ ಪರಮಾನಂದದ ಮೂಲ.

-ಭುವನ ಬಾಬು ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಾಂಪೋಸ್ಟ್‌ ತಯಾರಿ ಒಂದು ಕಲೆ. ಗುಂಡಿಯಲ್ಲಿ ಹಾಕಿದ ಗೊಬ್ಬರ, ತ್ಯಾಜ್ಯ ವಸ್ತು ಹೆಚ್ಚಿನ ಶಾಖಕ್ಕೆ ತುತ್ತಾಗಿ ಅಲ್ಲಿರುವ ಜೀವಾಣುಗಳು ಸಾಯುತ್ತವೆ. ಕೆಲವು ಬಾರಿ...

  • ದ.ಕ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಕೃಷಿ ಇಲ್ಲಿನ ಜನರ ಆರ್ಥಿಕ ಮೂಲ. ಸಾಂಪ್ರದಾಯಿಕ ಭತ್ತ ಕೃಷಿಯ ಜತೆಗೆ ಬದುಕಿನ ನಂಟು ಹೊಂದಿದ್ದ...

  • ಪುತ್ತೂರು: ಈ ವಾರ ಹೊಸ ಅಡಿಕೆ ಬೆಲೆಯಲ್ಲಿ 10 ರೂ. ಏರಿಕೆಯಾಗಿದೆ. ಕಳೆದ ವಾರ 205 ರೂ. ತನಕ ಖರೀದಿಯಾಗಿದ್ದ ಹೊಸ ಅಡಿಕೆ 205-2015 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್‌...

  • ದೇಹವನ್ನು ತಂಪಾಗಿರಿಸಲು ಎಳನೀರಿಗಿಂತ ಉತ್ತಮವಾದ, ಹಿತಕರವಾದ ಪೇಯ ಇನ್ನೊಂದಿಲ್ಲ. ರಸ್ತೆ ಬದಿ ಎಳನೀರನ್ನು ಮಾರುವವರನ್ನು ನೋಡಿರುತ್ತೀರಿ. ಗ್ರಾಹಕರು ಕೇಳಿದಾಗ...

  • ಮಹಾನಗರ: ಬೆಸೆಂಟ್‌ ಸಂಧ್ಯಾ ಕಾಲೇಜಿನ ಎಂಕಾಂ ವಿದ್ಯಾರ್ಥಿನಿ, ಮಣ್ಣಗುಡ್ಡೆ ನಿವಾಸಿ ಅಪೇಕ್ಷಾ ಎಸ್‌. ಕೊಟ್ಟಾರಿ ಅವರು ಅತೀ ಉದ್ದ ಎಕ್ಸ್‌ ಪ್ಲೋಶನ್‌ ಗಿಫ್ಟ್‌...

ಹೊಸ ಸೇರ್ಪಡೆ